ಬೆಂಗಳೂರಿನ ಓಲಾ ಕ್ಯಾಬ್ ಸೇವೆಗೆ 2 ಸಾವಿರ ಕೋಟಿ ರು ನಷ್ಟ!
ಸಾಲದ ಹೊರೆ ಇದ್ದರೂ ಭರ್ಜರಿ ಹೂಡಿಕೆ ಪಡೆದುಕೊಂಡಿದ್ದ ಬೆಂಗಳೂರು ಮೂಲದ ಓಲಾ ಕ್ಯಾಬ್ ಸಂಸ್ಥೆ ಕಳೆದ ಆರ್ಥಿಕ ವರ್ಷದಲ್ಲಿ ಬರೋಬ್ಬರಿ 2 ಸಾವಿರ ಕೋಟಿ ರುಗೂ ಅಧಿಕ ನಷ್ಟ ಅನುಭವಿಸಿದೆ.
ಬೆಂಗಳೂರು, ಮೇ 02: ಆಪ್ ಆಧಾರಿತ ನಗರ ಟ್ಯಾಕ್ಸಿ ಸೇವೆಯನ್ನು ನೀಡುತ್ತಿರುವ ಬೆಂಗಳೂರು ಮೂಲದ ಓಲಾ ಕಂಪನಿ ಕಳೆದ ಹಣಕಾಸು ವರ್ಷದಲ್ಲಿ ಸುಮಾರು 2,313.6 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ ಎಂದು ಕಂಪನಿ ತನ್ನ ವಾರ್ಷಿಕ ಲೆಕ್ಕಪತ್ರದಲ್ಲಿ ಹೇಳಿಕೊಂಡಿದೆ.
ಭಾರತದಲ್ಲಿ ಓಲಾ ತನಗೆ ಪೈಪೋಟಿ ನೀಡುತ್ತಿರುವ ಸ್ಯಾನ್ಸ್ ಫ್ರಾನ್ಸಿಸ್ಕೋ ಮೂಲದ ಟಾಕ್ಸಿ ಸೇವಾ ಕಂಪನಿ ಉಬರ್ ಜತೆ ಸೆಣಸಾಟ ನಡೆಸುತ್ತಿದೆ. ಹೀಗಾಗಿ, ಸಾರ್ವಜನಿಕರ ಪ್ರಯಾಣದಲ್ಲಿ ಭಾರಿ ರಿಯಾಯಿತಿ ನೀಡುತ್ತಿರುವುದು ಕಂಪನಿಯ ನಷ್ಟಕ್ಕೆ ಕಾರಣ ಎಂದು ಲೆಕ್ಕಪತ್ರದಲ್ಲಿ ಹೇಳಲಾಗಿದೆ.[ಬೆಂಗಳೂರಲ್ಲಿ ಓಲಾ, ಉಬರ್ ಚಾಲಕರಿಗೆ ಬ್ಯಾಂಕ್ ಸಾಲ ಸ್ಥಗಿತ]

ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಿರುವ ಓಲಾ ಲೆಕ್ಕಪತ್ರಗಳ ಅನುಸಾರ, ಕಂಪನಿ ಮೂರು ಪಟ್ಟು ನಷ್ಟವನ್ನು ಅನುಭವಿಸಿದೆ. ಅದೇ ವೇಳೆ, ಕಂಪನಿಯ ಆದಾಯ ಗಳಿಕೆಯ ಸಾಧ್ಯತೆಯನ್ನೂ ತೋರಿಸಿದೆ. ಕಳೆದ ವರ್ಷ 103. 7 ಕೋಟಿ ಆದಾಯ ಗಳಿಕೆಯನ್ನು ತೋರಿಸಿದ್ದ ಕಂಪನಿ, ಈ ಬಾರಿ 7 ಪಟ್ಟು ಹೆಚ್ಚಿನ ಆದಾಯವನ್ನು ತೋರಿಸಿದೆ. ಸದ್ಯ ಓಲಾ ವಾರ್ಷಿಕ ಆದಾಯ 758. 2 ಕೋಟಿ ಎಂದು ಲೆಕ್ಕಪತ್ರಗಳು ಹೇಳುತ್ತಿವೆ.
ಇತ್ತೀಚೆಗೆ ಸಾಫ್ಟ್ ಬ್ಯಾಂಕ್ 1,675 ಕೋಟಿ ರು ಹೂಡಿಕೆ ಮಾಡಿದ್ದು, ಈಗ ಓಲಾದಲ್ಲಿ ಸಾಫ್ಟ್ ಬ್ಯಾಂಕ್ ಶೇ 22.5ರಷ್ಟು ಷೇರು ಹೊಂದಿದ್ದು, ಟೈಗರ್ ಗ್ಲೋಬಲ್ ಸಂಸ್ಥೆ ಶೇ 20.5ರಷ್ಟು ಪಾಲು ಹೊಂದಿದೆ. ಸರಿ ಸುಮಾರು 3 ಬಿಲಿಯನ್ ಡಾಲರ್ ಮೌಲ್ಯದ ಕಂಪನಿ ಭಾರಿ ನಷ್ಟ ಅನುಭವಿಸಲು ರಿಯಾಯಿತಿ ದರ, ಅನಿಯಮಿತ ದರ ಪಟ್ಟಿ,ಮ್ಯಾಪಿಂಗ್ ದೋಷ, ಪ್ರಯಾಣಿಕರಿಂದ ಹೆಚ್ಚಿದ ದೂರುಗಳು ಕಾರಣ ಎನ್ನಲಾಗಿದೆ.












Click it and Unblock the Notifications