ಚಿನ್ನ & ಬೆಳ್ಳಿ ದರದಲ್ಲಿ ದಾಖಲೆ ಪ್ರಮಾಣದ ಏರಿಕೆ!
ಚಿನ್ನ & ಬೆಳ್ಳಿಗೆ ಯಾವಾಗಲೂ ಬೆಲೆ ಹೆಚ್ಚು, ಅದರಲ್ಲೂ ಇತ್ತೀಚಿನ ವರ್ಷಗಳಲ್ಲಿ ಚಿನ್ನ & ಬೆಳ್ಳಿ ಹೊಸ ದಾಖಲೆ ಬರೆಯುತ್ತಿವೆ. ಈ ಮೂಲಕ ಅತ್ಯಂತ ಗರಿಷ್ಠ ಮಟ್ಟಕ್ಕೆ ಮುಟ್ಟುತ್ತಿವೆ. ಈಗ ಮತ್ತೊಮ್ಮೆ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ದಾಖಲೆಯ ಮಟ್ಟದ ಏರಿಕೆ ಕಂಡಿದ್ದು, ಆ ಬಗ್ಗೆ ಮಾಹಿತಿಗೆ ಮುಂದೆ ಓದಿ.
ಚಿನ್ನ ಮತ್ತು ಬೆಳ್ಳಿ ಬೆಲೆ (Gold and Silver Rates) ಭರ್ಜರಿ ಏರಿಕೆ ಕಂಡಿದ್ದು, ಚಿನ್ನದ ಬೆಲೆ ಪ್ರತಿ ಗ್ರಾಂ ಬರೋಬ್ಬರಿ 75 ರೂಪಾಯಿ ಹೆಚ್ಚಾದರೆ ಬೆಳ್ಳಿ ಬೆಲೆಯೂ ಗ್ರಾಂಗೆ 2 ರೂಪಾಯಿ ಜಿಗಿತ ಕಂಡಿದೆ. ಈ ಮೂಲಕ ಎರಡೂ ಅತ್ಯುತ್ತಮ ಲೋಹಗಳ ಬೆಲೆಯು ಇದೀಗ ದಾಖಲೆ ನಿರ್ಮಾಣ ಮಾಡಿವೆ.

ಅಂತಾರಾಷ್ಟ್ರೀಯ ಮಾರುಕಟ್ಟೆ ಕೂಡ ಚಿನ್ನ ಹಾಗೂ ಬೆಳ್ಳಿಗೆ ಭಾರಿ ಬೆಲೆ ನೀಡುತ್ತಿದ್ದು, ಮಧ್ಯಪ್ರಾಚ್ಯದ ರಾಜಕೀಯ ಬಿಕ್ಕಟ್ಟು ಕೂಡ ಚಿನ್ನ ಹಾಗೂ ಬೆಳ್ಳಿಯ ಬೆಲೆ ಏರಿಕೆಗೆ ಒಂದು ಕಾರಣವಾಗುತ್ತಿದೆ. ಹಾಗಾದರೆ ಈಗ ಎಷ್ಟಿದೆ ಚಿನ್ನ & ಬೆಳ್ಳಿ ರೇಟ್?
ಎಷ್ಟಿದೆ ಚಿನ್ನ & ಬೆಳ್ಳಿ ಬೆಲೆ?
ಭಾರತದಲ್ಲಿ 22 ಕ್ಯಾರಟ್‌ನ ಚಿನ್ನ ಈಗ 10 ಗ್ರಾಮ್‌ಗೆ 64,100 ರೂಪಾಯಿ ಇದೆ. ಹಾಗೇ ಈಗ 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 69,870 ರುಪಾಯಿ ತಲುಪಿದೆ. 100 ಗ್ರಾಮ್ ಬೆಳ್ಳಿ ಬೆಲೆ 8,100 ರುಪಾಯಿ ಇದ್ದು. ಬೆಂಗಳೂರಲ್ಲಿ ಚಿನ್ನದ ಬೆಲೆ 10 ಗ್ರಾಮ್ 64,100 ರುಪಾಯಿ ಆಗಿದೆ. ಈ ಮೂಲಕ ದಿನದಿಂದ ದಿನಕ್ಕೆ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭಾರಿ ಏರಿಕೆ ಕಾಣುತ್ತಿದೆ. ಹಾಗಾದ್ರೆ ದಿಢೀರ್ ಹೀಗೆ ಚಿನ್ನ & ಬೆಳ್ಳಿ ಬೆಲೆ ಮುಗಿಲು ಮುಟ್ಟಲು ಕಾರಣ ಏನಿರಬಹುದು? ಬನ್ನಿ ತಿಳಿಯೋಣ.
ಅಮೂಲ್ಯ ವಸ್ತು ಚಿನ್ನ!
ಸಾವಿರಾರು ವರ್ಷಗಳಿಂದ ಕೂಡ ಚಿನ್ನ ಒಂದು ಅಮೂಲ್ಯ ವಸ್ತು. ವಾತಾವರಣದಲ್ಲಿ ಅತಿ ಬೇಗ ಬೇರೆ ವಸ್ತುಗಳ ಜೊತೆಗೆ ಬೆರೆಯದ ಕಾರಣಕ್ಕೆ ಚಿನ್ನಕ್ಕೆ ಭಾರಿ ಬೇಡಿಕೆ ಇದೆ. ಹಾಗೂ, ಈ ಕಾರಣಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯುದ್ಧ ಶುರುವಾದರೆ ಚಿನ್ನಕ್ಕೆ ಬೇಡಿಕೆಯೂ ಹೆಚ್ಚಾಗುತ್ತದೆ. ಈಗ ಅಂತಹದ್ದೇ ಪರಿಸ್ಥಿತಿ ನಿರ್ಮಾಣವಾಗಿದ್ದು, ಜಾಗತಿಕವಾಗಿ ಎರಡೆರಡು ಭೀಕರ ಯುದ್ಧಗಳು ನಡೆಯುತ್ತಿವೆ. ಒಂದು ಕಡೆ ರಷ್ಯಾ ಮತ್ತು ಉಕ್ರೇನ್ ಹಾಗೂ ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವೆ ಯುದ್ಧ ನಡೆಯುತ್ತಿದೆ. ಈ ಎಲ್ಲಾ ಕಾರಣಗಳು ಕೂಡ ಇದೀಗ ಚಿನ್ನ & ಬೆಳ್ಳಿ ಬೆಲೆ ಮೇಲೆ ನೇರ ಪ್ರಭಾವ ಬೀರುತ್ತಿವೆ ಎನ್ನುತ್ತಾರೆ ಆರ್ಥಿಕ ತಜ್ಞರು.
ಒಟ್ನಲ್ಲಿ ಚಿನ್ನಕ್ಕೆ ಯಾವತ್ತಿದ್ದರೂ ಬೆಲೆ ಅನ್ನೋ ಹಿರಿಯರ ಮಾತು ಈಗಲೂ ನಿಜವಾಗ್ತಿದೆ. ಅದರಲ್ಲೂ ಭಾರತೀಯರು ಚಿನ್ನದ ಮೇಲೆ ಹೂಡಿಕೆ ಮಾಡುವುದು ಹೆಚ್ಚು. ಇದು ನಮ್ಮ ದೇಶದ ಒಂದು ಸಂಪ್ರದಾಯ ಕೂಡ ಆಗಿದೆ. ಅಲ್ಲದೆ ಆಭರಣ ರೂಪದಲ್ಲಿ ಚಿನ್ನದ ಬಳಕೆ ಕೂಡ ಹೆಚ್ಚಾಗಿದೆ. ಈ ಎಲ್ಲಾ ಕಾರಣದಿಂದ ಚಿನ್ನ & ಬೆಳ್ಳಿ ಬೆಲೆ ದಿನದಿಂದ ದಿನಕ್ಕೆ ಹೊಸ ಎತ್ತರ ಮುಟ್ಟುತ್ತಿದೆ.
ಅಮೆರಿಕದಲ್ಲಿ ಅತಿಹೆಚ್ಚು ಚಿನ್ನ ಇದೆ!
ಜಗತ್ತಿನಲ್ಲಿ ಅತಿಹೆಚ್ಚು ಚಿನ್ನ ಇರುವುದು ಅಮೆರಿಕದ ಬಳಿ. ಹೀಗೆ ಆರ್ಥಿಕವಾಗಿ ಕೂಡ ಈ ದೇಶ ಮುಂದೆ ಇದ್ದು, ಹಾಗೆಯೇ ತನ್ನ ಬಳಿ ಜಗತ್ತಿನ ಅತಿಹೆಚ್ಚು ಚಿನ್ನವನ್ನು ಅಮೆರಿಕವು ಇಟ್ಟುಕೊಂಡಿದೆ. ಈ ಕಾರಣಕ್ಕೆ ಚಿನ್ನದ ಬೆಲೆ ಏರಿಕೆಯಲ್ಲಿ ಅಮೆರಿಕದ ಘಟನಾವಳಿ ಕೂಡ ಪ್ರಭಾವ ಬೀರುತ್ತವೆ. ಹಾಗೆ ಅರಬ್ ದೇಶಗಳಲ್ಲೂ ಚಿನ್ನದ ಬಳಕೆ ಮತ್ತು ಶೇಖರಣೆ ಹೆಚ್ಚು ಎನ್ನಬಹುದು. ಇನ್ನು ಆಭರಣ ಪ್ರಿಯ ಭಾರತೀಯರು ಚಿನ್ನವನ್ನು ಹೆಚ್ಚು ಇಷ್ಟಪಡುತ್ತಾರೆ ಅಂತಾ ಕೂಡ ಹೇಳಬಹುದು. ಹೀಗೆ ಇಡೀ ಜಗತ್ತಿನಲ್ಲಿ ಚಿನ್ನ ಒಂದಲ್ಲ ಒಂದು ರೀತಿಯಲ್ಲಿ ಬೇಕೆ ಬೇಕು!












Click it and Unblock the Notifications