Bank Strike: ಬ್ಯಾಂಕ್ ಗ್ರಾಹಕರಿಗೆ ದೊಡ್ಡ ರಿಲೀಫ್: ಇಂದಿನಿಂದ ಆರಂಭವಾಗಬೇಕಿದ್ದ ಬ್ಯಾಂಕ್ ನೌಕರರ ಮುಷ್ಕರ ಮುಂದೂಡಿಕೆ
Bank Strike: ದೇಶಾದ್ಯಂತ ಸೆಪ್ಟೆಂಬರ್ 28ರಿಂದ 30ರ ವರೆಗೆ ಮೂರು ದಿನಗಳ ಕಾಲ ನಡೆಸಲು ಉದ್ದೇಶಿಸಲಾಗಿದ್ದ ಬ್ಯಾಂಕ್ ನೌಕರರ ಸುದೀರ್ಘ ಮುಷ್ಕರವನ್ನು ಸದ್ಯಕ್ಕೆ ಮುಂದೂಡಲಾಗಿದೆ. ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ (IBA) ಹಾಗೂ ಬ್ಯಾಂಕ್ ನೌಕರರ ಒಕ್ಕೂಟವಾದ ಯುನೈಟೆಡ್ ಫಾರಂ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ನಡುವೆ ಭಾನುವಾರ ತಡರಾತ್ರಿ ನಡೆದ ಉನ್ನತ ಮಟ್ಟದ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಈ ನಿರ್ಧಾರದಿಂದಾಗಿ ವಾರದ ಆರಂಭದಲ್ಲೇ ಬ್ಯಾಂಕಿಂಗ್ ಸೇವೆಗಳಲ್ಲಿ ವ್ಯತ್ಯಯ ಆಗಬಹುದು ಎಂದು ಆತಂಕಗೊಂಡಿದ್ದ ಸಾರ್ವಜನಿಕರು, ಗ್ರಾಹಕರು, ಉದ್ಯಮಿಗಳಿಗೆ ನೆಮ್ಮದಿ ಸಿಕ್ಕಂತಾಗಿದೆ. ಹಾಗಾದ್ರೆ ಸಭೆಯಲ್ಲಿ ಯಾವೆಲ್ಲಾ ವಿಷಯಗಳು ಚರ್ಚೆಯಾದವು ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

ಸಭೆಯಲ್ಲಿ ಚರ್ಚೆಯಾದ ಪ್ರಮುಖ ವಿಷಯಗಳು
* ಬ್ಯಾಂಕ್ ನೌಕರರ ಸಂಘಟನೆಗಳು ತಮ್ಮ ಹಲವು ಸುದೀರ್ಘ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಈ ಪ್ರತಿಭಟನೆಗೆ ಕರೆ ನೀಡಿದ್ದವು. ಆದರೆ ಭಾನುವಾರ ನಡೆದ ಸಭೆಯಲ್ಲಿ ನೌಕರರ ಪ್ರಮುಖ ಬೇಡಿಕೆಗಳ ಕುರಿತು ಆಡಳಿತ ಮಂಡಳಿಯು ಧನಾತ್ಮಕವಾಗಿ ಸ್ಪಂದಿಸಿದೆ ಎಂದು ತಿಳಿದುಬಂದಿದೆ.
* ವಾರದ ಪ್ರತಿ ಶನಿವಾರದಂದು ಅಧಿಕೃತ ರಜಾದಿನವನ್ನಾಗಿ ಘೋಷಿಸಬೇಕು ಎಂಬ ನೌಕರರ ಪ್ರಮುಖ ಬೇಡಿಕೆಯ ಕುರಿತು ಸಭೆಯಲ್ಲಿ ತೀವ್ರ ಚರ್ಚೆಗಳು ನಡೆದಿದ್ದು, ಈ ಬಗ್ಗೆ ಸಕಾರಾತ್ಮಕ ಭರವಸೆ ಸಿಕ್ಕಿದೆ.
* ನೌಕರರ ಇತರೆ ಹಕ್ಕುಗಳು ಹಾಗೂ ಬೇಡಿಕೆಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ಸೂಕ್ತ ಪರಿಹಾರ ಸೂಚಿಸಲು ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ ಮತ್ತು ಯುನೈಟೆಡ್ ಫಾರಂ ಆಫ್ ಬ್ಯಾಂಕ್ ಯೂನಿಯನ್ಸ್ ಪ್ರತಿನಿಧಿಗಳನ್ನೊಳಗೊಂಡ ವಿಶೇಷ ಸಮಿತಿಯೊಂದನ್ನು ರಚಿಸಲು ತೀರ್ಮಾನಿಸಲಾಗಿದೆ.
ಎಂದಿನಂತೆ ಬ್ಯಾಂಕ್ ಸೇವೆಗಳು ಲಭ್ಯ
ಸಂಧಾನ ಸಭೆಯಲ್ಲಿ ಆಡಳಿತ ಮಂಡಳಿಯು ಬೇಡಿಕೆಗಳನ್ನು ಪರಿಶೀಲಿಸಲು ಒಪ್ಪಿಕೊಂಡಿರುವುದರಿಂದ ಮತ್ತು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಮಿತಿ ರಚಿಸಿರುವುದರಿಂದ, ಬ್ಯಾಂಕ್ ಒಕ್ಕೂಟಗಳು ತಮ್ಮ ಹೋರಾಟವನ್ನು ತಾತ್ಕಾಲಿಕವಾಗಿ ಹಿಂಪಡೆದಿವೆ. ಆದ್ದರಿಂದ ಇಂದಿನಿಂದ (ಸೋಮವಾರ) ದೇಶಾದ್ಯಂತ ಎಲ್ಲಾ ಸಾರ್ವಜನಿಕ ಹಾಗೂ ಖಾಸಗಿ ವಲಯದ ಬ್ಯಾಂಕ್‌ಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಗ್ರಾಹಕರು ಯಾವುದೇ ಅಡೆತಡೆಯಿಲ್ಲದೆ ತಮ್ಮ ಹಣಕಾಸು ವ್ಯವಹಾರಗಳನ್ನು ನಡೆಸಬಹುದಾಗಿದೆ.


Click it and Unblock the Notifications
