ಚುನಾವಣೆ ಹೊತ್ತಲ್ಲಿ ಡಿಕೆಶಿಗೆ ಹೊಸ ಟೆನ್ಷನ್: ತನಿಖೆ ವಿಳಂಬದ ಬಗ್ಗೆ ಸಿಬಿಐಗೆ ಹೈಕೋರ್ಟ್ ಪ್ರಶ್ನೆ
ಬೆಂಗಳೂರು, ಏಪ್ರಿಲ್ 06: ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ವಿರುದ್ಧ ಕೇಂದ್ರೀಯ ತನಿಖಾ ದಳವು (ಸಿಬಿಐ) ಎಫ್ಐಆರ್ ದಾಖಲಿಸಿ ಸುಮಾರು ನಾಲ್ಕು ವರ್ಷಗಳಾದರೂ ಅಂತಿಮ ವರದಿ ಸಲ್ಲಿಸದಿರುವ ಕುರಿತು ಶುಕ್ರವಾರ ಹೈಕೋರ್ಟ್ ಪ್ರಶ್ನಿಸಿದೆ.
ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣದ ತನಿಖೆಗೆ ರಾಜ್ಯ ಸರ್ಕಾರ ನೀಡಿದ್ದ ಅನುಮತಿ ಹಿಂಪಡೆದಿದ್ದ ಕ್ರಮ ಪ್ರಶ್ನಿಸಿ ಸಿಬಿಐ ಮತ್ತು ಬಿಜೆಪಿ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಕೆ.ಸೋಮಶೇಖರ್ ಮತ್ತು ಉಮೇಶ್ ಎಂ. ಅಡಿಗ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ಕೆಲ ಕಾಲ ವಾದ ಆಲಿಸಿದ ಬಳಿಕ, ಸಿಬಿಐ ಇನ್ನೂ ವಿಚಾರಣೆ ಆರಂಭಿಸಿಲ್ಲವೇ? ಸಿಬಿಐ ಯಾವಾಗ ಎಫ್ಐಆರ್ ದಾಖಲಿಸಿತು ಎಂದು ಸಿಬಿಐ ವಿಶೇಷ ಸರ್ಕಾರಿ ಅಭಿಯೋಜಕರನ್ನು ಪ್ರಶ್ನಿಸಿತು.
ಅದಕ್ಕೆ ಉತ್ತರಿಸಿದ ವಕೀಲರು, "2020ರ ಅಕ್ಟೋಬರ್ 3ರಂದು ಎಫ್ಐಆರ್ ದಾಖಲಿಸಲಾಗಿದೆ. ಇದರಲ್ಲಿ ಎರಡು ವರ್ಷ ಕೋವಿಡ್‌ನಿಂದಾಗಿ ತನಿಖೆ ನಡೆಸಲಾಗಿಲ್ಲ. ಒಂದು ವರ್ಷ ಅರ್ಜಿದಾರರು ಪ್ರಕರಣದ ವಿಚಾರಣೆಗೆ ತಡೆ ಪಡೆದುಕೊಂಡಿದ್ದರಿಂದ ಯಾವುದೇ ಬೆಳವಣಿಗೆಯಾಗಿಲ್ಲ. ಇನ್ನೂ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ.ಕೆ ಶಿವಕುಮಾರ್ ಅವರು ಆರು ಅರ್ಜಿಗಳನ್ನು ನ್ಯಾಯಾಲಯದಲ್ಲಿ ಸಲ್ಲಿಕೆ ಮಾಡಿದ್ದಾರೆ ಎಂದರು. ಈ ಸಂಬಂಧ ವಿಸ್ತೃತ ಬೆಳವಣಿಗೆಯನ್ನು ನ್ಯಾಯಾಲಯದ ಮುಂದಿಡಲಾಗುವುದು" ಎಂದು ವಿವರಿಸಿದರು.
ಶೇ.49ರಷ್ಟು ಆಸ್ತಿ ಹೆಚ್ಚಳ
"ರಾಜ್ಯ ಸರ್ಕಾರವು ಸಿಬಿಐಗೆ ಅನುಮತಿ ಹಿಂಪಡೆದಿರುವ ಆದೇಶದಲ್ಲಿ ಕಾರಣಗಳನ್ನು ನೀಡಿಲ್ಲ. ಡಿ.ಕೆ ಶಿವಕುಮಾರ್ ಅವರ ಅಕ್ರಮ ಆಸ್ತಿಯು 2013-18ರ ಅವಧಿಯಲ್ಲಿ 74.93 ಕೋಟಿ ರೂಪಾಯಿಯಷ್ಟಿದ್ದು, ಶೇ. 49.13ರಷ್ಟು ಹೆಚ್ಚಳವಾಗಿದೆ"ಎಂದರು.
"ಸಿಬಿಐ ತನಿಖೆ ರದ್ದತಿ ಕೋರಿ ಡಿ.ಕೆ ಶಿವಕುಮಾರ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಹೈಕೋರ್ಟ್‌ನ ಏಕಸದಸ್ಯ ಪೀಠವು ವಜಾ ಮಾಡಿತ್ತು. ಇದನ್ನು ಪ್ರಶ್ನಿಸಿ ಡಿ.ಕೆ ಶಿವಕುಮಾರ್ ಅವರು ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದು, ವಿಚಾರಣೆ ಬಾಕಿ ಇದ್ದಾಗ ಸಿಬಿಐಗೆ ನೀಡಿದ್ದ ಅನುಮತಿ ಹಿಂಪಡೆಯಲಾಗಿದೆ" ಎಂದು ಆಕ್ಷೇಪಿಸಿದರು.
ಸಿಬಿಐಗೆ ಅವಕಾಶಕ್ಕೆ ಮನವಿ
"ಜನರಲ್ ಕ್ಲಾಸಸ್ ಕಾಯಿದೆ ಅಡಿ ಸಿಬಿಐಗೆ ನೀಡಿದ್ದ ಅನುಮತಿ ಹಿಂಪಡೆಯುವ ಅಧಿಕಾರವನ್ನು ಸರ್ಕಾರ ಹೊಂದಿದೆಯೇ? ಒಂದು ವೇಳೆ ರಾಜ್ಯ ಸರ್ಕಾರಕ್ಕೆ ಆ ಅಧಿಕಾರ ಇದೆ ಎಂದಾದರೆ ಸಿಬಿಐ ದಾಖಲಿಸಿರುವ ಎಫ್ಐಆರ್ ಗತಿ ಏನು? ಜನರಲ್ ಕ್ಲಾಸಸ್ ಕಾಯಿದೆ ಅಡಿ ಸಿಬಿಐಗೆ ನೀಡಿದ್ದ ಅನುಮತಿ ಹಿಂಪಡೆಯುವ ಅಧಿಕಾರ ಸರ್ಕಾರಕ್ಕೆ ಇದೆ ಎಂದಾದರೂ ತನಿಖೆ ಪೂರ್ಣಗೊಳಿಸಿ, ಅಂತಿಮ ವರದಿ ಸಲ್ಲಿಸಲು ಸಿಬಿಐಗೆ ಅವಕಾಶ ಮಾಡಿಕೊಡಬೇಕು" ಎಂದು ಕೋರಿದರು. ವಾದ ಆಲಿಸಿದ ಪೀಠವು ವಿಚಾರಣೆಯನ್ನು ಏಪ್ರಿಲ್ 18ಕ್ಕೆ ವಿಚಾರಣೆ ಮುಂದೂಡಿತು.












Click it and Unblock the Notifications