ಶಮಿವಿಟ್‌ನೆಸ್ ಕೇಸ್ ಐಒ ವರ್ಗಾವಣೆ ಮಾಡಿದ್ದು ಏಕೆ?
ಬೆಂಗಳೂರು, ಜ.2: ಶಂಕಿತ ಉಗ್ರ ಮೆಹದಿ ಟ್ವಿಟ್ಟರ್ @shammiwitness ಪ್ರಕರಣದ ತನಿಖಾಧಿಕಾರಿ ಹೇಮಂತ್ ನಿಂಬಾಳ್ಕರ್ ಅವರ ವರ್ಗಾವಣೆ ಹಲವರ ಹುಬ್ಬೇರಿಸಿದೆ. ಆದರೆ, ಪೊಲೀಸ್ ಇಲಾಖೆ ಮೂಲಗಳ ಪ್ರಕಾರ ಈ ವರ್ಗಾವಣೆ ಮಾಮೂಲಿ ಪ್ರಕ್ರಿಯೆಯಾಗಿದ್ದು, ಇದರಲ್ಲಿ ಯಾವುದೇ ಬೇರೆ ಉದ್ದೇಶವಿಲ್ಲ ಎಂದು ತಿಳಿದು ಬಂದಿದೆ.
ಹೇಮಂತ್ ನಿಂಬಾಳ್ಕರ್ ಅವರನ್ನು ಡಿಐಜಿ ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವಾ ವಿಭಾಗ, ಬೆಂಗಳೂರು ಆಗಿ ನೇಮಿಸಲಾಗಿದೆ. ಈ ಮುಂಚೆ ಜಂಟಿ ಆಯುಕ್ತ(ಕ್ರೈಂ)ರಾಗಿ ಕಾರ್ಯನಿರ್ವಹಿಸುತ್ತಿದ್ದರು. ಕೆವಿ ಗಗನ್ ದೀಪ್ ಅವರಿಂದ ತೆರವಾದ ಸ್ಥಾನವನ್ನು ನಿಂಬಾಳ್ಕರ್ ತುಂಬಿದರೆ, ಹೇಮಂತ್ ಅವರ ಸ್ಥಾನಕ್ಕೆ ಎಂ ಚಂದ್ರಶೇಖರ್ ನೇಮಿಸಲಾಗಿದೆ. [ಬೆಂಗಳೂರು ಸ್ಫೋಟ : ಮೆಹದಿ ಬಂಧನಕ್ಕೆ ಪ್ರತೀಕಾರವೆ?]

ತನಿಖೆ ಮುಕ್ತಾಯವಾಗಿದೆ
ಮೆಹ್ದಿ ಟ್ವಿಟ್ಟರ್ @shammiwitness ಪ್ರಕರಣದ ತನಿಖೆ ಮುಕ್ತಾಯವಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಒನ್ ಇಂಡಿಯಾಕ್ಕೆ ತಿಳಿಸಿದ್ದಾರೆ. ಹೀಗಾಗಿ ಮೆಹ್ದಿಯನ್ನು ತಮ್ಮ ವಶಕ್ಕೆ ಪಡೆದುಕೊಳ್ಳಲು ಕರ್ನಾಟಕ ಪೊಲೀಸರು ಇಚ್ಛೆಪಟ್ಟಿಲ್ಲ. ಸದ್ಯ ಮೆಹ್ದಿ ನ್ಯಾಯಾಂಗ ಬಂಧನದಲ್ಲಿದ್ದಾನೆ.
ಮೆಹ್ದಿಗೆ ಅರೇಬಿಕ್ ಭಾಷೆಯ ಪರಿಚಯವಿಲ್ಲ. ಇಂಟರ್ನೆಟ್ ಬಳಕೆ, ಟ್ವಿಟ್ಟರ್ ಬಗ್ಗೆ ಅರಿವಿದೆ. ಐಎಸ್ ಐಎಸ್ ಉಗ್ರ ಸಂಘಟನೆಯ ಪರ ಸಂದೇಶಗಳನ್ನು ಟ್ವೀಟ್ ಮಾಡಲು ಭಾಷಾಂತರ ಮಾಡುವ ಟೂಲ್ ಗಳನ್ನು ಬಳಸಿ ಅರೇಬಿಕ್ ಭಾಷೆಯಲ್ಲಿ ಟ್ವೀಟ್ ಮಾಡುತ್ತಿದ್ದ ಇದರಿಂದ ಹೆಚ್ಚಿನ ಜನರನ್ನು ತಲುಪುತ್ತಿದ್ದ ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ. [ಶಮಿವಿಟ್‌ನೆಸ್ ಸಂಪರ್ಕ ಹೊಂದಿದ ಎಲ್ಲರ ವಿಚಾರಣೆ]

