ಬೆಂಗಳೂರು ವಿಷನ್ 2022: ಸಂವಾದದ ಪ್ರಮುಖಾಂಶಗಳು!
ಬೆಂಗಳೂರು, ಡಿ. 17: ಬೆಂಗಳೂರು ಮಹಾನಗರದ ಅಭಿವೃದ್ಧಿಗೆ ಹಣದ ಕೊರತೆಯಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹೇಳಿದ್ದಾರೆ. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಸಿಲಿಕಾನ್ ಸಿಟಿಯ ಸಮಗ್ರ ಅಭಿವೃದ್ಧಿ ಕುರಿತ ಬೆಂಗಳೂರು ವಿಷನ್ 2022 ಸಂವಾದದಲ್ಲಿ ಭಾಗವಹಿಸಿ ಮಾತನಾಡಿದರು. ಮುಂದಿನ 2022 ರಾಜ್ಯದ ರಾಜಧಾನಿ ಹೇಗಿರಬೇಕು ಎಂಬುದರ ಕುರಿತು ಪ್ರಮುಖವಾಗಿ ನಾಲ್ಕು ಕ್ಷೇತ್ರಗಳಲ್ಲಿ ಅಭಿವೃದ್ಧಿ ಕುರಿತು ನೀಲನಕ್ಷೆ ಸಿದ್ಧವಾಗಿದೆ ಎಂದರು.
ಬೆಂಗಳೂರು ಮಹಾನಗರ ಎದುರಿಸುತ್ತಿರುವ ಪ್ರಮುಖ ಸವಾಲು, ಸಮಸ್ಯೆಗಳನ್ನು ಪರಿಹರಿಸಲು ಈ ಕಾರ್ಯಕ್ರಮ ಜಾರಿಗೆ ತರಲಾಗಿದೆ. ಮಹಾನಗರದ ಎಲ್ಲ ಸಮಸ್ಯೆಗಳನ್ನು ಅಧ್ಯಯನ ಮಾಡಿ ಯೋಜನೆ ರೂಪಿಸಲಾಗಿದ್ದು, ಪ್ರತಿ ಆರು ತಿಂಗಳಿಗೊಮ್ಮೆ ಮಾಧ್ಯಮಗೋಷ್ಠಿ ಕರೆದು ಮಾಹಿತಿ ನೀಡುತ್ತೇನೆ. ಜೊತೆಗೆ ಪ್ರತಿ ಆರು ತಿಂಗಳಿಗೊಮ್ಮೆ ಸ್ಥಳ ಪರಿಶೀಲನೆ ಮಾಡುತ್ತೇವೆ. ರಾಜಧಾನಿಯ ಅಭಿವೃದ್ಧಿಗೆ ಅಗತ್ಯ ಹಣವನ್ನು ಮೀಸಲಿಡಲಾಗುವುದು. ಮುಂದಿನ ಎರಡು ವರ್ಷಗಳಲ್ಲಿ ನೂರಕ್ಕೆ ನೂರು ವಿಷನ್ 2022 ಕಾರ್ಯಕ್ರಮದ ಮೂಲಕ ಬೆಂಗಳೂರಿನ ಸಮಗ್ರ ಅಭಿವೃದ್ಧಿ ಮಾಡಲಾಗುವುದು. ನೂರು ಬಾರಿ ಯೋಚನೆ ಮಾಡಿ ಈ ಕಾರ್ಯಕ್ರಮ ರೂಪಿಸಿದ್ದೇವೆ ಎಂದು ಬಂಡವಾಳ ಹೂಡಿಕೆದಾರರೂ ಸೇರಿದಂತೆ ಬೆಂಗಳೂರಿನ ಜನತೆಗೆ ಸಿಎಂ ಯಡಿಯೂರಪ್ಪ ಮನವರಿಕೆ ಮಾಡಿಕೊಟ್ಟರು.
ಪ್ರಮುಖವಾಗಿ ನಾಲ್ಕು ಕ್ಷೇತ್ರಗಳಲ್ಲಿ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಹಂತ ಹಂತವಾಗಿ ಅವುಗಳಲ್ಲಿ ಅಭಿವೃದ್ಧಿ ಸಾಧಿಸಲಾಗುವುದು ಎಂದರು.

