ಗೌರಿ ಕೊಲೆಗಡುಕರ ಪತ್ತೆಗೆ ಸಹಾಯ ಮಾಡುವುದೆ ಸಿಸಿಟಿವಿ
ಬೆಂಗಳೂರು, ಸೆಪ್ಟೆಂಬರ್ 03 : ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಮಾಡಿದವರ ಪತ್ತೆಗಾಗಿ ಪೊಲೀಸರ 3 ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಕೊಲೆಗಡುಕರ ಪತ್ತೆಗಾಗಿ ನಾಕಾಬಂದಿ ಹಾಕುವಂತೆ ನಗರದ ಎಲ್ಲ ಡಿಸಿಪಿಗಳಿಗೆ ಬೆಂಗಳೂರು ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಅವರು ಸೂಚನೆ ನೀಡಿದ್ದಾರೆ.
ಗೌರಿ ಲಂಕೇಶ್ ಹತ್ಯೆ: ಆಕ್ರೋಶ ವ್ಯಕ್ತಪಡಿಸಿದ ಹಿರಿಯ ಪತ್ರಕರ್ತರು
ಗೌರಿ ಲಂಕೇಶ್ ಅವರು ಕೆಲಸ ಮುಗಿಸಿಕೊಂಡು ರಾಜರಾಜೇಶ್ವರಿ ನಗರದಲ್ಲಿರುವ ಮನೆಯ ಮುಂದೆ ಕಾರಿನಿಂದಿಳಿದು ಸಂಜೆ 8 ಗಂಟೆಯ ಸುಮಾರಿಗೆ ಒಳಹೋಗುತ್ತಿದ್ದಾಗ ಅಪರಿಚಿತ ವ್ಯಕ್ತಿಗಳು ಅತ್ಯಂತ ಹತ್ತಿರದಿಂದ ಅವರ ಮೇಲೆ ಗುಂಡು ಹಾರಿಸಿದ್ದು, ಕ್ಷಣಾರ್ಧದಲ್ಲಿ ನಾಪತ್ತೆಯಾಗಿದ್ದಾರೆ.
ಮನೆಯ ಮುಂದಿರುವವರು ಗುಂಡು ಹಾರಿದ ಶಬ್ಧ ಕೇಳಿ ಬರುವಷ್ಟರಲ್ಲಿ ನಡೆಯಬಾರದ್ದು ನಡೆದುಹೋಗಿದೆ. ಗೌರಿ ಲಂಕೇಶ್ ಅವರು ರಕ್ತದ ಮಡುವಿನಲ್ಲಿ ಬಿದ್ದಿದ್ದು ನೋಡಿ ಕೂಡಲೆ ಪೊಲೀಸರಿಗೆ ತಿಳಿಸಿದ್ದಾರೆ. ಈ ಸಮಯದಲ್ಲಿ ಮನೆಯ ಬಳಿ ಕತ್ತಲು ಇದ್ದಿದ್ದರಿಂದ ಅಪರಿಚಿತರು ಯಾರು ಎಂದು ಕೂಡ ಗುರುತು ಹಿಡಿಯಲು ಸಾಧ್ಯವಾಗಿಲ್ಲ.

ಆಯುಕ್ತ ಟಿ ಸುನೀಲ್ ಕುಮಾರ್ ಅವರ ಪ್ರಕಾರ, ಸಾಕಷ್ಟು ಸಿದ್ಧತೆ ಮಾಡಿಕೊಂಡು ಬಂದಿದ್ದ ದುಷ್ಕರ್ಮಿಗಳು ಗೌರಿಯವರ ಮೇಲೆ ದಾಳಿ ಮಾಡಲು ಹೊಂಚು ಹಾಕಿ ಕುಳಿತಿದ್ದರು. ಬೈಕ್ ನಲ್ಲಿ ಬಂದಿದ್ದ ಅವರು, ಗೌರಿಯವರ ಮೇಲೆ ಗುಂಡಿನ ಸುರಿಮಳೆಗರೆದು ಪರಾರಿಯಾಗಿದ್ದಾರೆ.
ಗೌರಿ ಲಂಕೇಶ್ ಮನೆಯ ಮುಂದೆ ಎರಡು ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದ್ದು, ಅವರನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದು, ಇದು ಹಂತಕರನ್ನು ಪತ್ತೆ ಹಚ್ಚುವಲ್ಲಿ ಖಂಡಿತ ಸಹಕಾರಿಯಾಗಲಿದೆ. ದುಷ್ಕರ್ಮಿಗಳು ಆದಷ್ಟು ಬೇಗನೆ ಪತ್ತೆ ಹಚ್ಚುತ್ತೇವೆ ಎಂದು ಸುನೀಲ್ ಕುಮಾರ್ ಮಾಧ್ಯಮಗಳಿಗೆ ತಿಳಿಸಿದರು.
ಮೈಸೂರು ರಸ್ತೆ, ಬಳ್ಳಾರಿ ರಸ್ತೆ, ತುಮಕೂರು ರಸ್ತೆ ಸೇರಿದಂತೆ ನಗರದಿಂದ ಹೊರಹೋಗುವ ಎಲ್ಲ ರಸ್ತೆಗಳಲ್ಲಿ ಈಗಾಗಲೆ ನಾಕಾಬಂದಿ ಹಾಕಲಾಗಿದ್ದು ಅಲ್ಲಿ ಸಾಗುತ್ತಿರುವ ಪ್ರತಿಯೊಬ್ಬರನ್ನು ತಪಾಸಣೆಗೆ ಗುರಿ ಮಾಡಲಾಗುತ್ತಿದೆ.












Click it and Unblock the Notifications