Invest Karnataka 2025: ಹೂಡಿಕೆದಾರರ ರಾಜಧಾನಿಯಾಗಿ ಬದಲಾದ ಬೆಂಗಳೂರು, ಕಾರಣ ಇಲ್ಲಿವೆ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಜಾಗತಿಕ ಹೂಡಿಕೆದಾರರ ಸಮಾವೇಶ "ಇನ್ವೆಸ್ಟ್ ಕರ್ನಾಟಕ" (Invest Karnataka 2025) ವಿಶ್ವದ ಗಮನ ಸೆಳೆದಿದೆ. ಮೂರು ದಿನಗಳಿಂದ ನಡೆಯುತ್ತಿರುವ ಈ ಸಮಾವೇಶದಲ್ಲಿ ಜಾಗತಿಕ ಹೂಡಿಕೆದಾರರು ಭಾಗಿಯಾಗಿ ಭವಿಷ್ಯದ ಕರ್ನಾಟಕಕ್ಕಾಗಿ ಹೂಡಿಕೆಯ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇದರಲ್ಲಿ ವಿವಿಧ ಸಂಸ್ಥೆಗಳೊಂದಿಗೆ ಒಟ್ಟು 2,220 ಕೋಟಿ ರೂಪಾಯಿ ಮೊತ್ತದ ಹೂಡಿಕೆಗಳ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಇದೀಗ ಜಾಗತಿಕ ಹೂಡಿಕೆದಾರರ ಚಿತ್ತ ಬೆಂಗಳೂರಿನತ್ತ ಇದೆ.
ವಿವಿಧ ರಾಷ್ಟ್ರಗಳ ಪ್ರತಿನಿಧಿಗಳು ಈ ಇನ್ವೆಸ್ಟ್ ಕರ್ನಾಟಕ 2025 ಶೃಂಗಸಭೆಯಲ್ಲಿ ಭಾಗವಹಿಸಿದ್ದು, ಇದರಲ್ಲಿ ಸಮಗ್ರ ಅಧಿವೇಶನಗಳು, ಪ್ಯಾನೆಲ್ ಚರ್ಚೆಗಳು ಮತ್ತು ನೆಟ್‌ವರ್ಕಿಂಗ್ ಅವಕಾಶಗಳು ಸೇರಿದಂತೆ ಹಲವು ವಿಚಾರಗಳ ಬಗ್ಗೆ ವಿನಿಮಯ ನಡೆದಿದೆ. ಇದು ಹೂಡಿಕೆಯನ್ನು ಸೃಷ್ಟಿಸುವ ಮತ್ತು ಪ್ರಮುಖ ವ್ಯಾಪಾರ ತಾಣವಾಗಿ ಕರ್ನಾಟಕದ ಸಾಮರ್ಥ್ಯವನ್ನು ಪ್ರದರ್ಶಿಸುವ ವೇದಿಕೆಯಾಗಿದೆ. ಈ ಚರ್ಚೆಗಳಲ್ಲಿ ಡಾ.ದೇವಿ ಶೆಟ್ಟಿ ಮತ್ತು ಮಾಜಿ ಇಸ್ರೋದ ಎಸ್. ಸೋಮನಾಥ್ ಸೇರಿದಂತೆ ಪ್ರಮುಖ ವ್ಯಕ್ತಿಗಳಿದ್ದಿದ್ದು ವಿಶೇಷ.

