Cab Price: ಬೆಂಗಳೂರಿನಲ್ಲಿ ಮಳೆ ಅಬ್ಬರಕ್ಕೆ ಕ್ಯಾಬ್ ದರ ದುಬಾರಿ: 1 ಕಿ.ಮೀಗೆ ₹100ಕ್ಕೂ ಹೆಚ್ಚು, ಇಲ್ಲಿದೆ ದರ ವಿವರ
ಬೆಂಗಳೂರು: ಬೆಂಗಳೂರಿನಾದ್ಯಂತ ಕೆಲವು ದಿನಗಳಿಂದ ಧಾರಾಕಾರ ಮಳೆ ಆಗುತ್ತಿದೆ. ಪ್ರಮುಖ ರಸ್ತೆಗಳು, ಅಂಡರ್‌ಪಾಸ್‌ಗಳು ಮಳೆ ನೀರಿಗೆ ಜಲಾವೃತಗೊಂಡು ಹೊಳೆಯಂತಾದ ಬೆನ್ನಲ್ಲೇ ಸಾರ್ವಜನಿಕರಿಗೆ ಮತ್ತೊಂದು ಆಘಾತ ಎದುರಾಯಿತು. ಮಳೆಗೆ ನಗರದ ಕ್ಯಾಬ್, ಟ್ಯಾಕ್ಸಿ, ಆಟೋಗಳ ದರ ದುಬಾರಿ ಆಗಿದ್ದು ಕಂಡು ಬಂತು. ಅದರಲ್ಲೂ ಕ್ಯಾಬ್ ಒಂದು ಕಿಮೀ ಸಂಚಾರಕ್ಕೆ ಬರೋಬ್ಬರಿ 100 ರೂ.ಗೂ ಅಧಿಕ ಹಣ ನಿಗದಿ ಆಗಿದ್ದು, ಪ್ರಯಾಣಿಕರನ್ನು ಮತ್ತಷ್ಟು ಹೈರಾಣಾಗಿಸಿತು.
ಕಳೆದ ವಾರ ಮಧ್ಯಭಾಗದಿಂದ ಮಳೆ ಆಗುತ್ತಿದೆ. ದಸರಾ ಹಬ್ಬ ಹಿನ್ನೆಲೆ ಬೆಂಗಳೂರಿಗರಿಗೆ ಲಾಂಗ್ ವೀಕೆಂಡ್ ಸಿಕ್ಕಿದ್ದವು. ಊರಿಗೆ ತೆರಳುವವರ ಸಂಖ್ಯೆ ಹೆಚ್ಚಿತ್ತು. ಈ ವೇಳೆ ಮಳೆಯಿಂದಾಗಿ ಗಂಟೆಗಟ್ಟಲೇ ಸಂಚಾರ ದಟ್ಟಣೆ ಕಂಡು ಬಂದ ಬೆನ್ನಲ್ಲೆ ಕ್ಯಾಬ್ ಪ್ರಯಾಣ ದರ ದುಪ್ಪಟ್ಟಾಗಿತ್ತು ಎಂದು 'ಟೈಮ್ಸ್ ಆಫ್ ಇಂಡಿಯಾ' ವರದಿ ಮಾಡಿದೆ.

ಪದೇ ಪದೇ ಕ್ಯಾನ್ಸಲ್ ಆದ ಕ್ಯಾಬ್‌ಗಳು
ಮಳೆಯಲ್ಲಿ ಜನರು ಸಾರ್ವಜನಿಕ ಸಾರಿಗೆಗೆ ಕಾಯದೇ ಕ್ಯಾಬ್ ಏರಲು ಮುಂದಾದರು. ಬೇಡಿಕೆ ಹೆಚ್ಚಾದಂತೆಲ್ಲ ದರವು ಗಗನಕ್ಕೇರಿತು. 1ಕಿಮೀ ಸಂಚಾರಕ್ಕೆ 100 ರೂಪಾಯಿ, ಕೆಲವರಿಗೆ 100 ರೂ. ಹೆಚ್ಚಿನ ದರ ಆಪ್‌ಗಳಲ್ಲಿ ತೋರಿಸಿದ್ದು ಕಂಡು ಬಂತು. ಅದೆಷ್ಟೋ ಜನರು ಕ್ಯಾಬ್ ಬುಕ್ ಮಾಡಿದರೂ ಸರಿಯಾಗಿ ಬುಕ್ ಆಗಲಿಲ್ಲ. ಕೆಲವೊಮ್ಮೆ ಕ್ಯಾಬ್ ಬುಕ್ ಆಗಿ ಕ್ಯಾನ್ಸಲ್ ಆದವು. ಹತ್ತಾರು ನಿಮಿಷಗಳ ಕಾಲ ಕ್ಯಾಬ್ ಗಾಗಿಯೂ ಕಾಯುವಂತಾಗಿತ್ತು.
ಹೆಚ್ಚಾಗಿದ್ದ ದರ ಎಷ್ಟು?
ಪ್ರಮುಖ ಕ್ಯಾಬ್ ಅಗ್ರಿಗೇಟರ್ ಆ್ಯಪ್ ಪರಿಶೀಲಿಸಿದಾಗ ಶನಿವಾರ ಸಂಜೆ ರೆಸಿಡೆನ್ಸಿ ರಸ್ತೆಯಿಂದ ಚರ್ಚ್ ಸ್ಟ್ರೀಟ್‌ಗೆ ಸುಮಾರು 2 ಕಿ.ಮೀ ದೂರವಿದೆ. 'ಊಬರ್' ನಲ್ಲಿ ಎಸಿ ಕ್ಯಾಬ್‌ಗೆ 221 ರೂಪಾಯಿ ತೋರಿಸಿತು. ಎಸಿ ಅಲ್ಲದ ಕ್ಯಾಬ್‌ಗೆ 202 ರೂಪಾಯಿ ದರ ನಿಗದಿ ಆಗಿದ್ದು ಕಂಡು ಬಂತು. ಊಬರ್ ಆಟೋರಿಕ್ಷಾದಲ್ಲಿ 105 ರೂಪಾಯಿ ತೋರಿಸಿತು. ಇಷ್ಟು ಕಡಿಮೆ ದರದ ಪ್ರಯಾಣಕ್ಕೆ ಹೆಚ್ಚು ದರ ನಿಗದಿ ನೋಡಿ ಜನ ಕಂಗಾಲಾದರು.
ಇನ್ನೂ 'ರಾಪಿಡೋ' ಎಸಿ ಸಹಿತ ಕ್ಯಾಬ್‌ಗೆ ಎರಡು ಕಿಮೀಗೆ 272 ರೂಪಾಯಿ, ನಾನ್ ಎಸಿ ಕ್ಯಾಬ್‌ಗೆ 255 ರೂಪಾಯಿ, ಆಟೋಗೆ 96 ರೂ. ಇತ್ತು. ಇಷ್ಟೆಲ್ಲ ದರ ಹೆಚ್ಚಾಗಿದ್ದರೂ ಸಹಿತ 'ನಮ್ಮ ಯಾತ್ರಿ'ಯಲ್ಲಿ ದರ ಕೊಂಚ ಕಡಿಮೆ ಇತ್ತು. ಎಸಿ ಕ್ಯಾಬ್‌ಗೆ 200 ರೂ, ನಾನ್ ಎಸಿಗೆ 196ರೂ. ಆಟೋಗೆ 66 ರೂ. ದರ ನಿಗದಿ ಆಗಿದ್ದು ಕಂಡು ಬಂತು.
ದುಬಾರಿ ದರಕ್ಕೆ ಓಕೆ ಅಂದ್ರು ಬಾರದ ಕ್ಯಾಬ್‌ಗಳು!
ಅನಿವಾರ್ಯವಾಗಿ ಇಷ್ಟು ದುಬಾರಿ ದರ ನೀಡಿ ತೆರಳಿದರಾಯಿತು ಎಂದುಕೊಂಡು ಕ್ಯಾಬ್ ಬುಕ್ ಮಾಡಿದರೂ ಸಹ ವಾಹನಗಳು ಬೇಗನೆ ಸಿಗಲಿಲ್ಲ. ಒಬ್ಬೊಬ್ಬರು ಕಡಿಮೆ ಎಂದರೂ ಹತ್ತು ನಿಮಿಷ ಕಾದು ತೆರಳಬೇಕಾಯಿತು. ಬೇಡಿಕೆ ಹೆಚ್ಚಿದ್ದರಿಂದ ಅಧಿಕ ಲಾಭಕ್ಕಾಗಿ, ಟಿಪ್‌ಗಾಗಿ ಕ್ಯಾಬ್‌ಗಳು ಆಗಾಗ ರದ್ದಾಗುವ ಮೂಲಕ ಪ್ರಯಾಣಿಕರಿಗೆ ಕಿರಿ ಕಿರಿ ಉಂಟಾಯಿತು. ಇನ್ನೂ ವೀಕೆಂಡ್ ಆಗಿದ್ದರಿಂದ ಸಾಮಾನ್ಯ ಆಟೋಗಳು ಸಹ ಕನಿಷ್ಠ ಸುಮಾರು 40 ರೂ, ಕೆಲವು ಅದಕ್ಕೂ ಹೆಚ್ಚು ಹಣ ಪಡೆದರು.
ಮಳೆಯಲ್ಲೂ ಕ್ರೀಡಾಭಿಮಾನಿಗಳ ಓಡಾಟ
ಬೆಂಗಳೂರಿನಲ್ಲಿ ಟಿ20 ಭಾರತ ಮತ್ತು ವೆಸ್ಟ್ ಇಂಡೀಸ್ ಕ್ರಿಕೆಟ್ ಪಂದ್ಯಾವಳಿ ಮತ್ತು ಬೆಂಗಳೂರು ಎಫ್‌ಸಿ ಮತ್ತು ಚೆನ್ನೈಯಿನ್ ಎಫ್‌ಸಿ ನಡುವಿನ ಫುಟ್‌ಬಾಲ್ ಪಂದ್ಯವು ಆಯೋಜನೆಗೊಂಡಿತ್ತು. ಹೀಗಾಗಿ ಕ್ರೀಡಾ ಪ್ರೇಮಿಗಳ ಸಂಚಾರ ಹೆಚ್ಚಾಗಿತ್ತು. ಸಂಜೆ ವೇಳೆ ದಿಢೀರ್ ಸುರಿದ ಮಳೆಯಿಂದಾಗಿ ಸಂಚಾರ, ಕ್ಯಾಬ್‌ಗಳ ದರದ ಮೇಲೆ ಪರಿಣಾಮ ಬೀರಿತು. ಮಳೆಗೆ ಬೈಕ್ ಸವಾರರು, ಸಾರ್ವಜನಿಕರು ಪರದಾಡಿದ್ದು ಕಂಡು ಬಂತು.
ವ್ಯಕ್ತಿಯೊಬ್ಬರು ತುಮಕೂರು ರಸ್ತೆಯಿಂದ ಶೇಷಾದ್ರಿಪುರಂಗೆ ಬರಲು 'ಊಬರ್' ದರ ಕನಿಷ್ಠ 100 ರೂಪಾಯಿ ಅಧಿಕ ಬೆಲೆ ತೋರಿಸಿತು. ಹೆಚ್ಚುವರಿ ಶುಲ್ಕ ಪಾವತಿಸಲು ಮುಂದಾದರೂ ಬೇಗ ಕ್ಯಾಬ್ ಬುಕ್ ಆಗಲಿಲ್ಲ. ಕೆಲವು ದೂರದ ಸ್ಥಳಕ್ಕೆ ಅಂದಾಜು 250 ರೂ. ಎಂದುಕೊಂಡರೂ 'ಊಬರ್'ನಲ್ಲಿ 377 ರೂಪಾಯಿ ತೋರಿಸಿದರೆ, 'ರಾಪಿಡೋ'ನಲ್ಲಿ 288 ರೂ. ದರ ನಿಗದಿ ಆಗಿತ್ತು.
ಅದೇ ರೀತಿ 150 ರೂ. ದೂರದ ಪ್ರಯಾಣ, 250-300 ರೂಪಾಯಿ ವರೆಗೆ ತೋರಿಸಿತ್ತು. ಇನ್ನೂ 15 ಕಿಮೀಗೂ ದೂರದ ಪ್ರಯಾಣಕ್ಕೆ 750 - 1,000 ರೂ. ದರ ನಿಗದಿ ಆಗಿದ್ದು ಕಂಡು ಬಂತು. ಈ ಸಂಬಂಧ ಕಂಪನಿಗಳಿಗೆ ಕರೆ ಮಾಡಿದರೂ ಅವರಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ.


Click it and Unblock the Notifications
