Anil Ambani: ಅನಿಲ್ ಅಂಬಾನಿಗೆ ಇಡಿ ಆಘಾತ, ತನಿಖೆ ಶುರು ಮಾಡಿದ ಅಧಿಕಾರಿಗಳು
ಅನಿಲ್ ಅಂಬಾನಿ ಅವರ ರಿಲಯನ್ಸ್ ಗ್ರೂಪ್ ಇದೀಗ ಇಡಿ ತನಿಖೆಯಲ್ಲಿ ಸಿಲುಕಿಕೊಂಡಿದೆ. ಈ ಮೂಲಕ ಸಾಲು, ಸಾಲು ಸಮಸ್ಯೆ ಎದುರಿಸುವಂತೆ ಆಗಿದೆ. ಇಡಿ ಅಧಿಕಾರಿಗಳು ಇದೀಗ ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಗ್ರೂಪ್ ಮೇಲೆ ದಾಳಿ ಮಾಡಿ, ಅನಿಲ್ ಅಂಬಾನಿ ಅವರ ಪಾಲಿ ಹಿಲ್ ನಿವಾಸವೂ ಸೇರಿದಂತೆ 3,000 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯ ಹೊಂದಿರುವ 40 ಆಸ್ತಿಗಳನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ. ಈ ಮೂಲಕ ಅನಿಲ್ ಅಂಬಾನಿ ಅವರ ಅಡಿಯಲ್ಲಿ ಬರುವ ರಿಲಯನ್ಸ್ ಗ್ರೂಪ್ ಭಾರಿ ದೊಡ್ಡ ಸಮಸ್ಯೆ ಸುಳಿಗೆ ಸಿಲುಕಿಕೊಂಡಿದೆ.
ಇಡಿ ಅಧಿಕಾರಿಗಳಿಂದ ತನಿಖೆ ನಡೆಯುತ್ತಿರುವ ಕುರಿತು ಈಗ ಹೊರ ಬಿದ್ದಿರುವ ಮಾಹಿತಿ ಪ್ರಕಾರ, ಅನಿಲ್ ಅಂಬಾನಿ ಅವರ ರಿಲಯನ್ಸ್ ಗ್ರೂಪ್‌ಗೆ ಸೇರಿದ ಘಟಕಗಳಿಗೆ ಸಂಬಂಧಿಸಿದ ಸುಮಾರು 3084 ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳನ್ನು ಪಿಎಂಎಲ್‌ಎ ಸೆಕ್ಷನ್ 5(1)ರ ಅಡಿಯಲ್ಲಿ ಅಕ್ಟೋಬರ್ 31, 2025 ರಂದು ಮುಟ್ಟುಗೋಲು ಹಾಕಲಾಗಿದೆ. ಈ ಮೂಲಕ ಅನಿಲ್ ಅಂಬಾನಿ ಒಡೆತನದಲ್ಲಿ ಇರುವ ಆಸ್ತಿಯ ಮೇಲೆ ದಿಢೀರ್ ದಾಳಿ ಮಾಡಿ ತನಿಖೆ ಶುರು ಮಾಡಲಾಗಿದೆ.

ಹಲವು ನಗರಗಳಲ್ಲಿ ಇಡಿ ದಾಳಿ
ದೇಶದ ಪ್ರಮುಖ ನಗರಗಳಾದ ದೆಹಲಿ, ನೋಯ್ಡಾ, ಘಾಜಿಯಾಬಾದ್, ಮುಂಬೈ, ಪುಣೆ, ಥಾಣೆ, ಹೈದರಾಬಾದ್, ಚೆನ್ನೈ, ಕಾಂಚೀಪುರಂ & ಈಸ್ಟ್ ಗೊದಾವರಿ ಸೇರಿ ಹಲವಾರು ನಗರಗಳಲ್ಲಿ ಕಚೇರಿ ಕಟ್ಟಡಗಳು ಹಾಗೂ ನಿವಾಸಗಳು ಸೇರಿದಂತೆ ಖಾಲಿ ಭೂಮಿಯನ್ನ ಕೂಡ ಈಗ ಇಡಿ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ ಎನ್ನಲಾಗಿದೆ. ದೇಶದ ಪ್ರಮುಖ ನಗರಗಳಲ್ಲಿ ಇಡಿ ದಿಢೀರ್ ದಾಳಿ ನಡೆಸಿ ಕ್ರಮ ಕೈಗೊಂಡಿದೆ.
ಯೆಸ್ ಬ್ಯಾಂಕ್ ಭಾರಿ ಹೂಡಿಕೆ
ರಿಲಯನ್ಸ್ ಹೋಂ ಫೈನಾನ್ಸ್ ಲಿಮಿಟೆಡ್ (RHFL) ಮತ್ತು ರಿಲಯನ್ಸ್ ಕಮರ್ಷಿಯಲ್ ಫೈನಾನ್ಸ್ ಲಿಮಿಟೆಡ್ (RCFL) ಎಂಬ ಕಂಪನಿಗಳಿಂದ ಸಂಗ್ರಹಿಸಿದ್ದ ನಿಧಿ ಪರಿವರ್ತನೆ & ಮನಿ ಲಾಂಡರಿಂಗ್‌ಗೆ ಸಂಬಂಧಿಸಿದಂತೆ ಈ ತನಿಖೆ ಆರಂಭವಾಗಿದೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಕೇಳಿಬಂದಿದ್ದ ಆರೋಪದ ಹಿನ್ನೆಲೆಯಲ್ಲಿ ಇದೀಗ ಇಡಿ ಅಧಿಕಾರಿಗಳು ಮಹತ್ವದ ತನಿಖೆ ಆರಂಭಿಸಿದ್ದಾರೆ. 2017 ರಿಂದ 2019ರ ತನಕ ಯೆಸ್ ಬ್ಯಾಂಕ್ ಬರೋಬ್ಬರಿ 2,965 ಕೋಟಿ ರೂಪಾಯಿಯನ್ನು RHFL ಹಾಗೂ 2,045 ಕೋಟಿ ರೂಪಾಯಿಯನ್ನು RCFL ನಲ್ಲಿ ಹೂಡಿಕೆ ಮಾಡಿತ್ತು.
ಇನ್ನು 2019ರ ಡಿಸೆಂಬರ್ ವೇಳೆಗೆ ಈ ಹೂಡಿಕೆಗಳಲ್ಲಿ ರಿಲಯನ್ಸ್ ಹೋಂ ಫೈನಾನ್ಸ್ ಲಿಮಿಟೆಡ್ ಸುಮಾರು 1,353.50 ಕೋಟಿ ರೂಪಾಯಿ ಹಾಗೂ ರಿಲಯನ್ಸ್ ಕಮರ್ಷಿಯಲ್ ಫೈನಾನ್ಸ್ ಲಿಮಿಟೆಡ್ 1,984 ಕೋಟಿ ಬಾಕಿ ಉಳಿಸಿಕೊಂಡಿವೆ ಎನ್ನಲಾಗಿದೆ.
ಹೊಸದಾಗಿ ತೋರಿಸಲು ದುರುಪಯೋಗ ಆರೋಪ
ರಿಲಯನ್ಸ್ ಕಮ್ಯುನಿಕೇಶನ್ಸ್ ಲಿಮಿಟೆಡ್ (ಆರ್‌ಕಾಂ) ಹಾಗೂ ಅದರ ಸಂಬಂಧಿತ ಕಂಪನಿಗಳ ವಿರುದ್ಧದ ಸಾಲ ವಂಚನೆ ಪ್ರಕರಣದ ತನಿಖೆಯನ್ನು ಇಡಿ ಮುಂದುವರಿಸಿದೆ. ಸಂಸ್ಥೆಯ ಪ್ರಕಾರ, ಭಾರಿ ದೊಡ್ಡ ಪ್ರಮಾಣದ ಸಾಲಗಳನ್ನು ಹೊಸದಾಗಿ ತೋರಿಸಲು ದುರುಪಯೋಗ ಮಾಡಲಾಗಿದೆ.
ಸ್ಥಿರ ಠೇವಣಿ ಹಾಗೂ ಮ್ಯೂಚುವಲ್ ಫಂಡ್
₹1,800 ಕೋಟಿಗೂ ಅಧಿಕ ಮೊತ್ತವನ್ನು ಸ್ಥಿರ ಠೇವಣಿ ಹಾಗೂ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿದ ಬಳಿಕ ಅದನ್ನು ಲಿಕ್ವಿಡ್ ಮಾಡಿ, ವಂಚನೆಯ ಮಾರ್ಗಗಳಿಂದ ಗುಂಪು ಸಂಸ್ಥೆಗಳಿಗೆ ವರ್ಗಾಯಿಸಲಾಗಿದೆ ಎಂದು ತನಿಖೆಯಲ್ಲಿ ಪತ್ತೆಯಾಗಿದೆ. ಬಿಲ್ ಡಿಸ್ಕೌಂಟಿಂಗ್ ವ್ಯವಸ್ಥೆಯ ದುರುಪಯೋಗವೂ ಈ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಇಡಿ ವಕ್ತಾರರ ಪ್ರಕಾರ, ಈ ವಶಪಡಿಸಿಕೊಳ್ಳಲಾದ ಆಸ್ತಿಗಳಿಂದ ಆಗುವ ಪುನಃಪ್ರಾಪ್ತಿಗಳು ಸಾರ್ವಜನಿಕರಿಗೆ ಲಾಭಕರವಾಗಲಿವೆ. ಅಪರಾಧದ ಮೂಲಕ ಗಳಿಸಿದ ಮೊತ್ತವನ್ನು ಪತ್ತೆಹಚ್ಚಿ ವಶಪಡಿಸಿಕೊಳ್ಳುವ ಕಾರ್ಯ ಮುಂದುವರಿದಿದ್ದು, ಆಸ್ತಿಗಳು ತಾತ್ಕಾಲಿಕ ವಶದಲ್ಲಿಯೇ ಉಳಿದಿವೆ ಎಂದು ಅವರು ತಿಳಿಸಿದ್ದಾರೆ.
ಮತ್ತೊಂದು ಕಡೆಯಲ್ಲಿ CBI ತನಿಖೆಯು ಯೆಸ್ ಬ್ಯಾಂಕ್ & ಅಂಬಾನಿ ಅವರ ರಿಲಯನ್ಸ್ ಗ್ರೂಪ್‌ನ ವ್ಯವಹಾರಗಳಲ್ಲಿ ಸಂಕೀರ್ಣ ಹಣ ವರ್ಗಾವಣೆ & ಶೆಲ್ ಕಂಪನಿಗಳ ಮೂಲಕ ವಾಣಿಜ್ಯ ಪತ್ರಗಳ ದುರುಪಯೋಗ ಪತ್ತೆಹಚ್ಚಿದೆ ಎಂದು ಆರೋಪಿಸಲಾಗಿದೆ. ಕಳೆದ ತಿಂಗಳು ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಚಾರ್ಜ್‌ಶೀಟ್ ಪ್ರಕಾರ, ಈ ವ್ಯವಹಾರಗಳು ಯೆಸ್ ಬ್ಯಾಂಕ್ ಮಾಜಿ ಸಿಇಒ ರಾಣಾ ಕಪೂರ್ ಹಾಗೂ ಉದ್ಯಮಿ ಅನಿಲ್ ಅಂಬಾನಿ ಅವರ ನಡುವೆ ನಡೆದ ಕಾನೂನು ಮೀರಿದ ವ್ಯವಹಾರವಾಗಿತ್ತು ಎಂದು ಗಂಭೀರ ಆರೋಪ ಮಾಡಲಾಗಿದೆ.
ಇಡಿ ಇದೀಗ ಅದೇ ಪ್ರಕರಣದ ಮೇಲೆ ತನ್ನ ತನಿಖೆಯನ್ನು ಮುಂದುವರಿಸುತ್ತಿದೆ.












Click it and Unblock the Notifications