ಆಗ ಸವಾಲು ಗೆದ್ದಿದ್ದರೆ 1 ತಿಂಗಳು ಗೇಟ್ ಕಾಯುತ್ತಿದ್ದೆ: ಜಮೀರ್ ಅಹ್ಮದ್ ತಿರುಗೇಟು
ಬೆಂಗಳೂರು, ಜುಲೈ 26: ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದರೆ ಅವರ ಮನೆಯ ಕಾವಲು ಕಾಯುವುದಾಗಿ ಹೇಳಿಕೆ ನೀಡಿದ್ದ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಅವರನ್ನು ಈಗ ಬಿಜೆಪಿ ಅಭಿಮಾನಿಗಳು ಟ್ರೋಲ್ ಮಾಡುತ್ತಿದ್ದಾರೆ. ಯಡಿಯೂರಪ್ಪ ಅವರು ಮತ್ತೆ ಮುಖ್ಯಮಂತ್ರಿಯಾಗುತ್ತಿದ್ದಾರೆ, ಜಮೀರ್ ಅಹ್ಮದ್ ಎಲ್ಲಿದ್ದಾರೆ? ಅವರೀಗ ಮನೆ ಬಾಗಿಲು ಕಾಯಲಿ ಎಂದು ಮೀಮ್‌ಗಳನ್ನು ಸೃಷ್ಟಿಸಿ ಅಣಕಿಸುತ್ತಿದ್ದಾರೆ.
ತಮ್ಮನ್ನು ಟೀಕಿಸುತ್ತಿರುವವರಿಗೆ ಜಮೀರ್ ಅಹ್ಮದ್ ತೀಕ್ಷ್ಣ ತಿರುಗೇಟು ನೀಡಿದ್ದಾರೆ. 'ನನ್ನ ಸವಾಲು ಅರ್ಥ ಮಾಡಿಕೊಳ್ಳದೆಯೇ ಈಗ ಹಳೆಯ ವಿಚಾರವನ್ನು ಕೆದಕುತ್ತಿದ್ದೀರಿ' ಎಂದು ಟ್ರೋಲ್ ಮಾಡುವವರ ವಿರುದ್ಧ ಕಿಡಿಕಾರಿದ್ದಾರೆ.
ಈ ಸವಾಲನ್ನು ಅವರಿಗೆ ನೀಡುವಾಗ ಅದಕ್ಕೆ ಸಮಯದ ಗಡುವನ್ನು ನೀಡಿದ್ದೆ. ಆದರೆ, ಆ ಕಾಲಮಿತಿಯೊಳಗೆ ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿಯಾಗಲು ಸಾಧ್ಯವಾಗಲಿಲ್ಲ. ಆಗ ಸವಾಲು ಸ್ವೀಕರಿಸುವ ಧೈರ್ಯ ಇಲ್ಲದವರು ಈಗ ಹಳೆಯ ವಿಡಿಯೋ ಹರಿಬಿಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ.
ಜತೆಗೆ ಯಡಿಯೂರಪ್ಪ ಅವರು ಈಗ ಮತ್ತೆ ಗದ್ದುಗೆಗೆ ಏರಿದರೂ ಅವರಿಗೆ ದೊರಕಿರುವ ಅಧಿಕಾರ ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ಅವರು ಭವಿಷ್ಯ ನುಡಿದಿದ್ದಾರೆ.

ನಿಮ್ಮ ಮೇಲೆ ಅನುಕಂಪ ಇದೆ
'ಮೇ 23ರೊಳಗೆ ಬಿಜೆಪಿ ಸರ್ಕಾರ ರಚಿಸಿದರೆ ಯಡಿಯೂರಪ್ಪನವರ ಮನೆ ಗೇಟ್ ಕಾಯುತ್ತೇನೆ ಎಂದು ಕುಂದಗೋಳ ಉಪಚುನಾವಣೆ ಸಂದರ್ಭದಲ್ಲಿ ಸವಾಲು ಹಾಕಿದ್ದೆ. ಆದರೆ, ನನ್ನ ಸವಾಲನ್ನು ಸ್ವೀಕರಿಸುವ ಧೈರ್ಯ ತೋರದ ಬಿಜೆಪಿ ನಾಯಕರು 2 ತಿಂಗಳ ನಂತರ ಹಳೆ ವಿಡಿಯೋವನ್ನು ಹರಿಬಿಟ್ಟು ವಿಕೃತಾನಂದ ಪಡುತ್ತಿರುವ ಬಗ್ಗೆ ನನಗೆ ಅನುಕಂಪ ಇದೆ ಎಂದು ತಮ್ಮ ಟೀಕಾಕಾರರ ಬಗ್ಗೆ ಅವರು ವ್ಯಂಗ್ಯವಾಡಿದ್ದಾರೆ.

