ಮಧ್ಯಪ್ರದೇಶ; ಅತ್ಯಾಚಾರ ನಡೆಸಿ ಭೀಕರ ಹಲ್ಲೆ ಮಾಡಿದ ದುಷ್ಕರ್ಮಿಗಳು
ಭೋಪಾಲ್, ಜನವರಿ 11: ಹತ್ರಾಸ್ ಅತ್ಯಾಚಾರ ಪ್ರಕರಣ ಕಣ್ಣಿಂದ ಮರೆ ಮಾಚುವ ಮುನ್ನವೇ ಅಂಥದ್ದೇ ಘಟನೆಗಳು ಮರುಕಳಿಸುತ್ತಿವೆ. ವಾರದ ಹಿಂದಷ್ಟೇ ಉತ್ತರ ಪ್ರದೇಶದಲ್ಲಿ 50 ವರ್ಷದ ಮಹಿಳೆ ಮೇಲೆ ನಿರ್ಭಯಾ ಮಾದರಿಯಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಿ ಭೀಕರವಾಗಿ ಕೊಲೆ ಮಾಡಲಾಗಿತ್ತು.
ಎರಡು ದಿನಗಳ ಹಿಂದಷ್ಟೇ ಜಾರ್ಖಂಡ್ ನಲ್ಲೂ ಅಂಥದ್ದೇ ಘಟನೆ ನಡೆದಿದ್ದು, ಆಕೆ ಮೇಲೆ ಭೀಕರ ಹಲ್ಲೆ ನಡೆಸಲಾಗಿತ್ತು. ಇದೀಗ ಮಧ್ಯ ಪ್ರದೇಶದಲ್ಲಿಯೂ ಮತ್ತೊಂದು ಘಟನೆ ವರದಿಯಾಗಿದೆ.
ಮಧ್ಯಪ್ರದೇಶದ ಸೀಧಿ ಜಿಲ್ಲೆಯಲ್ಲಿ ಮಧ್ಯವಯಸ್ಕ ವಿಧವೆಯೊಬ್ಬರ ಮೇಲೆ ನಾಲ್ವರು ದುಷ್ಕರ್ಮಿಗಳು ಅತ್ಯಾಚಾರ ನಡೆಸಿದ್ದು, ಆಕೆಯ ಗುಪ್ತಾಂಗಕ್ಕೆ ಕಬ್ಬಿಣದ ರಾಡ್ ಗಳಿಂದ ಚುಚ್ಚಿ ಭೀಕರವಾಗಿ ಹಲ್ಲೆ ನಡೆಸಿದ್ದಾರೆ.

ಶನಿವಾರ ರಾತ್ರಿ ನೀರು ಕೇಳುವ ನೆಪದಲ್ಲಿ ಮನೆಗೆ ನುಗ್ಗಿದ ದುಷ್ಕರ್ಮಿಗಳು ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾರೆ. ನಂತರ ಕಬ್ಬಿಣದ ರಾಡ್ ನಿಂದ ಆಕೆ ಮೇಲೆ ಭೀಕರ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮಹಿಳೆಯ ಸ್ಥಿತಿ ಚಿಂತಾಜನಕವಾಗಿದ್ದು, ಚಿಕಿತ್ಸೆ ಮುಂದುವರೆಸಿರುವುದಾಗಿ ತಿಳಿಸಿದ್ದಾರೆ.
ಮಹಿಳೆಯ ಕುಟುಂಬದವರು ನೀಡಿದ ದೂರಿನ ಮೇಲೆ ನಾಲ್ವರನ್ನು ಬಂಧಿಸಲಾಗಿದೆ. ಆರೋಪಿಗಳು ಅದೇ ಗ್ರಾಮದವರು ಎಂದು ತಿಳಿದುಬಂದಿದೆ. ಮಹಿಳೆಯ ಪತಿ ನಾಲ್ಕು ವರ್ಷದ ಹಿಂದೆಯೇ ತೀರಿಕೊಂಡಿದ್ದು, ಮಹಿಳೆ ತನ್ನ ಸಹೋದರಿ ಜೊತೆ ವಾಸವಿದ್ದು, ಇಬ್ಬರು ಪುಟ್ಟ ಮಕ್ಕಳಿದ್ದಾರೆ ಎಂದು ತಿಳಿದುಬಂದಿದೆ.












Click it and Unblock the Notifications