ಇನ್ವೆಸ್ಟ್ ಕರ್ನಾಟಕ 2025ರಲ್ಲಿ ಜಾಗತಿಕ ಸಂಬಂಧಗಳನ್ನು ಬಲಪಡಿಸುವ ಜೊತೆಗೆ ಜಾಗತಿಕ ಮತ್ತು ದೇಶೀಯ ಹೂಡಿಕೆದಾರರ ಗಮನ ಸೆಳೆದಿದೆ. ಜೊತೆಗೆ ಭಾರತದೊಂದಿಗೆ ವ್ಯಾಪಾರ ಮತ್ತು ರಾಜತಾಂತ್ರಿಕ ಸಂಬಂಧಗಳನ್ನು ಬಲಪಡಿಸಲು ವಿದೇಶಿ ಪ್ರತಿನಿಧಿಗಳು ಕೂಡ ಮುಂದೆ ಬಂದಿದ್ದಾರೆ. ಮುಖ್ಯವಾಗಿ ಆಸ್ಟ್ರೇಲಿಯಾ ಮತ್ತು ಭಾರತ ಮುಕ್ತ ವ್ಯಾಪಾರ ಒಪ್ಪಂದಗಳನ್ನು ಹೊಂದಿವೆ. ಆಸ್ಟ್ರೇಲಿಯಾ ಮತ್ತು ಕರ್ನಾಟಕದ ನಡುವಿನ ವ್ಯಾಪಾರದ ಪ್ರಮಾಣ ಹೆಚ್ಚುತ್ತಿದೆ ಎಂದು ಬೆಂಗಳೂರಿನಲ್ಲಿರುವ ಆಸ್ಟ್ರೇಲಿಯಾದ ಕಾನ್ಸುಲ್ ಜನರಲ್ ಹಿಲರಿ ಮೆಕ್‌ಗೀಚಿ ಒನ್‌ಇಂಡಿಯಾ ಜೊತೆ ಮಾತನಾಡಿದ್ದಾರೆ.
ಏನೆಲ್ಲ ಹೂಡಿಕೆ?: ಇನ್ವೆಸ್ಟ್ ಕರ್ನಾಟಕ 2025 ಇಲ್ಲಿಯವರೆಗೆ ವಿವಿಧ ವಲಯಗಳಲ್ಲಿ ಬೃಹತ್ ಹೂಡಿಕೆಗಳನ್ನು ಸೆಳೆದಿದೆ. ನವೀಕರಿಸಬಹುದಾದ ಇಂಧನಕ್ಕಾಗಿ ಜೆಎಸ್‌ಡಬ್ಲ್ಯೂ ನಿಯೋ ಎನರ್ಜಿ, ಟಾಟಾ ಪವರ್ ಮತ್ತು ರೆನ್ಯೂ ಪ್ರೈವೇಟ್ ಲಿಮಿಟೆಡ್ ರೂ.1.5 ಲಕ್ಷ ಕೋಟಿ ಹೂಡಿಕೆ ಮಾಡುವ ಭರವಸೆ ನೀಡಿವೆ. ಬಾಲ್ಡೋಟಾ ಸ್ಟೀಲ್ ಮತ್ತು ಜೆಎಸ್‌ಡಬ್ಲ್ಯೂ ಗ್ರೂಪ್ ಉಕ್ಕು ಮತ್ತು ಸಿಮೆಂಟ್‌ನಲ್ಲಿ 98,000 ಕೋಟಿ ಹೂಡಿಕೆ ಮಾಡಿದ್ದಾರೆ.

ಲ್ಯಾಮ್ ರಿಸರ್ಚ್, ಎಪ್ಸಿಲಾನ್ ಗ್ರೂಪ್ ಮತ್ತು ಎಮ್ವೀ ಎನರ್ಜಿ ಸೆಮಿಕಂಡಕ್ಟರ್‌ಗಳು, ಬ್ಯಾಟರಿಗಳು ಮತ್ತು ಸೌರ ತಂತ್ರಜ್ಞಾನಕ್ಕೆ 40,000 ಕೋಟಿ ಹೂಡಿಕೆ ಮಾಡಿದ್ದು, ಸೋಟೆಫಿನ್ ಭಾರತ್ ಸ್ವಯಂಚಾಲಿತ ಪಾರ್ಕಿಂಗ್‌ಗಾಗಿ 8,500 ಕೋಟಿ ನೀಡಲು ಮುಂದೆ ಬಂದಿದೆ. ಇವಲ್ಲದೆ ಹೋಂಡಾ, ಸ್ಕ್ನೈಡರ್ ಎಲೆಕ್ಟ್ರಿಕ್ ಮತ್ತು ಟಿವಿಎಸ್ ಮೋಟಾರ್ ಕಾರ್ಯತಂತ್ರದ ಇವಿ ಮತ್ತು ಆರ್ ಆಂಡ್ ಡಿ ಹೂಡಿಕೆಗಳನ್ನು ಮಾಡಿವೆ. ಜಾಗತಿಕ ಹೂಡಿಕೆದಾರರ ಸಭೆಯಲ್ಲಿ ಈ ಹೂಡಿಕೆಗಳು ಕರ್ನಾಟಕದ ಭವಿಷ್ಯಕ್ಕೆ ಮುನ್ನುಡಿಯಾಗಲಿವೆ.
