ಐ ಯಾಮ್ ಸಾರಿ, ಚರಣ್ ಬಿಟ್ಟು ಬದುಕಲಾರೆ!
ಬೆಂಗಳೂರು, ಡಿಸೆಂಬರ್ 07 : 11ನೇ ಮಹಡಿಯಿಂದ ಬಿದ್ದು ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಕಸ್ತೂರ ಬಾ ರಸ್ತೆಯಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು ಬ್ಯಾಟರಾಯನಪುರ ನಿವಾಸಿ ಪೂಜಾ (21) ಎಂದು ಗುರುತಿಸಲಾಗಿದೆ. ಪ್ರಿಯತಮನ ಅಗಲಿಕೆಯ ದುಃಖ ತಾಳಲಾರದೆ ಮನನೊಂದು ಪೂಜಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.

ಕಸ್ತೂರ ಬಾ ರಸ್ತೆಯಲ್ಲಿರುವ Prestige obelisk ಕಟ್ಟಡದ 11ನೇ ಮಹಡಿಯಿಂದ ಹಾರಿ ಪೂಜಾ ಸೋಮವಾರ ಮಧ್ಯಾಹ್ನ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದೇ ಕಟ್ಟಡದಲ್ಲಿರುವ ಬಾಬಾ ಜಾನ್ಸ್ ಕಂಪನಿಯಲ್ಲಿ ಪೂಜಾ ಕೆಲಸ ಮಾಡುತ್ತಿದ್ದಳು.
ಪೂಜಾ ತನ್ನ ಜೊತೆ ಕೆಲಸ ಮಾಡುತ್ತಿದ್ದ ಜೆಸಿ ನಗರದ ನಿವಾಸಿ ಚರಣ್ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು. ಡಿಸೆಂಬರ್ 5ರಂದು ಹುಣಸಮಾರನಹಳ್ಳಿ ಬಳಿ ನಡೆದ ಅಪಘಾತದಲ್ಲಿ ಚರಣ್ ಮೃತಪಟ್ಟಿದ್ದ.
ಪ್ರಿಯತಮನ ಸಾವಿನ ದುಃಖ ತಾಳಲಾರದೆ ಡೆತ್ ನೋಟ್ ಬರೆದಿಟ್ಟಿದ್ದು ಪೂಜಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಡೆತ್‌ನೋಟ್‌ನಲ್ಲಿ 'ನಾನು ಆತ್ಮಹತ್ಯೆ ಮಾಡಿಕೊಳ್ಳಬಾರದು. ಆದರೆ, ನನಗೆ ತುಂಬಾ ಸಮಸ್ಯೆ ಇದೆ. ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಆಗುತ್ತಿಲ್ಲ. ನನ್ನನ್ನು ನಂಬಿದವರಿಗೆ ಮೋಸ ಮಾಡುತ್ತಿದ್ದೇನೆ. ಐ ಯಾಮ್ ಸಾರಿ' ಎಂದು ಬರೆದಿಟ್ಟಿದ್ದಾಳೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ಕಬ್ಬನ್ ಪಾರ್ಕ್ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಪೂಜಾ ಮೊಬೈಲ್ ಫೋನ್ ಅನ್ನು ವಶಕ್ಕೆ ಪಡೆದಿರುವ ಪೊಲೀಸರು, ಶವವನ್ನು ಬೌರಿಂಗ್ ಆಸ್ಪತ್ರೆಗೆ ಸಾಗಿಸಿದ್ದಾರೆ.












Click it and Unblock the Notifications