ಆರ್ಥಿಕ ಪ್ರಗತಿ: ಚೀನಾವನ್ನು ಹಿಂದಿಕ್ಕಿದ ಭಾರತ!
ನವದೆಹಲಿ, ಫೆಬ್ರವರಿ 28: ಪ್ರಸಕ್ತ ಆರ್ಥಿಕ ವರ್ಷದಲ್ಲಿ (2017-18)ಸಾಲಿನಲ್ಲಿ ನಿವ್ವಳ ಉತ್ಪನ್ನ ದರ(ಜಿಡಿಪಿ) ಶೇ.6.5 ಕ್ಕೆ ಇಳಿಯಲಿದೆ ಎಂದು ಕೇಂದ್ರ ಸಂಖ್ಯಾಶಾಸ್ತ್ರ ಇಲಾಖೆ ಅಂದಾಜಿಸಿತ್ತು. ಆದರೆ, ನಿರೀಕ್ಷೆಗೂ ಮೀರಿ ಡಿಸೆಂಬರ್ ಅಂತ್ಯಕ್ಕೆ ಕೊನೆಗೊಂಡ ತ್ರೈಮಾಸಿಕ ವರದಿಯಂತೆ ಆರ್ಥಿಕ ಪ್ರಗತಿ ಶೇ 7.2ಕ್ಕೇರಿದೆ.
ಈ ಮೂಲಕ ತ್ವರಿತಗತಿಯಲ್ಲಿ ಆರ್ಥಿಕ ಪ್ರಗತಿ ಕಾಣುವಲ್ಲಿ ಚೀನಾವನ್ನು ಭಾರತ ಹಿಂದಿಕ್ಕಿದೆ. ಅಕ್ಟೋಬರ್ -ಡಿಸೆಂಬರ್ 2017ರ ಅವಧಿಯಲ್ಲಿ ಚೀನಾದ ಆರ್ಥಿಕ ಪ್ರಗತಿ ಶೇ 6.8ರಷ್ಟಿದೆ.
2018ರಲ್ಲಿ ಸಾಲು ಸಾಲು ಅಸೆಂಬ್ಲಿ ಚುನಾವಣೆ, 2019ರಲ್ಲಿ ಲೋಕಸಭೆ ಚುನಾವಣೆ ಎದುರಿಸಲಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ಈ ಸುದ್ದಿ ಸಂಭ್ರಮದ ಹೋಳಿಯನ್ನು ತಂದಿದೆ.
ವಿಶ್ವಬ್ಯಾಂಕ್ ಅಂದಾಜಿನ ಪ್ರಕಾರ 2017-18 ನೇ ಆರ್ಥಿಕ ವರ್ಷದಲ್ಲಿ ಜಿಡಿಪಿ ದರ ಶೇ.6.7 ದಾಖಲಾಗಲಿದ್ದು, 2018-19ನೇ ಸಾಲಿನಲ್ಲಿ ಶೇ.7.3 ದಾಖಲಾಗಲಿದೆ.
2018-19 ನೇ ಸಾಲಿನ ಆರ್ಥಿಕ ವರ್ಷದಲ್ಲಿ ಭಾರತ ಶೇ.7.1 ರಷ್ಟು ಜಿಡಿಪಿ ಬೆಳವಣಿಗೆ ಕಾಣಲಿದೆ ಎಂದು ಕ್ರೆಡಿಟ್ ರೇಟಿಂಗ್ ಸಂಸ್ಥೆ ಇಂಡಿಯಾ ರೇಟಿಂಗ್ಸ್ ಜನವರಿ ತಿಂಗಳಿನಲ್ಲಿ ತನ್ನ ವರದಿ ನೀಡಿತ್ತು. ಈ ಅಂದಾಜನ್ನು ಮೀರಿ ಪ್ರಗತಿ ಕಾಣಲಾಗಿದೆ.

ಕೇಂದ್ರ ಸಾಂಖ್ಯಿಕ ಕಚೇರಿ (ಸಿಎಒ) ಮಾಹಿತಿ
ಕೇಂದ್ರ ಸಾಂಖ್ಯಿಕ ಕಚೇರಿ (ಸಿಎಒ) ಕಳೆದ ಮೂರು ತ್ರೈ ಮಾಸಿಕ ಅವಧಿಯ ಮಾಹಿತಿಯನ್ನು ಕಲೆ ಹಾಕಿ ನಿವ್ವಳ ಮೌಲ್ಯ ಸೇರ್ಪಡೆ(ಜಿವಿಎ) ಅಂದಾಜು ಹಾಕಿದೆ. ಈ ಪ್ರಕಾರ, ಜಿಡಿಪಿ -ನಿವ್ವಳ ತೆರಿಗೆ ಮಾಡಿದರೆ ಅಕ್ಟೋಬರ್ -ಡಿಸೆಂಬರ್ ಅವಧಿಗೆ ಶೇ 6.7ರಷ್ಟು ಪ್ರಗತಿ ಕಂಡು ಬರುತ್ತದೆ. ಇದೇ ಹಿಂದಿನ ತ್ರೈಮಾಸಿಕ ಅವಧಿಯಲ್ಲಿ ಶೇ 6.1ರಷ್ಟು ಪ್ರಗತಿ ಸಾಧಿಸಲಾಗಿತ್ತು.

ಉತ್ಪಾದನಾ ಕ್ಷೇತ್ರ
2017-18ರ ಮೂರನೇ ತ್ರೈಮಾಸಿಕದಲ್ಲಿ ಶೇ 8.1ರಷ್ಟು ಪ್ರಗತಿ ಕಂಡು ಬಂದಿದೆ. ಹಿಂದಿನ ತ್ರೈಮಾಸಿಕದಲ್ಲಿ ಪ್ರಗತಿ ಶೇ 7.9ರಷ್ಟಿತ್ತು.

ಕೃಷಿ ವಲಯ
2017-18ರ ಮೂರನೇ ತ್ರೈಮಾಸಿಕದಲ್ಲಿ ಶೇ 4.1ರಷ್ಟು ಪ್ರಗತಿ ಕಂಡು ಬಂದಿದೆ. ಹಿಂದಿನ ತ್ರೈಮಾಸಿಕದಲ್ಲಿ ಪ್ರಗತಿ ಶೇ 1.7 ರಷ್ಟಿತ್ತು. ತೋಟಗಾರಿಕಾ ವಲಯದಲ್ಲಿ ಹೆಚ್ಚಿನ ಪ್ರಗತಿ ನಿರೀಕ್ಷೆಯಿಲ್ಲ. ಖಾರೀಫ್ ಬೆಳೆಗಳಾದ ಎಣ್ಣೆಕಾಳು, ಧಾನ್ಯ, ಬೆಳೆಕಾಳು, ಹತ್ತಿಗಳ ಉತ್ಪಾದನಾ ಪ್ರಗತಿ ಅಂದಾಜಿನಷ್ಟಿಲ್ಲ.

ನಿರ್ಮಾಣ ಕ್ಷೇತ್ರ
2017-18ರ ಮೂರನೇ ತ್ರೈಮಾಸಿಕದಲ್ಲಿ ಶೇ 6.8 ರಷ್ಟು ಪ್ರಗತಿ ಕಂಡು ಬಂದಿದೆ. ಹಿಂದಿನ ತ್ರೈಮಾಸಿಕದಲ್ಲಿ ಪ್ರಗತಿ ಶೇ 2.6 ರಷ್ಟಿತ್ತು. ರೇರಾ ಕಾಯ್ದೆ ಹಾಗೂ ಜಿಎಸ್ಟಿ ಜಾರಿಗೊಂಡ ಬಳಿಕ ಈ ಕ್ಷೇತ್ರ ಕೊಂಚ ಡಲ್ ಆಗಿದೆ.












Click it and Unblock the Notifications