Get Updates
Get notified of breaking news, exclusive insights, and must-see stories!

Union Budget: 2025ರ ಕೇಂದ್ರ ಬಜೆಟ್‌ಲ್ಲಿ ಭಾರತದ ರಕ್ಷಣಾ ಕ್ಷೇತ್ರದ ನಿರೀಕ್ಷೆಗಳೇನು?

Union Budget: ಇಡೀ ಭಾರತವವೇ 2025-26ನೇ ಸಾಲಿನ ಕೇಂದ್ರ ಬಜೆಟ್ ಮಂಡನೆಗೆ ಎದುರು ನೋಡುತ್ತಿದ್ದರೆ, ರಕ್ಷಣಾ ಕ್ಷೇತ್ರ ಒಂದು ಪ್ರಮುಖ ಘಟ್ಟದಲ್ಲಿ ನಿಂತಿದೆ. ಹಿಂದಿನ ವರ್ಷದ ಬಜೆಟ್ ಹಾಕಿಕೊಟ್ಟ ಬುನಾದಿಯ ಮೇಲೆ ಸಾಗುತ್ತಾ, 2025-26ರ ರಕ್ಷಣಾ ಬಜೆಟ್ ಹೆಚ್ಚುತ್ತಿರುವ ಭದ್ರತಾ ಸವಾಲುಗಳ ಸಂಕೀರ್ಣತೆಯನ್ನು ಎದುರಿಸುತ್ತಾ, ರಕ್ಷಣಾ ಸ್ವಾವಲಂಬನೆ ಮತ್ತು ಆಧುನೀಕರಣದತ್ತ ಇಟ್ಟಿರುವ ಹೆಜ್ಜೆಯನ್ನು ಮುಂದುವರೆಸಬೇಕಿದೆ. ಇಂತಹ ಸಮತೋಲನದ ಹೆಜ್ಜೆ ಮುಂದಿನ ವರ್ಷಗಳಲ್ಲಿ ಭಾರತದ ರಕ್ಷಣಾ ಸಾಮರ್ಥ್ಯ ಸಾಗುವ ಪಥವನ್ನು ನಿರ್ಧರಿಸಲಿದೆ.

2024-25ನೇ ಸಾಲಿನ ರಕ್ಷಣಾ ಬಜೆಟ್ ಅನ್ನು ಗಮನಿಸಿದರೆ, ಅದು ಸರ್ಕಾರದ ಆದ್ಯತೆಗಳೇನು ಎನ್ನುವ ಕುರಿತು ಮೌಲ್ಯಯುತ ಒಳನೋಟಗಳನ್ನು ಒದಗಿಸಿತ್ತು. ಆ ಬಜೆಟ್ ರಕ್ಷಣಾ ಕ್ಷೇತ್ರಕ್ಕೆ 6.22 ಲಕ್ಷ ಕೋಟಿ ರೂಪಾಯಿಗಳನ್ನು ಒದಗಿಸಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದರೆ 4% ಹೆಚ್ಚಳ ಕಂಡಿತ್ತು. ಇದು ದೇಶದ ಒಟ್ಟಾರೆ ಬಜೆಟ್‌ನ 12.9% ಆಗಿದ್ದರೆ, ಭಾರತದ ಜಿಡಿಪಿಯ 1.89% ಆಗಿತ್ತು.

How Can Union Budget 2025 make India s defence sector strong Know details

2024-25ರ ಬಜೆಟ್ ಹಂಚಿಕೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ, 27.66% ಬಂಡವಾಳ ವೆಚ್ಚವನ್ನು ನೂತನ ಉಪಕರಣಗಳ ಖರೀದಿಗೆ, ಇರುವ ವ್ಯವಸ್ಥೆಗಳನ್ನು ಮೇಲ್ದರ್ಜೆಗೇರಿಸಲು ಮತ್ತು ಮುಖ್ಯ ಮೂಲಭೂತ ವ್ಯವಸ್ಥೆಗಳಿಗಾಗಿ ಮೀಸಲಿಡಲಾಗಿತ್ತು. ಇನ್ನು 14.82% ಮೊತ್ತವನ್ನು ಆದಾಯ ವೆಚ್ಚಕ್ಕೆ ಮೀಸಲಿಡಲಾಗಿದ್ದು, ಅದು ಸೇನಾಪಡೆಗಳ ನಿರ್ವಹಣೆ, ತರಬೇತಿ, ಮತ್ತು ದೈನಂದಿನ ವೆಚ್ಚಗಳು ಸೇರಿದಂತೆ ಸೇನಾಪಡೆಗಳ ಅವಶ್ಯಕ ಕಾರ್ಯಾಚರಣಾ ವೆಚ್ಚಕ್ಕೆ ಬಳಸಲಾಗಿತ್ತು.

ಇನ್ನು 22.70% ಮೊತ್ತವನ್ನು ನಿವೃತ್ತ ಮಿಲಿಟರಿ ಸಿಬ್ಬಂದಿಗಳಿಗೆ ನೀಡಲಾಗುವ ಭದ್ರತಾ ನಿವೃತ್ತಿ ವೇತನಕ್ಕೆ ನಿಯೋಜಿಸಲಾಗಿತ್ತು. 4.17% ಮೊತ್ತವನ್ನು ರಕ್ಷಣಾ ಸಚಿವಾಲಯದಡಿ ಕಾರ್ಯ ನಿರ್ವಹಿಸುವ ನಾಗರಿಕ ಸಂಸ್ಥೆಗಳಿಗೆ ಬಳಸಲಾಗಿತ್ತು. ಆ ಮೂಲಕ, ರಕ್ಷಣಾ ಸಚಿವಾಲಯದಡಿ ಕಾರ್ಯ ನಿರ್ವಹಿಸುವ ವಿವಿಧ ನಾಗರಿಕ ಸಂಸ್ಥೆಗಳಿಗೆ ಅವಶ್ಯಕ ಆಡಳಿತ ಮತ್ತು ಬೆಂಬಲ ಸೇವೆಗಳನ್ನು ಒದಗಿಸಲಾಗಿತ್ತು.

2025-26ರ ಬಜೆಟ್ ಒಂದು ಮುನ್ನೋಟ: ಈ ಬಾರಿಯ ಬಜೆಟ್ ಹಿಂದಿನ ವರ್ಷದ ಬಜೆಟ್ ಹಾಕಿಕೊಟ್ಟ ಬುನಾದಿಯ ಮೇಲೆಯೇ ಮುಂದುವರೆಯುವ ನಿರೀಕ್ಷೆಗಳಿವೆ. ಈ ಬಾರಿಯ ಬಜೆಟ್ ಕೆಲವು ಪ್ರಮುಖ ಕ್ಷೇತ್ರಗಳತ್ತ ಹೆಚ್ಚಿನ ಗಮನ ನೀಡುವ ಸಾಧ್ಯತೆಗಳಿವೆ.

ಆತ್ಮನಿರ್ಭರತೆಗೆ ಇನ್ನಷ್ಟು ಒತ್ತು: ರಕ್ಷಣಾ ಕ್ಷೇತ್ರದಲ್ಲಿ 'ಆತ್ಮನಿರ್ಭರ ಭಾರತ' (ಸ್ವಾವಲಂಬಿ ಭಾರತ) ಸಾಧನೆಗೆ ಈ ಬಾರಿ ಇನ್ನಷ್ಟು ಆದ್ಯತೆ ನೀಡುವ ಸಾಧ್ಯತೆಗಳಿದ್ದು, 75%ದಷ್ಟು ಆಯುಧ ಖರೀದಿಯ ಮೊತ್ತವನ್ನು ದೇಶೀಯ ಉತ್ಪಾದನೆಯ ಆಯುಧ ಖರೀದಿಗೆ ಬಳಸಲಾಗುತ್ತದೆ.

