ಪ್ರೇಮಿಗಾಗಿ ಉಂಡ ಮನೆಗೆ ಕನ್ನ ಹಾಕಿದ ಯುವತಿ

ಬಾಣಸವಾಡಿ, ಕಮ್ಮನಹಳ್ಳಿಯಲ್ಲಿ ವಾಸವಿದ್ದ ಮೂಡಿಗೆರೆ ತಾಲೂಕಿನ ಕವಿತಾ (23) ಹಾಗೂ ಈಕೆಯ ಪ್ರಿಯಕರ ಸುಬ್ರಹ್ಮಣ್ಯ ನಗರದ ಮಂಜುನಾಥ್ (27) ಬಂಧಿತರು. ಆರೋಪಿಗಳಿಂದ 14 ಲಕ್ಷ ರೂ. ಮೌಲ್ಯದ 545 ಗ್ರಾಂ ತೂಕದ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ರಾಜಾಜಿನಗರ ಎರಡನೇ ಹಂತದ ನಿವಾಸಿ ಜಯಲಕ್ಷ್ಮಿ ಎಂಬುವರ ಮನೆಯಲ್ಲಿ ಕವಿತಾ ಐದು ವರ್ಷಗಳಿಂದ ಕೆಲಸ ಮಾಡುತ್ತಿದ್ದಳು. ಜಯಲಕ್ಷ್ಮಿ ಅವರ ಪತಿ ಕೈಗಾರಿಕೋದ್ಯಮಿಯಾಗಿದ್ದು, ಜಯಲಕ್ಷ್ಮಿ ಅವರ ಮಗ ಮತ್ತು ಸೊಸೆ ಸಾಫ್ಟ್‌ವೇರ್ ಎಂಜಿನಿಯರ್‌ಗಳಾಗಿದ್ದಾರೆ. ಅನಾರೋಗ್ಯಪೀಡಿತ ಜಯಲಕ್ಷ್ಮಿ ಅವರು ತಮ್ಮ ಸಹಾಯಕ್ಕಾಗಿ ಕವಿತಾಳನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದರು. ಕವಿತಾಗೆ ಪಾಲಕರಿಲ್ಲದ ಕಾರಣ ಮನೆಯ ಮೇಲಿನ ಕೊಠಡಿಯನ್ನು ಆಕೆಯ ವಾಸ್ತವ್ಯಕ್ಕೆ ಬಿಟ್ಟುಕೊಟ್ಟಿದ್ದರು.
ಮಂಜುನಾಥನೊಂದಿಗೆ ಪ್ರೀತಿ: ಮನೆಯ ಸಂಪೂರ್ಣ ಜವಾಬ್ದಾರಿಯನ್ನು ಕವಿತಾಳಿಗೆ ವಹಿಸಿದ್ದರಿದ್ದ ಮನೆಗೆ ಬೇಕಾಗುವ ಸಾಮಾನುಗಳನ್ನು ತರಲು ಕವಿತಾ ಆಗಾಗ ಅಂಗಡಿಗೆ ಹೋಗುತ್ತಿದ್ದಳು. ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ನಗರದಲ್ಲಿ ಜೆರಾಕ್ಸ್ ಅಂಗಡಿ ನಡೆಸುತ್ತಿದ್ದ ಮಂಜುನಾಥ್‌ನ ಪರಿಚಯವಾಗಿದೆ. ಅವರಿಬ್ಬರ ಪರಿಚಯ ಪ್ರೇಮಕ್ಕೆ ತಿರುಗಿದೆ. ಅಷ್ಟೇ ಅಲ್ಲದೇ ಜಯಲಕ್ಷ್ಮಿಯವರಲ್ಲಿ ನಾನು ಮದುವೆಯಾಗುವ ಹುಡುಗ ಎಂದು ಕವಿತಾ ಮಂಜುನಾಥನನ್ನು ಪರಿಚಯಿಸಿದ್ದಳು.
ಜಯಲಕ್ಷ್ಮಿ ಅವರಲ್ಲಿ ಆಭರಣವಿರುವುದು ತಿಳಿಯುತ್ತಿದ್ದಂತೆ ಮಂಜುನಾಥ್ ಕವಿತಾಳಲ್ಲಿ ಕಳ್ಳತನ ಮಾಡಲು ಹೇಳಿದ್ದಾನೆ. ಅದರಂತೆ ಕವಿತಾ ಒಂದೊಂದೆ ಆಭರಣವನ್ನು ಕಳ್ಳತನ ಮಾಡಿ ಮಂಜುನಾಥನಿಗೆ ನೀಡುತ್ತಿದ್ದಳು. ಈ ಆಭರಣವನ್ನು ಮಾರಿ ಮಂಜುನಾಥ ಝೆರಾಕ್ಸ್ ಅಂಗಡಿಯನ್ನು ತೆರೆದಿದ್ದ.
ಆರೋಪಿ ಕವಿತಾ, ಇತ್ತೀಚೆಗೆ ಜಯಲಕ್ಷ್ಮಿ ಅವರಿಗೆ ತಿಳಿಸದೇ ನಾಪತ್ತೆಯಾಗಿದ್ದಳು. ಏಳು ದಿನಗಳ ಹಿಂದೆ ಜಯಲಕ್ಷ್ಮಿ ಅವರು ಕವಿತಾ ವಾಸವಾಗಿದ್ದ ಕೊಠಡಿಯನ್ನು ಪರಿಶೀಲಿಸುತ್ತಿದ್ದಾಗ ಗಿರವಿ ಅಂಗಡಿಯಲ್ಲಿ ಚಿನ್ನಾಭರಣ ಅಡವಿಟ್ಟಿದ್ದ ಚೀಟಿಯೊಂದು ಸಿಕ್ಕಿತ್ತು. ಇದರಿಂದ ಮತ್ತಷ್ಟು ಅನುಮಾನಗೊಂಡ ಅವರು ಮನೆಯ ಕಬೋರ್ಡ್‌ಗಳನ್ನು ತೆರೆದು ನೋಡಿದಾಗ ಆಭರಣಗಳು ನಾಪತ್ತೆಯಾಗಿರುವುದು ತಿಳಿದಿದೆ. ಮನೆಯಿಂದ ಆಭರಣಗಳು ಕಳುವಾದ ಹಿನ್ನಲೆಯಲ್ಲಿ ಜಯಲಕ್ಷ್ಮಿಯವರು ಸುಬ್ರಹ್ಮಣ್ಯ ನಗರ ಠಾಣೆಯಲ್ಲಿ ದೂರು ನೀಡಿದ್ದರು.
ದೂರಿನ ಹಿನ್ನಲೆಯಲ್ಲಿ ಕವಿತಾಳ ವಿಳಾಸ ಪತ್ತೆ ಮಾಡಿ ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳವು ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications