ವೈರಲ್ ವಿಡಿಯೋ: ಕೈಕಟ್ಟಿ ಕುಳಿತರೆ ಮುಂದೆ ನಾವು ಗುಲಾಮರಾಗುತ್ತೇವೆ'
ಬೆಂಗಳೂರು, ಆ. 19: ಮಳೆ ನಿಂತರೂ ಮಳೆ ಹನಿ ನಿಲ್ಲುವುದಿಲ್ಲ ಎಂಬಂತೆ ಬೆಂಗಳೂರು ಗಲಭೆ ನಡೆದು ಒಂದು ವಾರ ಕಳೆದರೂ ಪರಿಸ್ಥಿತಿ ಶಾಂತವಾಗುವ ಲಕ್ಷಣಗಳು ಕಂಡು ಬರುತ್ತಿಲ್ಲ. ಕೆ.ಜೆ. ಹಳ್ಳಿ, ಡಿ.ಜೆ. ಹಳ್ಳಿ, ಕಾವಲ್ ಬೈರಸಂದ್ರ ಸೇರಿದಂತೆ ಆರ್.ಟಿ. ನಗರ ವ್ಯಾಪ್ತಿಯಲ್ಲಿ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಆದರೆ ಇದೀಗ ತಮ್ಮ ಜೀವದ ಹಂಗುತೊರೆದು ಸಾರ್ವಜನಿಕರ ರಕ್ಷಣೆ ಮಾಡಿದ್ದ ಪೊಲೀಸರ ಕುರಿತು ಹಾಗೂ ಘಟನೆ ಕುರಿತಂತೆ ಮಹಿಳೆಯೊಬ್ಬರ ಮಾತು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Recommended Video
ಕಾವಲ್ ಬೈರಸಂದ್ರ ವ್ಯಾಪ್ತಿಯಲ್ಲಿ ನಡೆದ ಗಲಭೆ ಹಾಗೂ ನಂತರ ತಮ್ಮ ಸಮುದಾಯದ ಮುಖಂಡರುಗಳ ಬಗ್ಗೆ ಅಸಮಾಧಾನಗೊಂಡಿರುವ ಮಹಿಳೆ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ. ಘಟನೆಗೆ ನಡೆಯಲು ಪೊಲೀಸರ ತಪ್ಪು ಕಾರಣ. ಪೊಲೀಸರು ಮಾಡಿದ ತಪ್ಪಿನಿಂದಲೇ ಘಟನೆ ನಡೆದಿದೆ ಎಂದು ಅವರು ಆರೋಪಿಸಿದ್ದಾರೆ. ತಮ್ಮ ಸಮುದಾಯದ ಮುಖಂಡರ ಮೇಲೆಯೇ ಆ ಮಹಿಳೆ ಅಸಮಾಧಾನ ವ್ಯಕ್ತಪಡಿಸಲು ಕಾರಣ ಏನು? ಅವರ ಮಾತಿನ ಸಂಪೂರ್ಣ ಸಾರಾಂಶ ಇಲ್ಲಿದೆ.

ಠಾಣೆಯಲ್ಲಿ ನಡೆದಿದ್ದು ತಪ್ಪು
ನೀಚನೊಬ್ಬನ ಕೃತ್ಯದಿಂದ ಘಟನೆ ನಡೆದಿದೆ. ಆದರೂ ನಮ್ಮ ಯುವಕರು ಕಾನೂನು ಕೈಗೆ ತೆಗೆದುಕೊಳ್ಳಬಾರದಿತ್ತು. ಪೊಲೀಸರೂ ಕೂಡ ಘಟನೆ ನಡೆದ ತಕ್ಷಣ ಅವಹೇಳನ ಮಾಡಿದ್ದ ತಪ್ಪಿತಸ್ಥನನ್ನು ಬಂಧಿಸಿದ್ದರೆ ಈ ಗಲಭೆ ಆಗುತ್ತಿರಲಿಲ್ಲ. ಹೀಗಾಗಿ ಇಡೀ ಘಟನೆ ನಡೆಯಲು ಪೊಲೀಸರು ಕಾರಣ. ಪೊಲೀಸರ ನಿರ್ಲಕ್ಷದಿಂದ ಘಟನೆ ನಡೆದಿದೆ. ನಮ್ಮ ಯುವಕರು ಕಾನೂನಿನ ಮೂಲಕ ಹೋರಾಟ ಮಾಡಿದ್ದರೆ ಇನ್ನೂ ಪರಿಣಾಮಕಾರಿಯಾಗಿರುತ್ತಿತ್ತು ಎಂದು ವೈರಲ್ ಆಗಿರುವ ವಿಡಿಯೋದಲ್ಲಿ ಹೇಳಿದ್ದಾರೆ.

ಕೈಕಟ್ಟಿ ಕುಳಿತ ಮುಖಂಡರು
ತಮ್ಮದೇ ಸಮುದಾಯದ ತಮ್ಮ ಧರ್ಮ ಗುರುಗಳು, ರಾಜಕೀಯ ನಾಯಕರು ಕೈ ಕಟ್ಟಿ ಕುಳಿತಿದ್ದಾರೆ ಎಂದು ಮಾತನಾಡಿರುವ ಮಹಿಳೆ ಆರೋಪಿಸಿದ್ದಾರೆ. ಘಟನೆ ನಡೆದ ರಾತ್ರಿಯೇ ಸಮುದಾಯದ ಮುಖಂಡರಾದ ಶಾಸಕರಾದ ಜಮೀರ್ ಅಹ್ಮದ್, ರಿಜ್ವಾನ್ ಆರ್ಷದ್, ಮುಜಾಮಿಲ್ ಪಾಷಾ ಇತರರು ಅದನ್ನ ತಡೆಗಟ್ಟಬಹುದಿತ್ತು. ಆದರೆ ಪೊಲೀಸರು ಈಗಲೂ ಕೂಡ ತಮ್ಮ ದ್ವೇಷವನ್ನು ನಮ್ಮ ಮೇಲೆ ಸಾರುತ್ತಿದ್ದಾರೆ.
ಮನೆಯಲ್ಲಿ ಮಲಗಿದ್ದ ಅಮಾಯಕ ಯುವಕರನ್ನ ಬಂಧಿಸುತ್ತಿದ್ದಾರೆ. ಪ್ರಕರಣದಲ್ಲಿ ತಪ್ಪು ಮಾಡಿವರಿಗೆ ಶಿಕ್ಷೆ ಆಗಲಿ. ಆದರೆ ಅಮಾಯಕ ಮಕ್ಕಳನ್ನು ಪೊಲೀಸರು ಜೈಲಿಗೆ ಹಾಕುತ್ತಿದ್ದಾರೆ. ನಮ್ಮ ಸಮುದಾಯದ ಮುಖಂಡರು ಕೈಕಟ್ಟಿ ಕುಳಿತಿದ್ದಾರೆಂದು ಆರೋಪಿಸಿದ್ದಾರೆ.

ಜೈಲು ಸೇರಿದವರನ್ನು ಬಿಡಿಸಿ
ಜೈಲು ಸೇರಿರುವ ನಮ್ಮವರನ್ನ ಬಿಡಿಸಬೇಕು. ಆದರೆ ಈಗ ಘಟನೆ ಬೆಳೆದು ಹೋಗಿದೆ ಈಗ ತಪ್ಪು ಮಾಡಿದವರಿಗೆ ಬೇಕಾದರೆ ಶಿಕ್ಷೆ ಆಗಲಿ. ನಮ್ಮ ಧರ್ಮದ ನಾಯಕರು ಈ ಸಮಯದಲ್ಲಿ ನಮ್ಮ ಜೊತೆ ನಿಲ್ಲಬೇಕು. ಕೇವಲ ಪತ್ರಿಕಾ ಹೇಳಿಕೆ ನೀಡುವುದು ಬೇಡ. ನಮ್ಮ ಧರ್ಮಗುರುಗಳು ಶಾಸಕನಿಗೆ ಮನೆ ಕಟ್ಟಿ ಕೊಡುವ ಮಾತು ಹೇಳುತ್ತಿದ್ದಾರೆ. ಕನಿಷ್ಠ ಪಕ್ಷ ಅಮಾಯಕರನ್ನು ಆದರೂ ರಕ್ಷಿಸಿ.
ಈ ವೇಳೆ ಮುಖಂಡರನ್ನು ನಂಬಿಕೊಂಡು ನಾವು ಕೈ ಕಟ್ಟಿ ಕುಳಿತರೆ ಮುಂದೆ ನಾವು ಗುಲಾಮರಾಗುತ್ತೇವೆ. ಆ ಬಗ್ಗೆ ಎಚ್ಚರಿಕೆ ಇರಲಿ ಎಂದಿದ್ದಾರೆ.
ನಾಲ್ವರು ಹುತಾತ್ಮ
ಘಟನೆಯಲ್ಲಿ ನಮ್ಮ ನಾಲ್ಕು ಯುವಕರು ಹುತಾತ್ಮರಾಗಿದ್ದಾರೆ. ಅವರ ಕುಟುಂಬಗಳ ಬಗ್ಗೆ ಕಾಳಜಿ ವಹಿಸುವುದನ್ನು ಬಿಟ್ಟು ಶಾಸಕನ ಮನೆ ಕಟ್ಟಿಸಿಕೊಡುವ ಬಗ್ಗೆ ನಮ್ಮ ಧರ್ಮಗುರುಗಳು, ಮುಖಂಡರು ಮಾತನಾಡುತ್ತಿದ್ದಾರೆ.
ಘಟನೆಯಲ್ಲಿ ಬಂಧನಕ್ಕೆ ಒಳಗಾಗಿರುವ ಆಮಾಯಕರನ್ನು ತಕ್ಷಣ ಬಿಡಿಸಿ. ಈಗಾಗಲೇ ನಾವು ಯಾವುದೇ ಶುಲ್ಕವಿಲ್ಲದೆ ವಕಾಲತ್ತು ವಹಿಸಲು ಸಿದ್ಧರಿದ್ದೇವೆ ಎಂದು ಅನೇಕ ನ್ಯಾಯವಾದಿಗಳು ಮುಂದೆ ಬರುತ್ತಿದ್ದಾರೆ. ಅವರ ಸಹಾಯವನ್ನು ಪಡೆದುಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.












Click it and Unblock the Notifications