LIC IPO: ಎಲ್‌ಐಸಿ ಐಪಿಒ ತಡೆಗೆ ಬಾಂಬೆ ಹೈಕೋರ್ಟ್ ನಕಾರ
ನವದೆಹಲಿ, ಏಪ್ರಿಲ್ 19: ಕೇಂದ್ರ ಸರ್ಕಾರವು ಎಲ್‌ಐಸಿ ಐಪಿಒ ಅನ್ನು ನಡೆಸಲು ಎಲ್ಲಾ ಸಿದ್ಧತೆಯನ್ನು ಮಾಡಿಕೊಂಡಿದೆ. ಈಗಾಗಲೇ ಸೆಬಿಯು ಐಪಿಒಗೆ ಅನುಮೋದನೆಯನ್ನು ಕೂಡಾ ನೀಡಿದೆ. ಆದರೆ ಈ ಐಪಿಒಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ಬಾಂಬ್ ಹೈಕೋರ್ಟ್ ಗೆ ಅರ್ಜಿಯೊಂದು ಸಲ್ಲಿಕೆಯಾಗಿದ್ದು ಆ ಅರ್ಜಿಯನ್ನು ಬಾಂಬ್ ಹೈಕೋರ್ಟ್ ತಳ್ಳಿ ಹಾಕಿದೆ.
ಜೀವ ವಿಮಾ ನಿಗಮದ (ಎಲ್‌ಐಸಿ) ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಗಾಗಿ ಸಲ್ಲಿಕೆ ಮಾಡಿದ್ದ ಡ್ರಾಫ್ಟ್ ರೆಡ್ ಹೆರಿಂಗ್ ಪ್ರಾಸ್ಪೆಕ್ಟಸ್ (ಡಿಆರ್‌ಎಚ್‌ಪಿ) ಗೆ ತಡೆ ನೀಡಬೇಕು ಎಂದು ಅರ್ಜಿಯಲ್ಲಿ ಒತ್ತಾಯ ಮಾಡಲಾಗಿದೆ. ಆದರೆ ಬಾಂಬೆ ಹೈಕೋರ್ಟ್ ಇದಕ್ಕೆ ನಿರಾಕರಿಸಿದೆ.
ಸಾರ್ವಜನಿಕ ಕೊಡುಗೆ ಮತ್ತು ಷೇರುಗಳ ವಿತರಣೆ ಪ್ರಶ್ನಿಸಿ ಮೂವರು ಪಾಲಿಸಿದಾರರು ಬಾಂಬೆ ಹೈಕೋರ್ಟ್‌ಗೆ ಮನವಿ ಸಲ್ಲಿಕೆ ಮಾಡಿದ್ದರು. ಬಾಂಬೆ ಹೈಕೋರ್ಟ್‌ಗೆ ಸಲ್ಲಿಕೆಯಾಗಿದ್ದ ಈ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಗೌತಮ್ ಪಟೇಲ್ ಹಾಗೂ ಮಾಧವ್ ಜಾಮ್ದಾರ್ ಅವರಿದ್ದ ಪೀಠ ತಿರಸ್ಕರಿಸಿದೆ.

ಸರ್ಕಾರವು ಐಪಿಒ ಹೆಸರಿನಲ್ಲಿ ಖಾಸಗೀಕರಣದತ್ತ ಮುಖ ಮಾಡುತ್ತಿದೆ. ತನ್ನ ಪಾಲನ್ನು ಶೇಕಡ 5ರಷ್ಟು ವಾಪಾಸ್ ಪಡೆಯುವ ಯೋಜನೆ ರೂಪಿಸಿದೆ ಎಂದು ಕೂಡಾ ಈ ಅರ್ಜಿಯಲ್ಲಿ ಆರೋಪ ಮಾಡಲಾಗಿದೆ.
ಎಲ್‌ಐಸಿ ಐಪಿಒ ಆರಂಭ ವಿರೋಧಿಸಿ ಪ್ರತಿಭಟನೆ
ಎಲ್‌ಐಸಿಯಲ್ಲಿ ಖಾಸಗಿ ಹೂಡಿಕೆ ವಿರೋಧಿಸಿ ಕೊಯಮತ್ತೂರಿನಲ್ಲಿ ಎಲ್ಐಸಿ ನೌಕರರು ಫೆಬ್ರವರಿಯಲ್ಲಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಕೇಂದ್ರ ಬಜೆಟ್ 2021-22 ಮಂಡನೆ ವೇಳೆ ಎಲ್‌ಐಸಿ ಐಪಿಒ ಪರಿಚಯಿಸಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದರು. ಈ ಕುರಿತು ಶಾಸಕಾಂಗ ತಿದ್ದುಪಡಿಗಳನ್ನು ಬಜೆಟ್ ಅಧಿವೇಶನದಲ್ಲಿ ಸಂಸತ್ತಿನಲ್ಲಿ ಪ್ರಾರಂಭಿಸಲಾಗುವುದು ಎಂದು ಹಣಕಾಸು ಸಚಿವರು ಹೇಳಿದರು.
ಆದರೆ ಇದಕ್ಕೆ ವಿರೋಧಿಸಿರುವ ಎಲ್‌ಐಸಿ ನಿಗಮದ ನೌಕರರು "ಅಖಿಲ ಭಾರತ ವಿಮಾ ನೌಕರರ ಪರವಾಗಿ ನಾವು ಕೇಂದ್ರ ಸರ್ಕಾರದ ಕ್ರಮವನ್ನು ವಿರೋಧಿಸುತ್ತೇವೆ. ಎಲ್ಐಸಿಯನ್ನು ಸ್ವಾಯತ್ತಗೊಳಿಸಬೇಕು ಎಂದು ನಾವು ಕೇಳುತ್ತೆವೆ, ಇದು ಸರ್ಕಾರದ ಬೊಕ್ಕಸಕ್ಕೆ ಹೆಚ್ಚಿನ ಕೊಡುಗೆ ನೀಡುತ್ತದೆ" ಎಂದು ಪ್ರತಿಭಟನಾಕಾರರೊಬ್ಬರು ಹೇಳಿದ್ದಾರೆ.
ವಿಮಾ ಕ್ಷೇತ್ರದ ಬಜೆಟ್‌ನಲ್ಲಿ ಹಲವಾರು ಪ್ರಸ್ತಾಪಗಳು ದೇಶದ ಹಿತಾಸಕ್ತಿಗೆ ವಿರುದ್ಧವಾಗಿವೆ ಮತ್ತು ಇದು ವಿಮಾ ಕ್ಷೇತ್ರದ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ. ವಿಮಾ ಕಂಪನಿಗಳಲ್ಲಿ ವಿದೇಶಿ ನೇರ ಹೂಡಿಕೆಗಳನ್ನು ಶೇಕಡಾ 49 ರಿಂದ 74ಕ್ಕೆ ಹೆಚ್ಚಿಸಲಾಗಿದೆ. ಹಲವಾರು ಸಂಸ್ಥೆಗಳು ಈ ಹಿಂದಿನ ನಿಬಂಧನೆಯನ್ನು ಸಹ ಸಂಪೂರ್ಣವಾಗಿ ಬಳಸಿಕೊಂಡಿಲ್ಲ ಮತ್ತು ಇದು ದೇಶದ ಆರ್ಥಿಕ ಅಭಿವೃದ್ಧಿಯ ಮೇಲೆ ಪರಿಣಾಮ ಬೀರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications