ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಮುಸ್ಲಿಮರ ಬೆಂಬಲ : ಕಾಂಗ್ರೆಸ್ ಮುಖಂಡ
ಭೋಪಾಲ್, ನವೆಂಬರ್ 23: ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಲು ಮುಸ್ಲಿಮರಿಂದ ಯಾವುದೇ ರೀತಿಯಲ್ಲಿ ವಿರೋಧವಿಲ್ಲ.ಸ್ಥಳೀಯರಿಗೆ ವಿವಾದ ಬೇಕಿಲ್ಲ ಎಂದು ರಾಮಮಂದಿರ ಪರ ನಟ ಕಮ್ ಕಾಂಗ್ರೆಸ್ ಮುಖಂಡ ರಾಜ್ ಬಬ್ಬರ್ ಹೇಳಿದ್ದಾರೆ.
ಪಂಚ ರಾಜ್ಯಗಳ ಚುನಾವಣೆ ಸಂದರ್ಭದಲ್ಲಿ ಆಯೋಧ್ಯೆ ವಿವಾದ, ರಾಮ ಮಂದಿರ ನಿರ್ಮಾಣ ಪ್ರಮುಖ ವಿಷಯವಾಗಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರಿಗೆ ಚುನಾವಣೆ ಪ್ರಚಾರದಲ್ಲಿ ಮತದಾರರನ್ನು ಓಲೈಸಲು ಸಿಕ್ಕಿರುವ ಪ್ರಮುಖ ಆಸ್ತ್ರವಾಗಿ ಪರಿಣಮಿಸಿದೆ.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಕಾಂಗ್ರೆಸ್ಸಿನಿಂದ ವಿರೋಧವಲ್ಲ, ಸ್ಥಳೀಯ ಮುಸ್ಲಿಮರಂತೂ ಎಂದಿಗೂ ವಿರೋಧಿಸಿಲ್ಲ ಎಂದು ಹೇಳುವ ಮೂಲಕ ಬಿಜೆಪಿಗೆ ರಾಜ್ ಬಬ್ಬರ್ ಸಕತ್ ಆಗಿ ಟಾಂಗ್ ಕೊಟ್ಟಿದ್ದಾರೆ. ಕಾಂಗ್ರೆಸ್ ಪಕ್ಶವು ಹಿಂದೂಗಳನ್ನು ಕಡೆಗಣಿಸುತ್ತಿದೆ ಎಂಬ ಆರೋಪವನ್ನು ತಳ್ಳಿ ಹಾಕಲು ರಾಜ್ ಬಬ್ಬರ್ ಅವರ ಹೇಳಿಕೆ ಸಾಕು ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ರಾಮಮಂದಿರ ನಿರ್ಮಾಣ ಕುರಿತಂತೆ ಪ್ರಕರಣ ಇನ್ನೂ ಸುಪ್ರೀಂ ಕೋರ್ಟ್ ನಲ್ಲಿದೆ. ಈ ಬಗ್ಗೆ ಕೋರ್ಟ್ ನಿರ್ಣಯಕ್ಕೆ ಕಾಯೋಣ. ಆದರೆ, ಬಿಜೆಪಿ ಮಾತ್ರ ಬಾರಿ ಚುನಾವಣೆ ಎದುರಾದಾಗ ರಾಮಮಂದಿರ ವಿಷಯವನ್ನು ಮುಂದಿಟ್ಟುಕೊಂಡು ಜನರನ್ನು ಮರಳು ಮಾಡಿ, ಮತ ಗಳಿಸಲು ಯತ್ನಿಸುತ್ತದೆ. ರಾಮನೆಡೆಗೆ ಎಂದಿಗೂ ಬಿಜೆಪಿ ವಿಶೇಷ ಭಾವನೆ ಹೊಂದಿರಲಿಲ್ಲ. ಚುನಾವಣೆ ಗೆಲ್ಲಲು ರಾಮ, ರಾಮಮಂದಿರದ ವಿವಾದವನ್ನು ಬಳಸಿಕೊಳ್ಳುತ್ತಿದೆ ಎಂದು ರಾಜ್ ಬಬ್ಬರ್ ಆರೋಪಿಸಿದ್ದಾರೆ.













Click it and Unblock the Notifications