2024-25ರಲ್ಲಿ, ದೇಶೀಯ ನಿರ್ಮಾಣದ ಆಯುಧ ಖರೀದಿಗೆ 1.06 ಲಕ್ಷ ಕೋಟಿ ರೂಪಾಯಿ ಮೀಸಲಿದ್ದರೆ, ಈ ವರ್ಷ ಅದು ಇನ್ನಷ್ಟು ಹೆಚ್ಚಾಗುವ ನಿರೀಕ್ಷೆಗಳಿವೆ. ಆ ಮೂಲಕ ದೇಶೀಯ ಆಯುಧ ಉತ್ಪಾದನೆಗೆ ಆದ್ಯತೆ ನೀಡಿ, ದೇಶೀಯ ಉತ್ಪಾದಕರಿಗೆ ಸಹಾಯಧನ ಒದಗಿಸಿ, ವಿದೇಶೀ ಪೂರೈಕೆದಾರರ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸಲಿದೆ.

ಆಧುನೀಕರಣದ ಮುಂದುವರಿಕೆ: ಭಾರತೀಯ ಸೇನೆಯ ಆಧುನೀಕರಣ ರಕ್ಷಣಾ ಬಜೆಟ್‌ನ ಪ್ರಮುಖ ಆದ್ಯತೆಯಾಗಿದ್ದು, ಈ ಬಾರಿಯ ಬಂಡವಾಳ ವೆಚ್ಚ (ಕ್ಯಾಪಿಟಲ್ ಎಕ್ಸ್‌ಪೆಂಡಿಚರ್) ಬಹುತೇಕ 1.9 ಲಕ್ಷ ಕೋಟಿ ರೂಪಾಯಿಗಳಿಗೆ ಹೆಚ್ಚುವುದಾಗಿ ಅಂದಾಜಿಸಲಾಗಿದೆ.

ಇದು ಮೂರೂ ರಕ್ಷಣಾ ವಿಭಾಗಗಳಿಗೆ ಆಧುನಿಕ ಉಪಕರಣಗಳನ್ನು ಪಡೆದುಕೊಳ್ಳಲು ನೆರವಾಗಲಿದ್ದು, ಅವುಗಳಲ್ಲಿ ಭಾರತೀಯ ವಾಯು ಸೇನೆಗೆ ನೂತನ ಯುದ್ಧ ವಿಮಾನಗಳು, ಸಾಗಾಣಿಕಾ ವಿಮಾನಗಳು, ಮತ್ತು ಮಾನವ ರಹಿತ ವೈಮಾನಿಕ ವ್ಯವಸ್ಥೆಗಳು (ಯುಎಎಸ್), ನೌಕಾಪಡೆಗೆ ಆಧುನಿಕ ಯುದ್ಧ ನೌಕೆಗಳು ಮತ್ತು ಸಬ್‌ಮರೀನ್‌ಗಳು, ಮತ್ತು ಭೂಸೇನೆಗೆ ಆಧುನಿಕ ಸಶಸ್ತ್ರ ವಾಹನಗಳು, ಆರ್ಟಿಲರಿ ವ್ಯವಸ್ಥೆಗಳು, ಹಾಗೂ ಪದಾತಿದಳದ ಆಯುಧ ಉಪಕರಣಗಳು ಸೇರಿವೆ.

ಗಡಿ ಪ್ರದೇಶದ ಮೂಲಭೂತ ಸೌಕರ್ಯ ಅಭಿವೃದ್ಧಿ: ಚೀನಾ ಮತ್ತು ಪಾಕಿಸ್ತಾನಗಳ ಜೊತೆಗಿನ ಭಾರತದ ಗಡಿ ನಿರಂತರವಾದ ಸವಾಲುಗಳನ್ನು ಎದುರಿಸುತ್ತಿದೆ. ಆದ್ದರಿಂದ, ಗಡಿ ಪ್ರದೇಶಗಳ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಭಾರತ ತನ್ನ ಹೂಡಿಕೆಗಳನ್ನು ಮುಂದುವರಿಸಬೇಕಿದ್ದು, 2025-26ರ ಬಜೆಟ್ ಗಡಿ ಪ್ರದೇಶದ ರಸ್ತೆಗಳು, ಸೇತುವೆಗಳು, ಮತ್ತು ಸೂಕ್ಷ್ಮವಾದ ಮತ್ತು ಕಾರ್ಯತಂತ್ರದ ಪ್ರಾಮುಖ್ಯತೆ ಹೊಂದಿರುವ ಗಡಿ ಪ್ರದೇಶಗಳಲ್ಲಿ ಕ್ಷಿಪ್ರ ಸೇನಾ ನಿಯೋಜನೆ ಮತ್ತು ಸಾಗಾಣಿಕೆಗೆ ಅವಶ್ಯಕವಾದ ಮೂಲಭೂತ ವ್ಯವಸ್ಥೆಗಳ ನಿರ್ಮಾಣಕ್ಕೆ ಹೂಡಿಕೆಗಳನ್ನು ಮುಂದುವರೆಸಲಿದೆ.

ಡ್ರೋನ್ ಉದ್ಯಮದ ಪ್ರಗತಿಗೆ ಇನ್ನಷ್ಟು ವೇಗ: ಭಾರತದ ಡ್ರೋನ್ ಉದ್ಯಮ ಈ ಬಾರಿ ಇನ್ನಷ್ಟು ಉತ್ತೇಜನ ಪಡೆದುಕೊಳ್ಳಲು ಸಜ್ಜಾಗಿದ್ದು, ಅದಕ್ಕಾಗಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಹೆಚ್ಚಿನ ಮೊತ್ತ ಒದಗಿಸುವ ಸಾಧ್ಯತೆಗಳಿವೆ. ಅದರೊಡನೆ, ನಿಯಮಾವಳಿಗಳನ್ನು ಇನ್ನಷ್ಟು ಸುಧಾರಿಸಿ, ಕೌಶಲ್ಯಾಭಿವೃದ್ಧಿಯ ಕ್ರಮಗಳನ್ನು ಕೈಗೊಂಡು, ಆ ಮೂಲಕ ಡ್ರೋನ್ ಉತ್ಪಾದನಾ ವಲಯಕ್ಕೆ ಇನ್ನಷ್ಟು ಉತ್ಸಾಹ ತುಂಬಬಹುದು. ಇದರಿಂದಾಗಿ ಕೃಷಿ, ಸಾಗಾಣಿಕೆ, ವಿಪತ್ತು ಪರಿಹಾರ, ಮತ್ತು ಕಣ್ಗಾವಲಿನಂತಹ ವಿವಿಧ ಕ್ಷೇತ್ರಗಳಲ್ಲಿ ಡ್ರೋನ್‌ಗಳ ಅಸಾಧಾರಣ ಸಾಮರ್ಥ್ಯವನ್ನು ಬಳಸಿಕೊಳ್ಳಲು ಸಾಧ್ಯವಾಗಲಿದೆ.

ಸಾಗರ ವಲಯಕ್ಕೆ ಪುನಶ್ಚೇತನ: ಭಾರತದ ಸಾಗರ ವಲಯ, ಅದರಲ್ಲೂ ವಿಶೇಷವಾಗಿ ನೌಕಾ ನಿರ್ಮಾಣ ಉದ್ಯಮಕ್ಕೆ ತನ್ನ ಸಾಮರ್ಥ್ಯ ಮತ್ತು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಕಾರ್ಯತಂತ್ರದ ಹೂಡಿಕೆಯ ಅಗತ್ಯವಿದೆ. ಬಂದರುಗಳು ಮತ್ತು ಶಿಪ್‌ಯಾರ್ಡ್‌ಗಳಿಗೆ ಹೂಡಿಕೆ ಹೆಚ್ಚಿಸುವುದು ಮತ್ತು ದೇಶೀಯ ನೌಕಾ ನಿರ್ಮಾಣ ಸಂಸ್ಥೆಗಳಿಗೆ ಬೆಂಬಲ ಒದಗಿಸುವುದರಿಂದ, ಈ ವಲಯಕ್ಕೆ ಪುನಶ್ಚೇತನ ಲಭಿಸಿ, ಇದು ಭಾರತದ ನೀಲಿ ಆರ್ಥಿಕತೆಯ ಮಹತ್ವಾಕಾಂಕ್ಷೆಗೆ ಕೊಡುಗೆ ನೀಡಬಲ್ಲದು.

