ನಾಪತ್ತೆಯಾಗಿದ್ದ ಪೊಲೀಸ್ ಅಧಿಕಾರಿ ಪತ್ತೆಯಾಗಿದ್ದು ಭಿಕ್ಷುಕನಾಗಿ: ಸಿನಿಮೀಯ ಘಟನೆ
ಗ್ವಾಲಿಯರ್, ನವೆಂಬರ್ 16: ಇಂತಹ ಘಟನೆಗಳನ್ನು ಸಿನಿಮಾಗಳಲ್ಲಿ ಸಾಮಾನ್ಯವಾಗಿ ನೋಡಿರುತ್ತೀರಿ. ಎಂದೋ ಕಾಣೆಯಾಗಿದ್ದ ವ್ಯಕ್ತಿ ಮತ್ತೊಂದು ರೂಪದಲ್ಲಿ ಸಿಗುವುದು ಸಿನಿಮಾ ಮತ್ತು ಕಥೆಗಳ ಕಲ್ಪನೆಗಳಲ್ಲಿ ಮಾತ್ರವಲ್ಲ, ನಿಜ ಜೀವನದಲ್ಲಿಯೂ ನಡೆಯುತ್ತದೆ. ಇದಕ್ಕೆ ಉದಾಹರಣೆ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆದ ಈ ಘಟನೆ.
ಸುಮಾರು 15 ವರ್ಷಗಳ ಹಿಂದೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದ ಪೊಲೀಸ್ ಅಧಿಕಾರಿಯೊಬ್ಬರನ್ನು ಅವರ ಮಾಜಿ ಸಹೋದ್ಯೋಗಿಗಳು ಪತ್ತೆಹಚ್ಚಿದ್ದಾರೆ. ಅವರು ಹಾಗೆ ಪತ್ತೆಯಾಗಿರುವುದು ಫುಟ್‌ಪಾತ್‌ನಲ್ಲಿ ಭಿಕ್ಷೆ ಬೇಡುವ ಸ್ಥಿತಿಯಲ್ಲಿ! ಅವರ ಮಾನಸಿಕ ಸ್ಥಿತಿಯೂ ಸಮತೋಲನ ಕಳೆದುಕೊಂಡಿದೆ.
ಕಳೆದ ಕೆಲವು ದಿನಗಳ ಹಿಂದೆ ಮಧ್ಯಪ್ರದೇಶದಲ್ಲಿ ನಡೆದ ಉಪ ಚುನಾವಣೆಯ ಕರ್ತವ್ಯದಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿ ರತ್ನೇಶ್ ಸಿಂಗ್ ತೋಮರ್ ಮತ್ತು ಅವರ ಸಹೋದ್ಯೋಗಿ ವಿಜಯ್ ಭಡೋರಿಯಾ ನಿರತರಾಗಿದ್ದರು. ನವೆಂಬರ್ 10ರಂದು ಮತ ಎಣಿಕೆ ದಿನ ಅವರು ಝಾನ್ಸಿ ರಸ್ತೆಯ ಮೂಲಕ ಹಾದುಹೋಗುವಾಗ ಪಾದಚಾರಿ ಮಾರ್ಗದಲ್ಲಿ ಚಳಿಯಿಂದ ನಡುಗುತ್ತಾ ಕುಳಿತಿದ್ದ ಮಧ್ಯವಯಸ್ಕ ಭಿಕ್ಷುಕನನ್ನು ಕಂಡಿದ್ದರು.
ಆ ಭಿಕ್ಷುಕನಿಗೆ ಸಹಾಯ ಮಾಡುವ ಉದ್ದೇಶದಿಂದ ಇಬ್ಬರೂ ಅಧಿಕಾರಿಗಳು ವಾಹನ ನಿಲ್ಲಿಸಿದರು. ರತ್ನೇಶ್ ಅವರು ಭಿಕ್ಷುಕನಿಗೆ ತಮ್ಮ ಶೂಗಳನ್ನು ನೀಡಿದರೆ, ವಿಜಯ್ ಜಾಕೆಟ್ ಬಿಚ್ಚಿ ಕೊಟ್ಟರು. ಅಲ್ಲದೆ ಭಿಕ್ಷುಕನೊಂದಿಗೆ ಸ್ವಲ್ಪ ಕಾಲ ಮಾತನಾಡಿದರು.

ಆಗ ಪೊಲೀಸ್, ಈಗ ಭಿಕ್ಷುಕ
ಆದರೆ ಈ ಮಾತುಕತೆಯ ವೇಳೆ ಇಡೀ ಸನ್ನಿವೇಶವೇ ನಾಟಕೀಯ ತಿರುವು ಪಡೆದುಕೊಂಡಿತು. ಮಾತನಾಡುವ ವೇಳೆ ಈ ಪೊಲೀಸ್ ಅಧಿಕಾರಿಗಳಿಗೆ ಆ ಭಿಕ್ಷುಕ ತಮ್ಮ ಮಾಜಿ ಸಹೋದ್ಯೋಗಿ ಮನೀಶ್ ಮಿಶ್ರಾ ಎಂದು ಗೊತ್ತಾಯಿತು.
ಮಿಶ್ರಾ ಅವರು ಪೊಲೀಸ್ ಅಧಿಕಾರಿಯಾಗಿದ್ದು, ಉತ್ತಮ ಶೂಟರ್ ಕೂಡ ಆಗಿದ್ದರು. ಅವರು 1999ರಲ್ಲಿ ಪೊಲೀಸ್ ಸೇವೆಗೆ ಸೇರಿಕೊಂಡಿದ್ದರು. ರಾಜ್ಯದ ಅನೇಕ ಕಡೆಗಳಲ್ಲಿ ಠಾಣಾ ಉಸ್ತುವಾರಿಯಾಗಿ ಸಹ ಕೆಲಸ ಮಾಡಿದ್ದರು. 2005ರಲ್ಲಿ ಸೇವೆಯ ನಡುವೆಯೇ ಅವರು ತಮ್ಮ ಮಾನಸಿಕ ಸ್ಥಿಮಿತತೆ ಕಳೆದುಕೊಂಡು ಹಠಾತ್ತಾಗಿ ನಾಪತ್ತೆಯಾದರು.

