ಟ್ವಿಟ್ಟರ್ ಮಂಡಳಿ ಸ್ಥಾನದಿಂದ ಕೆಳಗಿಳಿದ ಜ್ಯಾಕ್ ಡೋರ್ಸೀ
ವಾಷಿಂಗ್ಟನ್, ಮೇ 26: ಎರಡು ವರ್ಷಗಳ ಹಿಂದೆ ಟ್ವಿಟ್ಟರ್ ಸಿಇಒ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಸಹ-ಸಂಸ್ಥಾಪಕ ಜ್ಯಾಕ್ ಡೋರ್ಸೀ ಈಗ ಕಂಪನಿಯ ನಿರ್ದೇಶಕರ ಮಂಡಳಿಯಿಂದಲೂ ಕೆಳಗಿಳಿದಿದ್ದಾರೆ. ಟ್ವಿಟ್ಟರ್‌ನ ವಾರ್ಷಿಕ ಷೇರ್‌ಹೋಲ್ಡರ್ ಸಭೆ ನಡೆದ ನಿನ್ನೆ ಬುಧವಾರವೇ ಈ ಬೆಳವಣಿಗೆ ಆಗಿರುವುದು ತಿಳಿದುಬಂದಿದೆ.
ಕುತೂಹಲವೆಂದರೆ ಮಂಡಳಿಯಿಂದ ಕೆಳಗಿಳಿಯುವ ಮೂಲಕ ಜ್ಯಾಕ್ ಡೋರ್ಸೀ ತಾವೇ ಸ್ಥಾಪಿಸಿದ್ದ ಕಂಪನಿಯಿಂದ ಸಂಪೂರ್ಣ ಹೊರಬಿದ್ದಂತಾಗಿದೆ. 2019ರಲ್ಲಿ ಅವರು ಸಿಇಒ ಸ್ಥಾನದಿಂದ ಹಿಂದಕ್ಕೆ ಸರಿದಾಗಲೇ ಮಂಡಳಿ ನಿರ್ದೇಶಕ ಸ್ಥಾನದಿಂದಲೂ ಕೆಳಗಿಳಿಯುವ ಸಾಧ್ಯತೆ ಇತ್ತು. ಅವರ ನಿರ್ದೇಶಕ ಸ್ಥಾನದ ಅಧಿಕಾರಾವಧಿ 2022ರವರೆಗೂ ಇತ್ತು. ಷೇರುದಾರರ ಸಭೆಯವರೆಗೂ ಅವರ ಸ್ಥಾನ ಮುಂದುವರಿಸಲು ಕಂಪನಿಯೂ ನಿರ್ಧರಿಸಿತ್ತು. ಹೀಗಾಗಿ, ಜ್ಯಾಕ್ ಡೋರ್ಸೀ ಮೇ 25ರ ಷೇರುದಾರರ ಸಭೆಯ ದಿನದಂದು ಬೋರ್ಡ್ ಡೈರೆಕ್ಟರ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆನ್ನಲಾಗಿದೆ.
ಮತ್ತೆ ಟ್ವಿಟರ್ನಲ್ಲಿ ಟ್ರೆಂಡ್ ಆಗುತ್ತಿದೆ 'ಗೋ ಬ್ಯಾಕ್ ಮೋದಿ'
45 ವರ್ಷದ ಜ್ಯಾಕ್ ಡೋರ್ಸೀ ಟ್ವಿಟ್ಟರ್ ಸಂಸ್ಥೆಯ ಸಹ-ಸಂಸ್ಥಾಪಕರಾಗಿದ್ದಾರೆ. 2006ರಲ್ಲಿ ನೋವಾ ಗ್ಲಾಸ್, ಬಿಜ್ ಸ್ಟೋನ್, ಇವಾನ್ ವಿಲಿಯಮ್ಸ್ ಮತ್ತು ಜ್ಯಾಕ್ ಡೋರ್ಸೀ ಅವರುಗಳು ಟ್ವಿಟ್ಟರ್ ಸೋಷಿಯಲ್ ಮೀಡಿಯಾ ತಾಣ ಹುಟ್ಟುಹಾಕಿದ್ದರು. ಅಮೆರಿಕದ ಜ್ಯಾಕ್ ಡೋರ್ಸೀ ಆರಂಭದಲ್ಲಿ ಟ್ಟಿಟ್ಟರ್‌ನ ಸಿಇಒ ಆಗಿದ್ದರು. ಎರಡು ವರ್ಷಗಳ ನಂತರ ಸಿಇಒ ಆಗಿ ವಿಲಿಯಮ್ಸ್ ಆಯ್ಕೆಯಾದ ಬಳಿಕ ಜ್ಯಾಕ್ ಡೋರ್ಸೀ ಟ್ವಿಟ್ಟರ್ ಮಂಡಳಿಯ ಛೇರ್ಮನ್ ಆದರು. 2015ರಲ್ಲಿ ಮತ್ತೆ ಅವರೇ ಸಿಇಒ ಆದರು. 2019ರಲ್ಲಿ ಭಾರತೀಯ ಮೂಲದ ಪರಾಗ್ ಅಗರ್ವಾಲ್ ಅವರಿಗೆ ಸಿಇಒ ಸ್ಥಾನ ಬಿಟ್ಟುಕೊಟ್ಟರು.
ಇದೀಗ ಟ್ವಿಟ್ಟರ್ ಸಂಸ್ಥೆಯನ್ನು ಖರೀದಿಸಲು ಹೊರಟಿರುವ ಎಲಾನ್ ಮಸ್ಕ್ ಮತ್ತು ಜ್ಯಾಕ್ ಡೋರ್ಸೀ ಇಬ್ಬರೂ ಸ್ನೇಹಿತರೆನ್ನಲಾಗಿದೆ. ತಾನು ಟ್ವಿಟ್ಟರ್ ಸ್ಥಾಪನೆ ಮಾಡುವಾಗ ಇದ್ದ ಮೂಲ ಉದ್ದೇಶ ಈಗ ಉಳಿದಿಲ್ಲ. ಈ ತಪ್ಪನ್ನು ಸರಿಪಡಿಸಲು ಎಲಾನ್ ಮಸ್ಕ್ ಸರಿಯಾದ ವ್ಯಕ್ತಿ ಎಂದು ಜ್ಯಾಕ್ ಡೋರ್ಸೀ ಕಳೆದ ತಿಂಗಳು ಹೇಳಿದ್ದರು. ಈ ಅವಧಿಯಲ್ಲಿ ಅವರು ಟ್ವಿಟ್ಟರ್‌ನಿಂದ ಸಂಪೂರ್ಣವಾಗಿ ನಿರ್ಗಮಿಸುತ್ತಿರುವುದು ಗಮನ ಸೆಳೆದಿದೆ.

ಇದೇ ವೇಳೆ, ಎಲಾನ್ ಮಸ್ಕ್ ಟ್ವಿಟ್ಟರ್ ಖರೀದಿ ಪ್ರಕ್ರಿಯೆ ಇನ್ನೂ ಮುಗಿದಿಲ್ಲ. ಅವರಿನ್ನೂ ಹಣ ಹೊಂದಿಸುವ ಕಾರ್ಯದಲ್ಲಿದ್ದಾರೆ. ಮಸ್ಕ್ ಅವರು ಟ್ವಿಟ್ಟರ್ ಖರೀದಿಸುವ ನಿರ್ಧಾರದಿಂದಲೇ ಹಿಂದಕ್ಕೆ ಸರಿದರೂ ಅಚ್ಚರಿ ಇಲ್ಲ.
(ಒನ್ಇಂಡಿಯಾ ಸುದ್ದಿ)