ಸುಗಮ ಸಂಚಾರ ವ್ಯವಸ್ಥೆ
* ಬೆಂಗಳೂರುಬ ಮಹಾನಗರದಲ್ಲಿ ಕಳೆದ ಮೂರು ದಶಕಗಳಲ್ಲಿ ವಾಹಗನಗಳ ದಟ್ಟನೆ ಸುಮಾರು ನಾಲ್ಕು ಪಟ್ಟು ಹೆಚ್ಚಾಗಿದೆ. ಈಗ ಸದ್ಯ ಬೆಂಗಳೂರಿನಲ್ಲಿ ಸುಮಾರು 85.5 ಲಕ್ಷ ವಾಹಗನಳಿವೆ. ಇದು ವಾಯು ಮಾಲಿನ್ಯಕ್ಕೆ ಕಾರಣವಾಗಿದೆ.
* ಟ್ರಾಫಿಕ್ ಬೆಂಗಳೂರಿನ ಬಹುದೊಡ್ಡ ಸಮಸ್ಯೆಯಾಗಿದೆ. ಸಾರ್ವಜನಿಕ ಸಾರಿಗೆ ಉತ್ತೇಜನ, ನಮ್ಮ ಮೆಟ್ರೊ ಮತ್ತು ಉಪ ನಗರ ರೈಲು ಯೋಜನೆಗೆ ವೇಗ ಕೊಡುವುದು ಹಾಗೂ ಅತ್ಯುತ್ತಮ ರಸ್ತೆಗಳನ್ನು ಅಭಿವೃದ್ಧಿ ಮಾಡಲಾಗುವುದು. ಆ ಮೂಲಕ ಸುಗಮ ಸಂಚಾರಕ್ಕೆ ಮುಂದಿನ ದಿನಗಳಲ್ಲಿ ಅನುವು ಮಾಡಿಕೊಡಲಾಗುವುದು.
* ಉಪ ನಗರ ರೈಲು ಯೋಜನೆಯಡಿ 1745 ಕೋಟಿ ರೂ. ವೆಚ್ಚದಲ್ಲಿ ಬೈಯಪ್ಪನಹಳ್ಳಿ-ಹೊಸೂರು ಹಾಗೂ ಯಶವಂತಪುರ-ಚನ್ನಸಂದ್ರ ವ್ಹಾಯಾ ಹೆಬ್ಬಾಳ-ಬಾಣಸವಾಡಿ ಮಾರ್ಗಗಳ ಟ್ರ್ಯಾಕ್ ಡಬ್ಲಿಂಗ್ ಕಾಮಗಾರಿ ಪ್ರಗತಿಯಲ್ಲಿದೆ.
* ಜೊತೆಗೆ ಕೇಂದ್ರ ಸರ್ಕಾರವು 15,767 ಕೋಟಿ ರೂ.ಗಳ ವೆಚ್ಚದಲ್ಲಿ ನಾಲ್ಕು ಕಾರಿಡಾರ್‌ಗಳ ಕಾಮಗಾರೊಗಳಿಗೆ ಮಂಜೂರಾತಿ ನೀಡಿದೆ. ಒಟ್ಟು 148 ಕಿ.ಮೀ. ಉದ್ದದ ಉಪ ನಗರ ರೈಲು ಯೋಜನೆ ಮುಂದಿನ ಆರು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ.
* ನಮ್ಮ ಮೆಟ್ರೊ ಮೂಲಕ ಈಗ ಪ್ರತಿದಿನ 7 ಲಕ್ಷ ಜನರು ಸಂಚಾರ ಮಾಡುತ್ತಿದ್ದಾರೆ. ಅದನ್ನು 2022ರ ವೇಳೆಗೆ 10 ಲಕ್ಷ ಜನರ ಸಂಚಾರ ಸಾಮರ್ಥ್ಯಕ್ಕೆ ಹೆಚ್ಚಿಸಲಾಗುವುದು. ಸಂಚಾರ ದಟ್ಟಣೆ ಇರುವ ಔಟರ್ ರಿಂಗ್ ರೋಡ್ ಸೇರಿದಂತೆ 12 ಪ್ರಮುಖ ರಸ್ತೆಗಳನ್ನು ಗುರುತಿಸಲಾಗಿದ್ದು, ಅವರುಗಳನ್ನು ಕೆಆರ್‌ಡಿಸಿಎಲ್ ಮೂಲಕ ಅಭಿವೃದ್ಧಿ ಪಡಿಸಲಾಗುವುದು.