ಫುಟ್‌ಪಾತ್‌ನಲ್ಲಿ ಭಿಕ್ಷೆ
ಅನೇಕ ಪ್ರಯತ್ನಗಳನ್ನು ನಡೆಸಿದ ಬಳಿಕವೂ ಮಿಶ್ರಾ ಅವರನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಮುಖ್ಯವಾಗಿ ಅವರ ಪತ್ನಿ ಅವರನ್ನು ತೊರೆದು ಹೋಗಿದ್ದರು. ಈಗಿನ ಮಾಹಿತಿಗಳ ಪ್ರಕಾರ ಮಿಶ್ರಾ ಅವರು ಫುಟ್‌ಪಾತ್‌ನಲ್ಲಿ ಭಿಕ್ಷೆ ಬೇಡುತ್ತಾ ಸುಮಾರು 15 ವರ್ಷಗಳಿಂದ ಜೀವನ ಸಾಗಿಸುತ್ತಿದ್ದಾರೆ. ಅವರು ಸುದೀರ್ಘ ಕಾಲದಿಂದ ಕರ್ತವ್ಯಕ್ಕೆ ಹಾಜರಾಗದ ಕಾರಣ ನಿಯಮಗಳಂತೆ ಕೆಲಸದಿಂದ ಕಿತ್ತುಹಾಕಲಾಗಿತ್ತು.

ಸಾಮಾಜಿಕ ಸಂಘಟನ ನೆರವು
ರತ್ನೇಶ್ ಮತ್ತು ವಿಜಯ್ ಇಬ್ಬರೂ ಮಿಶ್ರಾ ಅವರಿಗೆ ಹಳೆಯ ದಿನಗಳನ್ನು ನೆನಪಿಸಿ ತಮ್ಮೊಂದಿಗೆ ಕರೆದುಕೊಂಡು ಹೋಗಲು ಪ್ರಯತ್ನಿಸಿದರು. ಆದರೆ ಅದಕ್ಕೆ ಪ್ರತಿರೋಧ ಒಡ್ಡಿದ ಮಿಶ್ರಾ ಅವರೊಂದಿಗೆ ಬರಲು ನಿರಾಕರಿಸಿದರು. ಕೊನೆಗೆ ಅವರನ್ನು ಸಾಮಾಜಿಕ ಕಲ್ಯಾಣ ಸಂಘಟನೆಯೊಂದರ ವಶಕ್ಕೆ ಒಪ್ಪಿಸಿದ್ದು, ಅದು ಅವರ ಆರೈಕೆ ಮಾಡುತ್ತಿದೆ.

ಗ್ರಾಮದಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದರು
ಮಿಶ್ರಾ ಅವರ ಕುಟುಂಬದಲ್ಲಿ ಅವರ ಸಹೋದರಿ ಸೇರಿದಂತೆ ಅನೇಕರು ಪೊಲೀಸ್ ಇಲಾಖೆಯಲ್ಲಿದ್ದಾರೆ. ಅವರ ಪತ್ನಿ ಕೂಡ ನ್ಯಾಯಾಂಗ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಮಾನಸಿಕ ಸ್ವಾಸ್ಥ್ಯ ಕಳೆದುಕೊಂಡಿದ್ದ ಮಿಶ್ರಾ ಅವರನ್ನು ಕುಟುಂಬದವರು ತಮ್ಮ ಮೂಲ ಗ್ರಾಮಕ್ಕೆ ಕರೆದೊಯ್ದು ಅಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದರು. ಆದರೆ 8-10 ವರ್ಷಗಳ ಹಿಂದೆ ಅವರು ಅಲ್ಲಿಂದ ತಪ್ಪಿಸಿಕೊಂಡಿರುವ ಮಾಹಿತಿ ಕುಟುಂದವರಿಗೆ ಸಿಕ್ಕಿತ್ತು. ಅನೇಕ ಬಾರಿ ಹೀಗೆ ಅಲ್ಲಿಂದ ಓಡಿಹೋಗಿದ್ದ ಮಿಶ್ರಾ, ಕೊನೆಗೊಮ್ಮೆ ನಾಪತ್ತೆಯಾಗಿದ್ದರು.

ಅಧಿಕಾರಿಯನ್ನು ಗುರುತಿಸಿದ ಮಿಶ್ರಾ
'ತುಂಬಾ ಹೊತ್ತು ಮಾತನಾಡಿಸಲು ಪ್ರಯತ್ನಿಸಿದರೂ ಮಿಶ್ರಾ ಅವರು ಮಾತನಾಡಿರಲಿಲ್ಲ. ಕೊನೆಗೆ ಅವರನ್ನು ಮಾತನಾಡಿಸುವ ಪ್ರಯತ್ನದಲ್ಲಿ ಸೋತು ಅಲ್ಲಿಂದ ಹೊರಡುವ ವೇಳೆ ವಿಜಯ್ ಎಂದು ನನ್ನ ಹೆಸರು ಕರೆದರು. ಬಳಿಕ ತೋಮರ್ ಅವರ ಮೊದಲ ಹೆಸರನ್ನೂ ಹೇಳಿದರು' ಎಂದು ವಿಜಯ್ ತಿಳಿಸಿದ್ದಾರೆ.












Click it and Unblock the Notifications