ಹೇಮಂತ್ ವರ್ಗಾವಣೆ ಕಾಕತಾಳೀಯ
ಮೆಹ್ದಿ ಕೇಸ್ ವಿಚಾರಣೆ ಮುಕ್ತಾಯವಾಗಿರುವ ಬೆನ್ನಲ್ಲೇ ತನಿಖಾಧಿಕಾರಿ ಹೇಮಂತ್ ನಿಂಬಾಳ್ಕರ್ ಅವರ ವರ್ಗಾವಣೆಯಾಗಿರುವುದು ಕಾಕತಾಳೀಯವಾಗಿದೆ. 22 ಐಪಿಎಸ್ ಹಾಗೂ 16 ಐಎಎಸ್ ಅಧಿಕಾರಿಗಳನ್ನು ಕರ್ನಾಟಕ ಸರ್ಕಾರ 2014 ವರ್ಷದ ಕೊನೆ ದಿನ ವರ್ಗಾವಣೆ ಮಾಡಿತ್ತು. ಹೀಗಾಗಿ ಹೇಮಂತ್ ವರ್ಗಾವಣೆಯಲ್ಲಿ ಅಂಥ ವಿಶೇಷವೇನಿಲ್ಲ ಎಂದು ಗೃಹ ಸಚಿವಾಲಯ ಸ್ಪಷ್ಟಪಡಿಸಿದೆ. [ಚರ್ಚ್ ಸ್ಟ್ರೀಟ್ ನಲ್ಲಿ ಬಾಂಬ್ ಇಟ್ಟವ ಬಿಹಾರದಲ್ಲಿ ಸೆರೆ?]
ಚಾರ್ಜ್ ಶೀಟ್ ಹಾಕಲು ಸಿದ್ಧ
ಮೆಹ್ದಿ ವಿಚಾರಣೆ ಮುಗಿದಿದ್ದು, ಬಂಧನ ಅವಧಿ ಮುಕ್ತಾಯವಾಗಿದೆ. ಅದರೆ, ನ್ಯಾಯಾಂಗ ಬಂಧನದಲ್ಲಿರುವ ಮೆಹ್ಡಿ ವಿಚಾರಣೆ ಮತ್ತೆ ನಡೆಸಲು ಪೊಲೀಸರು ಉತ್ಸುಕರಾಗಿಲ್ಲ. ಹೀಗಾಗಿ ಅಗತ್ಯ ದಾಖಲೆಗಳೊಂದಿಗೆ ಶೀಘ್ರದಲ್ಲೇ ಚಾರ್ಜ್ ಶೀಟ್ ಸಲ್ಲಿಸಲು ನಿರ್ಧರಿಸಿದ್ದಾರೆ. ಈ ಬಗ್ಗೆ ಕಾನೂನು ತಜ್ಜರೊಡನೆ ಸಮಾಲೋಚನೆ ಆರಂಭವಾಗಿದೆ. ಬಂಧನವಾದ ದಿನದಿಂದ 90 ದಿನದೊಳಗೆ ದೋಷಾರೋಪಣ ಪಟ್ಟಿ ಸಲ್ಲಿಸದಿದ್ದರೆ ಆರೋಪಿ ಜಾಮೀನು ಸುಲಭವಾಗಿ ಪಡೆಯಲು ದಾರಿ ಮಾಡಿಕೊಟ್ಟಂತಾಗುತ್ತದೆ.











Click it and Unblock the Notifications