ಬಜೆಟ್ 2021 ಬಗ್ಗೆ ತಿಳಿಯಲು ವಿಶೇಷ APP ಬಿಡುಗಡೆ ಮಾಡಿದ ಸಚಿವೆ ನಿರ್ಮಲಾ
ನವದೆಹಲಿ, ಜನವರಿ 24: 2021-22ನೇ ಸಾಲಿನ ಬಜೆಟ್ ಇದೇ ಮೊದಲ ಬಾರಿಗೆ ಕಾಗದರಹಿತವಾಗಿ ಮಂಡನೆಯಾಗುತ್ತಿದೆ. 2021ರ ಫೆಬ್ರವರಿ 1 ರಂದು ಆಯವ್ಯಯ ಪತ್ರವನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸುತ್ತಿದ್ದಾರೆ. ಇದಕ್ಕೆ ಪೂರಕವಾಗಿ ವಿಶೇಷ ಮೊಬೈಲ್ ಆಪ್ಲಿಕೇಷನ್ ಹೊರ ತರಲಾಗಿದೆ.
ಡಿಜಿಟಲ್ ಆಡಳಿತದ ಅನುಕೂಲತೆಗಳನ್ನು ಬಳಸಿಕೊಂಡು ಸಂಸತ್ ಸದಸ್ಯರಿಗೆ ಮತ್ತು ಸಾಮಾನ್ಯ ಜನರಿಗೆ ಬಜೆಟ್ ನ ದಾಖಲೆಗಳು ತಾಕಲಾಟವಿಲ್ಲದೇ ಸುಗಮವಾಗಿ ದೊರಕಿಸಿಕೊಡಲು ''ಕೇಂದ್ರ ಬಜೆಟ್ ನ ಮೊಬೈಲ್ ಆ್ಯಪ್ '' ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಿಡುಗಡೆ ಮಾಡಿದ್ದಾರೆ.
ಈ ಮೊಬೈಲ್ ಆ್ಯಪ್ ನಲ್ಲಿ ನಲ್ಲಿ 14 ಕೇಂದ್ರ ಬಜೆಟ್ ಗಳ ದಾಖಲೆಗಳು ಸಹ ಲಭ್ಯವಿದ್ದು, ಇದರಲ್ಲಿ ವಾರ್ಷಿಕ ಹಣಕಾಸು ದಾಖಲೆಗಳು [ಸಾಮಾನ್ಯವಾಗಿ ಕರೆಯಲ್ಪಡುವ ಆಯವ್ಯಯ], ಪೂರಕ ಬೇಡಿಕೆಗಳು, ಹಣಕಾಸು ಮಸೂದೆಗಳು,, ಸಂವಿಧಾನಬದ್ಧ ದಾಖಲೆಗಳು, ಮತ್ತಿತರ ಮಾಹಿತಿಗಳು ದೊರೆಯಲಿವೆ.

ಈ ಮೊಬೈಲ್ ಆ್ಯಪ್ ಬಳಕೆ ಸ್ನೇಹಿಯಾಗಿದ್ದು, ಮುದ್ರಣ, ಹುಡುಕಾಟ, ಜೂಮ್ ಇನ್ ಮತ್ತು ಜೂಮ್ ಔಟ್, ದ್ವಿಮುಖ ಸ್ಕ್ರೋಲಿಂಗ್, ವಿಷಯಗಳ ಪಟ್ಟಿ ಮತ್ತು ಬಾಹ್ಯ ಲಿಂಕ್ ಇತ್ಯಾದಿ ವೈಶಿಷ್ಟ್ಯಗಳೊಂದಿಗೆ ಕೂಡಿದೆ. ಈ ಆ್ಯಪ್ ದ್ವಿಭಾಷಿಯಾಗಿದೆ [ಇಂಗ್ಲಿಷ್ ಮತ್ತು ಹಿಂದಿ] ಮತ್ತು ಆಂಡ್ರಾಯ್ಡ್ ಮತ್ತು ಐಒಎಸ್ ಪ್ಲಾಟ್ ಫಾರ್ಮ್ ಗಳಲ್ಲಿ ಇದು ಲಭ್ಯವಿದೆ. ಈ ಆ್ಯಪ್ ಅನ್ನು ಕೇಂದ್ರ ಬಜೆಟ್ ನ ವೆಬ್ ಪೋರ್ಟಲ್ ನಿಂದ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.
ಆರ್ಥಿಕ ವ್ಯವಹಾರಗಳ ಇಲಾಖೆಯ [ಡಿ.ಇ.ಎ] ಮಾರ್ಗದರ್ಶನದಲ್ಲಿ ನ್ಯಾಷನಲ್ ಇನ್ಫಾರ್ಮೇಟಿಕ್ಸ್ ಸೆಂಟರ್ [ಎನ್.ಐ.ಸಿ] ಈ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಿದೆ.
2021 ರ ಫೆಬ್ರವರಿ 1 ರಂದು ಸಂಸತ್ತಿನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಬಜೆಟ್ ಭಾಷಣ ಪೂರ್ಣಗೊಳಿಸಿದ ನಂತರ ಮೊಬೈಲ್ ಆ್ಯಪ್ ನಲ್ಲಿ ಬಜೆಟ್ ದಾಖಲೆಗಳು ಲಭ್ಯವಾಗಲಿದೆ.












Click it and Unblock the Notifications