ಬೆಂಗಳೂರು ಜಲಮಂಡಳಿ: ವಿಶ್ವದಲ್ಲೇ ಮೊದಲ ಬಾರಿಗೆ 'ಎಐ' ತಂತ್ರಜ್ಞಾನ ಅಳವಡಿಕೆ, ₹40 ಕೋಟಿ ಉಳಿತಾಯ
ಬೆಂಗಳೂರು: ಕುಡಿಯುವ ನೀರು ಒದಗಿಸುವ ಹಾಗೂ ತ್ಯಾಜ್ಯ ನೀರು ಸಂಸ್ಕೃರಣೆ ಮಾಡುವ ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ (BWSSB) ಎಐ ಆಧಾರಿತ ತಂತ್ರಜ್ಞಾನ ಅಳಡವಡಿಸಿಕೊಂಡಿದೆ. ವಿಶ್ವದಲ್ಲೇ ಎಐ ತಂತ್ರಜ್ಞಾನ ಅಳವಡಿಸಿಕೊಂಡ ಮೊಲದ ನೀರು ಸರಬರಾಜು ಸಂಸ್ಥೆ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಇದರಿಂದ ವಾರ್ಷಿವಾಗಿ ಮಂಡಳಿಗೆ ಬರೋಬ್ಬರಿ 40 ಕೋಟಿ ರೂಪಾಯಿ ಹಣ ಉಳಿತಾಯವಾಗಲಿದೆ ಎಂದು ಜಲಮಂಡಳಿ ಅಧ್ಯಕ್ಷರಾದ ಡಾ ರಾಮ್ ಪ್ರಸಾತ್ ಮನೋಹರ್ ಬುಧವಾರ ತಿಳಿಸಿದರು.
ಬೆಂಗಳೂರು ಜಲಮಂಡಳೀಯು ತನ್ನ 78 ಪಂಪಿಂಗ್ ಸ್ಟೇಷನ್‌ಗಳಲ್ಲಿ ಎಐ (AI) ಆಧಾರಿತ ಸ್ಮಾರ್ಟ್ ಪಂಪ್ ಮಾನಿಟರಿಂಗ್ ಹಾಗೂ ಆಪ್ಟಿಮೈಸೇಷನ್ ತಂತ್ರಜ್ಞಾನ 'ಐಪಂಪ್‌ನೆಟ್' ಅಳವಡಿಸಿಕೊಂಡಿದೆ. ಇದು ವಾರ್ಷಿಕವಾಗಿ 40 ಕೋಟಿ ರೂಪಾಯಿಗೂ ಹೆಚ್ಚು ವಿದ್ಯತ್ ವೆಚ್ಚವನ್ನು ಉಳಿತಾಯ ಮಾಡುವಂತಹ ಹೊಸ ತಂತ್ರಜ್ಞಾನವಾಗಿದೆ. ಇಂತಹ ಆಧುನಿಕ ತಂತ್ರಜ್ಞಾನವನ್ನು ನೀರು ಸರಬರಾಜು ಸಂಸ್ಥೆ ಅಳವಡಿಸಿಕೊಂಡಿದ್ದು ಇದೇ ಮೊದಲು ಎಂದು ಅವರು ವಿವರಿಸಿದರು.