ರಕ್ಷಣಾ ವೆಚ್ಚದಲ್ಲಿನ ಕುಸಿತಕ್ಕೆ ಪರಿಹಾರ: ಒಟ್ಟಾರೆ ಬಜೆಟ್‌ನಲ್ಲಿ ರಕ್ಷಣಾ ವೆಚ್ಚದ ಪಾಲು ಕಡಿಮೆಯಾಗುತ್ತಾ ಸಾಗಿರುವುದು ಆತಂಕದ ವಿಚಾರವಾಗಿದೆ. 2025ರಲ್ಲಿ ಈ ಪ್ರಮಾಣ ಶೇಕಡ 13ಕ್ಕೆ ಇಳಿಯುವ ನಿರೀಕ್ಷೆಗಳಿದ್ದು, ಇದು 1960ರ ದಶಕದ ಬಳಿಕ ಕನಿಷ್ಠ ಪ್ರಮಾಣವಾಗಿರಲಿದೆ. ಇದು ವಿತ್ತೀಯ ವಿವೇಚನೆ ಮತ್ತು ಕಾರ್ಯತಂತ್ರದ ಭದ್ರತಾ ಕ್ರಮಗಳ ನಡುವೆ ಸೂಕ್ಷ್ಮವಾದ ಸಮತೋಲನವನ್ನು ಸಾಧಿಸಬೇಕಾದ ಅನಿವಾರ್ಯತೆಯನ್ನು ಎತ್ತಿ ತೋರಿಸಿದೆ.

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿಗೆ ಉತ್ತೇಜನ: 2025-26ರಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗೆ (ಡಿಆರ್‌ಡಿಓ) ಒದಗಿಸುವ ಬಜೆಟ್ ಇನ್ನಷ್ಟು ಹೆಚ್ಚಳ ಕಾಣುವ ಸಾಧ್ಯತೆಗಳಿವೆ. ಈ ಮೊತ್ತ ಮೂಲಭೂತ ಸಂಶೋಧನೆ ನಡೆಸಲು, ಹೈಪರ್‌ಸಾನಿಕ್ ಆಯುಧಗಳು ಮತ್ತು ಕೃತಕ ಬುದ್ಧಿಮತ್ತೆಯಂತಹ (ಎಐ) ಪ್ರಮುಖ ತಂತ್ರಜ್ಞಾನಗಳ ಅಭಿವೃದ್ಧಿ ನಡೆಸಲು, ಮತ್ತು ಖಾಸಗಿ ಸಂಸ್ಥೆಗಳ ಜೊತೆಗೆ ಸಹಭಾಗಿತ್ವ ಸಾಧಿಸಲು ನೆರವಾಗಲಿದೆ.

ಆದರೆ, ರಕ್ಷಣಾ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ರಕ್ಷಣಾ ಬಜೆಟ್‌ನಲ್ಲಿ ಕೇವಲ 1% ಮೊತ್ತವನ್ನು ಮೀಸಲಾಗಿಟ್ಟಿದ್ದು, ಜಾಗತಿಕ ಮಟ್ಟದಲ್ಲಿ ಭಾರತ ತಾಂತ್ರಿಕ ಮೇಲುಗೈ ಸಾಧಿಸಲು ಮತ್ತು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಈ ಹೂಡಿಕೆಯನ್ನು ಹೆಚ್ಚಿಸಬೇಕಾದ ಅನಿವಾರ್ಯತೆಯಿದೆ.

ನಿಖರವಾಗಿ ರಕ್ಷಣಾ ಕ್ಷೇತ್ರಕ್ಕೆ ಎಷ್ಟು ಮೊತ್ತವನ್ನು ಒದಗಿಸಲಾಗುತ್ತದೆ ಎನ್ನುವುದು ಆಯವ್ಯಯ ಮಂಡನೆಯ ಸಮಯದಲ್ಲಿ ತಿಳಿಯುತ್ತಾದರೂ, 2025-26ರ ರಕ್ಷಣಾ ಬಜೆಟ್ ಅಂದಾಜು 6.5ರಿಂದ 7 ಲಕ್ಷ ಕೋಟಿ ರೂಪಾಯಿ ಮೌಲ್ಯ ಹೊಂದಿರುವ ನಿರೀಕ್ಷೆಗಳಿವೆ. ಇದು 2024-25ರ ನಿಯೋಜನೆಗಿಂತ ಒಂದಷ್ಟು ಹೆಚ್ಚಳವಾಗುವ ಸಾಧ್ಯತೆಗಳಿದ್ದು, ಇದು ಹೆಚ್ಚುತ್ತಿರುವ ಹಣದುಬ್ಬರ ಮತ್ತು ಹೆಚ್ಚುತ್ತಿರುವ ಸೇನಾಪಡೆಗಳ ಅವಶ್ಯಕತೆಗಳೊಡನೆ ಹೆಜ್ಜೆಹಾಕಲಿದೆ. ಈ ಅಂದಾಜು ಬಜೆಟ್‌ನ ನಿಯೋಜನೆ ಕೆಳಗಿನಂತಿದೆ:

* ಬಂಡವಾಳ ವೆಚ್ಚ: 2ರಿಂದ 2.2 ಲಕ್ಷ ಕೋಟಿ ರೂಪಾಯಿ (ಆಧುನೀಕರಣಕ್ಕೆ ಹೆಚ್ಚುವರಿ ನಿಯೋಜನೆ)
* ಆದಾಯ ವೆಚ್ಚ: 1.5ರಿಂದ 1.7 ಲಕ್ಷ ಕೋಟಿ ರೂಪಾಯಿ (ಕಾರ್ಯಾಚರಣಾ ಸಿದ್ಧತೆಯ ನಿರ್ವಹಣೆ)
* ರಕ್ಷಣಾ ನಿವೃತ್ತಿ ವೇತನ: 1.6ರಿಂದ 1.8 ಲಕ್ಷ ಕೋಟಿ ರೂಪಾಯಿ (ಯೋಧರ ನಿವೃತ್ತಿ ವೇತನಕ್ಕಾಗಿ)
* ರಕ್ಷಣಾ ಸಚಿವಾಲಯದಡಿಯ ನಾಗರಿಕ ಸಂಸ್ಥೆಗಳು: 0.4ರಿಂದ 0.5 ಲಕ್ಷ ಕೋಟಿ (ಆಡಳಿತಾತ್ಮಕ ಕಾರ್ಯಾಚರಣೆಗಳಿಗೆ ನೆರವು)
* ಸಂಶೋಧನೆ ಮತ್ತು ಅಭಿವೃದ್ಧಿ: 0.3 ರಿಂದ 0.4 ಲಕ್ಷ ಕೋಟಿ ರೂಪಾಯಿಗಳು (ಆರ್&ಡಿಗೆ ಹೆಚ್ಚಿನ ಹೂಡಿಕೆ)

ಸವಾಲುಗಳು ಮತ್ತು ಅವಕಾಶಗಳು: 2025-26ರ ರಕ್ಷಣಾ ಬಜೆಟ್ ಸವಾಲುಗಳು ಮತ್ತು ಅವಕಾಶಗಳೆರಡನ್ನೂ ಕಲ್ಪಿಸುತ್ತದೆ. ವಿತ್ತೀಯ ಶಿಸ್ತನ್ನು ಕಾಪಾಡಿಕೊಳ್ಳುತ್ತಾ, ಆಧುನೀಕರಣ, ದೇಶೀಯ ಉತ್ಪಾದನೆ, ಸಂಶೋಧನೆ ಮತ್ತು ಅಭಿವೃದ್ಧಿ, ಮತ್ತು ಮೂಲಭೂತ ಅಭಿವೃದ್ಧಿಗಳ ನಡುವೆ ಸಮತೋಲನ ಸಾಧಿಸುವುದು ಮುಖ್ಯವಾಗಿದೆ.

