ಡಿಸೆಂಬರ್‌ನಲ್ಲಿ ಯಲಚೇನಹಳ್ಳಿ ಅಂಜನಾಪುರ ನಡುವೆ ನಮ್ಮ ಮೆಟ್ರೋ ಸಂಚಾರ
ಬೆಂಗಳೂರು, ನವೆಂಬರ್ 25: ಯಲಚೇನಹಳ್ಳಿ ಹಾಗೂ ಅಂಜನಾಪುರ ನಡುವೆ ನಮ್ಮ ಮೆಟ್ರೋ ಸಂಚಾರಕ್ಕೂ ಅಂತೂ ಕಾಲ ಕೂಡಿ ಬಂದಿದೆ. ಡಿಸೆಂಬರ್‌ನಲ್ಲಿ ಈ ಎರಡು ನಿಲ್ದಾಣಗಳ ನಡುವೆ ಮೆಟ್ರೋ ಸಂಚರಿಸಲಿದೆ.
ಮೆಟ್ರೋ ರೈಲು ಸುರಕ್ಷತಾ ಆಯುಕ್ತರು ಸೋಮವಾರ ಬಿಎಂಆರ್ ಸಿಎಲ್ ಗೆ ಈ ಮಾರ್ಗದಲ್ಲಿ ವಾಣಿಜ್ಯ ರೈಲು ಕಾರ್ಯಾಚರಣೆ ಪ್ರಾರಂಭಿಸಲು ಅಧಿಕಾರ ನೀಡಿದ್ದಾರೆ. ಹೀಗಾಗಿ ಹಸಿರು ಮಾರ್ಗದ ಈ ದಕ್ಷಿಣ ವಿಸ್ತರಣೆಯ ಮೆಟ್ರೋ ರೈಲು ಸಂಚಾರ ಹದಿನೈದು ದಿನಗಳಲ್ಲಿ ಆರಂಭಿಸುವ ಸಾಧ್ಯತೆಯಿದೆ.
ನಮ್ಮ ಮೆಟ್ರೋ: ಅಂಜನಾಪುರದಿಂದ ಯಲಚೇನಹಳ್ಳಿಗೆ ಕೇವಲ ಹತ್ತೇ ನಿಮಿಷ
ಈ ಮಾರ್ಗದಲ್ಲಿ ನವೆಂಬರ್ 1 ರಂದು ರೈಲು ಸಂಚಾರ ಆರಂಭಿಸಲು ತೀರ್ಮಾನಿಸಲಾಗಿತ್ತು. ಬಿಎಂಆರ್‌ಸಿಎಲ್ ಕೂಡ ನವೆಂಬರ್ 1ರ ಗಡುವು ನೀಡಿತ್ತು.

ಪ್ರಾಯೋಗಿಕ ಸಂಚಾರ ಪೂರ್ಣ
ಪ್ರಾಯೋಗಿಕ ಸಂಚಾರವನ್ನು ಸಹ ಬಿಎಂಆರ್‌ಸಿಎಲ್ 6.52 ಕಿ. ಮೀ. ಮಾರ್ಗದಲ್ಲಿ ಪೂರ್ಣಗೊಳಿಸಿತ್ತು. ಆದರೆ ರೈಲ್ವೆ ಸುರಕ್ಷತಾ ಆಯುಕ್ತರು ಇನ್ನೂ ಮಾರ್ಗದಲ್ಲಿ ಪರಿಶೀಲನೆ ನಡೆಸಬೇಕಿತ್ತು ಮತ್ತು ಎಲ್ಲಾ ದಾಖಲೆ ಪರಿಶೀಲನೆ ನಡೆಸಿ, ರೈಲು ಮಾರ್ಗ ವಾಣಿಜ್ಯ ಸಂಚಾರಕ್ಕೆ ಮುಕ್ತಗೊಳಿಸಬಹುದು ಎಂದು ಹೇಳಲಾಗಿತ್ತು. ಇದೀಗ ಎಲ್ಲ ಪ್ರಕ್ರಿಯೆಗಳೂ ವೇಗ ಪಡೆದುಕೊಂಡಿದ್ದು, ಡಿಸೆಂಬರ್ ಮೊದಲ ವಾರದಲ್ಲಿ ಈ ಮಾರ್ಗ ಕಾರ್ಯಾಚರಣೆಗೆ ಸಿದ್ಧವಾಗುವ ಸಾಧ್ಯತೆ ಇದೆ.

ಹಳಿಗಳ ಗುಣಮಟ್ಟ ಪರೀಕ್ಷೆ
ಈ ಮಾರ್ಗದಲ್ಲಿ ಸುಮಾರು 4 ಗಂಟೆಗಳ ಕಾಲ ಪ್ರಯೋಗಾತ್ಮಕ ಸಂಚಾರ ನಡೆಸಲಾಯಿತು. 90 ಕಿ.ಮೀ ವೇಗದಲ್ಲಿ ರೈಲು ಚಲಾಯಿಸಿ ಹಳಿಗಳ ಗುಣಮಟ್ಟ ಪರೀಕ್ಷಿಸಲಾಯಿತು. ಕೊಣನಕುಂಟೆ ಕ್ರಾಸ್ (ಹಿಂದೆ ಅಂಜನಾಪುರ ಕ್ರಾಸ್ ರೋಡ್ ಎಂದು ಕರೆಯಲಾಗುತ್ತಿತ್ತು), ದೊಡ್ಡಕಲ್ಲಸಂದ್ರ, ವಜ್ರಹಳ್ಳಿ, ತಲಘಟ್ಟಪುರ ಮತ್ತು ಅಂಜನಾಪುರ ನಿಲ್ದಾಣಗಳು ಈ ಮಾರ್ಗದಲ್ಲಿ ಬರುತ್ತವೆ.
ಸಿಎಮ್‌ಆರ್‌ಎಸ್ ಅಭಯ್ ಕುಮಾರ್ ರೈ ಅವರು ಈ ಮಾರ್ಗದ ವಾಣಿಜ್ಯ ಸಂಚಾರಕ್ಕೆ ದೊರೆತಿರುವ ಅನುಮತಿ ಸ್ಪಷ್ಟೀಕರಿಸಿದ್ದು, ಐದು ನಿಲ್ದಾಣಗಳೊಂದಿಗೆ 6.29 ಕಿ.ಮೀ ದೂರದ ಈ ವಿಭಾಗವನ್ನು ರಾಯ್ ಮತ್ತು ಅವರ ತಂಡವು ನವೆಂಬರ್ 18 ಮತ್ತು 19 ರಂದು ತಪಾಸಣೆ ಮಾಡಿದೆ ಎಂದು ತಿಳಿಸಿದರು.

ಯಲಚೇನಹಳ್ಳಿ-ಅಂಜನಾಪುರ ಮಾರ್ಗ
ಯಲಚೇನಹಳ್ಳಿ-ಅಂಜನಾಪುರ ನಡುವಿನ ಮಾರ್ಗ ನಮ್ಮ ಮೆಟ್ರೋ ಯೋಜನೆಯ 2ನೇ ಹಂತದ ಮೊದಲ ವಿಸ್ತರಿತ ಮಾರ್ಗವಾಗಿದೆ. ರೀಚ್ 4 ಬಿ ಮಾರ್ಗ 6.52 ಕಿ.ಮೀ. ಉದ್ದವಿದ್ದು, 5 ನಿಲ್ದಾಣಗಳನ್ನು ಒಳಗೊಂಡಿದೆ. ನಾಗಸಂದ್ರದಿಂದ ಹೊರಡು ಹಸಿರು ಮಾರ್ಗದ ರೈಲು ಕನಕಪುರ ರಸ್ತೆಯ ಅಂಜನಾಪುರ ತನಕ ಸಂಚಾರ ನಡೆಸಲಿದೆ.

ಇನ್ನೆರೆಡು ವಾರಗಳಲ್ಲಿ ಎಲ್ಲಾ ಕಾಮಗಾರಿಗಳು ಪೂರ್ಣ
ಈ ಬಗ್ಗೆ ಇಬ್ಬರು ಹಿರಿಯ ಮೆಟ್ರೋ ಅಧಿಕಾರಿಗಳು ಸೋಮವಾರ ಸಿಎಂಆರ್ಎಸ್ ವರದಿಯನ್ನು ಸ್ವೀಕರಿಸಿದ್ದಾರೆ ಎಂದು ದೃಢಪಡಿಸಿದರು. ಕಾರ್ಯಾಚರಣೆಗಳು ಯಾವಾಗ ಪ್ರಾರಂಭವಾಗುತ್ತವೆ ಎಂದು ಕೇಳಿದಾಗ, ಅಧಿಕಾರಿಯೊಬ್ಬರು, ಈ ಮಾರ್ಗ ಇನ್ನೂ ಕೆಲ ಕೆಲಸಗಳು ಪೂರ್ಣವಾಗಬೇಕಿದೆ. ಈ ಕುರಿತಂತೆ ನಾವು ಕೆಲಸ ಮಾಡುತ್ತಿದ್ದು, ಇನ್ನೆರಡು ವಾರಗಳಲ್ಲಿ ಇದು ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.