ಅಮೆಜಾನ್ ನಿಂದ ಭಾರತದಲ್ಲಿ 1680 ಕೋಟಿ ರುಪಾಯಿ ಹೂಡಿಕೆ
ಬೆಂಗಳೂರು, ಜುಲೈ 6: ಜಾಗತಿಕ ಮಟ್ಟದಲ್ಲಿ ಅತಿ ದೊಡ್ಡ ಇ ಕಾಮರ್ಸ್ ಕಂಪೆನಿಯಾದ ಅಮೆಜಾನ್ ಭಾರತದಲ್ಲಿ ಹೆಚ್ಚುವರಿಯಾಗಿ 1680 ಕೋಟಿ ರುಪಾಯಿ ಹೂಡಿಕೆ ಮಾಡಿದೆ. ಭಾರತದಲ್ಲಿ ಇ ಕಾಮರ್ಸ್ ಮಾರುಕಟ್ಟೆಯನ್ನು ಮತ್ತಷ್ಟು ವಿಸ್ತರಿಸುವ ಹಾಗೂ ಬಲಪಡಿಸುವ ಉದ್ದೇಶದಿಂದ ಇಷ್ಟು ಮೊತ್ತ ಹೂಡಿಕೆ ಮಾಡಿದೆ.
ಐದು ಬಿಲಿಯನ್ ಅಮೆರಿಕನ್ ಡಾಲರ್ ನಷ್ಟು ಮೊತ್ತವನ್ನು ಭಾರತದಲ್ಲಿ ಹೂಡಿಕೆ ಮಾಡುವುದಾಗಿ ಅಮೆಜಾನ್ ತಿಳಿಸಿತ್ತು. ಆ ಭರವಸೆಯ ಭಾಗವಾಗಿ ಈ ಮೊತ್ತವನ್ನು ಹೂಡಿದೆ. ಇನ್ನು ಸ್ಥಳಿಯವಾಗಿ ದೊಡ್ಡ ಮಟ್ಟದಲ್ಲಿ ಬೆಳೆದಿರುವ ಮತ್ತೊಂದು ಇ ಕಾಮರ್ಸ್ ಕಂಪೆನಿ ಫ್ಲಿಪ್ ಕಾರ್ಟ್ ಜತೆಗೆ ಅಮೆಜಾನ್ ಸೆಣಸಬೇಕಾಗಿದೆ.

ಕಳೆದ ತಿಂಗಳು ಅಮೆಜಾನ್ ಇಂಡಿಯಾಗೆ ಹಣ ಬಂದಿದೆ. "ನಾವು ಭಾರತದಲ್ಲಿ ದೀರ್ಘ ಕಾಲದ ವ್ಯವಹಾರಕ್ಕೆ ಬದ್ಧರಾಗಿದ್ದೇವೆ. ಇಲ್ಲಿನ ಗ್ರಾಹಕರಿಗೆ ಇ ಕಾಮರ್ಸ್ ವ್ಯವಹಾರದ ರೂಢಿ ಮಾಡಿಸುತ್ತಿದ್ದು, ಅಗತ್ಯ ಇರುವ ತಂತ್ರಜ್ಞಾನ, ಮೂಲ ಸೌಕರ್ಯದ ಮೇಲೆ ಹೂಡಿಕೆ ಮಾಡಿದ್ದೇವೆ" ಎಂದು ಅಮೆಜಾನ್ ಇಂಡಿಯಾದ ವಕ್ತಾರರು ಪ್ರತಿಕ್ರಿಯಿಸಿದ್ದಾರೆ.
ಅಮೆರಿಕ ಮೂಲದ ಅಮೆಜಾನ್ ಕಂಪೆನಿಯು ಕಳೆದ ತಿಂಗಳು ಮೂರು ಬಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಮಾಡುವುದಾಗಿ ಹೇಳಿತ್ತು. ಈಗಾಗಲೇ ಅಮೆಜಾನ್ ಇಂಡಿಯಾ ಕಂಪೆನಿಯು ಎರಡು ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತವನ್ನು ಪಡೆದಾಗಿದೆ. ಈಚೆಗಷ್ಟೇ ಅಮೆಜಾನ್ ಇಂಡಿಯಾ ಭಾರತದಲ್ಲಿ ನಾಲ್ಕು ವರ್ಷದ ಸೇವೆ ಪೂರೈಸಿತು.











Click it and Unblock the Notifications