ದಂಪತಿ ಕೊಲೆ; ಅಪ್ರಾಪ್ತ ಮಗಳ ಮೇಲೆ ಪೊಲೀಸರ ಕಣ್ಣು
ಮಧ್ಯಪ್ರದೇಶ, ಡಿಸೆಂಬರ್ 18: ವಿಶೇಷ ಸಶಸ್ತ್ರಪಡೆಗೆ ನಿಯೋಜನೆಗೊಂಡಿದ್ದ ಕಾನ್ ಸ್ಟೆಬಲ್ ಹಾಗೂ ಆತನ ಪತ್ನಿಯನ್ನು ಮಾರಕಾಸ್ತ್ರಗಳಿಂದ ಕೊಲೆ ಮಾಡಿರುವ ಘಟನೆ ಮಧ್ಯಪ್ರದೇಶದಲ್ಲಿ ಗುರುವಾರ ನಡೆದಿದೆ.
ಆದರೆ ಮನೆಯೊಳಗಿನಿಂದ ಕಿರುಚಿಕೊಳ್ಳುತ್ತಿರುವ ಶಬ್ದ ಬರುತ್ತಿದ್ದರೂ ಅದಕ್ಕೆ ಕಿವಿಗೊಡದೆ ಹೊರಗೆ ಮಗಳು ಓಡಾಡುತ್ತಿದ್ದಳು ಎಂಬ ಹೇಳಿಕೆಯನ್ನು ನೆರೆಹೊರೆಯವರು ನೀಡಿದ್ದು, ದಂಪತಿಯ 17 ವರ್ಷದ ಮಗಳ ಮೇಲೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಏರೋಡ್ರೋಮ್ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಈ ಜೋಡಿ ಕೊಲೆ ನಡೆದಿದ್ದು, ಕೊಲೆಯಾದವರನ್ನು ಜ್ಯೋತಿ ಪ್ರಸಾದ್ ಶರ್ಮಾ (45) ಹಾಗೂ ನೀಲಂ (43) ಎಂದು ಗುರುತಿಸಲಾಗಿದೆ. ಈ ದಂಪತಿಗೆ ಒಬ್ಬ ಮಗಳಿದ್ದು, ಆಕೆಯ ಮೇಲೆ ಕೊಲೆ ಅನುಮಾನ ವ್ಯಕ್ತವಾಗಿದೆ. ಕೊಲೆಯಾದ ನಂತರ ಮಗಳು ಹಾಗೂ ಆಕೆಯ ಸ್ನೇಹಿತ ತಲೆಮರೆಸಿಕೊಂಡಿದ್ದು ಅನುಮಾನಕ್ಕೆ ಪುಷ್ಟಿ ನೀಡಿದೆ.

ಮನೆಯೊಳಗಿನಿಂದ ಕಿರುಚಿಕೊಳ್ಳುತ್ತಿರುವ ಶಬ್ದ ಬರುತ್ತಿದ್ದರೂ ಮಗಳು ಮನೆ ಹೊರಗೆ ಸುಮ್ಮನೆ ಓಡಾಡುತ್ತಿದ್ದಳು. ಏನು ಆ ಕೂಗಾಟ ಎಂದು ಕೇಳಿದರೆ ತಂದೆ ತಾಯಿ ಜಗಳ ಆಡುತ್ತಿದ್ದಾರೆ ಎಂದಳು ಎಂದು ಪ್ರತ್ಯಕ್ಷದರ್ಶಿ ಹೇಳಿಕೆ ನೀಡಿರುವುದಾಗಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪ್ರಶಾಂತ್ ಚೌಬೆ ಮಾಹಿತಿ ನೀಡಿದ್ದಾರೆ.
ಕೊಲೆಯಾಗುತ್ತಿದ್ದಂತೆ ದಂಪತಿ ಮಗಳು ಹಾಗೂ ಆಕೆಯ ಸ್ನೇಹಿತ ತಲೆಮರೆಸಿಕೊಂಡಿದ್ದು, ಇಬ್ಬರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ತಿಂಗಳ ಹಿಂದಷ್ಟೆ ಮಗಳ ಸ್ನೇಹಿತನ ಕುರಿತು ಮನೆಯಲ್ಲಿ ಜಗಳವಾಗಿತ್ತು ಎಂಬ ಸಂಗತಿಯೂ ತಿಳಿದುಬಂದಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ತನಿಖೆ ಮುಂದುವರೆಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.












Click it and Unblock the Notifications