ವೆಂಚುರೈಸ್‌ಗೆ ಚಾಲನೆ: ಉತ್ಪಾದನೆ ಮತ್ತು ಸುಸ್ಥಿರತೆ ವಲಯಗಳಲ್ಲಿ ನವೋದ್ಯಮಗಳನ್ನು ಗುರುತಿಸಿ, ಬೆಂಬಲಿಸುವ 'ವೆಂಚುರೈಸ್' ಸ್ಪರ್ಧೆಗೆ ಬೆಂಗಳೂರಿನಲ್ಲಿ ಚಾಲನೆ ನೀಡಲಾಗಿದೆ. ಇನ್ವೆಸ್ಟ್ ಕರ್ನಾಟಕವು ಪ್ರಮುಖ ಸ್ಟಾರ್ಟ್‌ಅಪ್‌ಗಳಿಗೆ 'ವೆಂಟುರೈಸ್' ಎಂಬ ಸ್ಟಾರ್ಟ್‌ಅಪ್ ಸವಾಲಿಗೆ ವೇದಿಕೆ ಕಲ್ಪಿಸಿತು. ಈ ಉಪಕ್ರಮವು ಸ್ಟಾರ್ಟ್‌ಅಪ್‌ಗಳಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು, ಹೂಡಿಕೆದಾರರೊಂದಿಗೆ ಸಂಪರ್ಕ ಸಾಧಿಸಲು ಮತ್ತು ಜಾಗತಿಕ ವೇದಿಕೆಯಲ್ಲಿ ಮನ್ನಣೆ ಪಡೆಯಲು ಸಂಪರ್ಕಕೊಂಡಿಯಾಗಿದೆ.

ವೆಂಚುರೈಸ್ ಎಲೆಕ್ಟ್ರಾನಿಕ್ಸ್ ಸಿಸ್ಟಮ್ಸ್ ವಿನ್ಯಾಸ, ಮತ್ತು ಉತ್ಪಾದನೆ (ESDM), ಎಲೆಕ್ಟ್ರಿಕ್ ವೆಹಿಕಲ್ಸ್ (EV) & ಕ್ಲೀನ್ ಮೊಬಿಲಿಟಿ, ಮತ್ತು ಏರೋಸ್ಪೇಸ್ & ಡಿಫೆನ್ಸ್ ಎಂಬ ಮೂರು ಪ್ರಮುಖ ವಲಯಗಳ ಮೇಲೆ ಕೇಂದ್ರೀಕೃತವಾಗಿದೆ. ಈ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಸ್ಟಾರ್ಟ್‌ಅಪ್‌ಗಳು ತಮ್ಮ ಹೊಸ ಆಲೋಚನೆಗಳನ್ನು ಎಲ್ಲರ ಮುಂದಿಟ್ಟಿವೆ.
AIಗೆ ಒತ್ತು: ಈ ಹೂಡಿಕೆದಾರರ ಸಮಾವೇಶದಲ್ಲಿ ಆರ್ಟಿಫಿಶಿಯಲ್ ಇಂಟಲಿಜೆನ್ಸ್ (ಎಐ) ವಲಯಕ್ಕೆ ಹೆಚ್ಚಿನ ಹೂಡಿಕೆ ಸಿಕ್ಕಿದೆ. AI ಕಾರಣದಿಂದಾಗಿ ಉದ್ಯೋಗಗಳ ಸಂಖ್ಯೆ ಸಿಮೀತಗೊಳಿಸಿದ್ದಾರೆ ಎನ್ನುವ ಮಾತಿದೆ. ಆದರೆ ಯಾವುದೇ ಉದ್ಯೋಗಗಳನ್ನು ಬದಲಾಯಿಸುತ್ತದೆ ಎಂದು ಭಾವಿಸುವುದಿಲ್ಲ, ಬದಲಿಗೆ ಕೆಲಸವನ್ನು ಹೆಚ್ಚಿಸುತ್ತದೆ ಎಂದು ಹಲವು ಸಂಪನ್ಮೂಲ ವ್ಯಕ್ತಿಗಳು ಅಭಿಪ್ರಾಯಪಟ್ಟಿದ್ದಾರೆ. ಇಂದು ಈ ಕಾರ್ಮಕ್ರಮ ಸಮಾರೋಪಗೊಳ್ಳಲಿದೆ.












Click it and Unblock the Notifications