5ಜಿ ತಂತ್ರಜ್ಞಾನಕ್ಕಾಗಿ ಕೊರಿಯಾ ಕಂಪನಿ ಜತೆ ಏರ್ ಟೆಲ್ ಒಪ್ಪಂದ
ಏರ್ ಟೆಲ್ ನಿಂದ ಶೀಘ್ರವೇ 5ಜಿ ತಂತ್ರಜ್ಞಾನ ಪರಿಚಯ. ಈ ಕುರಿತಂತೆ ದಕ್ಷಿಣ ಕೊರಿಯಾ ಸಂಸ್ಥೆ ಜತೆಗೆ ಒಪ್ಪಂದ.
ನವದೆಹಲಿ, ಸೆಪ್ಟೆಂಬರ್ 13: ಭಾರತದಲ್ಲಿ ಶೀಘ್ರವೇ 5ಜಿ ತಂತ್ರಜ್ಞಾನದ ಮೊಬೈಲ್ ನೆಟ್ ವರ್ಕ್ ಆರಂಭಿಸಲು ಉದ್ದೇಶಿಸಿರುವ ಏರ್ ಟೆಲ್ ಸಂಸ್ಥೆ, ಈ ಕುರಿತಂತೆ ದಕ್ಷಿಣ ಕೊರಿಯಾದ ಸಂಸ್ಥೆಯಾದ ಎಸ್.ಕೆ. ಟೆಲಿಕಾಂ ಜತೆಗೆ ಒಪ್ಪಂದವೊಂದಕ್ಕೆ ಸಹಿ ಹಾಕಿದೆ.
ಭಾರತೀಯ ದೂರ ಸಂಪರ್ಕ ಕ್ಷೇತ್ರದಲ್ಲಿ ದೈತ್ಯ ಕಂಪನಿಯಾಗಿರುವ ಏರ್ ಟೆಲ್, ಈ ಹಿಂದೆ 4 ಜಿ ತಂತ್ರಜ್ಞಾನವನ್ನು ಭಾರತಕ್ಕೆ ತಂದ ಮೊಟ್ಟಮೊದಲ ಮೊಬೈಲ್ ಸೇವಾ ಸಂಸ್ಥೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಇದೀಗ, ಅದೇ ಸಂಸ್ಥೆ ಈಗ ಹೊಸತೊಂದು ಶಕೆ ಆರಂಭಿಸಲು ಸಜ್ಜಾಗಿದೆ.

ಈ ಬಗ್ಗೆ ಮಾಧ್ಯಮಗಳಿಗೆ ವಿವರಣೆ ನೀಡಿರುವ ಭಾರ್ತಿ ಏರ್ ಟೆಲ್ ಸಂಸ್ಥೆಯ ಮುಖ್ಯಸ್ಥ ಸುನಿಲ್ ಭಾರ್ತಿ ಮಿತ್ತಲ್, ''ಈ ಒಪ್ಪಂದದಿಂದಾಗಿ, ಭಾರತದಲ್ಲಿ ಏರ್ ಟೆಲ್ ಸೇವೆ ಉಪಯೋಗಿಸುತ್ತಿರುವ ಗ್ರಾಹಕರಿಗೆ ಶೀಘ್ರದಲ್ಲೇ ಅತ್ಯಾಧುನಿಕ ಸಂಪರ್ಕ ತಂತ್ರಜ್ಞಾನವನ್ನು ಸ್ವೀಕರಿಸುವ ಸುಸಮಯ ಒದಗಲಿದೆ'' ಎಂದು ತಿಳಿಸಿದರು.
ಈಗಾಗಲೇ ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸುವ ಮೂಲಕ ಏರ್ ಟೆಲ್ ಕಂಪನಿಗೆ ಸಡ್ಡು ಹೊಡೆದಿರುವ ರಿಲಯನ್ಸ್ ಕಂಪನಿಗೆ ಪೈಪೋಟಿಯೊಡ್ಡುವ ಲೆಕ್ಕಾಚಾರದಲ್ಲಿ ಏರ್ ಟೆಲ್ ಸಂಸ್ಥೆ ಈಗ 5ಜಿ ತಂತ್ರಜ್ಞಾನವನ್ನು ಭಾರತಕ್ಕೆ ತರಲು ಮುಂದಾಗಿದೆ.
ಏತನ್ಮಧ್ಯೆ, ಸರ್ಕಾರಿ ಸ್ವಾಮ್ಯದ ಬಿಎಸ್ ಎನ್ ಎಲ್ ಸಂಸ್ಥೆಯೂ ಮುಂದಿನ ವರ್ಷ ತಾನು ಭಾರತದಲ್ಲಿ 5ಜಿ ತಂತ್ರಜ್ಞಾನವನ್ನು ಪರಿಚಯಿಸುವುದಾಗಿ ತಿಳಿಸಿದೆ.












Click it and Unblock the Notifications