'ಐಪಂಪ್‌ನೆಟ್' ಎನ್ನುವುದು ರಿಯಲ್-ಟೈಮ್ ಸೆನ್ಸರ್, ಕೃತಕ ಬುದ್ಧಿಮತ್ತೆ (AI) ಮತ್ತು ಪ್ರಿಡಿಕ್ಟಿವ್ ಡಯಾಗ್ನೋಸ್ಟಿಕ್ಸ್ (ಮುನ್ಸೂಚನೆ ನೀಡುವ ತಂತ್ರಜ್ಞಾನ)ಗಳ ಸಮ್ಮಿಲನವಾಗಿದೆ. ಸಾಂಪ್ರದಾಯಿಕ ವಿಧಾನಗಳಿಗಿಂತ ಭಿನ್ನವಾಗಿ, ಈ ವ್ಯವಸ್ಥೆಯು ಪಂಪ್‌ಗಳ ಕಾರ್ಯಕ್ಷಮತೆಯನ್ನು ನಿರಂತರವಾಗಿ ಪರಿಶೀಲಿಸುತ್ತದೆ. ಕಣ್ಣಿಗೆ ಕಾಣದ ನಷ್ಟಗಳನ್ನು (Hidden Performance Losses) ಪತ್ತೆ ಹಚ್ಚುತ್ತದೆ. ಈಗಾಗಲೇ ಈ ವ್ಯವಸ್ಥೆಯು ನಿಗದಿಗಿಂತ ಹೆಚ್ಚು ವಿದ್ಯುತ್ ಬಳಸುತ್ತಿರುವ ಹಲವಾರು ಪಂಪ್‌ಗಳನ್ನು ಗುರುತಿಸಿದೆ. ಈ ಮಾಹಿತಿಯ ಆಧಾರದ ಮೇಲೆ, ಜಲಮಂಡಳಿಯು ಕಡಿಮೆ ದಕ್ಷತೆಯ ಪಂಪ್‌ಗಳನ್ನು ಬದಲಾಯಿಸಿ, ಅಧಿಕ ದಕ್ಷತೆಯ (High-Efficiency) ಪಂಪ್‌ಗಳನ್ನು ಅಳವಡಿಸುವ ಕಾರ್ಯವನ್ನು ಆರಂಭಿಸಿದೆ.
ಬೆಂಗಳೂರು ಪರಿಸರಕ್ಕೂ ಪೂರಕ
ತಂತ್ರಜ್ಞಾನದ ಈ ಮೇಲ್ದರ್ಜೆಗೆ ಏರಿಸುವಿಕೆಯಿಂದಾಗಿ ವಾರ್ಷಿಕವಾಗಿ 40 ಕೋಟಿ ರೂಪಾಯಿಗೂ ಹೆಚ್ಚು ವಿದ್ಯುತ್ ವೆಚ್ಚ ಉಳಿತಾಯವಾಗುವ ನಿರೀಕ್ಷೆ ಇದೆ. ಇಂಧನ ವ್ಯರ್ಥವಾಗುವುದನ್ನು ತಡೆಗಟ್ಟುವ ಮೂಲಕ, ಜಲಮಂಡಳಿಯು ಕೇವಲ ಆರ್ಥಿಕ ಲಾಭ ಮಾತ್ರವಲ್ಲದೆ, ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಿ ಬೆಂಗಳೂರಿನ ಪರಿಸರ ಸುಸ್ಥಿರತೆಗೂ ಕೊಡುಗೆ ನೀಡುತ್ತಿದೆ.
ಬೆಂಗಳೂರಿನ ಪ್ರತಿ ಪ್ರಜೆಗೂ ಅತ್ಯುತ್ತಮ ಸೇವೆ ಒದಗಿಸಲು ಮತ್ತು ಕಾರ್ಯ ಕ್ಷಮತೆಯನ್ನು ಹೆಚ್ಚಿಸಲು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಳ್ಳಲು ಜಲಮಂಡಳಿ ಬದ್ಧವಾಗಿದೆ. 'ಐಪಂಪ್‌ನೆಟ್' ನಮ್ಮ ಪಂಪಿಂಗ್ ವ್ಯವಸ್ಥೆಯನ್ನು ವೈಜ್ಞಾನಿಕವಾಗಿ ಆಳವಾಗಿ ಅರ್ಥಮಾಡಿಕೊಳ್ಳಲು, ವಿದ್ಯುತ್ ಬಳಕೆಯನ್ನು ಕಡಿಮೆ ಮಾಡಲು ಮತ್ತು ನೀರು ಸರಬರಾಜಿನಲ್ಲಿ ಹೆಚ್ಚಿನ ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಬೆಂಗಳೂರು ಜಲಮಂಡಳಿ ಪಾಲಿಗೆ ಈ ತಂತ್ರಜ್ಞಾನವು ಪರಿವರ್ತನೆಯ ಹಂತವಾಗಿದೆ. ನೀರಿನ ವಲಯದಲ್ಲಿನ ಆವಿಷ್ಕಾರಕ್ಕೆ ಹೊಸ ಮಾನದಂಡವನ್ನು ಸೃಷ್ಟಿಸಿದೆ. ಹೆಚ್ಚುವರಿ ವೆಚ್ಚಕ್ಕೆ ಕಡಿವಾಣ ಹಾಕಿ ಭಾರಿ ಮೊತ್ತವನ್ನು ಮಂಡಳಿಗೆ ಉಳಿಸಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications