ಯಶವಂತಪುರ ರೈಲ್ವೆ ನಿಲ್ದಾಣದ ಪುನರಾಭಿವೃದ್ಧಿ ಕಾಮಗಾರಿ ಆರಂಭ
ಬೆಂಗಳೂರು, ನವೆಂಬರ್ 29; ರೈಲ್ವೆ ಇಲಾಖೆ ಬೆಂಗಳೂರು ನಗರದ ಯಶವಂತಪುರ ರೈಲ್ವೆ ನಿಲ್ದಾಣದ ಪುನರಾಭಿವೃದ್ಧಿ ಕಾಮಗಾರಿ ಆರಂಭಿಸಿದೆ. ಯೋಜನೆಯ ವೆಚ್ಚ ರೂ. 380 ಕೋಟಿಯಾಗಿದೆ. ಪುನರಾಭಿವೃದ್ಧಿಗೊಂಡ ನಿಲ್ದಾಣವು ಪ್ರಯಾಣಿಕರು ಮತ್ತು ಸಾರ್ವಜನಿಕರನ್ನು ಆಕರ್ಷಿಸುವ 'ಸಿಟಿ ಸೆಂಟರ್' ಆಗಿ ಕಾರ್ಯನಿರ್ವಹಿಸಲಿದೆ ಎಂದು ರೈಲ್ವೆ ಹೇಳಿದೆ.
ಹಸಿರು ಕಟ್ಟಡದ ಪರಿಕಲ್ಪನೆಯಲ್ಲಿ ನಿರ್ಮಾಣವಾಗುವ ಈ ಕಟ್ಟಡವು ಬೆಂಗಳೂರು ನಗರದ ಒಂದು ವಿಶೇಷ ತಾಣವಾಗಿ ಹೊರಹೊಮ್ಮುತ್ತದೆ ಮತ್ತು ರೈಲು ಪ್ರಯಾಣದ ಉತ್ತಮ ಅನುಭವವನ್ನು ಜನರಿಗೆ ನೀಡಲಿದೆ ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ರೈಲ್ವೆಯನ್ನು ಕೇವಲ ಸಾರಿಗೆ ಸಾಧನವಾಗಿ ಮಾತ್ರವಲ್ಲದ ಒಂದು ರಾಷ್ಟ್ರ ನಿರ್ಮಾಣದ ಸ್ವತ್ತನ್ನಾಗಿಯೂ ಅಭಿವೃದ್ಧಿಪಡಿಸುವುದು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದೂರದೃಷ್ಟಿಯಾಗಿದೆ. ಅದಕ್ಕೆ ಅನುಗುಣವಾಗಿ ರೈಲ್ವೆ ಸಚಿವಾಲಯವು ಆಧುನಿಕ ಸೌಕರ್ಯಗಳೊಂದಿಗೆ ವಿಶ್ವ ದರ್ಜೆಯ ಟರ್ಮಿನಲ್‌ಗಳಾಗಿ ರೈಲ್ವೆ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲು ಪ್ರಾಮುಖ್ಯತೆ ನೀಡಿದೆ.

ಜೂನ್ 20ರಂದು ನರೇಂದ್ರ ಮೋದಿ ಯಶವಂತಪುರ ರೈಲು ನಿಲ್ದಾಣದ ಪುನರಾಭಿವೃದ್ಧಿಗೆ ಶಂಕುಸ್ಥಾಪನೆ ಮಾಡಿದರು. ನಂತರ ಟೆಂಡರ್ ಕರೆಯಲಾಯಿತು. ಅಸ್ತಿತ್ವದಲ್ಲಿರುವ ನೀತಿ ಮತ್ತು ಕಾರ್ಯವಿಧಾನದ ಪ್ರಕಾರ ಈಗ ಟೆಂಡರ್ ಅನ್ನು ಅಂತಿಮಗೊಳಿಸಿ ಮೆ. ಗಿರ್ಧಾರಿ ಲಾಲ್ ಕನ್ನಡಿಕ್ಷನ್ ಪ್ರೈವೇಟ್ ಲಿಮಿಟೆಡ್‌ಗೆ ಟೆಂಡರ್ ನೀಡಲಾಗಿದೆ. ಈ ಯೋಜನೆಯ ವೆಚ್ಚ ರೂ. 380 ಕೋಟಿ.
ಇಪಿಸಿ ಟೆಂಡರ್; ಈ ಟೆಂಡರ್ ಅನ್ನು ಇಂಜಿನಿಯರಿಂಗ್, ಖರೀದಿ ವ್ಯವಸ್ಥೆ ಮತ್ತು ನಿರ್ಮಾಣ ಮಾದರಿಯಲ್ಲಿ ಮಾಡಲಾಗಿದೆ. ಇದನ್ನು ಟರ್ನ್ ಕೀ ಒಪ್ಪಂದ ಎಂದೂ ಕರೆಯುತ್ತಾರೆ. ಇದರಲ್ಲಿ ಒಂದು ಏಜೆನ್ಸಿಯು ಯೋಜನೆಯನ್ನು ವಿನ್ಯಾಸಗೊಳಿಸುವ, ಸಂಗ್ರಹಿಸುವ, ನಿರ್ಮಿಸುವ ಮತ್ತು ಹಸ್ತಾಂತರಿಸುವ ಜವಾಬ್ದಾರಿಯನ್ನು ಹೊಂದಿರುತ್ತದೆ.
ಯೋಜನೆಯ ಭಾಗವಾಗಿ ಪ್ರತ್ಯೇಕವಾದ ಆಗಮನ, ನಿರ್ಗಮನ ಗೇಟ್‌ಗಳೊಂದಿಗೆ 216 ಮೀ ಅಗಲದ ಏರ್-ಕಾನ್ನೋರ್ಸ್ ಇರುತ್ತದೆ. ಪ್ಲಾಟ್‌ಫಾರ್ಮ್ ಮೇಲಿನ ಮಹಡಿಯಲ್ಲಿ ರೂಫ್ ಪ್ಲಾಜಾವು ಮಳಿಗೆಗಳು, ಫುಡ್ ಕೋರ್ಟ್, ಮನರಂಜನಾ ಕೇಂದ್ರಗಳು ಇತ್ಯಾದಿಗಳನ್ನು ಒಳಗೊಂಡಿರುತ್ತದೆ.
ನಿಲ್ದಾಣದ ಆವರಣದಲ್ಲಿ ಪ್ರಯಾಣಿಕರಿಗೆ ಸುಲಭವಾಗಿ ದಾರಿ ಹುಡುಕಲು ಸ್ಪಷ್ಟವಾಗಿ ವ್ಯಾಖ್ಯಾನಿಸಲಾದ ಎಲ್‌ಇಡಿ ಆಧಾರಿತ ಫಲಕಗಳನ್ನು ಒದಗಿಸಲಾಗುತ್ತದೆ. ಮೆಟ್ರೋ ನಿಲ್ದಾಣದ ಕಡೆಗೆ (ಪಶ್ಚಿಮ ಭಾಗ) ಹೊಸ ನಿಲ್ದಾಣದ ಕಟ್ಟಡವು 4 ಅಂತಸ್ತಿನ ಕಟ್ಟಡವಾಗಲಿದೆ.

ಪ್ಲಾಟ್‌ಫಾರ್ಮ್ 1 ರ ಕಡೆ ಬಹು ಮಹಡಿಯ (G+5 ರಚನೆ) ಕಾರ್ ಪಾರ್ಕಿಂಗ್ ಇರುತ್ತದೆ. ಪ್ಲಾಟ್‌ಫಾರ್ಮ್ ನಂ.1 ರ ಮೇಲೆ, ವಿಮಾನ ನಿಲ್ದಾಣದಲ್ಲಿರುವಂತೆ 'ಎ' ಕಾನ್‌ಕೋರ್ಸ್‌ಗೆ ನೇರ ಸಂಪರ್ಕದೊಂದಿಗೆ ನಿರ್ಗಮನ ಕಮ್-ಆಗಮನ ದ್ವಾರಾ ಇರುತ್ತದೆ.
'ಏ' ಕಾಮೋರ್ಸಿನ ಮೇಲ್ಛಾವಣಿಯು ನೇರವಾಗಿ ನೈಸರ್ಗಿಕ ಬೆಳಕನ್ನು ಒಳ ಬರುವಂತೆ ವ್ಯವಸ್ಥೆ ಹೊಂದಿರುತ್ತದೆ. ಇದಲ್ಲದೆ ಜನಸಂದಣಿ/ ದಟ್ಟಣೆಯನ್ನು ತಪ್ಪಿಸಲು ಸ್ಪಷ್ಟವಾಗಿ ಗುರುತಿಸಲಾದ ಡ್ರಾಪ್ ಮತ್ತು ಪಿಕ್-ಅಪ್ ಪಾಯಿಂಟ್‌ಗಳನ್ನು ಒದಗಿಸಲಾಗುತ್ತದೆ.
ಮೆಟ್ರೋ ನಿಲ್ದಾಣದಿಂದ ಹೋಗುವ/ ಬರುವ ಪ್ರಯಾಣಿಕರ ಅನುಕೂಲಕ್ಕಾಗಿ ಎರ್-ಕಾಮೋರ್ಸ್ ಮಟ್ಟದಲ್ಲಿಯೇ ಮೆಟ್ರೋ ನಿಲ್ದಾಣದೊಂದಿಗೆ ಪಾದಚಾರಿ ಮಾರ್ಗ ಮೂಲಕ ಸಂಪರ್ಕವನ್ನು ಒದಗಿಸಲು ಯೋಜನೆಯಲ್ಲಿ ಅವಕಾಶ ನೀಡಲಾಗಿದೆ.
ಸುಲಭ ಪ್ರವೇಶಕ್ಕಾಗಿ ಎರ್-ಕಾನ್ನೋರ್ಸ್ ನಿರ್ಗಮನ ಪಾಜಾಕ್ಕೆ ನೇರವಾಗಿ ಸಂಪರ್ಕಿಸುವ ಪೂರ್ವ ಭಾಗದಲ್ಲಿ (ಬೆಂಗಳೂರು ನಗರದ ಬದಿಯಲ್ಲಿ) ಅದೇ ಮಟ್ಟದಲ್ಲಿ ರಸ್ತೆ ಬರುತ್ತದೆ. ಸಾರ್ವಜನಿಕರ ಅನುಕೂಲಕ್ಕಾಗಿ ನಿಲ್ದಾಣದಲ್ಲಿ ಸಾರ್ವಜನಿಕ ಸಾರಿಗೆಯ ಎಲ್ಲಾ ವಿಧಾನಗಳ ಸೇವೆ ಕಲ್ಪಿಸಲು ಅವಕಾಶ ಇರುತ್ತದೆ.
ಈಗಾಗಲೇ ನಗರದ ಬೈಯಪ್ಪನಹಳ್ಳಿ ರೈಲು ನಿಲ್ದಾಣವನ್ನು ವಿಮಾನ ನಿಲ್ದಾಣ ಮಾದರಿಯಲ್ಲಿ ಅಭಿವೃದ್ಧಿಗೊಳಿಸಲಾಗಿದೆ. ಕಂಟೋನ್ಮೆಂಟ್ ರೈಲು ನಿಲ್ದಾಣದ ಅಭಿವೃದ್ಧಿಗೂ ಯೋಜನೆ ರೂಪಿಸಲಾಗಿದೆ. ಪ್ರತಿನಿತ್ಯ 1 ಲಕ್ಷಕ್ಕೂ ಅಧಿಕ ಜನರು ಭೇಟಿ ನೀಡುವಂತೆ ಯಶವಂತಪುರ ನಿಲ್ದಾಣ ಅಭಿವೃದ್ಧಿಗೊಳಿಸಲಾಗುತ್ತದೆ. 2025ರ ವೇಳೆಗೆ ಈ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.












Click it and Unblock the Notifications