ಪ್ರಾಮಾಣಿಕ ತೆರಿಗೆ ಪಾವತಿದಾರರಿಗೆ ಪ್ರಾಶಸ್ತ್ಯದ ಸೇವೆ, ಸರಕಾರದ ಹೊಸ ಚಿಂತನೆ
ನವದೆಹಲಿ, ಅಕ್ಟೋಬರ್ 15: ಸಾರ್ವಜನಿಕ ಸೇವೆಗಳು ಹಾಗೂ ತೆರಿಗೆಗೆ ಸಂಬಂಧಿಸಿದ ಕೆಲಸಗಳಲ್ಲಿ ಆದ್ಯತೆ ಮೇಲೆ ಪ್ರಾಮಾಣಿಕವಾಗಿ ಹಾಗೂ ನಿಯಮಿತವಾಗಿ ತೆರಿಗೆ ಪಾವತಿಸುವವರಿಗೆ ಸನ್ಮಾನ ಮಾಡುವ ಮಾಡುವ ಯೋಜನೆಗೆ ಸಂಬಂಧಿಸಿದಂತೆ ಸರಕಾರ ಅಂತಿಮ ರೂಪು ರೇಷೆ ಸಿದ್ಧಪಡಿಸುತ್ತಿದೆ ಎಂದು ಭಾನುವಾರ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಾಶಸ್ತ್ಯ ಅಂದರೆ ಏನು ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಅದೇ ಬಹಳ ಆಸಕ್ತಿಕರವಾದ ಅಂಶ. ಹೀಗೆ ಸರಕಾರಿ ಸಾರ್ವಜನಿಕ ಸೇವೆಯಲ್ಲಿ ಪ್ರಾಶಸ್ತ್ಯ ನೀಡುವುದರಿಂದ ತೆರಿಗೆ ಪಾವತಿಸುವವರ ಪ್ರಮಾಣ ಹೆಚ್ಚಾಗುತ್ತದೆ ಎಂಬ ಲೆಕ್ಕಾಚಾರವು ಇದೆ.
ನೇರ ತೆರಿಗೆ ಕೇಂದ್ರೀಯ ಮಂಡಳಿ ಅಡಿಯಲ್ಲಿ ಸಮಿತಿ, ಆದಾಯ ತೆರಿಗೆ ಇಲಾಖೆಯ ನೀತಿ ನಿರೂಪಣೆ ಮಂಡಳಿಯು ಇಂಥದ್ದೊಂದು ಯೋಜನೆ ರೂಪಿಸುತ್ತಿದೆ. ಸರಿಯಾದ ಸಮಯಕ್ಕೆ, ಪೂರ್ಣ ಪ್ರಮಾಣದಲ್ಲಿ ತೆರಿಗೆ ಪಾವತಿಸುವವರಿಗೆ ಗೌರವ ಸೂಚಿಸುವ ಯೋಜನೆ ಇದಾಗಲಿದೆ.
ಕೇಂದ್ರ ಸಚಿವ ಸಂಪುಟದಲ್ಲಿ ಒಪ್ಪಿಗೆ ಸಿಗುವ ಮುನ್ನ ಈ ಪ್ರಸ್ತಾವವನ್ನು ಆರ್ಥಿಕ ಸಚಿವಾಲಯ ಮುಂದಿಟ್ಟಿದ್ದು, ಅಂತಿಮ ಅಂಕಿತಕ್ಕಾಗಿ ಪ್ರಧಾನಮಂತ್ರಿಗಳ ಕಾರ್ಯಾಲಯಕ್ಕೆ ಕಳುಹಿಸಲಾಗಿದೆ. ಬೆಂಗಳೂರಿನಲ್ಲಿ ಸೆಂಟ್ರಲ್ ಪ್ರೊಸೆಸಿಂಗ್ ಸೆಂಟರ್ ಗಳನ್ನು ಹೆಚ್ಚಿಸುವ ಸಂಬಂಧ ಸಂಪುಟಕ್ಕೆ ಮನವಿ ಮಾಡಲಾಗಿದೆ.

ಗಂಟೆಗಳಲ್ಲಿ ಕೆಲಸ ಪೂರ್ಣಗೊಳ್ಳುತ್ತದೆ
ಹೀಗೆ ಸೆಂಟರ್ ಗಳನ್ನು ಹೆಚ್ಚಿಸುವುದರಿಂದ ಸಣ್ಣ ಪ್ರಮಾಣದ ತೆರಿಗೆ ಪಾವತಿಸುವವರು ಬಾಕಿಯನ್ನು ತಕ್ಷಣವೇ ನೀಡಬಹುದು. ಈಗ ದಿನಗಟ್ಟಲೆ ಈ ಪ್ರಕ್ರಿಯೆಗೆ ಸಮಯ ಆಗುತ್ತಿದೆ. ಆದರೆ, ಇನ್ನು ಮುಂದೆ ಇದಕ್ಕೆ ದಿನಗಟ್ಟಲೆ ಸಮಯ ಆಗುವುದಿಲ್ಲ. ಗಂಟೆಗಳಲ್ಲಿ ಪೂರ್ಣಗೊಳ್ಳುತ್ತದೆ ಎಂದು ಹೇಳಲಾಗುತ್ತಿದೆ.

ಪ್ರಾಮಾಣಿಕ ತೆರಿಗೆ ಪಾವತಿದಾರರಿಗೆ ಗೌರವ
ಈಗಿರುವ ಯೋಜನೆ ಇನ್ನೂ ಮುಂದುವರಿದು, ಪ್ರಾಮಾಣಿಕವಾಗಿ ತೆರಿಗೆ ಪಾವತಿಸುವವರಿಗೆ ಪ್ರಾಶಸ್ತ್ಯದ ಸೇವೆ ನೀಡಲು ಸಹ ಯೋಜನೆ ಹಾಕಿಕೊಳ್ಳಲಾಗಿದೆ. ಸಾರ್ವಜನಿಕ ಸೇವೆಗಳಾದ ವಿಮಾನ ನಿಲ್ದಾಣ, ರೈಲು ನಿಲ್ದಾಣ ಹಾಗೂ ಹೆದ್ದಾರಿಯ ಟೋಲ್ ಗಳಲ್ಲಿ ಪ್ರಾಶಸ್ತ್ಯ ನೀಡಲಾಗುತ್ತದೆ.

ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಸಲಹೆ
ಕಳೆದ ವರ್ಷ ಆದಾಯ ತೆರಿಗೆ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಭೆ ನಡೆಸುವ ವೇಳೆ, ಪ್ರಾಮಾಣಿಕವಾಗಿ ತೆರಿಗೆ ಪಾವತಿ ಮಾಡುವವರಿಗೆ ಪ್ರಾಮುಖ್ಯ ನೀಡಬೇಕು ಎಂದು ಹೇಳಿದ್ದರು. ಈ ಹಿಂದೆ ತೆರಿಗೆ ಇಲಾಖೆಯಿಂದ ಪ್ರಾಮಾಣಿಕ ತೆರಿಗೆದಾರರಿಗೆ ಮೆಚ್ಚುಗೆ ಸೂಚಿಸುವ ಮೇಲ್ ಕಳುಹಿಸಲಾಗುತ್ತಿತ್ತು. ಮತ್ತೆ ಆ ಯೋಜನೆ ಜಾರಿಗೆ ತರುವ ಚಿಂತನೆ ನಡೆದಿದೆ.

ದೇಶದಲ್ಲಿ ಎಂಟು ಕೋಟಿಗೂ ಹೆಚ್ಚು ತೆರಿಗೆ ಪಾವತಿದಾರರು
ಯಾವುದೇ ತೊಂದರೆ ಆಗದ ಎಲೆಕ್ಟ್ರಾನಿಕ್ ಅಸೆಸ್ ಮೆಂಟ್ ಸಹ ಜಾರಿಗೆ ತರಬೇಕು ಎಂಬುದು ಹೊಸ ಪ್ರಸ್ತಾವದಲ್ಲಿದೆ. ದೇಶದಲ್ಲಿ ಎಂಟು ಕೋಟಿಗೂ ಹೆಚ್ಚು ತೆರಿಗೆ ಪಾವತಿದಾರರು ಇದ್ದಾರೆ. ಈ ಆರ್ಥಿಕ ವರ್ಷದ ಕೊನೆಗೆ ಅದಕ್ಕೆ ಇನ್ನೂ ಒಂದೂ ಕಾಲು ಕೋಟಿ ಮಂದಿಯ ಸೇರ್ಪಡೆ ಆಗಬೇಕು ಎಂಬ ಗುರಿ ಹಾಕಿಕೊಳ್ಳಲಾಗಿದೆ. ಇನ್ನು ಹಲವು ಪ್ರಸ್ತಾವಗಳನ್ನು ಈ ವರ್ಷದ ಕೊನೆಗೆ ಆರಂಭಿಸುವ ಉದ್ದೇಶವಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications