ಚಿನ್ನದ ಬೆಲೆಯಲ್ಲಿ ಮತ್ತಷ್ಟು ಕುಸಿತ: 3 ದಿನದಲ್ಲಿ 1800 ರೂ. ಇಳಿಕೆ
ನವದೆಹಲಿ, ನವೆಂಬರ್ 25: ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯ ಇಳಿಕೆ ಮುಂದುವರಿದಿದ್ದು, ಬುಧವಾರ ಹಳದಿ ಲೋಹ ಮತ್ತಷ್ಟು ದುರ್ಬಲಗೊಂಡಿದೆ. ಜಾಗತಿಕ ಮಾರುಕಟ್ಟೆಯಲ್ಲಿ ರಿಸ್ಕ್ ರ್ಯಾಲಿಯ ನಡುವೆ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಸತತ ಮೂರನೇ ದಿನವೂ ಇಳಿಮುಖಗೊಂಡಿದೆ.
Recommended Video
ಎಂಸಿಎಕ್ಸ್‌ನಲ್ಲಿ ಚಿನ್ನದ ಭವಿಷ್ಯವು 10 ಗ್ರಾಂಗೆ ಶೇ. 0.21ರಷ್ಟು ಕುಸಿದು 48,485 ರೂಪಾಯಿಗೆ ತಲುಪಿದ್ದರೆ, ಬೆಳ್ಳಿ ಭವಿಷ್ಯವು ಪ್ರತಿ ಕೆಜಿಗೆ 59,460 ರೂಪಾಯಿಗೆ ಇಳಿದಿದೆ. ಹಿಂದಿನ ಎರಡು ದಿನಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ತೀವ್ರ ಕುಸಿದಿದ್ದು, ಹಿಂದಿನ ವಹಿವಾಟಿನಲ್ಲಿ ಚಿನ್ನದ ಭವಿಷ್ಯ 900 ರೂಪಾಯಿ ಕುಸಿದಿದ್ದು, ಮಂಗಳವಾರದ 750 ರೂ. ಇಳಿಕೆಯನ್ನು ವಿಸ್ತರಿಸಿದೆ.
ಇನ್ನು ಮಂಗಳವಾರ ಬೆಳ್ಳಿ ಕೆಜಿಗೆ ಬರೋಬ್ಬರಿ 1,600 ಕುಸಿತದ ನಂತರ 800 ರೂಪಾಯಿ ಕುಸಿತ ಮುಂದುವರಿಸಿದೆ. ದುರ್ಬಲಗೊಂಡ ಡಾಲರ್‌ನಿಂದಾಗಿ ಹಳದಿ ಲೋಹ ಮತ್ತು ಬೆಳ್ಳಿ ನಾಲ್ಕು ತಿಂಗಳಿಗಿಂತಲೂ ಕಡಿಮೆ ಮಟ್ಟಕ್ಕೆ ತಲುಪಿದೆ.

ಇದರ ಜೊತೆಗೆ ಸ್ಪಾಟ್ ಚಿನ್ನವು ಔನ್ಸ್‌ಗೆ ಶೇ. 0.1ರಷ್ಟು ಏರಿಕೆಯಾಗಿ 1,809.41 ಡಾಲರ್‌ಗೆ ತಲುಪಿದೆ. ಇದು ಜುಲೈ 17 ರ ನಂತರದ ಕನಿಷ್ಠ ಮಟ್ಟವಾಗಿದೆ. ಇತರ ಅಮೂಲ್ಯ ಲೋಹಗಳ ಪೈಕಿ ಬೆಳ್ಳಿ ಔನ್ಸ್‌ಗೆ ಶೇ. 0.2ರಷ್ಟು ಏರಿಕೆಗೊಂಡು 23.29 ಡಾಲರ್‌ಗೆ ತಲುಪಿದ್ದರೆ, ಪ್ಲಾಟಿನಂ ಶೇ. 0.2ರಷ್ಟು ಕುಸಿದು 959.64 ಡಾಲರ್‌ಗೆ ತಲುಪಿದೆ.
ಅಮೆರಿಕಾ ಚುನಾಯಿತ ಅಧ್ಯಕ್ಷ ಜೋ ಬಿಡೆನ್ ಅವರ ಔಪಚಾರಿಕ ಅನುಮೋದಿತ ಪರಿವರ್ತನೆ ಸುಗಮಗೊಂಡಿದ್ದು, ಸಂಭವನೀಯ ಕೋವಿಡ್-19 ಲಸಿಕೆಯ ಸಕಾರಾತ್ಮಕ ಬೆಳವಣಿಗೆಯು ಜಾಗತಿಕ ಮಟ್ಟದಲ್ಲಿ ಷೇರುಪೇಟೆಯಲ್ಲಿ ಭಾರೀ ಏರಿಕೆಗೆ ಕಾರಣವಾಗಿದೆ. ಅದರಲ್ಲೂ ಏಷ್ಯಾದ ಮಾರುಕಟ್ಟೆಗಳು ಏರುಮುಖದತ್ತ ಸಾಗಿವೆ.












Click it and Unblock the Notifications