'ಬ್ರಾಹ್ಮಣರು-ಬನಿಯಾಗಳು' ನನ್ನ ಎರಡು ಜೇಬಿನಲ್ಲಿದ್ದಾರೆ: ಮುರಳೀಧರ ರಾವ್ ವಿವಾದಾತ್ಮಕ ಹೇಳಿಕೆ
ಭೋಪಾಲ್, ನವೆಂಬರ್ 9: ಬಿಜೆಪಿ ಜಾತಿಗಳ ಹೆಸರಿನಲ್ಲಿ ಮತ ಕೇಳಲು ಕಾರಣವೇನು ಎಂಬ ಪ್ರಶ್ನೆಗೆ ಸೋಮವಾರ ಮಧ್ಯಪ್ರದೇಶದ ಬಿಜೆಪಿ ಉಸ್ತುವಾರಿ ಪಿ ಮುರಳೀಧರ ರಾವ್ ಅವರು ವಿವಾದಾದ್ಮಕ ಉತ್ತರ ನೀಡಿದ್ದಾರೆ. ರಾಜ್ಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಮುರಳೀಧರ್ ರಾವ್ ನೀಡಿದ ಉತ್ತರದ ವೀಡಿಯೊ ವೈರಲ್ ಆದ ನಂತರ ವಿವಾದ ಭುಗಿಲೆದ್ದಿದೆ. ಪತ್ರಿಕಾಗೋಷ್ಠಿಯಲ್ಲಿ, ಎಸ್‌ಟಿ/ಎಸ್‌ಸಿ ಮತ್ತು ಒಬಿಸಿ ಜನಸಂಖ್ಯೆಯನ್ನು ಕೇಂದ್ರೀಕರಿಸುವ ಬಿಜೆಪಿಯ ಭವಿಷ್ಯದ ಕಾರ್ಯತಂತ್ರದ ಕುರಿತು ರಾವ್ ಮಾತನಾಡಿದರು. ಇಲ್ಲಿಯವರೆಗೆ ಬ್ರಾಹ್ಮಣರು ಮತ್ತು ಬನಿಯಾಗಳ (ಮೇಲ್ವರ್ಗದ ವರ್ತಕ ಸಮುದಾಯ) ಪಕ್ಷ ಎಂದು ಕರೆಯಲಾಗುತ್ತಿದ್ದ ಬಿಜೆಪಿ ಈಗ ಎಸ್‌ಸಿ/ಎಸ್‌ಟಿ/ಒಬಿಸಿ ಪಕ್ಷವಾಗಲಿದೆಯೇ ಎಂಬ ಪ್ರಶ್ನೆಗೆ, ರಾವ್ ಅವರು ಹಿಂದಿಯಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅವರ ಕುರ್ತಾದ ಎರಡು ಪಾಕೆಟ್‌ಗಳನ್ನು ತೋರಿಸುತ್ತಾ 'ಬ್ರಾಹ್ಮಣರು' ಮತ್ತು 'ಬನಿಯಾಗಳು' ನನ್ನ ಎರಡು ಜೇಬಿನಲ್ಲಿದ್ದಾರೆಂದು ಉತ್ತರ ನೀಡಿದ್ದಾರೆ.
ಅವರ ಈ ಹೇಳಿಕೆ ವಿರುದ್ಧ ವಿಪಕ್ಷಗಳಿಂದ ಆಕ್ರೋಶ ವ್ಯಕ್ತವಾಗಿದೆ. ಮುರಳೀಧರ ವಿರುದ್ಧ ವಾಗ್ದಾಳಿ ನಡೆಸಿದ ಕಮಲ್ ನಾಥ್, "ಸಬ್ಕಾ ಸಾಥ್ ಸಬ್ಕಾ ವಿಕಾಸ್ ಎಂಬ ಘೋಷಣೆಯನ್ನು ನೀಡುವ ಬಿಜೆಪಿಯ ಮಧ್ಯಪ್ರದೇಶದ ಉಸ್ತುವಾರಿ, ಈಗ ನಾವು ಒಂದು ಜೇಬಿನಲ್ಲಿ ಬ್ರಾಹ್ಮಣರು ಮತ್ತು ಒಂದು ಕಿಸೆಯಲ್ಲಿ ಬನಿಯಾ ಎಂದು ಹೇಳುತ್ತಿದ್ದಾರೆ. ಇದು ಈ ಸಮುದಾಯಗಳಿಗೆ ಮಾಡಿದ ದೊಡ್ಡ ಅವಮಾನ. ಮತದಾರರು ಪಕ್ಷದ ಆಸ್ತಿಯಾಗಬೇಕು. ಆದರೆ ಬಿಜೆಪಿ ಜೇಬಿನಲ್ಲಿದ್ದಾರೆ ಎಂದು ಹೇಳುತ್ತದೆ. ಬಿಜೆಪಿಯನ್ನು ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ ಸಮುದಾಯಗಳಿಗೆ ಇದು ಯಾವ ರೀತಿಯ ಗೌರವವಾಗಿದೆ. ಬಿಜೆಪಿ ನಾಯಕರು ಅಧಿಕಾರ ಮತ್ತು ಅಹಂಕಾರದ ಅಮಲಿನಲ್ಲಿದ್ದಾರೆ. ಇದು ಇಡೀ ಬ್ರಾಹ್ಮಣ ಮತ್ತು ಬನಿಯಾ ಸಮುದಾಯಕ್ಕೆ ಮಾಡಿದ ಅವಮಾನವಾಗಿದ್ದು, ಬಿಜೆಪಿ ನಾಯಕತ್ವವು ತಕ್ಷಣವೇ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
"ಎಲ್ಲರನ್ನು ಜೊತೆಯಲ್ಲಿ ಕರೆದೊಯ್ಯುವ ಘೋಷಣೆಯನ್ನು ನೀಡುವ ಬಿಜೆಪಿ ಜನರನ್ನು ಈಗ ನಿರ್ದಿಷ್ಟ ಗುಂಪುಗಳನ್ನು ಕೇಂದ್ರೀಕರಿಸುವ ಮತ್ತು ಎರಡು ಸಮುದಾಯಗಳನ್ನು ಅವಮಾನಿಸುವ ಮಾತನಾಡುತ್ತಿದ್ದಾರೆ. ಇದು ಯಾವ ರೀತಿಯ ಮನಸ್ಥಿತಿ. ಅಧಿಕಾರದ ಹಸಿವಿನಲ್ಲಿ ಬಿಜೆಪಿ ಯಾವ ಹಂತಕ್ಕೂ ಹೋಗಬಹುದು. ಅದರ ನೀತಿಗಳು, ವರ್ತನೆ ಮತ್ತು ತತ್ವಶಾಸ್ತ್ರವು ಅಧಿಕಾರಕ್ಕೆ ಸೀಮಿತವಾಗಿದೆ" ಎಂದು ಕಮಲ್ ನಾಥ್ ದೂರಿದ್ದಾರೆ.
ವೀಡಿಯೊ ಹೇಳಿಕೆಯ ಮೂಲಕ ಪ್ರತಿಕ್ರಿಯಿಸಿದ ಮುರಳೀಧರ್ ರಾವ್, "ಕಮಲ್ ನಾಥ್ ಅವರ ಟ್ವೀಟ್ ಅನ್ನು ನಾನು ನೋಡಿದ್ದೇನೆ. ಕಾಂಗ್ರೆಸ್ ಮತ್ತು ಅದರ ನಾಯಕರು ದಶಕಗಳಿಂದ ದೇಶದ ಇತಿಹಾಸವನ್ನು ಅಲ್ಲಗಳೆಯಲು ಮತ್ತು ಸುಳ್ಳುಗಳನ್ನು ಮಾತನಾಡಲು, ಜನರನ್ನು ದಾರಿ ತಪ್ಪಿಸುವ ಹಾಗೂ ಅಧಿಕಾರದಲ್ಲಿ ಉಳಿಯಲು ಸತ್ಯವನ್ನು ತಿರುಚಲು ಪ್ರಯತ್ನಿಸುತ್ತಲೇ ಇದ್ದಾರೆ. ಈ ರೀತಿಯಲ್ಲಿ ದೇಶ ಮತ್ತು ಜನರಿಗೆ ದ್ರೋಹ ಬಗೆದಿರುವಾಗ ಅವರು ನಮ್ಮ ಬಗ್ಗೆ ಚಿಂತಿಸುತ್ತಿದ್ದಾರೆ. ಬಿಜೆಪಿ ಪರವಾಗಿ ನಾನು ಹೇಳಿದ್ದು ಏನೆಂದರೆ, ನಾವು ಎಲ್ಲ ಸಮುದಾಯಗಳ ಮತ್ತು ಎಲ್ಲರ ಅಭಿವೃದ್ಧಿಗಾಗಿ ನಿಲ್ಲುತ್ತೇವೆ. ಮೋದಿ ಅವರ ನಿರ್ದೇಶನದಂತೆ ಪಕ್ಷವು ಎಲ್ಲರ ನಂಬಿಕೆಯೊಂದಿಗೆ ಮುನ್ನಡೆಯುತ್ತಿದೆ" ಎಂದು ವಾಗ್ದಾಳಿ ಮಾಡಿದರು.
सबका साथ - सबका विकास का नारा देने वाली भाजपा के मध्यप्रदेश के प्रभारी कह रहे है कि हमारी एक जेब में बनिया है, एक जेब में ब्राह्मण है।
— Kamal Nath (@OfficeOfKNath) November 8, 2021
यह तो इन वर्गों का घोर अपमान है, भाजपा के मुताबिक़ ये वर्ग उनकी बपौती है, उनकी जेब में है।
"ನಾವು ಹಲವಾರು ವರ್ಷಗಳಿಂದ ಇದನ್ನು ಅನುಸರಿಸುತ್ತಿದ್ದೇವೆ ಮತ್ತು ಆದ್ದರಿಂದ ಜನರು ನಮ್ಮನ್ನು ಗೌರವಿಸುತ್ತಾರೆ. ನಮ್ಮನ್ನು ಅಧಿಕಾರಕ್ಕೆ ತರಲು ಪದೇ ಪದೇ ಚುನಾವಣಾ ಆದೇಶಗಳನ್ನು ನೀಡುತ್ತಾರೆ. ಬ್ರಾಹ್ಮಣ ಅಥವಾ ಬನಿಯಾ ಅಥವಾ ಜಂಜಾಟಿ (ಬುಡಕಟ್ಟು) ಆಗಿರಲಿ, ಅವರೆಲ್ಲರೂ ಭಾರತೀಯರು ಮತ್ತು ಭಾರತದ ಮೇಲೆ ಸಮಾನವಾಗಿ ಹಕ್ಕನ್ನು ಹೊಂದಿದ್ದಾರೆ. ಭಾರತದ ಅಭಿವೃದ್ಧಿ ಪಯಣದ ಬೇರ್ಪಡಿಸಲಾಗದ ಭಾಗವಾಗಿದೆ. ನಾವು ಇದನ್ನು ಯಾವಾಗಲೂ ಹೇಳುತ್ತಾ ಬಂದಿದ್ದೇವೆ. ನಮ್ಮ ಮಾತಿನಲ್ಲಿ ಯಾರ ವಿರುದ್ಧವೂ ತಾರತಮ್ಯ ಮಾಡಿಲ್ಲ. ಭವಿಷ್ಯದಲ್ಲಿ ನಾವು ಇದನ್ನು ಎಂದಿಗೂ ಮಾಡುವುದಿಲ್ಲ. ಕಾಂಗ್ರೆಸ್ ದ್ರೋಹ ಬಗೆದು ಎಲ್ಲರನ್ನು ವಿಭಜಿಸಿದೆ. ಆದಿವಾಸಿಗಳು ವಂಚಿತರಾಗಿ ಉಳಿಯಲು ಕಾರಣ ಕಾಂಗ್ರೆಸ್. ದಶಕಗಳಿಂದ ಅವರಿಗೆ ಅನ್ಯಾಯ ಮಾಡುತ್ತಿದೆ. ಆದ್ದರಿಂದ ಕಮಲ್ ನಾಥ್ ಜೀ, ಇದನ್ನು (ವಿಭಜಕ ಕೃತ್ಯ) ನಿಲ್ಲಿಸಿ, ಇದು ಕಾಂಗ್ರೆಸ್ ಅನ್ನು ಮುಂದಕ್ಕೆ ಕೊಂಡೊಯ್ಯುವ ಮಾರ್ಗವಲ್ಲ" ಎಂದು ಹರಿಹಾಯ್ದಿದ್ದಾರೆ.