ಒರಿಜಿನಲ್ ಟೆಸ್ಲಾ ಕಾರ್ ನೋಡಿದ್ರಾ, ಟ್ವೀಟ್ ಮಾಡಿದ್ರು ನೋಡಿ ಮಹೀಂದ್ರಾ!
ಬೆಂಗಳೂರು, ಏ. 25: ಅಬ್ಬಾಬ್ಬಾ ಇದೇ ನೋಡಿ ಎಲಾನ್ ಮಸ್ಕ್ ಅವರ ಟೆಸ್ಲಾ ಕಾರ್! ಇದೇ ನಿಜವಾದ ಟೆಸ್ಲಾ ಕಾರ್. ಇದಕ್ಕೆ ಗೂಗಲ್ ಮ್ಯಾಪ್ ಬೇಕಿಲ್ಲ. ಇದಕ್ಕೆ ಇಂಧನವೂ ಬೇಕಿಲ್ಲ. ಇದರಿಂದ ಯಾವ ಮಾಲಿನ್ಯವೂ ಆಗಲ್ಲ. ಎಫ್ಎಸ್ ಡಿ ಮೋಡ್ ( ಫುಲ್ ಸೇಫ್ ಡ್ರೈವ್ ಮೋಡ್ ) ಕಾರ್ ಎಂದು ಉದ್ಯಮಿ ಆನಂದ್ ಮಹೀಂದ್ರಾ ಅವರು ಹಾಕಿರುವ ಟ್ವೀಟ್ ವೈರಲ್ ಆಗಿದೆ.
ಜಗತ್ತಿನ ಶ್ರೀಮಂತ ಉದ್ಯಮಿ ಎಲೊನ್ ಮಸ್ಕ್ ಅವರ ಚಾಲಕ ರಹಿತ ಟೆಸ್ಲಾ ಕಾರಿನ ಬಗ್ಗೆ ಉದ್ಯಮಿ ಆನಂದ್ ಮಹೀಂದ್ರ ಮಾಡಿರುವ ಟ್ವೀಟ್ ಭಾರಿ ಸದ್ದು ಮಾಡುತ್ತಿದೆ.
ತೀರಾ ವಿಶೇಷವಾದ ವಿಚಾರ ಉಲ್ಲೇಖಿಸಿ ಟ್ವೀಟ್ ಮಾಡುವ ಮೂಲಕ ದೇಶದ ಗಮನ ಸೆಳೆಯುವ ಉದ್ಯಮಿ ಆನಂದ್ ಮಹೀಂದ್ರ ಈ ಬಾರಿ ಎಲಾನ್ ಮಸ್ಕ್ ಅವರ ಟೆಸ್ಲಾ ಕಾರಿನ ಬಗ್ಗೆ ಟ್ವೀಟ್ ಮಾಡಿ ಎಲಾನ್ ಮಸ್ಕ್ ಅವರ ಕಾಲು ಎಳೆದಿದ್ದಾರೆ.

ಎಲೊನ್ ಮಸ್ಕ್ ಅವರ ಕನಸಿನ ಟೆಸ್ಲಾ ಎಲೆಕ್ಟ್ರಿಕ್ ಕಾರಿನ ಬಗ್ಗೆ ಇಡೀ ಜಗತ್ತೇ ತಿರುಗಿ ನೋಡುತ್ತಿದೆ. ಆಟೋ ಪೈಲಟ್ ( ಚಾಲಕ ಇಲ್ಲದೇ ಚಾಲನೆ) , ಟಚ್ ಸ್ಕ್ರೀನ್, ಬಯೋ ವೆಪನ್ ಹೀಗೆ ಟೆಸ್ಲಾ ಕಾರು ಹೊಂದಿರುವ ಸೌಲಭ್ಯಗಳು ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯುತ್ತಿವೆ.

ಇದೇ ಟೆಸ್ಲಾ ಕಾರಿನಲ್ಲಿರುವ ಸೌಲಭ್ಯಗಳನ್ನೇ ಉಲ್ಲೇಖಿಸಿ ಟ್ವೀಟ್ ಮಾಡಿರುವ ಉದ್ಯಮಿ ಆನಂದ್ ಮಹೇಂದ್ರ, ಎತ್ತಿನ ಗಾಡಿಯಲ್ಲಿ ಇಬ್ಬರು ಮಲಗಿರುವ ಚಿತ್ರ ಟ್ಯಾಗ್ ಮಾಡಿ ಇದೇ ಎಲಾನ್ ಮಸ್ಕ್ ಅವರ ಅಸಲಿ ಟೆಸ್ಲಾ ಕಾರು ಎಂದು ಕಾಲು ಎಳೆದಿದ್ದಾರೆ. ಇದಕ್ಕೆ ಕೂಡ ಪೈಲಟ್ ಬೇಕಿಲ್ಲ. ಗೂಗಲ್ ಮ್ಯಾಪ್ ಬೇಕಿಲ್ಲ, ಇಂಧನ ಬೇಕಿಲ್ಲ. ಆಟೋ ಮೋಡ್, ಯಾವ ಮಾಲಿನ್ಯವೂ ಆಗಲ್ಲ ಎಂದು ಅದಕ್ಕೆ ವಿವರಣೆ ಕೊಟ್ಟಿದ್ದಾರೆ.

ಆನಂದ್ ಮಹೀಂದ್ರ ಅವರ ಈ ಟ್ವೀಟ್‌ಗೆ ಭರಪೂರ ಲೈಕ್‌ಗಳು ವ್ಯಕ್ತವಾಗಿವೆ. ಆನಂದ್ ಮಹೀಂದ್ರ ಅವರ ಟ್ವೀಟ್ ಬೆಂಬಲಿಸಿ ಪೋಸ್ಟ್ ಹಾಕಿರುವ ಅವರ ಅಭಿಮಾನಿಗಳು, ರೋಡ್ ಟ್ಯಾಕ್ಸ್ ಇಲ್ಲ, ಟೋಲ್ ಇಲ್ಲ, ಸ್ಫೀಡ್ ಬ್ರೇಕರ್‌ಗಳು ಬೇಕಿಲ್ಲ. ಆರ್‌ಟಿಓ ಗಳಿಗೆ ತೆರಿಗೆ ಕಟ್ಟೊಂಗೆ ಇಲ್ಲ ಎಂದು ವಿವರಣೆ ನೀಡಿದ್ದಾರೆ.

ಭಾರತ ಕೃಷಿ ಅವಲಂಬಿತ ರಾಷ್ಟ್ರ. ಕೃಷಿಯನ್ನು ನಂಬಿರುವ ಪ್ರತಿ ಕುಟುಂಬದಲ್ಲಿ ಎತ್ತಿನ ಗಾಡಿ ಇದ್ದೇ ಇರುತ್ತದೆ. ಒಮ್ಮೆ ರಸ್ತೆ ಕೂಡಿಕೊಂಡರೆ, ಎತ್ತುಗಳು ಯಾರ ನೆರವು ಇಲ್ಲದೇ ಎತ್ತಿನ ಗಾಡಿ ಸಮೇತ ಮನೆಗೆ ತೆರಳುತ್ತವೆ. ರೂಢಿಯಾಗುತ್ತಿದ್ದಂತೆ ಎತ್ತಿನ ಗಾಡಿಯಲ್ಲಿ ಕೂರುವ ವ್ಯಕ್ತಿ ಮಲಗಿಕೊಂಡು ಮನೆ ತಲುಪುತ್ತಾರೆ. ವಿಪರ್ಯಸವೆಂದರೆ ಎಲಾನ್ ಮಸ್ಕ್ ಅವರ ಟೆಸ್ಲಾ ಎಲೆಕ್ಟ್ರಿಕ್ ಕಾರ್ ಚಾಲಕ ಇಲ್ಲದೇ ಚಾಲನೆಯಾಗುವ ಕಾರು. ಹೀಗಾಗಿ ವಿಶ್ವದಲ್ಲೆಡೆ ಖ್ಯಾತಿ ಪಡೆದಿದ್ದು, ಈ ಕಾರನ್ನೇ ಉದ್ಯಮಿ ಆನಂದ ಮಹೀಂದ್ರ ಎತ್ತಿನ ಗಾಡಿಗೆ ಹೋಲಿಸಿ ಟ್ವೀಟ್ ಮಾಡಿದ್ದಾರೆ.












Click it and Unblock the Notifications