Infosys N.R.Narayana Murthy: ಮತ್ತೆ 70 ಗಂಟೆ ಕೆಲಸದ ಬಗ್ಗೆ ಮಾತನಾಡಿ ಸುದ್ದಿಯಾದ ಇನ್ಫೋಸಿಸ್ ನಾರಾಯಣಮೂರ್ತಿ
Infosys N.R.Narayana Murthy: ಇನ್ಫೋಸಿಸ್ ಸಹ ಸಂಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿ ಅವರು ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಹಾಗೆಯೇ ಇದೀಗ ಮತ್ತೊಮ್ಮೆ ವಾರಕ್ಕೆ 70 ಗಂಟೆ ಕೆಸಲ ಮಾಡುವ ಬಗ್ಗೆ ಪುನರುಚ್ಚರಿಸಿ ಸುದ್ದಿಯಾಗಿದ್ದಾರೆ. ಹಾಗಾದರೆ ಅವರು ಏನು ಹೇಳಿದ್ದಾರೆ ಹಾಗೂ ಇದಕ್ಕೆ ನೆಟ್ಟಿಗರ ಪ್ರತಿಕ್ರಿಯೆ ಹೇಗಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಇನ್ಫೋಸಿನ್ ಎನ್‌ಆರ್ ನಾರಾಯಣಮೂರ್ತಿ ಅವರು ಈಗಾಗಲೇ ಹಲವು ಬಾರಿ ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಅಂತಾ ಹೇಳುವ ಮೂಲಕ ಐಟಿ ಉದ್ಯೋಗಿಗಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದೀಗ ಮತ್ತೆ ಅದೇ ಮಾತನ್ನು ಪುನರುಚ್ಚರಿಸುವ ಮೂಲಕ ತಮ್ಮ 70 ಗಂಟೆ ಕೆಲಸದ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.

ನಾರಾಯಣಮೂರ್ತಿ ಅವರು ಯುಬಿ ಸಿಟಿಯಲ್ಲಿರುವ ಕಿಂಗ್‌ಫಿಶರ್ ಟವರ್‌ನಲ್ಲಿ 50 ಕೋಟಿ ರೂಪಾಯಿ ಮೌಲ್ಯದ ಫ್ಲಾಟ್ ಖರೀದಿಸಿ ಸುದ್ದಿಯಾಗಿದ್ದರು. ಇದರ ಬೆನ್ನೆಲ್ಲೇ ಮತ್ತೆ 70 ಗಂಟೆ ಕೆಲಸ ಮಾತನಾಡುವ ಮೂಲಕ ಗಮನ ಸೆಳೆದಿದ್ದಾರೆ. ಇತ್ತೀಚೆಗೆ ಕೋಲ್ಕತಾಗೆ ಭೇಟಿ ನೀಡಿದ ಅವರು ಕೋಲ್ಕತ್ತಾ ನಗರ ದೇಶದಲ್ಲೇ ಅತ್ಯಂತ ಸುಸಂಸ್ಕೃತ ನಗರ ಎಂದು ಹೇಳಿದ್ದಾರೆ.
ಇದೇ ವೇಳೆ ವಾರದಲ್ಲಿ 70 ಗಂಟೆಗಳ ಕಾಲ ಕೆಲಸ ಮಾಡುವ ಬಗ್ಗೆ ಮತ್ತೆ ಹೇಳಿಕೆ ನೀಡಿರುವ ನಾರಾಯಣ ಮೂರ್ತಿ ಅವರು, ಯುವಕರು ಶ್ರಮಿಸಬೇಕು, ಭಾರತವನ್ನು ನಂಬರ್ 1 ಮಾಡುವುದರೆಡೆಗೆ ಕೆಲಸ ಮಾಡಬೇಕು ಎಂಬುದನ್ನು ಅರಿತುಕೊಳ್ಳಬೇಕು ಎಂದು ಹೇಳಿದ್ದಾರೆ. "ಇನ್ಫೋಸಿಸ್‌ನಲ್ಲಿ, ಅತ್ಯುತ್ತಮ ಜಾಗತಿಕ ಕಂಪನಿಗಳೊಂದಿಗೆ ನಮ್ಮನ್ನು ಹೋಲಿಸಿಕೊಳ್ಳುತ್ತೇವೆ ಎಂದು ಹೇಳಿದ್ದೇನೆ. ಒಮ್ಮೆ ನಾವು ಅತ್ಯುತ್ತಮ ಜಾಗತಿಕ ಕಂಪನಿಗಳೊಂದಿಗೆ ನಮ್ಮನ್ನು ಹೋಲಿಸಿಕೊಂಡರೆ, ನಾವು ಭಾರತೀಯರು ಬಹಳಷ್ಟು ಕೆಲಸ ಮಾಡಬೇಕಾಗಿದೆ," ಎಂದು ಹೇಳಿದ್ದಾರೆ.
"800 ಮಿಲಿಯನ್ ಭಾರತೀಯರು ಉಚಿತ ಪಡಿತರ ಪಡೆಯುವುದರಿಂದ ನಾವು ಉನ್ನತ ಮಟ್ಟದ ಆಕಾಂಕ್ಷೆಗಳನ್ನು ಹೊಂದಬೇಕಾಗುತ್ತದೆ. ಉಚಿತ ಪಡಿತರ ಪಡೆಯುವ 800 ಮಿಲಿಯನ್ ಭಾರತೀಯರು ಇನ್ನೂ ಬಡತನದಲ್ಲಿ ಇದ್ದಾರೆ. ನಾವು ಕಷ್ಟಪಟ್ಟು ಕೆಲಸ ಮಾಡುವ ಸ್ಥಿತಿಯಲ್ಲಿ ಇಲ್ಲದಿದ್ದರೆ, ಯಾರು ಕಷ್ಟಪಡುತ್ತಾರೆ?," ಎಂದು ನಾರಾಯಣ ಮೂರ್ತಿ ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ ಶತಮಾನೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಪ್ರಶ್ನೆ ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ನಾರಾಯಣ ಮೂರ್ತಿ ಆರ್‌ಪಿಎಸ್‌ಜಿ ಗ್ರೂಪ್ ಅಧ್ಯಕ್ಷ ಸಂಜೀವ್ ಗೋಯೆಂಕಾ ಅವರೊಂದಿಗೆ ಸಂವಾದ ನಡೆಸುತ್ತಿದ್ದರು.
ತಮ್ಮನ್ನು ಉದ್ಯಮಿ ಆಗಲು ಪ್ರೇರೇಪಿಸಿದ ಅನುಭವಗಳನ್ನು ನೆನಪಿಸಿಕೊಂಡ ನಾರಾಯಣ ಮೂರ್ತಿ, ಜವಾಹರಲಾಲ್ ನೆಹರು ಪ್ರಧಾನಿ ಆಗಿದ್ದಾಗ ಮತ್ತು ಭಾರತೀಯ ತಂತ್ರಜ್ಞಾನ ಸಂಸ್ಥೆಗಳನ್ನು ವಾಸ್ತವಿಕವಾಗಿ ರೂಪಿಸಿದಾಗ ನಾನು ಒಂದು ಹಂತದಲ್ಲಿ ಎಡಪಂಥೀಯರಾಗಿದ್ದೆ ಎಂದು ಹೇಳುವ ಮೂಲಕ ಗಮನ ಸೆಳೆದಿದ್ದಾರೆ.
ಅಂದು ನನ್ನ ತಂದೆ ದೇಶದಲ್ಲಿ ಆಗುತ್ತಿರುವ ಅಸಾಧಾರಣ ಪ್ರಗತಿಯ ಬಗ್ಗೆ ಮಾತನಾಡುತ್ತಿದ್ದರು. ನಾವೆಲ್ಲರೂ ನೆಹರೂ ಮತ್ತು ಸಮಾಜವಾದಕ್ಕೆ ಮಾರುಹೋದೆವು. 70ರ ದಶಕದ ಆರಂಭದಲ್ಲಿ ನನಗೆ ಪ್ಯಾರಿಸ್‌ನಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು, ಆ ವೇಳೆ ನಾನು ಗೊಂದಲಕ್ಕೆ ಒಳಗಾಗಿದ್ದೆ. ಭಾರತ ಎಷ್ಟು ಕೊಳಕು ಮತ್ತು ಭ್ರಷ್ಟವಾಗಿತ್ತು ಎಂಬುದರ ಬಗ್ಗೆ ಪಾಶ್ಚಿಮಾತ್ಯರು ಮಾತನಾಡುತ್ತಿದ್ದರು. ನನ್ನ ದೇಶದಲ್ಲಿ ಬಡತನವಿತ್ತು ಮತ್ತು ರಸ್ತೆಗಳು ಕೆಟ್ಟದಾಗಿದ್ದವು ಎಂದರು.
ದೇಶ ಬಡತನದ ವಿರುದ್ಧ ಹೋರಾಡುವ ಏಕೈಕ ಮಾರ್ಗವೆಂದರೆ ನಿವ್ವಳ ಆದಾಯಕ್ಕೆ ಕಾರಣ ಆಗುವ ಉದ್ಯೋಗಗಳನ್ನು ಸೃಷ್ಟಿಸುವುದು ಎಂಬುದನ್ನು ನಾನು ಅರಿತುಕೊಂಡೆ. ಉದ್ಯಮಶೀಲತೆಯಲ್ಲಿ ಸರ್ಕಾರ ಸಂಪೂರ್ಣವಾಗಿ ಯಾವುದೇ ಪಾತ್ರವನ್ನು ಹೊಂದಿಲ್ಲ. ಉದ್ಯಮಿಗಳು ಉದ್ಯೋಗಗಳನ್ನು ಸೃಷ್ಟಿಸಿದಂತೆ ಅವರು ದೇಶವನ್ನು ನಿರ್ಮಿಸುತ್ತಾರೆ. ಅಲ್ಲದೆ, ಅವರು ತಮ್ಮ ಹೂಡಿಕೆದಾರರಿಗೆ ಸಂಪತ್ತನ್ನು ಸೃಷ್ಟಿಸುತ್ತಾರೆ. ಜೊತೆಗೆ ತೆರಿಗೆ ಪಾವತಿಸುತ್ತಾರೆ ಎಂದು ಹೇಳಿದರು.
ಒಂದು ದೇಶ ಬಂಡವಾಳಶಾಹಿಯನ್ನು ಅಳವಡಿಸಿಕೊಂಡರೆ, ಅದು ಉತ್ತಮ ರಸ್ತೆ, ರೈಲುಗಳು ಮತ್ತು ಮೂಲಸೌಕರ್ಯಗಳನ್ನು ಸೃಷ್ಟಿಸುತ್ತದೆ. ಬಂಡವಾಳಶಾಹಿ ಬೇರುಬಿಡದ ಭಾರತದಂತಹ ಬಡ ದೇಶದಲ್ಲಿ, ನಾನು ಮತ್ತೆ ಬಂದು ಉದ್ಯಮಶೀಲತೆಯಲ್ಲಿ ಪ್ರಯೋಗ ಮಾಡಬೇಕಾದರೆ ಸಹಾನುಭೂತಿಯ ಬಂಡವಾಳಶಾಹಿಯನ್ನು ಅಳವಡಿಸಿಕೊಳ್ಳಬೇಕು ಎಂಬುದನ್ನು ನಾನು ತಿಳಿದುಕೊಂಡೆ ಎಂದು ಹೇಳಿದ್ದಾರೆ.
ಮನುಷ್ಯರು ಯೋಚಿಸುವ ಮೂಲಕ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಬಹುದು. ದೇವರು ನಮಗೆ ಆಲೋಚನಾ ಸಾಮರ್ಥ್ಯವನ್ನು ನೀಡಿದಾಗ ಮತ್ತು ನಮಗಿಂತ ಕಡಿಮೆ ಅದೃಷ್ಟವಂತರ ಬಗ್ಗೆ ಯೋಚಿಸಲು ಈ ಆಲೋಚನಾ ಶಕ್ತಿ ಸೂಕ್ತ. ಇದು ಪ್ರಪಂಚದ ಉಳಿದ ಭಾಗಗಳು ಭಾರತವನ್ನು ಗೌರವಿಸುತ್ತದೆ ಎಂದು ಖಚಿತಪಡಿಸಿಕೊಳ್ಳುವುದಕ್ಕೆ ದಾರಿ ಮಾಡಿಕೊಡುತ್ತದೆ ಎಂದರು.
ನಾವು ಹೆಚ್ಚಿನ ಜವಾಬ್ದಾರಿಯನ್ನು ಹೊಂದಿದ್ದೇವೆ ಎಂಬುದನ್ನು ಯುವಕರು ತಿಳಿದುಕೊಳ್ಳಬೇಕು. ಅದಕ್ಕಾಗಿಯೇ ನಾವೆಲ್ಲರೂ ಕಷ್ಟಪಟ್ಟು ಕೆಲಸ ಮಾಡಬೇಕಾಗಿದೆ. ಚೀನಾದ ಕೆಲಸಗಾರ ಭಾರತೀಯನಿಗಿಂತ 3.5 ಪಟ್ಟು ಹೆಚ್ಚು ಉತ್ಪಾದಕನಾಗಿದ್ದಾನೆ ಎಂದು ಇಲ್ಲಿನ ಒಬ್ಬ ಮಹನೀಯರು ನನಗೆ ಹೇಳಿದರು ಎಂದು ಹೇಳಿದರು.












Click it and Unblock the Notifications