CM Bommai: ಲಿಂಗಾಯತರು ಸೇರಿ ಎಲ್ಲ ಸಮುದಾಯಕ್ಕೆ ಬಿಜೆಪಿಯಿಂದ ನ್ಯಾಯ; ಸಿಎಂ ಬೊಮ್ಮಾಯಿ
ಬೀದರ್, ಏಪ್ರಿಲ್ 20: ಲಿಂಗಾಯತ ಸಮಾಜವನ್ನು ಒಡೆಯುವ ಕೆಲಸ ಕಾಂಗ್ರೆಸ್ ಮಾಡಿದೆ. ಬಿಜೆಪಿ ಸರ್ಕಾರ ಲಿಂಗಾಯತರು ಒಳಗೊಂಡಂತೆ ಎಲ್ಲಾ ಸಮುದಾಯಕ್ಕೆ ನ್ಯಾಯ ಕೊಡುವ ಕೆಲಸ ಮಾಡಿದೆ. ಬಿಜೆಪಿಯಿಂದ ಮಾತ್ರ ಎಲ್ಲ ವರ್ಗದವರಗೆ ಮಾನ್ಯತೆ ಸಿಕ್ಕಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಗುರುವಾರ ಬೀದರ ಜಿಲ್ಲೆಯ ಭಾಲ್ಕಿಯಲ್ಲಿ ಸುದ್ದಿಗಾರ ಜೊತೆಗೆ ಮಾತನಾಡಿದ ಅವರು, ಲಿಂಗಾಯತ ಸಮಾಜವನ್ನ ಒಡೆದ ಕಾಂಗ್ರೆಸ್ ಕಳೆದ 50 ವರ್ಷದಿಂದ ಲಿಂಗಾಯತ ಒಬ್ಬರನ್ನು ಸಿಎಂ ಆಗಿ ಮಾಡಲಿಲ್ಲ. ಕಾಂಗ್ರೆಸ್‌ನಲ್ಲಿ ಎಸ್ ನಿಜಲಿಂಗಪ್ಪ ಹೊರತುಪಡಿಸಿ ಲಿಂಗಾಯತರಲ್ಲಿ ಯಾರು ಸಿಎಂ ಆಗಿಲ್ಲ. ಇದೇ ಕಾಂಗ್ರೆ್ ವಿರೇಂದ್ರ ಪಾಟೀಲರನ್ನ ಎಷ್ಟು ಹೀನಾಯವಾಗಿ ನಡೆಸಿಕೊಂಡಿದ್ದಾರೆ ಎಂದು ಗೊತ್ತಿದೆ ಎಂದರು.

ಕಾಂಗ್ರೆಸ್ ಕೇವಲ ಮೊಸಳೆ ಕಣ್ಣೀರು ಹಾಕುತ್ತದೆ. ಸಮಾಜವನ್ನ ಒಡೆಯುವ ಕಾಂಗ್ರೆಸ್ ಆಗಲಿ ಅಥವಾ ಬೇರೆ ಪಕ್ಷಗಳಾಗಲಿ ಯಾರಿಗೆ ರಾಜ್ಯದ ಅಧಿಕಾರ ಕೊಟ್ಟಿದೆ ಎಂಬುದು ಈಗಾಗಲೇ ತಿಳಿದಿದೆ. ಸಮಾಜಕ್ಕೆ ಬಿಜೆಪಿಯಿಂದ ಡ್ಯಾಮೇಜ್ ಆಗಿಲ್ಲ. ಅಲ್ಲದೇ ಬಿಜೆಪಿಯಿಂದ ಹೊರ ನಡೆದ ಮೇಲೂ ಪಕ್ಷಕ್ಕೆ ತೊಂದರೆ ಆಗಿಲ್ಲ. ಅಂದ ಮೇಲೆ ಡ್ಯಾಮೇಜ್ ಕಂಟ್ರೋಲ್ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಜನರ ವಿರುದ್ಧದ ಆಡಳಿತಕ್ಕೆ ಅವನತಿ
ಬೀದರ್ ಜಿಲ್ಲೆಯಲ್ಲಿ ಆರು ಶಾಸಕರು ಆಯ್ಕೆಯಾಗುತ್ತಾರೆ. ವಿಶೇಷವಾಗಿ ಭಾಲ್ಕಿಯಲ್ಲಿ ಬಿಜೆಪಿ ಆಯ್ಕೆಯಾಗಲಿದ್ದು, ಯಾರು ಜನರ ವಿರುದ್ಧ ಆಡಳಿತ ನಡೆಸುತ್ತಿದ್ದಾರೊ ಅವರು ಅವನತಿ ಹೊಂದುವ ಕಾಲ ಬಂದಿದೆ. ಜಿಲ್ಲೆಯ ಜನರ ಉತ್ಸಾಹವು ಬಿಜೆಪಿಯ ವಿಜಯ ಪತಾಕೆಯ ಮುನ್ಸೂಚನೆ ಆಗಿದೆ. ರಾಜ್ಯದಲ್ಲಿ ಕಮಲ ಅರಳಿಸಲು ಬಸವಣ್ಣನ ನಾಡು ಭಾಲ್ಕಿ ಪಟ್ಟಣಕ್ಕೆ ಬಂದಿರುವುದಾಗಿ ಅವರು ಹೇಳಿದರು.

ಪ್ರಕಾಶ ಖಂಡ್ರೆ ಸಜ್ಜನ ವ್ಯಕ್ತಿ. ಇನ್ನೊಬ್ಬರು ಈಶ್ವರ ಖಂಡ್ರೆ ಇದ್ದಾರೆ. ಅವರು ಸ್ವಾರ್ಥ ರಾಜಕಾರಣ ಮಾಡಿದ್ದಾರೆ. ಎಲ್ಲರನ್ನು ಎಲ್ಲಾ ಸಮಯದಲ್ಲಿ ಮೋಸ ಮಾಡಲು ಸಾಧ್ಯವಿಲ್ಲ. ಈ ಬಾರಿ ಸಜ್ಜನರು ಮತ್ತು ದುರ್ಜನರ ನಡುವೆ ಸಂಘರ್ಷ ನಡೆದಿದೆ. ಈ ಬಾರಿ ಸಜ್ಜನರ ಗೆಲುವಾಗಲಿದೆ ಎಂದರು.
ಕಾಂಗ್ರೆಸ್ ಸುಳ್ಳು ಭರವಸೆ ನೀಡುತ್ತಿದೆ
ಬೀದರ್ ಭಾಗದಲ್ಲಿ ರಸ್ತೆ, ನೀರಾವರಿಗೆ ಮೂಲ ಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದೇವೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ 1000 ಕೋಟಿ ರೂ ಮೀಸಲಿಟ್ಟು, ಕೇವಲ 300 ಕೋಟಿ ಖರ್ಚು ಮಾಡುತ್ತಾರೆ.
ಚುನಾವಣೆಗೂ ಮುನ್ನ ಭರವಸೆಗಳನ್ನು ನೀಡುತ್ತ ಗ್ಯಾರಂಟಿ ಕಾರ್ಡ್ ಕೊಡುತ್ತಿದ್ದಾರೆ. ವಿಜಿಟಿಂಗ್ ಕಾರ್ಡ್ ಕೊಡುತ್ತಿದ್ದಾರೆ. ಅದಕ್ಕೆ ಯಾವುದೇ ಬೆಲೆ ಇಲ್ಲ. ಇವರು ಕೊಡುತ್ತಿರುವುದು ಬೋಗಸ್ ಕಾರ್ಡ್, 200 ಯುನಿಟ್ ವಿದ್ಯುತ್ ಉಚಿವಾಗಿ ನೀಡುವುದಾಗಿ ಹೇಳುತ್ತಾರೆ. ಜನರು ಬಳಕೆ ಮಾಡುವುದೇ 70-80 ಯುನಿಟ್. ಇವರು 200 ಯುನಿಟ್ ಕೊಡುವುದಾಗಿ ಸುಳ್ಳು ಭರವಸೆ ನೀಡುತ್ತಿದ್ದಾರೆ ಎಂದು ವಿಪಕ್ಷದ ವಿರುದ್ಧ ಬೊಮ್ಮಾಯಿ ಹರಿಹಾಯ್ದರು.
ಮೀಸಲಾತಿ: ಕಾಂಗ್ರೆಸ್ ನಿಲುವು ಏನು?
ಕಾಂಗ್ರೆಸ್ ನವರು ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುತ್ತಾರೆ. ದಲಿತರ ಮೀಸಲಾತಿ ಹೆಚ್ಚಳ ಮಾಡಿದ್ದು ಬಿಜೆಪಿ ಸರ್ಕಾರ. ಕಾಂಗ್ರೆಸ್ ನವರು ಯಾಕೆ ಮಾಡಲಿಲ್ಲ. ಒಳ ಮೀಸಲಾಯಿಯನ್ನು ಮೂವತ್ತು ವರ್ಷದಿಂದ ಕೇಳುತ್ತ ಬಂದರೂ ಕಾಂಗ್ರೆಸ್ ಮಾಡಿರಲಿಲ್ಲ. ಈಗ ನಾವು ಒಳ ಮೀಸಲಾತಿ ನೀಡಿದರೆ ಅದಕ್ಕೆ ವಿರೋಧ ಮಾಡುತ್ತಿದ್ದಾರೆ. ದಲಿತರಿಗೆ ಒಳ ಮೀಸಲಾತಿಯ ಬಗ್ಗೆ ಕಾಂಗ್ರೆಸ್ ನಿಲುವು ಏನು ಎಂದು ಸ್ಪಷ್ಟಪಡಿಸಬೇಕು ಎಂದರು.












Click it and Unblock the Notifications