ರಕ್ಷಣಾ ವೆಚ್ಚದ ಇಳಿಮುಖ ಮತ್ತು ಸಂಶೋಧನೆ ಮತ್ತು ಅಭಿವೃದ್ಧಿಗೆ ಕನಿಷ್ಠ ಪ್ರಮಾಣದ ಹೂಡಿಕೆ ಲಭ್ಯವಿರುವುದು ಸವಾಲಾಗಿದ್ದು, ಭಾರತದ ಕಾರ್ಯತಂತ್ರದ ಸ್ವಾಯತ್ತತೆ ಮತ್ತು ಭವಿಷ್ಯದ ಸವಾಲುಗಳಿಗೆ ಸಿದ್ಧತೆ ಸಾಧಿಸಲು ಇದನ್ನು ಪರಿಹರಿಸುವುದು ಅವಶ್ಯಕವಾಗಿದೆ.

ರಕ್ಷಣಾ ಬಜೆಟ್ ಮೂಲಕ ರಕ್ಷಣಾ ಉತ್ಪಾದನೆಯಲ್ಲಿ ಸಾರ್ವಜನಿಕ ಮತ್ತು ಖಾಸಗಿ ವಲಯಗಳ ಸಂಸ್ಥೆಗಳು ಸಹಯೋಗ ಸಾಧಿಸಲು ಸಾಧ್ಯವಾಗುತ್ತದೆ. ದೇಶೀಯ ರಕ್ಷಣಾ ಸಾಮರ್ಥ್ಯವನ್ನು ವೃದ್ಧಿಸಲು ಮತ್ತು ವಿದೇಶೀ ಪೂರೈಕೆದಾರರ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸಲು ಹೆಚ್ಚಿನ ಸಹಭಾಗಿತ್ವ ಮತ್ತು ತಂತ್ರಜ್ಞಾನ ಹೊಂದುವುದು ಅನಿವಾರ್ಯವಾಗಿದೆ.

ಭವಿಷ್ಯದತ್ತ ನೋಟ: 2025-26ರ ಬಜೆಟ್ ಭಾರತದ ರಕ್ಷಣಾ ವಲಯಕ್ಕೆ ನಿರ್ಣಾಯಕವಾಗಿದೆ. ಇದು ಒಂದು ಆಧುನಿಕ, ಸ್ವಾವಲಂಬಿ ಮತ್ತು ತಾಂತ್ರಿಕವಾಗಿ ಸಮರ್ಥವಾದ, ಹೆಚ್ಚು ಹೆಚ್ಚು ಸಂಕೀರ್ಣ ಮತ್ತು ಊಹಿಸಲಸಾಧ್ಯವಾದ ಜಾಗತಿಕ ಸನ್ನಿವೇಶಗಳಲ್ಲಿ ದೇಶದ ರಕ್ಷಣೆ ನಡೆಸುವ ಸೇನೆಯನ್ನು ಹೊಂದುವ ಭಾರತದ ಬದ್ಧತೆಗೆ ಸಾಕ್ಷಿಯಾಗಿದೆ. ಸಂಪನ್ಮೂಲಗಳನ್ನು ಕಾರ್ಯತಂತ್ರದ ದೃಷ್ಟಿಯಿಂದ ವಿನಿಯೋಗಿಸಿ, ನಾವೀನ್ಯತೆಗಳನ್ನು ಸಾಧಿಸುವ ಮೂಲಕ, ಭಾರತ ತನ್ನ ಸುರಕ್ಷತೆಯನ್ನು ಖಾತ್ರಿಪಡಿಸಿ, 21ನೇ ಶತಮಾನದಲ್ಲಿ ಮುಂಚೂಣಿ ಶಕ್ತಿಯಾಗಿ ಹೊರಹೊಮ್ಮಲು ಸಾಧ್ಯವಾಗುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+