ಬ್ರಾಹ್ಮಣರ ಬಗ್ಗೆ ಅವಹೇಳನ: ಮ.ಪ್ರ. ಬಿಜೆಪಿ ನಾಯಕ ಉಚ್ಛಾಟನೆ
ಭೋಪಾಲ್, ಆಗಸ್ಟ್ 21: ಬ್ರಾಹ್ಮಣ ಸಮುದಾಯದವರ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದ ಮಧ್ಯಪ್ರದೇಶ ಬಿಜೆಪಿ ನಾಯಕ ಪ್ರೀತಮ್ ಸಿಂಗ್ ಲೋಧಿ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ಭಾನುವಾರ ಬೆಳಗ್ಗೆ ಲೋಧಿ ಅವರನ್ನು ಬಿಜೆಪಿ ಮುಖ್ಯ ಕಚೇರಿಗೆ ಕರೆಸಿ ವಿಚಾರಣೆ ಮಾಡಲಾಗಿತ್ತು. ಅದಾದ ಬಳಿಕ ಪಕ್ಷದ ಅವರ ಪ್ರಾಥಮಿಕ ಸದಸ್ಯತ್ವ ರದ್ದು ಮಾಡಲಾಗಿದೆ.
ಆಗಸ್ಟ್ 17, ಬುಧವಾರ ರಾಣಿ ಆವಂತಿಬಾಯಿ ಲೋಧಿ ಜಯಂತಿಯಂದು ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಪ್ರೀತಮ್ ಸಿಂಗ್ ಲೋಧಿ, ಬ್ರಾಹ್ಮಣರನ್ನು ಜರಿದಿದ್ದರು. ಬ್ರಾಹ್ಮಣರು ಧರ್ಮದ ಹೆಸರಿನಲ್ಲಿ ಜನರನ್ನು ಮೂರ್ಖರನ್ನಾಗಿಸುತ್ತಿದ್ದಾರೆ, ಕಿರುಕುಳ ನೀಡುತ್ತಿದ್ದಾರೆ ಎಂದು ಟೀಕಿಸಿದ್ದರು.
ಅವರ ಆ ಹೇಳಿಕೆ ಇರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ದೊಡ್ಡದಾಗಿ ಹರಿದಾಡಿತು. ಅದಾದ ಬಳಿಕ ಬಿಜೆಪಿ ಯುವ ಘಟಕದ ಮುಖಂಡ ಪ್ರವೀಣ್ ಮಿಶ್ರಾ ಪ್ರೀತಮ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಜನರ ಮಧ್ಯೆ ದ್ವೇಷ ಹರಡುತ್ತಿದ್ದಾರೆ ಎಂದು ಪ್ರೀತಮ್ ಸಿಂಗ್ ಲೋಧಿ ವಿರುದ್ಧ ಪ್ರವೀಣ್ ಮಿಶ್ರಾ ತಮ್ಮ ದೂರಿನಲ್ಲಿ ಆರೋಪ ಮಾಡಿದ್ದರು.

ಯಾರು ಪ್ರೀತಮ್ ಲೋಧಿ?
62 ವರ್ಷದ ಪ್ರೀತಮ್ ಸಿಂಗ್ ಲೋಧಿ ಗ್ವಾಲಿಯರ್ ಮತ್ತು ಚಂಬಲ್ ಪ್ರದೇಶದಲ್ಲಿ ಪ್ರಭಾವಿ ನಾಯಕ ಎನಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಉಮಾ ಭಾರತಿ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ಪ್ರೀತಮ್ ಲೋಧಿ 2013 ಮತ್ತು 2018ರಲ್ಲಿ ಪಿಚ್ಚೋರೆ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋಲನುಭವಿಸಿದ್ದರು. ಆದರೆ 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಪ್ರಬಲ ಅಭ್ಯರ್ಥಿ ಕಕ್ಕಾಜು ವಿರುದ್ಧ ಕೇವಲ 2500 ಮತಗಳ ಅಂತರದಿಂದ ಸೋತಿದ್ದರು.
ಪ್ರೀತಮ್ ಸಿಂಗ್ ಲೋಧಿ ವಿರುದ್ಧ 37 ಪ್ರಕರಣಗಳು ಈವರೆಗೆ ದಾಖಲಾಗಿವೆ. ಇದರಲ್ಲಿ ಎರಡು ಕೊಲೆ ಪ್ರಕರಣ ಹಾಗೂ ನಾಲ್ಕು ಕೊಲೆಯತ್ನ ಪ್ರಕರಣಗಳು ಸೇರಿವೆ. ಆದರೆ, ಪ್ರೀತಮ್ ಸಿಂಗ್ ಲೋಧಿ ಚುನಾವಣೆಗಳಲ್ಲಿ ಸೋಲನುಭವಿಸಿದರೂ, ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿ ಎನಿಸಿದರೂ ಗ್ವಾಲಿಯರ್ ಮತ್ತು ಚಂಬಲ್ ಪ್ರದೇಶಕ್ಕೆ ಸೇರಿದ ಶಿವಪುರಿ ಜಿಲ್ಲೆಯಲ್ಲಿ ಬಹಳಷ್ಟು ಪ್ರಭಾವಿ ಹೊಂದಿರುವ ನಾಯಕ ಎಂದು ಪರಿಗಣಿಸಲಾಗಿದೆ.
ಬೇರೆಯವರ ದುಡ್ಡಿನಲ್ಲಿ ಬ್ರಾಹ್ಮಣರ ಬೆಳವಣಿಗೆ:
ಶಿವಪುರಿಯಲ್ಲಿ ಆಗಸ್ಟ್ 17ರಂದು ನಡೆದ ಕಾರ್ಯಕ್ರಮದಲ್ಲಿ ಪ್ರೀತಮ್ ಸಿಂಗ್ ಲೋಧಿ ಬ್ರಾಹ್ಮಣರ ವಿರುದ್ಧ ಇನ್ನೂ ಕೆಲ ಹೇಳಿಕೆಗಳನ್ನು ನೀಡಿದ್ದರು. ಜನರ ಹಣ ಮತ್ತು ಸಂಪನ್ಮೂಲ ಬಳಸಿ ಬ್ರಾಹ್ಮಣರು ಅಭಿವೃದ್ಧಿ ಹೊಂದಿದ್ದಾರೆ ಎಂದು ಲೋಧಿ ಟೀಕಿಸಿದ್ದರು.

"ಒಳ್ಳೆಯ ಕುಟುಂಬದ ಸುಂದರ ಮಹಿಳೆಯರನ್ನು ಕಂಡರೆ, ಬ್ರಾಹ್ಮಣರಿಗೆ ಆ ಮಹಿಳೆಯರ ಮನೆಗಳಲ್ಲಿ ಊಟ ಮಾಡಬಯಸುತ್ತಾರೆ. ತರುಣೆಯರನ್ನು ಮುಂದಿನ ಸಾಲಿನಲ್ಲಿ ಕೂರಿಸಬೇಕೆನ್ನುತ್ತಾರೆ. ಹಿರಿಯ ಮಹಿಳೆಯರನ್ನು ಹಿಂದಿನ ಸಾಲಿನಲ್ಲಿ ಕೂರಿಸುತ್ತಾರೆ" ಎಂದು ಪ್ರೀತಮ್ ಸಿಂಗ್ ಲೇವಡಿ ಮಾಡಿದ್ದರು.
ಪ್ರತಿಕ್ರಿಯೆ:
ಮಧ್ಯಪ್ರದೇಶದ ಪ್ರಧಾನ ಕಾರ್ಯದರ್ಶಿ ಭಗವಾನ್ ದಾಸ್ ಸಬ್ನಾನಿ ಅವರು ಪ್ರೀತಮ್ ಲೋಧಿ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ್ದು, "ಅವರು ಪಕ್ಷದ ಅಭಿಪ್ರಾಯಕ್ಕೆ ವಿರುದ್ಧವಾಗಿ ಒಂದು ಸಮುದಾಯದ ವಿರುದ್ಧ ಹೇಳಿಕೆ ನೀಡಿದ್ದಾರೆ. ಅವರ ಅನಿಸಿಕೆಯನ್ನು ಒಪ್ಪಲು ಸಾಧ್ಯವಿಲ್ಲ. ಲೋಧಿಯನ್ನು ಕರೆಸಿ ನೋಟೀಸ್ ಕೊಡಲಾಯಿತು. ಅವರು ಲಿಖಿತ ಕ್ಷಮಾಪಣೆ ಬರೆದುಕೊಟ್ಟಿದ್ದಾರೆ. ಆದರೆ, ಪಕ್ಷಕ್ಕೆ ಅದು ತೃಪ್ತಿ ತಂದಿಲ್ಲ. ಅವರನ್ನು ಆರು ವರ್ಷ ಕಾಲ ಪ್ರಾಥಮಿಕ ಸದಸ್ಯತ್ವದಿಂದ ತೆಗೆಯಲಾಗಿದೆ" ಎಂದು ತಿಳಿಸಿದ್ದಾರೆ.
ಇನ್ನೊಂದೆಡೆ, ಪ್ರೀತಮ್ ಸಿಂಗ್ ಲೋಧಿ ನೀಡಿದ ಹೇಳಿಕೆ ಬಗ್ಗೆ ಕಾಂಗ್ರೆಸ್ ಪ್ರತಿಕ್ರಿಯಿಸಿದ್ದು, ಬ್ರಾಹ್ಮಣ ಹಾಗೂ ಇತರ ಸಾಮಾನ್ಯ ವರ್ಗದ ಸಮುದಾಯಗಳ ವಿರುದ್ಧ ಬಿಜೆಪಿ ವ್ಯವಸ್ಥಿತ ರೀತಿಯಲ್ಲಿ ಪಿತೂರಿ ನಡೆಸುತ್ತಿದೆ ಎಂದು ಆರೋಪಿಸಿದೆ.
ಬ್ರಾಹ್ಮಣ ಹಾಗು ಇತರ ಸಾಮಾನ್ಯ ವರ್ಗದ ಸಮುದಾಯಗಳು ಬಿಜೆಪಿಯ ಸಾಂಪ್ರದಾಯಿಕ ಬೆಂಬಲಿಗರೆಂಬುದು ಹೌದು. ಆದರೆ, ಉತ್ತರ ಪ್ರದೇಶದಲ್ಲಿ ಬ್ರಾಹ್ಮಣ ಸಮುಧಾಯದವರು ಬಿಜೆಪಿ ವಿರುದ್ಧ ಇತ್ತೀಚೆಗೆ ಮುನಿಸಿಕೊಂಡಿದ್ದು ಪಕ್ಷಕ್ಕೆ ಮುಜುಗರ ತಂದಿದೆ. ಇಂಥ ಸಂದರ್ಭದಲ್ಲಿ ತನ್ನ ಸಾಂಪ್ರದಾಯಿಕ ಹಾಗು ನಿಷ್ಠಾವಂತ ಮತದಾರರನ್ನು ಕಳೆದುಕೊಂಡರೆ ಬಿಜೆಪಿಗೆ ಮರ್ಮಾಘಾತವಾದಂತೆಯೇ.
(ಒನ್ಇಂಡಿಯಾ ಸುದ್ದಿ)











Click it and Unblock the Notifications