1,00,000 ರೂ. ಹಣ ಉಳಿಸಿದ್ರೆ ಸಾಲದು, ಅದರ ಮೌಲ್ಯವೂ ಉಳಿಯಬೇಕು; ಹಣದುಬ್ಬರದ ಸರಳ ಲೆಕ್ಕಾಚಾರ ಇಲ್ಲಿದೆ
ಬೆಂಗಳೂರು: ಪ್ರಸ್ತುತ ಅಗತ್ಯ ವಸ್ತುಗಳು ದುಬಾರಿ ಇರುವ ಕಾಲದಲ್ಲಿ ಬಡವರು, ಮಧ್ಯಮ ವರ್ಗದವರು ಬದುಕುವುದು ದುಸ್ತರವಾಗಿದೆ. ಸರಕು, ಸೇವೆಗಳಲ್ಲಿ ನಿರಂತರ ಬೆಲೆ ಏರಿಕೆ ಉಂಟಾಗುವುದನ್ನು ಹಣದುಬ್ಬರ (Inflation) ಎನ್ನಲಾಗುತ್ತದೆ. ನೀವು ದುಬಾರಿ ವಸ್ತುಗಳನ್ನು ಖರೀದಿಸುವುದಿಲ್ಲ, ಅಥವಾ ನಾವು ಹಣ ಉಳಿತಾಯ ಮಾಡುತ್ತಲೇ ಹೋಗುತ್ತೇವೆ. ಆರ್ಥಿಕವಾಗಿ ಸುರಕ್ಷಿತವಾಗಿರುತ್ತೇವೆ ಎಂದು ಭಾವಿಸಿದ್ದರೆ ನಿಮ್ಮ ಲೆಕ್ಕಾಚಾರ ತಪ್ಪು. ಹಾಗಾದರೆ ಹಣ ಉಳಿಸಬಾರದಾ? ಬಳಸಬೇಕಾ?, ಉಳಿಕೆ ಮಾಡಿದ ಹಣದಿಂದ ನಮ್ಮ ಕೊಳ್ಳುವ ಶಕ್ತಿ, ಮೌಲ್ಯ ಹೆಚ್ಚಾಗುತ್ತಾ? ಕಡಿಮೆ ಆಗುತ್ತಾ? ಎಂಬುದರ ಸಂಪೂಣರ್ವ ವಿವರ ಇಲ್ಲಿದೆ.
ಈ ಹಣದುಬ್ಬರ, ಕೊಳ್ಳುವ ಸಾಮರ್ಥ್ಯ, ಮೌಲ್ಯ ಏರಿಕೆ, ಇಳಿಕೆ ಕುರಿತು ಕನ್ನಡಿಗೆ ಷೇರು ಮಾರುಕ ಟ್ಟೆ ಟ್ರೇಡರ್ ನವೀನ್ ಕುಮಾರ್ (@Sheru_Katte) ಅವರು ಸುಂದರವಾಗಿ, ಅತ್ಯಂತ ಸರಳವಾಗಿ ಸಾರ್ವಜನಿಕರಿಗೆ ಅರ್ಥವಾಗುವ ರೀತಿಯಲ್ಲಿ ವಿವರಿಸಿದ್ದಾರೆ. ಒಂದೊಮ್ಮೆ ಈ ಲೆಕ್ಕಾಚಾರ ತಿಳಿದರೆ, ಹಣ ಸಂಗ್ರಹ, ಹಣದುಬ್ಬರ ಕುರಿತ ನಿಮ್ಮ ಆಲೋಚನೆ ಬದಲಾಗಬಹುದು.

ನ.1ಹಾಲಿನ ದರ ಏರಿಕೆ, ಸಿಂಪಲ್ ಆಗಿದೆ ಲೆಕ್ಕಾಚಾರ!
ನವೆಂಬರ್ 1ರಿಂದ ಪ್ರತಿ ಲೀಟರ್ ಹಾಲಿನ ದರ 5 ರೂಪಾಯಿ (Milk Price Hike) ಏರಿಕೆ ಆಗಲಿದೆ. ಈ ಒಂದು ಉತ್ಪನ್ನದೊಂದಿಗೆ ಹಣದುಬ್ಬರ ಕುರಿತು ಸಾಕಷ್ಟು ಅಂಶಗಳನ್ನು ಅವರು ವಿವರಿಸಿ ಎಕ್ಸ್ ಮಾಡಿದ್ದಾರೆ.
'ಹಣದುಬ್ಬರ, ಕೊಳ್ಳುವ ಸಾಮರ್ಥ್ಯ (Purchasing Power) ಬಹಳ ಸರಳವಾಗಿ ಅರ್ಥೈಸಿಕೊಳ್ಳಬಹುದು. ಕೂಡಿಟ್ಟ ಹಣ ಪ್ರತಿ ವರ್ಷ ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತಾ ಹೋಗುತ್ತದೆ.
ಉದಾರಣೆಗೆ ನಿಮ್ಮ ಬಳಿ 1 ಲಕ್ಷ ರೂಪಾಯಿ ಇದೆ ಅಂದುಕೊಳ್ಳಿ. ಸದ್ಯದ ಮಟ್ಟಿಗೆ ಇರುವ ಹಾಲಿನ ದರ 50 ರೂಪಾಯಿ ಎಂದುಕೊಳ್ಳೋಣ. ನಿಮ್ಮ ಹತ್ತಿರದ 1,00,000 ರೂ.ಹಣದಿಂದ ನೀವು 50 ರೂ. ನಂತೆ ಒಟ್ಟು 2000 ಲೀಟರ್ ಹಾಲು ಖರೀದಿ ಮಾಡಬಹುದು. ಅಷ್ಟು ಸಾಮರ್ಥ್ಯ ನಿಮ್ಮ ಬಳಿ ಈಗ ಇದೆ. ನವೆಂಬರ್‍ನಿಂದ ಹಾಲಿನ ಬೆಲೆ 5 ರೂಪಾಯಿ ಏರಿಕೆ ಆಗುತ್ತದೆ. ಆಗ 1,00,000 ಹಣದಿಂದ ಹೆಚ್ಚಳವಾದ 55 ರೂ. ನೀವು ಕೇವಲ 1785 ಲೀಟರ್ ಹಾಲು ಖರೀದಿ ಮಾಡಬಹುದು.
2000 ಲೀಟರ್ ಹಾಲಿಂದ 1785 ಲೀಟರ್ ಗೆ ಇಳಿಕೆ ಕಂಡು ಬಂದಿದೆ. ಇನ್ನೊಂದ ಎರಡು ವರ್ಷ ಬಿಟ್ಟು ಮತ್ತೆ ಹಾಲಿನ ದರ 5 ರೂಪಾಯಿ ಏರಿಕೆ ಕಂಡಿದೆ ಅಂದುಕೊಳ್ಳಿ. ಅಲ್ಲಿಗೆ ಒಟ್ಟಾರೆ 10 ರೂಪಾಯಿ ಏರಿಕೆ ಆಯಿತು. ಆಗಲೂ 1 ಲಕ್ಷ ರೂ. ನಿಂದ 60 ರೂ.ನಂತೆ ನೀವು ಕೇವಲ 1666 ಲೀಟರ್ ಹಾಲು ಖರೀದಿ ಮಾಡಬಹುದು.
ಗಮನಿಸಬೇಕಾದ ಅಂಶವೆಂದರೆ ಮೊದಲು ನಿಮ್ಮ ಖರೀದಿ ಸಾಮರ್ಥ್ಯ 2000 ಲೀಟರ್ ಇತ್ತು, ಅದೀಗ ಬೆಲೆ ಏರಿಕೆ ಬಳಿಕ 1666 ಲೀಟರ್ ಗೆ ಇಳಿಕೆ ಆಯಿತು. (2000- 1666=334) ಅಂದರೆ ಅಷ್ಟೇ ಹಣಕ್ಕೆ 334 ಲೀಟರ್ ಕಡಿಮೆ ಹಾಲು ಕೊಳ್ಳಬಹುದಾಗಿದೆ.
ನಿಮ್ಮ ಬಳಿ ಇರುವ ಹಣ 1 ಲಕ್ಷ. ನಿಮ್ಮ ಹಣ ಹಾಗೆ ಇದೆ, ಇದರಲ್ಲಿ ಬದಲಾವಣೆ ಆಗಿಲ್ಲ ಅಂತ ನೀವು ಅಂದುಕೊಳ್ಳುತ್ತೀರಿ. ಆದರೆ ನಿಮ್ಮ ಕೊಳ್ಳುವ ಸಾಮರ್ಥ್ಯ ಕಡಿಮೆ ಆಗುತ್ತಲೇ ಹೋಗುತ್ತದೆ. ನಿಮ್ಮ ಹಣದ ಸಂಖ್ಯೆ ಬದಲಾಗಿಲ್ಲ. ಆದರೆ ಆ ₹1 ಲಕ್ಷದಿಂದ ನೀವು ಖರೀದಿಸಬಹುದಾದ ವಸ್ತುಗಳ ಪ್ರಮಾಣ ಕಡಿಮೆ ಆಗುತ್ತಾ ಹೋಗುತ್ತದೆ. ಇದನ್ನೇ ಹಣದುಬ್ಬರ ಎನ್ನಲಾಗುತ್ತದೆ.
ಇನ್ನಷ್ಟು ಸರಳವಾಗಿ ಅರ್ಥ ಮಾಡಿಕೊಳ್ಳಿ..
ಇನ್ನಷ್ಟು ಸರಳವಾಗಿ ನೋಡುವುದಾದರೆ, 'ನನ್ನ ಬಳಿ ₹1 ಲಕ್ಷ ಇದೆಯಾ? ಎಂಬುದು ಮಾತ್ರ ಮುಖ್ಯವಲ್ಲ. 10 ವರ್ಷಗಳ ನಂತರ ಈ ₹1 ಲಕ್ಷದಿಂದ ನಾನು ಎಷ್ಟು ವಸ್ತುಗಳನ್ನು ಖರೀದಿಸಬಹುದು?' ಎಂಬುದೂ ಮುಖ್ಯವಾಗುತ್ತದೆ. ಅದಕ್ಕಾಗಿಯೇ ಕೇವಲ ಹಣವನ್ನು ಉಳಿಸುವುದು ಸಾಕಾಗುವುದಿಲ್ಲ. ನಮ್ಮ ಹಣದ ಕೊಳ್ಳುವ ಸಾಮರ್ಥ್ಯ ಕಾಪಾಡಿಕೊಳ್ಳುವ ಅಥವಾ ಹೆಚ್ಚಿಸುವ ಮಾರ್ಗಗಳ ಬಗ್ಗೆಯೂ ನಾವು ಯೋಚಿಸಬೇಕು. ಅದರಲ್ಲೇ ಉಳಿತಾಯ, ಹೂಡಿಕೆ, ಸಂಯೋಜನೆ (Compounding) ಹಣದುಬ್ಬರ (Inflation) ನಡುವಿನ ಸಂಬಂಧ ಇದೆ ಎಂದಿದ್ದಾರೆ.
ಹಣವನ್ನು ಉಳಿಸುವುದರ ಜೊತೆಗೆ ಹಣದ ಮೌಲ್ಯವನ್ನು ಉಳಿಸುವುದು ಮುಖ್ಯವಾಗಿರುತ್ತದೆ. ಇದನ್ನು ಅರ್ಥಮಾಡಿಕೊಂಡ ದಿನದಿಂದಲೇ ಹಣಕಾಸಿನ ಬಗ್ಗೆ ನಿಮ್ಮ ಯೋಚನೆಯೂ ಬದಲಾಗುತ್ತದೆ. ಇದಕ್ಕಾಗಿಯೇ ಹಣಕಾಸಿನಲ್ಲಿ ಒಂದು ದೊಡ್ಡ ವ್ಯತ್ಯಾಸವನ್ನು ಅರ್ಥ ಮಾಡಿಕೊಳ್ಳಬೇಕು.
ಹಣ ಉಳಿಕೆ, ಸಂಪತ್ತು ಸಂರಕ್ಷಣೆ
ಹಣವನ್ನು ಉಳಿಸುವುದು ಜೀವನದ ಪ್ರಮುಖ ಅಂಶವಾದರೆ, ಖರೀದಿ ಸಾಮರ್ಥ್ಯ ಉಳಿಸುವುದನ್ನು ಪ್ರಮುಖ ಅಂಶವಾಗಿ ಪರಿಗಣಿಸಬೇಕಾಗುತ್ತದೆ. ಅದಕ್ಕಾಗಿ ನೀವು 'ಹಣ ಉಳಿಕೆ ಜೊತೆಗೆ ಅದರ ಹೂಡಿಕೆ, ಸಂಯೋಜನೆ, ಹಣದುಬ್ಬರ ನಡುವಿನ ಸಂಬಂಧ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಆದರೆ ನೀವು ಹಣ ಉಳಿಸುವುದರ ಜೊತೆಗೆ ಅದರಿಂದ ಲಾಭ ಪಡೆಯಲು ಆಲೋಚಿಸುತ್ತೀರಿ.
ಒಂದು ವೇಳೆ ನೀವು ನಿಮ್ಮ ಹಣ ಹೂಡಿಕೆ ಮಾಡಿದಲ್ಲಿ, ಅದರಿಂದ ಕೇವಲ ಲಾಭ (Returns) "ಎಷ್ಟು ಶೇಕಡಾ? ಬರುತ್ತದೆ ಎಂಬುದನ್ನು ಅಳೆಯಬಾರದು. ಭವಿಷ್ಯದ ಹಣದುಬ್ಬರ (Inflation) ಮೀರಿ ನಮ್ಮ ಹಣವು ನಮ್ಮ ಖರೀದಿ ಸಾಮರ್ಥ್ಯ ಹೆಚ್ಚಿಸುತ್ತಾ? ಎಂಬುದನ್ನೂ ನೋಡಬೇಕು.
ಇಂದು ₹1 ಲಕ್ಷ ನಿಮ್ಮ ಬಳಿ ಇದ್ದರೆ, ಅದು 10 ವರ್ಷಗಳ ನಂತರವೂ ₹1 ಲಕ್ಷವೇ ಇರಬಹುದು. ಆದರೆ..10 ವರ್ಷಗಳ ನಂತರ ಆ ₹1 ಲಕ್ಷದಿಂದ ನೀವು ಇಂದು ಖರೀದಿಸಬಹುದಾದಷ್ಟೇ ವಸ್ತುಗಳನ್ನು ಖರೀದಿಸಬಹುದೇ? ಎಂಬುದನ್ನು ತಿಳಿಯಬೇಕು.
ಈ ಪ್ರಶ್ನೆ ಅರ್ಥವಾದ ದಿನದಿಂದ, ನೀವು ಹಣವನ್ನು ಕೇವಲ ಉಳಿಸುವುದನ್ನು ನೋಡುವುದಿಲ್ಲ. ನಿಮ್ಮ ಹಣದ ಮೌಲ್ಯವನ್ನು ಉಳಿಸುವುದು ಮತ್ತು ಬೆಳೆಸುವುದು ಹೇಗೆ ಎಂಬುದನ್ನೂ ಯೋಚಿಸಲು ಪ್ರಾರಂಭಿಸುತ್ತೀರಿ. ಇದೇ ಹಣಕಾಸಿನ ಅರಿವಿನ ಮೊದಲ ಹೆಜ್ಜೆ' ಎಂದು ಅವರು ವಿವರಿಸಿದ್ದಾರೆ.


Click it and Unblock the Notifications
