ಮಧ್ಯಪ್ರದೇಶ ಸಿಎಂ ಸಂಬಂಧಿ, ಆಪ್ತರ ಮೇಲೆ ಆದಾಯ ತೆರಿಗೆ ದಾಳಿ
ಭೋಪಾಲ್ (ಮಧ್ಯಪ್ರದೇಶ), ಏಪ್ರಿಲ್ 7: ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್ ರ ಸೋದರ ಸಂಬಂಧಿ ಹಾಗೂ ಆಪ್ತರ ಕಚೇರಿ, ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಂದ ಭಾನುವಾರ ದಾಳಿ ನಡೆದಿದೆ. ಮುಖ್ಯಮಂತ್ರಿ ಸೋದರ ಸಂಬಂಧಿ ರತುಲ್ ಪುರಿ, ಕಮಲ್ ನಾಥ್ ರ ವಿಶೇಷಾಧಿಕಾರಿ ಪ್ರವೀಣ ಕಕ್ಕರ್ ಮತ್ತು ಆಪ್ತರಾದ ಆರ್.ಕೆ.ಮಿಗ್ಲಾನಿ ಮೇಲೆ ದಾಳಿ ನಡೆದಿದೆ.
ಆದಾಯ ತೆರಿಗೆ ಇಲಾಖೆಯಿಂದ ದೇಶದಾದ್ಯಂತ ಐವತ್ತು ಕಡೆ ದಾಳಿ ನಡೆದಿದ್ದು, ಅದರದೇ ಭಾಗವಾಗಿ ಭಾನುವಾರ ಬೆಳಗ್ಗೆ ಮೂರು ಗಂಟೆಗೆ ಮಧ್ಯಪ್ರದೇಶದಲ್ಲಿ ದಾಳಿ ಶುರುವಾಯಿತು ಎಂದು ಮೂಲಗಳು ತಿಳಿಸಿವೆ.ಹಿಂದೂಸ್ತಾನ್ ಪವರ್ ಪ್ರಾಜೆಕ್ಟ್ಸ್ ನ ನಿರ್ದೇಶಕರು- ಅಧ್ಯಕ್ಷ ರತುಲ್ ಪುರಿ ವಿರುದ್ಧ ಅಗಸ್ಟಾ ವೆಸ್ಟ್ ಲ್ಯಾಂಡ್ ಗಣ್ಯ ಹೆಲಿಕಾಪ್ಟರ್ ಖರೀದಿ ಹಗರಣದಲ್ಲಿ ಅಕ್ರಮ ಹಣಕಾಸು ವರ್ಗಾವಣೆ ಮಾಡಿದ ಆರೋಪ ಇದೆ.
ಕಕ್ಕರ್ ಗೆ ಸೇರಿದ ಇಂದೋರ್ ನಲ್ಲಿನ ನಾಲ್ಕು ಆಸ್ತಿಗಳ ಮೇಲೆ ದಾಳಿ ನಡೆದಿದೆ. ಹಾಗೂ ಭೋಪಾಲ್ ನಲ್ಲಿ ಕಕ್ಕರ್ ಹಾಗೂ ಮಿಗ್ಲಾನಿಗೆ ಸೇರಿದ ಎರಡು ಸ್ಥಳಗಳಲ್ಲಿ ದಾಳಿಯಾಗಿದೆ. "ನಾನೀಗ ಛಿಂದ್ವಾರದಲ್ಲಿ ಇದ್ದೇನೆ. ನನಗೆ ದಾಳಿ ಬಗ್ಗೆ ಗೊತ್ತಿಲ್ಲ" ಎಂದು ಮಿಗ್ಲಾನಿ ಹೇಳಿದ್ದಾರೆ. ಕಕ್ಕರ್ ರ ಅಭಿಪ್ರಾಯ ಪಡೆಯಲು ದೊರೆತಿಲ್ಲ. ಇನ್ನು ಮುಖ್ಯಮಂತ್ರಿ ಕಮಲ್ ನಾಥ್ ಕೂಡ ಪ್ರತಿಕ್ರಿಯೆ ನೀಡಲು ಸಂಪರ್ಕಕ್ಕೆ ದೊರೆತಿಲ್ಲ.

