ಶುಕ್ರವಾರ ಯಶವಂತಪುರದ ಎಪಿಎಂಸಿ ಬಂದ್
ಬೆಂಗಳೂರು, ಜುಲೈ 14: ಆಹಾರ ಧಾನ್ಯಗಳ ಮೇಲೆ ಕೇಂದ್ರ ಸರ್ಕಾರ ವಿಧಿಸಿರುವ ಶೇ.5ರಷ್ಟು ಸರಕು ಸೇವಾ ತೆರಿಗೆ (ಜಿಎಸ್‌ಟಿ)ಯನ್ನು ರದ್ದುಗೊಳಿಸಲು ಆಗ್ರಹಿಸಿ ಜುಲೈ 15ರಂದು ರಾಜ್ಯದಲ್ಲಿ ನಡೆಯುವ ಪ್ರತಿಭಟನೆಗೆ ಯಶವಂತಪುರದ ಎಪಿಎಂಸಿ ಸಹ ಬೆಂಬಲ ಸೂಚಿಸಿದೆ.
ಪ್ಯಾಕೇಟ್ ರೂಪದ ಆಹಾರ ಧಾನ್ಯಗಳ ಮೇಲೆ ಸರಕು ಸೇವಾ ತೆರಿಗೆ ವಿಧಿಸಿದ ಕೇಂದ್ರದ ನಡೆ ಖಂಡಿಸಿ ಕೃಷಿ ಮಾರುಕಟ್ಟೆ ವಹಿವಾಟಿನಲ್ಲಿ ತೊಡಗಿಕೊಂಡ ವಿವಿಧ ಸಂಘಟನೆಗಳು ಶುಕ್ರವಾರ ಬಂದ್ ಕರೆ ಕೊಟ್ಟಿವೆ.
ಇದಕ್ಕೆ ಯಶವಂತಪುರ ಎಪಿಎಂಸಿಯ ಮಾಲೀಕರು, ವರ್ತಕರು, ಕಾರ್ಮಿಕ ಸಂಘಟನೆಗಳು ಬೆಂಬಲ ನೀಡಿವೆ. ಈ ವೇಳೆ ಎಪಿಎಂಪಿ ಯಾರ್ಡ್ ಸಂಪೂರ್ಣ ಸ್ಥಗಿತಗೊಳಿಸಿ ಯಾವುದೇ ವಹಿವಾಟು ಮಾಡದಿರಲು ನಿರ್ಧರಿಸಲಾಗಿದೆ.

ಕೇಂದ್ರದ ನಿರ್ಧಾರ ವಿರುದ್ಧ ಶುಕ್ರವಾರ ಬೆಳಗ್ಗೆ 6ಗಂಟೆಯಿಂದ ಸಂಜೆ 6ರವರೆಗೆ ಎಪಿಎಂಸಿ ಯಾರ್ಡ್ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಲು ಸಜ್ಜಾಗಿದ್ದಾರೆ ವರ್ತಕರು. ಬ್ರಾಂಡೆಡ್ ಅಲ್ಲದ ವಸ್ತುಗಳ ವರ್ತಕರಿಗೆ ಜಿಎಸ್‌ಟಿ ಹೇರಿಕೆಯಿಂದ ಸಾಕಷ್ಟು ಆರ್ಥಿಕ ನಷ್ಟು ಉಂಟಾಗಲಿದೆ. ಈಗಾಗಲೇ ಕೋವಿಡ್‌ನಿಂದ ಕೆಳ ವರ್ಗದ ಜನ ತತ್ತರಿಸಿದ್ದಾರೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.
ಜಿಎಸ್‌ಟಿ ಹಿಂಪಡೆಯಲು ಆಗ್ರಹ; ಕೆಳವರ್ಗದವರಿಗೆ ತೊಂದರೆ ಆಗುವಂತೆ ಕೇಂದ್ರ ಸರ್ಕಾರ ಜಿಎಸ್‌ಟಿ ಕೌನ್ಸಿಲ್‌ನಲ್ಲಿ ಕೈಗೊಂಡ ಶೇ.5ರಷ್ಟು ತೆರಿಗೆ ಹೇರಿಕೆಯು ಜುಲೈ 18ರಿಂದ ಜಾರಿಗೆ ಬರಲಿದೆ. ಇದು ಬಡವರು, ಕೂಲಿ ಕಾರ್ಮಿಕರಿಗೆ, ಜನಸಾಮಾನ್ಯರಿಗೆ ಸಂಷಕ್ಟ ತಂದೊಡ್ಡಲಿದೆ. ಆದ್ದರಿಂದ ಕೇಂದ್ರ ಸರ್ಕಾರ ಕೂಡಲೇ ನಿರ್ಧಾರದಿಂದ ಹಿಂದೆ ಸರಿಯಬೇಕು. ಜನರ ಹಿತ ಕಾಪಾಡಬೇಕು ಎಂದು ಸಂಘಟನೆಗಳ ಪ್ರಮುಖರು ತಿಳಿಸಿದ್ದಾರೆ.

ಬಂದ್ ಬೆಂಬಲಿಸುವ ಸಂಘಟನೆಗಳು; ಈಗಾಗಲೇ ಶೇ. 5ರ ಜಿಎಸ್‌ಟಿ ವಿರುದ್ಧದ ಶುಕ್ರವಾರ ಧರಣಿ ನಡೆಸಲು ರಾಜ್ಯ ಅಕ್ಕಿ ಗಿರಣಿದಾರರ ಸಂಘ, ಕರ್ನಾಟಕ ರೈಸ್ ಮಿಲ್ ಅಸೋಸಿಯೇಷನ್, ಬೆಂಗಳೂರು ಹೋಲ್ ಸೇಲ್ ಫುಡ್ ಅಂಡ್ ಗ್ರೇನ್ಸ್ ಅಂಡ್ ಪಲ್ಸಸ್ (ಮರ್ಚೆಂಟ್ಸ್ ಅಸೋಸಿಯೇಷನ್), ಬೆಂಗಳೂರು ಗ್ರೈನ್ ಮರ್ಚೆಂಟ್ಸ್ ಅಸೋಸಿಯೇಷನ್, ಕರ್ನಾಟಕ ರೋಲರ್ ಫ್ಲೋರ್ ಮಿಲ್ಲರ್ಸ್ ಅಸೋಸಿಯೇಷನ್, ನ್ಯೂ ತರಗುಪೇಟೆ ಮರ್ಚೆಂಟ್ಸ್ ಅಸೋಸಿಯೇಷನ್ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.

ದಾವಣಗೆರೆ ಮತ್ತು ತುಮಕೂರಿನ ಕೆಲವು ಸಂಘಟನೆಗಳು ಸೇರಿದಂತೆ ರಾಜ್ಯದಲ್ಲಿ ವಿವಿಧ ಸಂಘಟನೆಗಳು ತಮ್ಮ ಕಾರ್ಯ ಚಟುವಟಿಕೆಗಳನ್ನು ನಿಲ್ಲಿಸುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ರವಾನಿಸಲಿವೆ. ಇದರಿಂದಾಗಿ ಶುಕ್ರವಾರ ಅಗತ್ಯ ವಸ್ತುಗಳ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುವ ನಿರೀಕ್ಷೆ ಇದೆ.












Click it and Unblock the Notifications