ಬೆಂಗಳೂರಲ್ಲಿ ಅಪರಿಚಿತೆ ವಿದ್ಯಾರ್ಥಿ ಕೈಗಿತ್ತ ಬ್ಯಾಗಿನಲ್ಲಿ ಭಯಪಡುವಂಥದ್ದೇನಿತ್ತು?
ಬೆಂಗಳೂರು, ಸೆಪ್ಟೆಂಬರ್ 7: ವಿದ್ಯಾರ್ಥಿಗಳಿಬ್ಬರು ಟೀ ಕುಡಿಯುತ್ತಾ ನಿಂತ ಸಮಯದಲ್ಲಿ ಕೆಂಪು ಸೀರೆಯುಟ್ಟ ಅಪರಿಚಿತೆ ಬ್ಯಾಗನ್ನು ಅವರ ಪಕ್ಕದಲ್ಲಿಡುತ್ತಾ ಒಂದೆರೆ ನಿಮಿಷ ಬ್ಯಾಗ್ ನೋಡಿಕೊಳ್ಳಿ ಬರುತ್ತೇನೆ ಎಂದು ಹೋರಟು ಹೋಗಿದ್ದಾಳೆ.
ನೀರು ಕುಡಿದು ಶೌಚಾಲಯಕ್ಕೆ ಹೋದವಳು ಎಷ್ಟೊತ್ತಾದರೂ ಪತ್ತೆಯಿಲ್ಲ, ವಿದ್ಯಾರ್ಥಿಗಳಿಗೂ ಕಾಲೇಜಿಗೆ ಹೋಗಲು ತಡವಾಗಿದೆ.
ಹಾಗಾಗಿ ಆ ಮಹಿಳೆಯನ್ನು ಹುಡುಕಾಡಿದ್ದಾರೆ. ಎಲ್ಲೂ ಕಾಣಿಸಿಲ್ಲ, ಹಾಗಾದರೆ ಬ್ಯಾಗನ್ನು ಹೋಟೆಲ್‌ನವರಿಗೆ ತಲುಪಿಸಿ ಬಿಡೋಣ ಎಂದು ಹೊರಡುವಷ್ಟರಲ್ಲಿ ಬ್ಯಾಗ್ ಅಲುಗಾಡಿದೆ.
ಏರ್ಪೋರ್ಟ್ನಲ್ಲಿ ಮಹಿಳೆಯ ಕೈಚೀಲದೊಳಗಿತ್ತು 6 ದಿನದ ಶಿಶು
ವಿದ್ಯಾರ್ಥಿಗಳು ಭಯದಿಂದಲೇ ಬ್ಯಾಗನ್ನು ತೆರೆದಾಗ ಅದರಲ್ಲಿ ಗಂಡು ಮಗು ಇದ್ದಿದ್ದು, ನೋಡಿ ಒಂದೆಡೆ ಆಶ್ಚರ್ಯ ಇನ್ನೊಂದೆಡೆ ಆತಂಕ ವ್ಯಕ್ತವಾಗಿದೆ.
ಆಗ ತಾನೆ ಹುಟ್ಟಿದ ಮಗು ಇನ್ನೂ ಕಣ್ಣುಬಿಟ್ಟಲ್ಲ, ಪ್ರಪಂಚರಿತಿಲ್ಲ, ತಂದೆ-ತಾಯಿ ಯಾರೆಂದೂ ಗೊತ್ತಿಲ್ಲ. ತಾವು ಆ ಮಗುವನ್ನು ಎಲ್ಲಿ ತಲುಪಿಸಬೇಕು ಎನ್ನುವ ಆತಂಕ ಇನ್ನೊಂದೆಡೆ ಇತ್ತು.
ಮೊದಲೆಲ್ಲಾ ಭ್ರೂಣ ಹತ್ಯೆ ಹೆಚ್ಚಾಗಿ ನಡೆಯುತ್ತಿತ್ತು, ಅದಕ್ಕೆ ಕಡಿವಾಣ ಹಾಕಲು ಸರ್ಕಾರವು ಸಾಕಷ್ಟು ಕಾನೂನುಗಳನ್ನು ತಂದಿದೆ ಆಸ್ಪತ್ರೆಗಳಲ್ಲೂ ಅದಕ್ಕೆ ಆಸ್ಪದವಿಲ್ಲ, ಹೀಗಾಗಿ ಮಗು ಹುಟ್ಟಿದ ಮೇಲೆ ಬಿಟ್ಟು ಹೋಗುವ ಪರಿಪಾಠ ಆರಂಭವಾಗಿದೆ.
ಏನಾದರಾಗಲಿ ಎಂದು ತಕ್ಷಣವೇ ಚಾಮರಾಜಪೇಟೆ ಪೊಲೀಸರಿಗೆ ಮಗುವನ್ನು ಹಸ್ತಾಂತರಿಸಿ ನಡೆದ ವಿಚಾರವನ್ನು ತಿಳಿಸಿದ್ದಾರೆ. ವಿಷಯ ತಿಳಿದ ಅನೇಕರು ಮಗುವನ್ನು ದತ್ತು ಪಡೆಯಲು ಪೊಲೀಸ್ ಠಾಣೆ ಎದುರು ದೌಡಾಯಿಸಿದ್ದರು. ಆದರೆ ಪೊಲೀಸರು ಅದಕ್ಕೆ ಅವಕಾಶ ಮಾಡಿಕೊಡದೆ ಶಿಶುವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಹಸ್ತಾಂತರಿಸಿದ್ದಾರೆ.
ಆ ಪ್ರದೇಶದಲ್ಲಿದ್ದ ಎಲ್ಲಾ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಶಿಶು ಜನಿಸಿ ಎರಡು ಗಂಟೆಗಳಲ್ಲೇ ಆ ಮಗುವನ್ನು ಬಿಟ್ಟು ಹೋಗಿದ್ದಾರೆ ಎಂದು ತಿಳಿದುಬಂದಿದೆ.
ಮಗುವನ್ನು ವಿದ್ಯಾರ್ಥಿಗಳ ಕೈಗೆ ಕೊಟ್ಟು ಹೋಗಿದ್ದು, ಮಗುವಿನ ತಾಯಿಯೋ ಅಥವಾ ಅಪಹರಣ ಮಾಡಿದ್ದ ಮಗುವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಯಾರೋ ಮಾಡಿದ ತಪ್ಪಿಗೆ ಶಿಶು ನೋವು ಅನುಭವಿಸುತ್ತಿದೆ.
ಇನ್ನು ಯಾರೇ ಬ್ಯಾಗನ್ನು ನೋಡಿಕೊಳ್ಳಿ ಎಂದು ಹೇಳಿದರೂ ನೀವು ಮಾತ್ರ ಸಮ್ಮತಿಸಲೇಬೇಡಿ ಇದು ಒಂದು ಪಾಠವಾಗಿದೆ.