ಎಎನ್ಐ ಸುದ್ದಿ ಸಂಸ್ಥೆಯ ವರದಿ ಪ್ರಕಾರ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತನ್ನ ಪಾತ್ರವಿಲ್ಲ ಎಂದು ರತುಲ್ ಪುರಿ ಹೇಳಿದ್ದಾರೆ. ಲಿಖಿತ ಹೇಳಿಕೆ ನೀಡಿರುವ ಅವರು, ನನಗೂ ಅಗಸ್ಟಾ ವೆಸ್ಟ್ ಲ್ಯಾಂಡ್ ಪ್ರಕರಣಕ್ಕೂ ಯಾವುದೇ ನಂಟಿಲ್ಲ. ನಾನು ಸ್ವತಂತ್ರ ವ್ಯಾಪಾರ ನಡೆಸುತ್ತೇನೆ. ನನ್ನ ಸಂಬಂಧಿಕರ ಜತೆಗೆ ಯಾವುದೇ ವ್ಯಾಪಾರ-ವ್ಯವಹಾರ್ಗಳಿಲ್ಲ ಎಂದು ಹೇಳಿದ್ದಾರೆ.
ದೆಹಲಿಯಿಂದ ಬಂದಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ದಾಳಿ ವೇಳೆ ಏನೇನು ವಶಪಡಿಸಿಕೊಳ್ಳಲಾಯಿತು ಎಂಬುದು ಇನ್ನೂ ಗೊತ್ತಾಗಬೇಕಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯ್ ವರ್ಗೀಯ ಟ್ವೀಟ್ ಮಾಡಿ, ಕಮಲ್ ನಾಥ್ ರ ಆಪ್ತ ಕಾರ್ಯದರ್ಶಿಯಿಂದ ಕೋಟ್ಯಂತರ ರುಪಾಯಿ ಕಪ್ಪು ಹಣ ವಶಪಡಿಸಿಕೊಳ್ಳಲಾಗಿದೆ ಎಂದಿದ್ದಾರೆ.

ಮಿಗ್ಲಾನಿ ಅವರು ಹಲವು ವರ್ಷಗಳಿಂದ ಕಮಲ್ ನಾಥ್ ಜತೆ ಗುರುತಿಸಿಕೊಂಡವರು. ಕಳೆದ ವರ್ಷ ಕಮಲ್ ನಾಥ್ ಮಧ್ಯಪ್ರದೇಶದ ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕಾರ ಮಾಡಿದಾಗ ಮಿಗ್ಲಾನಿ ಅವರನ್ನು ಸಲಹೆಗಾರರನ್ನಾಗಿ ನೇಮಕ ಮಾಡಲಾಗಿತ್ತು. ಕಮಲ್ ನಾಥ್ ರಿಗೆ ಛಿಂದಾವರ್ ಕ್ಷೇತ್ರದಲ್ಲಿ ಚುನಾವಣೆಗೆ ಸಹಾಯ ಮಾಡುವ ಸಲುವಾಗಿ ಈ ವರ್ಷದ ಫೆಬ್ರವರಿಯಲ್ಲಿ ತಮ್ಮ ಹುದ್ದೆಗೆ ಮಿಗ್ಲಾನಿ ರಾಜೀನಾಮೆ ನೀಡಿದ್ದರು.
ಕಕ್ಕರ್ ಗೆ ಕೇಂದ್ರದ ಮಾಜಿ ಸಚಿವ ಹಾಗೂ ಕಾಂಗ್ರೆಸ್ ನ ಹಾಲಿ ಸಂಸದ ಕಾಂತಿಲಾಲ್ ಭುರೈ ಜತೆಗೆ ನಂಟಿದೆ.












Click it and Unblock the Notifications