ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮಸ್ಯೆ ಬಗೆಹರಿಸಿ: ನಮಗೂ ಬೆಂಗಳೂರು ಬಿಡುವ ಮನಸ್ಸಿಲ್ಲ ಎಂದ ಐಟಿ ಕಂಪನಿ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 07: ಬೆಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆಯಿಂದ ಮಹದೇವಪುರ ವಲಯದಲ್ಲಿ ಸೃಷ್ಟಿಯಾಗಿರುವ ಸಮಸ್ಯೆಗಳಿಗೆ ಮುಂದಿನ ಮಳೆಗಾಲದ ಹೊತ್ತಿಗೆ ಶಾಶ್ವತ ಪರಿಹಾರ ರೂಪಿಸಲಾಗುತ್ತದೆ ಎಂದು ಐಟಿ-ಬಿಟಿ ಸಚಿವ ಡಾ.ಸಿ ಎನ್ ಅಶ್ವಥ್ ನಾರಾಯಣ್ ಭರವಸೆ ನೀಡಿದ್ದಾರೆ.

ಮಹದೇವಪುರ ವಲಯದಲ್ಲಿ ಮಳೆಯಿಂದ ಕಂಗೆಟ್ಟಿರುವ ಐಟಿ ಕಂಪನಿಗಳ ಪ್ರಮುಖರ ಜೊತೆಗೆ ವಿಧಾನಸೌಧದಲ್ಲಿ ಸಚಿವ ಅಶ್ವಥ್ ನಾರಾಯಣ್ ಸಭೆ ನಡೆಸಿದರು. ಈ ವೇಳೆ ನಾಸ್ಕಾಂ ಪ್ರತಿನಿಧಿಗಳು ಹಾಜರಾಗಿದ್ದರು.

ಹೀಗೊಂದು ಸಮೀಕ್ಷೆ: Work From Home ಬಳಸಿ, ಬೆಂಗಳೂರು ಉಳಿಸಿ!ಹೀಗೊಂದು ಸಮೀಕ್ಷೆ: Work From Home ಬಳಸಿ, ಬೆಂಗಳೂರು ಉಳಿಸಿ!

ಉದ್ಯಮಿಗಳ ಅಹವಾಲುಗಳನ್ನು ಆಲಿಸಿದ ಸಚಿವರು, 'ಬೆಂಗಳೂರು ಬ್ರ್ಯಾಂಡ್ ಅನ್ನು ಎಲ್ಲರೂ ಸೇರಿ ಉಳಿಸೋಣ. ಇದಕ್ಕೆ ಅಪಕೀರ್ತಿ ತರುವುದು ಬೇಡ. ಉದ್ಯಮಿಗಳ ಸಮಸ್ಯೆಗಳನ್ನು ಆಲಿಸುವ ಉದ್ದೇಶದಿಂದ ಇನ್ನು ಮುಂದೆ ಪ್ರತಿ ತಿಂಗಳೂ ವರ್ಚುಯಲ್ ಸಭೆ ನಡೆಸಲಾಗುವುದು' ಎಂದು ಹೇಳಿದರು.

ಐಟಿ ಕಂಪನಿಗಳಿಗೆ ಬೆಂಗಳೂರು ಬಿಡುವ ಮನಸ್ಸಿಲ್ಲ

ಐಟಿ ಕಂಪನಿಗಳಿಗೆ ಬೆಂಗಳೂರು ಬಿಡುವ ಮನಸ್ಸಿಲ್ಲ

"ನಮಗ್ಯಾರಿಗೂ ಬೆಂಗಳೂರನ್ನು ಬಿಟ್ಟು ಹೋಗುವ ಮನಸ್ಸಿಲ್ಲ. ಮಳೆಯಿಂದ ಉಂಟಾಗಿರುವ ಸಮಸ್ಯೆ ಮತ್ತು ನಷ್ಟವನ್ನು ಸರ್ಕಾರದ ಗಮನಕ್ಕೆ ತರುವುದಷ್ಟೇ ನಮ್ಮ ಬಯಕೆಯಾಗಿದೆ. ಸರ್ಕಾರದ ಸ್ಪಂದನೆಯಿಂದ ನಮಗೂ ಸಮಾಧಾನವಾಗಿದೆ," ಎಂದು ಐಟಿ ಕಂಪನಿಯ ಪ್ರಮುಖರು ತಿಳಿಸಿದ್ದಾರೆ.

ಬುಧವಾರ ನಡೆದ ಸಭೆಯಲ್ಲಿ ಐಟಿ ಕಂಪನಿಗಳ ವಲಯದಿಂದ ಗೋಲ್ಡ್‌ಮ್ಯಾನ್‌ ಸ್ಯಾಕ್ಸ್‌ನ ರವಿಕೃಷ್ಣನ್, ಇನ್ಫೋಸಿಸ್‌ನ ಸುನೀಲ್‌ಕುಮಾರ್ ಮತ್ತು ಬಿ.ಸಿ.ಶೇಷಾದ್ರಿ‌, ವೆಲ್ಸ್‌ಫಾರ್ಗೋ ಕಂಪನಿಯ ಅರಿಂದಮ್‌ ಬ್ಯಾನರ್ಜಿ, ವಿಪ್ರೋದ ಪರಮಿಂದರ್ ಕಾಕ್ರಿಯಾ, ಎಂಫಸಿಸ್‌ನ ದೀಪಾ ನಾಗರಾಜ್‌, ಇಂಟೆಲ್‌ನ ಮಾನಸ್‌ ದಾಸ್‌, ವಿಎಂ ವೇರ್‌ನ ರಾಮಕುಮಾರ್ ನಾರಾಯಣನ್ ಮತ್ತು ಜಯನ್‌ ದೇಸಾಯಿ, ಟಿಸಿಎಸ್‌ನ ಬೆಂಗಳೂರು ಮುಖ್ಯಸ್ಥ ಸುನೀಲ್ ದೇಶಪಾಂಡೆ, ಆಕ್ಸೆಂಚರ್‌ನ ಅಜಯ್ ವಿಜ್‌, ಸೊನಾಟಾ ಸಾಫ್ಟ್‌ವೇರ್‌ನ ಬಾಲಾಜಿ ಕುಮಾರ್, ಫಿಲಿಪ್ಸ್‌ನ ಅರವಿಂದ್ ವೈಷ್ಣವ್, ಸೊಲೇಸ್‌ನ ಮಹಾದೇವನ್, ನಾಸ್ಕಾಂನ ಕೆ.ಎಸ್. ವಿಶ್ವನಾಥನ್ ಮತ್ತು ಭಾಸ್ಕರ್ ವರ್ಮಾ ಹಾಜರಾಗಿದ್ದರು.

ಐಟಿ ಕಂಪನಿ ಸಹಭಾಗಿತ್ವದಲ್ಲಿ ಅಭಿವೃದ್ಧಿಗೆ ಯೋಜನೆ

ಐಟಿ ಕಂಪನಿ ಸಹಭಾಗಿತ್ವದಲ್ಲಿ ಅಭಿವೃದ್ಧಿಗೆ ಯೋಜನೆ

ಮಹದೇವಪುರದ ಬಿಬಿಎಂಪಿ ವಲಯ ಆಯುಕ್ತರಿಗೆ ಸಂಪೂರ್ಣ ಅಧಿಕಾರವನ್ನು ನೀಡಲಾಗಿದೆ. ಈ ವಲಯದ ಅಭಿವೃದ್ಧಿ ಯೋಜನೆಗಳಲ್ಲಿ ಐಟಿ ಕಂಪನಿಗಳ ಸಹಭಾಗಿತ್ವ ಪಡೆಯಲಾಗುವುದು. ಇದರೊಂದಿಗೆ ಎಲ್ಲಾ ಯೋಜನೆಗಳನ್ನೂ ಕಾಲಮಿತಿಯಲ್ಲಿ ಮುಗಿಸಲಾಗುವುದು. ಇವುಗಳ ಅನುಷ್ಠಾನದಲ್ಲಿ ಗರಿಷ್ಠ ಮಟ್ಟದ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುವುದು. ಇದರ ಜೊತೆಗೆ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ 'ಎಲ್ಸಿಟಾ' ಮಾದರಿಯ ವ್ಯವಸ್ಥೆಯನ್ನು ಆರಂಭಿಸುವುದನ್ನು ಗಂಭೀರವಾಗಿ ಪರಿಶೀಲಿಸಲಾಗುವುದು ಎಂದು ಸಚಿವರು ತಿಳಿಸಿದರು.

ಉದ್ಯಮಿಗಳು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ

ಉದ್ಯಮಿಗಳು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ

ಮಹದೇವಪುರದಲ್ಲೂ ಮಳೆ ನೀರು ಸರಾಗವಾಗಿ ಹರಿದು ಹೋಗಲು ಇರುವ ಕೆ-100 ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು. ಈ ಭಾಗಕ್ಕೆ ಕಾವೇರಿ ಕುಡಿಯುವ ನೀರು ಪೂರೈಕೆಯ 5ನೇ ಹಂತದ ಮೂಲಕ ನೀರು ಸರಬರಾಜು ಮಾಡಲಾಗುವುದು. ರಾಜ್ಯದ 2ನೇ ಸ್ತರದ ನಗರಗಳತ್ತಲೂ ಗಮನ ಹರಿಸಲಾಗುವುದು. ಆದ್ದರಿಂದ ಯಾವುದೇ ಉದ್ಯಮಿಗಳು ಆತಂಕಕ್ಕೆ ಒಳಗಾಗುವುದು ಬೇಡ. ಸರ್ಕಾರವು ಐಟಿ-ಬಿಟಿ ಕಂಪನಿಗಳ ಅಹವಾಲುಗಳನ್ನು ಕೇಳಿ, ಅವುಗಳನ್ನು ಪರಿಹರಿಸಲೆಂದೇ ವಿಷನ್ ಗ್ರೂಪ್‌ಗಳನ್ನು ರಚಿಸಿದೆ. ಇದಕ್ಕೆ ಐಟಿ ಕಂಪನಿಗಳನ್ನು ನಡೆಸಿರುವವರನ್ನೇ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಸರ್ಕಾರದ ಸ್ಪಂದನಶೀಲತೆಗೆ ಇದಕ್ಕಿಂತ ನಿದರ್ಶನ ಬೇಕಾಗಿಲ್ಲ ಎಂದು ಅಶ್ವಥ್ ನಾರಾಯಣ್ ವಿವರಿಸಿದರು.

ಬೆಂಗಳೂರು ಬ್ರಾಂಡ್ ಎಲ್ಲಿಗೂ ಹೋಗಲ್ಲ

ಬೆಂಗಳೂರು ಬ್ರಾಂಡ್ ಎಲ್ಲಿಗೂ ಹೋಗಲ್ಲ

"ಬೆಂಗಳೂರು ಬ್ರಾಂಡ್ ಎಲ್ಲಿಗೂ ಹೋಗುವುದಿಲ್ಲ. ಇಂತಹ ಮಹಾಮಳೆ ಬಂದರೆ ಎಂತಹ ನಗರವಾದರೂ ಸ್ತಬ್ಧವಾಗುತ್ತದೆ. ಶೇ.80ಕ್ಕಿಂತ ಹೆಚ್ಚಿನ ಭಾಗಕ್ಕೆ ಇಲ್ಲಿ ಏನೂ ಆಗಿಲ್ಲ. ಮಹದೇವಪುರದ ಭಾಗದಲ್ಲಿ ಆಗಿರುವ ಹಾನಿ ಅನಿರೀಕ್ಷಿತವಾಗಿದ್ದು, ಇದರಿಂದ ಐಟಿ ಕಂಪನಿಗಳು ಧೃತಿಗೆಡಬಾರದು. ಸರ್ಕಾರ ಸದಾ ನಿಮ್ಮೊಂದಿಗಿರುತ್ತದೆ," ಎಂದು ಐಟಿ ವಿಷನ್ ಗ್ರೂಪ್ ಮುಖ್ಯಸ್ಥ ಕ್ರಿಸ್‌ ಗೋಪಾಲಕೃಷ್ಣನ್ ಹೇಳಿದರು.

ಇದೇ ಸಂದರ್ಭದಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ನಗರವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಪ್ರಾತ್ಯಕ್ಷಿಕೆಯನ್ನು ಸಾದರಪಡಿಸಿ, ಇವಗಳನ್ನು ಬಗೆಹರಿಸಲು ಸರ್ಕಾರವು ಕೈಗೊಂಡಿರುವ ಉಪಕ್ರಮಗಳ ಬಗ್ಗೆ ಗಮನ ಸೆಳೆದರು. ಈ ಸಭೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ, ಮೆಟ್ರೋ ಎಂಡಿ ಅಂಜುಂ ಪರ್ವೇಜ್‌, ನಗರ ಪೊಲೀಸ್ ಆಯುಕ್ತ ಪ್ರತಾಪ್‌ ರೆಡ್ಡಿ, ಹೆಚ್ಚುವರಿ ಪೊಲೀಸ್ ಆಯುಕ್ತ ರವಿಕಾಂತೇಗೌಡ, ಐಟಿ ಇಲಾಖೆಯ ನಿರ್ದೇಶಕಿ ಮೀನಾ ನಾಗರಾಜ್ ಸಹ ಉಪಸ್ಥಿತರಿದ್ದರು.

English summary
Minister Ashwath Narayan assured permanent solution to bengaluru IT Companies, who facing problems in rain season
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X