ಸ್ವಚ್ಛ ಬೆಂಗಳೂರು
* ಸುಮಾರು 1.25 ಕೋಟಿ ಜನಸಂಖ್ಯೆ ಹೊಂದಿರುವ ರಾಜಧಾನಿಯಲ್ಲಿ ಪ್ರತಿದಿನ 5800 ಮೆಟ್ರಿಕ್ ಟನ್ ಕಸ ಉತ್ಪಾದನೆ ಆಗುತ್ತಿದೆ. ಇದರ ನಿರ್ವಹಣೆಗೆ ಸಾಂಸ್ಥಿಕ ರೂಪ ಕೊಡಲು ಉದ್ದೇಶಿಸಲಾಗಿದೆ.
* ತ್ಯಾಜ್ಯ ನಿರ್ವಹಣೆ ನಿರಾತಂಕ ಹಾಗೂ ವ್ಯವಸ್ಥಿತವಾಗಿ ಮಾಡಲು ನಿಗಾವಹಿಸಲು ಅನುಕೂಲವಾಗುವಂತೆ ಜಿಪಿಎಸ್ ಅಳವಡಿಕೆ ಹಾಗೂ ಇತರ ತಂತ್ರಜ್ಞಾನ ಬಳಸಿಕೊಳ್ಳಲಾಗುವುದು.
* ವೈಜ್ಞಾನಿಕ ಕಸ ವಿಲೇವಾರಿಗೆ ಸಮುದಾಯದ ಸಹಯೋಗ, ಸಹಭಾಗಿತ್ವ ಪ್ರಮುಖವಾಗಿರುವುದರಿಂದ 'ನನ್ನ ಕಸ ನನ್ನ ಜವಾಬ್ದಾರಿ' ಎಂಬ ತತ್ವವನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು.
* 'ನನ್ನ ಕಸ ನನ್ನ ಜವಾಬ್ದಾರಿ'ಗಾಗಿ ಸಮುದಾಯದ ಹಂತದಲ್ಲಿ ತರಬೇತಿ ಕೊಡಲಾಗುವುದು. ಆ ಮೂಲಕ ಹಸಿ ಕಸ ನಿರ್ವಹಣೆಯನ್ನು ಅಪಾರ್ಟಮೆಂಟ್ ಅಥವಾ ಬಡಾವಣೆಯಲ್ಲಿಯೇ ನಿರ್ವಹಣೆ ಮಾಡಲಾಗುವುದು.
* ಬಿಡದಿಯಲ್ಲಿ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ ಮಾಡುವ ಘಟಕವನ್ನು ಕೆಪಿಸಿ ವತಿಯಿಂದ ಸ್ಥಾಪನೆ ಮಾಡಲಾಗುತ್ತಿದ್ದು, ಅದು ಎರಡು ವರ್ಷಗಳಲ್ಲಿ ಕಾರ್ಯಾರಂಭ ಮಾಡಲಿದೆ.

ಹಸಿರು ಬೆಂಗಳೂರು
* ರಾಜಧಾನಿ ಬೆಂಗಳೂರು ಉದ್ಯಾನನಗರಿ ಎಂದು ಹೆಸರುವಾಸಿಯಾಗಿದೆ. ನಗರದ ಲಾಲ್‌ಬಾಗ್, ಕಬ್ಬನ್ ಪಾರ್ಕ್ ಜೊತೆಗೆ ಪ್ರಮುಖ ರಸ್ತೆಗಳ ಎರಡೂ ಬದಿಗಳು ನೆರಳು ನೀಡುವ ಮರಗಳು ತುಂಬಿದ್ದವು. ಹಾಗೆಯೆ ಕೆರೆಗಳು ಬೆಂಗಳೂರಿನ ಸೌಂದರ್ಯಕ್ಕೆ ಮೆರಗು ನೀಡಿದ್ದರು.
* ಬೆಂಗಳೂರು ಬೆಳೆದಂತೆಲ್ಲ ಮರಗಳು ಕಡಿಮೆಯಾಗಿ, ಕಾಲುವೆ-ಕೆರೆಗಳು ಕಲುಷಿತಗೊಂಡವು. ಕಳೆದು ಹೋದ ಬೆಂಗಳೂರಿನ ಮೆರಗು ಮತ್ತೆ ತರುವುದು ಇಂದಿನ ಅಗತ್ಯವೂ ಹೌದು.
* ಕಾಲುವೆಗಳ ಅಭಿವೃದ್ಧಿಗೆ ಕೆ-100 ಎಂಬ ಯೋಜನೆ ರೂಪಿಸಲಾಗಿದೆ. ಯೋಜನೆಯಡಿ ರಾಜ ಕಾಲುವೆಗಳನ್ನು ನಗರದ ಸೌಂದರ್ಯಕ್ಕೆ ಪೂರಕವಾಗುವಂತೆ ಅಭಿವೃದ್ಧಿಗೊಳಿಸಲಾಗುತ್ತಿದೆ.
* ತ್ಯಾಜ್ಯ ನೀರಿನ ಸಂಸ್ಕರಣೆ ಹಾಗೂ ಮರುಬಳಕೆಗೆ ರಾಜ್ಯ ಸರ್ಕಾರ ಆದ್ಯತೆ ನೀಡಿದ್ದು, 2022ರ ವೇಳೆಗೆ ತ್ಯಾಜ್ಯ ನೀರನ್ನು ಸಂಸ್ಕರಿಸಿ ಬಳಸಿಕೊಳ್ಳಲು ಅಗತ್ಯ ಸಾಮರ್ಥ್ಯದ ಯೋಜನೆ ರೂಪಿಸಲಾಗುವುದು.
* ನಗರದ ಹೊರ ವಲಯದಲ್ಲಿ ಎರಡು ಬೃಹತ್ ವೃಕ್ಷೋದ್ಯಾನಗಳು ಹಾಗೂ ತುರಹಳ್ಳಿ, ಕಾಡುಗೋಡಿ, ಜೆಪಿ ನಗರ ಮತ್ತು ಮತ್ತಿಕೆರೆಗಳ ಕಿರು ಅರಣ್ಯಗಳನ್ನು ಅಭಿವೃದ್ಧಿಪಡಿಸಲಾಗುವುದು.
Recommended Video

ಜನ ಸಂಪರ್ಕ
* ಬಿಬಿಎಂಪಿ ಹಾಗೂ ಇತರ ಪ್ರಮುಖ ಇಲಾಖೆಗಳು ತ್ವರಿತವಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಪರಿಹಸರಿಸಬೇಕು. ಹೀಗಾಗಿ ಬಿಬಿಎಂಪಿಯಲ್ಲಿನ ಸಾರ್ವಜನಿಕ ಸಹಾಯ ತಂತ್ರಾಂಶ ಬಲಪಡಿಸುವ ಉದ್ದೇಶವನ್ನು ಹೊಂದಲಾಗಿದೆ.
* ಬೆಂಗಳೂರಿನಲ್ಲಿ ಖಾತಾ, ತೆರಿಗೆ ಪಾವತಿ, ಜನನ ಮತ್ತು ಮರಣ ಪ್ರಮಾಣಪತ್ರ ವಿತರಣೆ, ವ್ಯಾಪಾರ ಪರವಾಗನಿ ಮೊದಲಾದವುಗಳನ್ನು ಸುಲಭವಾಗಿ ಪಡೆಯಲು ಅನುವು ಮಾಡಿಕೊಡಲಾಗುವುದು.
* ಆಸ್ತಿ ನೋಂದಣಿಗೆ ಆನ್‌ಲೈನ್ ಮೂಲಕ ಸಮಯ ನಿಗದಿಡಪಸಿಕೊಂಡು ಯಾವ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಬೇಕಾದರೂ ನೋಂದಣಿ ಮಾಡಿಸಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ.
* ವಲಸಿಗರೆ ಹೆಚ್ಚಿರುವ ಬೆಂಗಳೂರಿನಲ್ಲಿ ನಗರದ ಮೂಲ ಸೊಬಗು, ಸಂಸ್ಕೃತಿ, ಕರಕುಶಲ ಕಲೆಗಳನ್ನು ಪರಿಚಯಿಸುವ ತಾಣಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ನಾಗರಿಕರೊಂದಿಗೆ ಬಾಂಧವ್ಯ ಬೆಸೆಯಲು ಅನುಕೂಲಮಾಡಿಕೊಡಲಾಗುವುದು.
* ದೇಶದ ಪ್ರಮುಖ ಆರ್ಥಿಕ ಕೇಂದ್ರಗಳಲ್ಲೊಂದಾಗಿರುವ ಬೆಂಗಳೂರಿನ ಬದುಕಿನಲ್ಲಿಯೂ ಜೀವಸೆಲೆಯೂ ಚಿಮ್ಮುತ್ತಿರುಬೇಕು. ಅಂತಹ ಅಭಿವೃದ್ಧಿ ಸಾಧ್ಯವಾಗಬೇಕು ಎಂಬುದು ವಿಷನ್ 2022 ಮಹದಾಶಯ ಎಂದು ಸಿಎಂ ಯಡಿಯೂರಪ್ಪ ಅವರು ತಮ್ಮ ಸಂವಾದದಲ್ಲಿ ವಿವರಿಸಿದರು.












Click it and Unblock the Notifications