ಒಂದು ತಿಂಗಳು ಕಾಯುತ್ತಿದ್ದೆ, ಆದರೆ...
ಮೇ 23ರೊಳಗೆ ಯಡಿಯೂರಪ್ಪನವರು ಸಿಎಂ ಆಗಬೇಕೆಂಬ ನನ್ನ ಸವಾಲನ್ನು ಸ್ವೀಕರಿಸಿ ಗೆದ್ದಿದ್ದರೆ 1 ದಿನವಲ್ಲ 1 ತಿಂಗಳು ಅವರ ಮನೆ ಗೇಟ್ ಕಾಯುತ್ತಿದ್ದೆ. ಇಷ್ಟೆಲ್ಲ ಕಸರತ್ತು ನಡೆಸಿ ಮುಖ್ಯಮಂತ್ರಿಯಾದರೂ ಎಷ್ಟು ದಿನ ಕುರ್ಚಿಯಲ್ಲಿರುತ್ತೀರಿ ಎನ್ನುವುದಕ್ಕೆ ಗ್ಯಾರಂಟಿ ಇದೆಯೇನ್ರಿ ಸಾಹೇಬರೇ! All the best! ಎಂದು ಯಡಿಯೂರಪ್ಪ ಅವರನ್ನು ಜಮೀರ್ ಲೇವಡಿ ಮಾಡಿದ್ದಾರೆ.

ನೀವೊಬ್ಬರೇ ವಚನ ಭ್ರಷ್ಟರಲ್ಲ
ಮಾನ್ಯ ಕುಮಾರಸ್ವಾಮಿಯವರೇ, ನೀವೊಬ್ಬರೇ ವಚನಭ್ರಷ್ಟರಲ್ಲ. ಮೋದಿ ಪ್ರಧಾನಿಯಾದರೆ ದೇಶ ಬಿಡುತ್ತೇನೆ ಎಂದ ದೇವೇಗೌಡರು.. ಮೋದಿ ಪ್ರಧಾನಿಯಾದರೆ ರಾಜಕೀಯ ಬಿಡುತ್ತೇನೆ ಎಂದ ರೇವಣ್ಣನವರು.. ಯಡಿಯೂರಪ್ಪ ಸಿಎಂ ಆದರೆ ವಾಚ್‌ಮ್ಯಾನ್ ಆಗುತ್ತೇನೆ ಎಂದಿದ್ದ ನಿಮ್ಮ ಶಿಷ್ಯ ಜಮೀರ್ ಇವರೆಲ್ಲರೂ ವಚನಭ್ರಷ್ಟರೇ ಎಂದು ಬಹದ್ದೂರ್ ಸತೀಶ್ ಎಂಬುವವರು ಟ್ವೀಟ್ ಮಾಡಿದ್ದಾರೆ.

ಜಮೀರ್ ಈಗಲೂ ಬದ್ಧರಾಗಿದ್ದಾರಾ?
ಜಮೀರ್ ಅಹಮದ್ ಖಾನ್ ಅವರೇ ಬಿ.ಎಸ್. ಯಡಿಯೂರಪ್ಪ ಅವರು ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿ ಆಗಲಿದ್ದಾರೆ. ನೀವು ನಿಮ್ಮ ಮಾತಿನಂತೆಯೇ ರಾಜಕೀಯ ನಿವೃತ್ತಿ ತೆಗೆದುಕೊಂಡು, ಒಂದು ದಿನ ಪೂರ್ತಿ ಯಡಿಯೂರಪ್ಪನವರ ಮನೆ ಮುಂದೆ ವಾಚ್ ಮ್ಯಾನ್ ಡ್ರೆಸ್ ಹಾಕೊಂಡ್ ಡ್ಯೂಟಿ ಮಾಡ್ತೀನಿ ಅಂದಿದ್ರಲ್ಲ ಆ ಮಾತಿಗೆ ಈಗಲೂ ಬದ್ಧರಾ? ಎಂದು ಮಹಾದೇವ್ ಎಂಬುವವರು ಪ್ರಶ್ನಿಸಿದ್ದಾರೆ.












Click it and Unblock the Notifications