'ಫನಿ' ಚಂಡಮಾರುತದ ಪರಿಣಾಮ: ಚುನಾವಣಾ ನೀತಿ ಸಂಹಿತೆ ವಾಪಸ್
ನವದೆಹಲಿ, ಮೇ 1: 'ಫನಿ' ಚಂಡಮಾರುತ ಒಡಿಶಾದ ಕರಾವಳಿಗೆ ಸಮೀಪ ಬಂದಿದ್ದು, ಮತ್ತಷ್ಟು ಪ್ರಬಲಗೊಂಡಿದೆ. ರಾಜ್ಯದಾದ್ಯಂತ 'ಎಲ್ಲೋ ಅಲರ್ಟ್' ಘೋಷಿಸಲಾಗಿದೆ. ಅಲ್ಲಿನ ಶಾಲಾ ಕಾಲೇಜುಗಳಿಗೆ ಗುರುವಾರದಿಂದ ರಜೆ ಘೋಷಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಈ ನಡುವೆ ಭಾರಿ ಮಳೆ, ಬಿರುಗಾಳಿಯ ಭೀತಿಗೆ ಒಳಗಾಗಿರುವ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಚುನಾವಣಾ ಆಯೋಗವು ಚುನಾವಣಾ ನೀತಿ ಸಂಹಿತೆಯನ್ನು ಹಿಂದಕ್ಕೆ ಪಡೆದುಕೊಂಡಿದೆ.
ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸಲು ಅನುಕೂಲವಾಗುವಂತೆ ನೀತಿ ಸಂಹಿತೆಯನ್ನು ತೆಗೆದುಹಾಕಲಾಗಿದೆ.

ಪುರಿ, ಜಗತ್ ಸಿಂಗಪುರ್, ಕೇಂದ್ರಪರ, ಭದ್ರಾಕ್, ಬಾಲಸೋರ್, ಮಯೂರ್ ಭಂಜ್, ಗಜಪತಿ, ಗಂಜಂ, ಖುರ್ದಾ, ಕಟಕ್ ಮತ್ತು ಜಾಜ್ಪುರಗಳಲ್ಲಿ ಪರಿಹಾರ, ರಕ್ಷಣೆ ಕಾರ್ಯಗಳನ್ನು ನಡೆಸಲು ಚುನಾವಣಾ ನೀತಿ ಸಂಹಿತೆ ಹಿಂಪಡೆಯಲಾಗಿದೆ.
ಗುರುವಾರ ಸಂಜೆಯ ಒಳಗೆ ಪುರಿ ಪಟ್ಟಣದಿಂದ ಹೊರಹೋಗುವಂತೆ ಒಡಿಶಾ ಅಧಿಕಾರಿಗಳು ಪ್ರವಾಸಿಗರಿಗೆ ಸೂಚಿಸಿದ್ದಾರೆ. ಕರಾವಳಿ ಜಿಲ್ಲೆಗಳಲ್ಲಿ ಶುಕ್ರವಾರ ಮತ್ತು ಶನಿವಾರ ಭಾರಿ ಮಳೆ ಸಂಭವ ಇರುವುದರಿಂದ ಅನಗತ್ಯವಾಗಿ ಅಲ್ಲಿಗೆ ಪ್ರಯಾಣ ಬೆಳೆಸದಂತೆ ಎಚ್ಚರಿಸಿದ್ದಾರೆ.
ಗಂಜಾಂ, ಗಜಪತಿ, ಪುರಿ, ಜಗತ್ ಸಿಂಗಪುರ್, ಖುರ್ದಾ ಜಿಲ್ಲೆಗಳಲ್ಲಿ ಭಾರಿ ಪ್ರಮಾಣದ ಹಾನಿ ಸಂಭವಿಸುವ ನಿರೀಕ್ಷೆಯಿದೆ. ಅಲ್ಲದೆ, ಕೇಂದ್ರಪರ, ಭದ್ರಾಕ್, ಜಾಜ್ಪುರ ಮತ್ತು ಬಾಲಸೋರ್‌ಗಳಲ್ಲಿ ಚಂಡಮಾರುತ ತೀವ್ರ ಪರಿಣಾಮ ಬೀರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.












Click it and Unblock the Notifications