ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಸಂದೇಶ: ನಂತರ ಆಗಿದ್ದೇನು?
ಮಕ್ಕಳ ಕೈಗೆ ಮೊಬೈಲ್ ಕೊಟ್ಟು ನಿರ್ಲಕ್ಷ್ಯ ವಹಿಸಿದರೆ ಏನೆಲ್ಲಾ ಆಗುತ್ತದೆ ಎನ್ನುವುದಕ್ಕೆ ಇದೊಂದು ಉದಾಹರಣೆ. ಮಕ್ಕಳು ಮಾಡಿದ ತಪ್ಪಿಗೆ ಪೋಷಕರು ಈಗ ಪರಿತಪಿಸುವಂತಾಗಿದೆ. ಹೌದು, ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್ ಸ್ಫೋಟದ ಬೆದರಿಕೆ ಸಂದೇಶದ ಬಂದಿದ್ದು, ನಂತರ ಮತ್ತೊಂದು ಸಂದೇಶದಲ್ಲಿ ಸ್ಪಷ್ಟನೆ ನೀಡಲಾಗಿದೆ.
ಸೋಮವಾರ ಬೆಳಗ್ಗೆ 11.43ಕ್ಕೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಗ್ರಾಹಕರ ಕೇಂದ್ರಕ್ಕೆ ಯುವಕನೊಬ್ಬ ಮೊಬೈಲ್ ಸಂಖ್ಯೆಗೆ ವಾಟ್ಸ್‌ಆ್ಯಪ್ ಸಂದೇಶ ಕಳುಹಿಸಿದ್ದು, ಅದರಲ್ಲಿ 'ನಾನು ಭಯೋತ್ಪಾದಕ, ಸಂಜೆ 7 ಗಂಟೆಗೆ ವಿಮಾನ ನಿಲ್ದಾಣಕ್ಕೆ ಬಾಂಬ್ ಸ್ಫೋಟಿಸುತ್ತೇಣೆ' ಎಂದು ಬರೆದಿತ್ತು.

ಕೆಲವೇ ನಿಮಿಷಗಳಲ್ಲಿ, "ದಯವಿಟ್ಟು ನನ್ನನ್ನು ಕ್ಷಮಿಸಿ, ನನ್ನ ಮಗ ಸಂದೇಶವನ್ನು ಕಳುಹಿಸಿದ್ದಾನೆ" ಎಂದು ಮತ್ತೊಂದು ಸಂದೇಶ ಬಂದಿತು. ಬೆದರಿಕೆ ಮತ್ತು ಸ್ಪಷ್ಟೀಕರಣ ಎರಡನ್ನೂ ಏಳು ನಿಮಿಷಗಳಲ್ಲಿ ಅವಧಿಯಲ್ಲಿ ಪಡೆಯಲಾಗಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ವ್ಯವಸ್ಥಾಪಕರಿಂದ ದೂರು ದಾಖಲು
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಕೆಐಎ ಟರ್ಮಿನಲ್ ಮ್ಯಾನೇಜರ್ ಮೊಹಮ್ಮದ್ ಜಹೀರ್ ಅವರು ಮಂಗಳವಾರ ಮಧ್ಯಾಹ್ನ ಬಿಐಎಎಲ್ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ಮೊಬೈಲ್ ಬಳಕೆದಾರರು ಬೇರೆ ರಾಜ್ಯದವರು ಎಂದು ತಿಳಿದು ಬಂದಿದೆ. ಶಂಕಿತರ ವಿರುದ್ಧ 'ಅನಾಮಧೇಯ ಸಂವಹನ ಮತ್ತು ಸಾರ್ವಜನಿಕ ಕಿಡಿಗೇಡಿತನದಿಂದ ಕ್ರಿಮಿನಲ್ ಬೆದರಿಕೆ' ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.
ಪಶ್ಚಿಮ ಬಂಗಾಳದಿಂದ ಸಂದೇಶ
ಈ ಸಂದೇಶವನ್ನು ಪಶ್ಚಿಮ ಬಂಗಾಳದಿಂದ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಘಟನೆಗೆ ಸಂಬಂಧಪಟ್ಟಂತೆ ಇನ್ನೂ ಯಾರನ್ನೂ ಬಂಧಿಸಿಲ್ಲ, ಎರಡೂ ಸಂದೇಶಗಳ ಹಿಂದೆ ಒಂದೇ ವ್ಯಕ್ತಿ ಇದ್ದಾನೆಯೇ ಅಥವಾ ಅದು ಸಂದೇಶವನ್ನು ನಿಜವಾಗಿ ಬಾಲಕನೇ ಕಳುಹಿಸಿದ್ದಾ, ಪೋಷಕರು ಮತ್ತು ಮಗನೇ ಎಂಬುದು ಸ್ಪಷ್ಟವಾಗಿಲ್ಲ. ಯಾರ ಹೆಸರಿನಲ್ಲಿ ಸಿಮ್ ಕಾರ್ಡ್ ನೀಡಲಾಗಿದೆಯೋ ಅವರ ವಿಳಾಸದ ವಿವರಗಳನ್ನು ಪಡೆಯಲಾಗಿದೆ. ಪೋಷಕರು ತಂದೆ ಅಥವಾ ತಾಯಿಯೇ ಎಂಬುದು ಸ್ಪಷ್ಟವಾಗಿಲ್ಲ. ಶಂಕಿತರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು' ಎಂದು ತನಿಖೆಯ ಭಾಗವಾಗಿರುವ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ.
ಬೆದರಿಕೆ ಕಳುಹಿಸಿದ ವ್ಯಕ್ತಿಯನ್ನು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಸಂಪರ್ಕಿಸಿದ್ದು, ಹೌರಾದ ವ್ಯಕ್ತಿಯೊಬ್ಬ "ನಾನು ಸಾಮಾನ್ಯ ವ್ಯಕ್ತಿ, ಅಪರಾಧಿಯಲ್ಲ. ಆದರೆ ನನ್ನ ಫೋನ್‌ನಿಂದ ಗೊತ್ತಿಲ್ಲದೆ ಈ ರೀತಿಯಾಗಿದೆ. ಅಥವಾ ನನ್ನ ಸಂಖ್ಯೆಯನ್ನು ದುರುಪಯೋಗಪಡಿಸಿಕೊಂಡಿರಬಹುದು" ಎಂದು ಹೇಳಿದ್ದಾರೆ. ಈ ವಿಚಾರ ತಿಳಿದ ನಂತರ ನನಗೆ ತುಂಬಾ ಆತಂಕವಾಗಿದೆ. ನನ್ನಲ್ಲಿ ಫೋನ್ ಸಮಸ್ಯೆಗಳಿವೆ, ಮುಂದಿನ ದಿನಗಳಲ್ಲಿ ಈ ರೀತಿ ಮಾಡುವುದಿಲ್ಲ" ಎಂದು ಹೇಳಿದ್ದಾರೆ. ಬಿಐಎಎಲ್ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications