ಟೀಮ್ ಇಂಡಿಯಾ ಟಿ20 ಕ್ರಿಕೆಟ್ನಿಂದ ಸೂರ್ಯಕುಮಾರ್ ಯಾದವ್ ಕೈಬಿಡಲು ಕಾರಣ ಏನು? ಅಗರ್ಕರ್ ಅಚ್ಚರಿ ಮಾಹಿತಿ ರಿವೀಲ್
India T20 Squad: ಮುಂಬರುವ ಟಿ20 ಕ್ರಿಕೆಟ್ ಬಿಸಿಸಿಐ ಭಾರತ ತಂಡವನ್ನು ಪ್ರಕಟಿಸಿದೆ. ಸೂರ್ಯಕುಮಾರ್ ಯಾದವ್ ಅವರನ್ನು ತಂಡದಿಂದಲೇ ಕೈಬಿಡಲಾಗಿದ್ದು, ನಾಯಕತ್ವ ಸ್ಥಾನಕ್ಕೆ ಶ್ರೇಯಸ್ ಅಯ್ಯರ್ ಅವರನ್ನು ಆಯ್ಕೆ ಮಾಡಿದೆ. ಉಪನಾಯಕನ ಜವಾಬ್ದಾರಿಯನ್ನು ತಿಲಕ್ ವರ್ಮಾ ಅವರಿಗೆ ನೀಡಲಾಗಿದೆ. ಇನ್ನೂ ಈ ದಿಢೀರ್ ನಿರ್ಧಾರದ ಕುರಿತು ಮುಖ್ಯ ಆಯ್ಕೆಗಾರರಾದ ಅಜಿತ್ ಅಗರ್ಕರ್ ಅವರು ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಕೇವಲ ಮೂರು ತಿಂಗಳ ಹಿಂದೆಯಷ್ಟೇ ಭಾರತ ತಂಡಕ್ಕೆ ಟಿ20 ವಿಶ್ವಕಪ್ ಟ್ರೋಫಿ ಗೆದ್ದುಕೊಟ್ಟಿದ್ದ ಸೂರ್ಯಕುಮಾರ್ ಅವರನ್ನು ಮುಂಬರುವ ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸದ ಟಿ20 ಸರಣಿಗಳಿಂದ ಸಂಪೂರ್ಣವಾಗಿ ಕೈಬಿಡಲಾಗಿದೆ. ಇದೀಗ ನಾಯಕನ ಸ್ಥಾನವನ್ನು ಶ್ರೇಯಸ್ ಅಯ್ಯರ್ ಅವರಿಗೆ ನೀಡಲಾಗಿದೆ. ಈ ನಿರ್ಧಾರದ ಹಿಂದಿನ ಅಸಲಿ ಕಾರಣಗಳೇನು ಎಂಬುದನ್ನು ಬಿಸಿಸಿಐ ಮುಖ್ಯ ಆಯ್ಕೆಗಾರರಾದ ಅಜಿತ್ ಅಗರ್ಕರ್ ಅವರು ಪತ್ರಿಕಾಗೋಷ್ಠಿಯಲ್ಲಿ ಬಿಚ್ಚಿಟ್ಟಿದ್ದಾರೆ.

ಸೂರ್ಯಕುಮಾರ್ ಕೈಬಿಡಲು ಕಾರಣವೇನು?
ವಿಶ್ವಕಪ್ ಗೆದ್ದ ನಾಯಕನನ್ನು ತಂಡದಿಂದಲೇ ಹೊರಹಾಕುವ ನಿರ್ಧಾರ ಸುಲಭವಾಗಿರಲಿಲ್ಲ ಎಂದು ಅಜಿತ್ ಅಗರ್ಕರ್ ಅವರು ಒಪ್ಪಿಕೊಂಡಿದ್ದಾರೆ. 'ಸೂರ್ಯಕುಮಾರ್ ಯಾದವ್ ಅವರ ನಾಯಕತ್ವದ ಕುರಿತು ತೀರ್ಮಾನ ತೆಗೆದುಕೊಳ್ಳುವುದು ನಮಗೆ ಅತ್ಯಂತ ಸವಾಲಿನ ಕೆಲಸವಾಗಿತ್ತು. ಏಕೆಂದರೆ ಅವರು ಇತ್ತೀಚೆಗಷ್ಟೇ ನಮಗೆ ವಿಶ್ವಕಪ್ ತಂದುಕೊಟ್ಟಿದ್ದಾರೆ. ಆದರೆ ಮುಂದಿನ ಎರಡು ವರ್ಷಗಳ ಭವಿಷ್ಯದ ದೃಷ್ಟಿಯಿಂದ ನಾವು ತಂಡದ ಪುನರ್ರಚನೆ ಮಾಡಬೇಕಾಗುತ್ತದೆ. ಸೂರ್ಯಕುಮಾರ್ ಅವರ ಇತ್ತೀಚಿನ ಫಾರ್ಮ್ ಕುಸಿತ ಮತ್ತು ಮುಂದಿನ ಟಿ20 ವಿಶ್ವಕಪ್ಗೆ ಹೊಸ ನಾಯಕತ್ವವನ್ನು ಸಿದ್ಧಪಡಿಸುವ ಅನಿವಾರ್ಯತೆ ನಮಗಿತ್ತು,' ಎಂದು ಅವರು ಸ್ಪಷ್ಟಪಡಿಸಿದರು.
ಫಾರ್ಮ್ ಸಮಸ್ಯೆ ಎದುರಿಸುತ್ತಿದ್ದ ಎಸ್ಕೆವೈ
ಸೂರ್ಯಕುಮಾರ್ ಯಾದವ್ ಅವರ ಇತ್ತೀಚಿನ ಬ್ಯಾಟಿಂಗ್ ಪ್ರದರ್ಶನ ಕುಸಿದಿರುವುದು ಆಯ್ಕೆ ಸಮಿತಿಯ ಅಸಮಾಧಾನಕ್ಕೆ ಕಾರಣವಾಗಿತ್ತು. ಟಿ20 ವಿಶ್ವಕಪ್ ಸರಣಿಯಲ್ಲಿ ಭಾರತ ಚಾಂಪಿಯನ್ ಆಗಿದ್ದರೂ, ಸೂರ್ಯಕುಮಾರ್ ಅವರಿಂದ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ಕಂಡುಬರಲಿಲ್ಲ. ಆ ಸರಣಿಯ 9 ಇನ್ನಿಂಗ್ಸ್ಗಳಲ್ಲಿ ಅವರು 136.72 ರ ಸ್ಟ್ರೈಕ್ ರೇಟ್ನಲ್ಲಿ ಕೇವಲ 242 ರನ್ ಗಳಿಸಲಷ್ಟೇ ಶಕ್ತರಾಗಿದ್ದರು.
ಇದಾದ ನಂತರ ನಡೆದ ಐಪಿಎಲ್ 2026 ಸರಣಿಯಲ್ಲೂ ಮುಂಬೈ ಇಂಡಿಯನ್ಸ್ ಪರ ಆಡಿದ್ದ ಸೂರ್ಯಕುಮಾರ್ ಯಾದವ್ ತೀವ್ರ ನಿರಾಶೆ ಮೂಡಿಸಿದ್ದರು. ಟೂರ್ನಿಯ 13 ಪಂದ್ಯಗಳಲ್ಲಿ ಕೇವಲ 20.76 ರ ಸಾಧಾರಣ ಸರಾಸರಿಯಲ್ಲಿ 270 ರನ್ ಗಳಿಸಿದ್ದರು. ಈ ಕಳಪೆ ಪ್ರದರ್ಶನ ಮತ್ತು ಫಾರ್ಮ್ ಕೊರತೆಯೇ ಅವರ ಸ್ಥಾನಕ್ಕೆ ಕುತ್ತು ತಂದಿತು ಎನ್ನಲಾಗಿದೆ.
ಶ್ರೇಯಸ್ ಅಯ್ಯರ್ ಬಗ್ಗೆ ಅಗರ್ಕರ್ ಹೇಳಿದ್ದೇನು?
ಸೂರ್ಯಕುಮಾರ್ ಬದಲಿಗೆ ಶ್ರೇಯಸ್ ಅಯ್ಯರ್ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಿದ್ದರ ಕುರಿತು ಮಾತನಾಡಿದ ಅಗರ್ಕರ್ ಅವರು, 'ಶ್ರೇಯಸ್ ಅಯ್ಯರ್ ಕಳೆದ ಕೆಲವು ಸೀಸನ್ಗಳಲ್ಲಿ ಐಪಿಎಲ್ನಲ್ಲಿ ವಿವಿಧ ತಂಡಗಳನ್ನು ಅತ್ಯುತ್ತಮವಾಗಿ ಮುನ್ನಡೆಸಿದ ಅನುಭವ ಹೊಂದಿದ್ದಾರೆ. ಅವರು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಟ್ರೋಫಿ ಗೆದ್ದುಕೊಟ್ಟಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳನ್ನು ಯಶಸ್ವಿಯಾಗಿ ಮುನ್ನಡೆಸಿದ ಇತಿಹಾಸ ಹೊಂದಿದ್ದಾರೆ. ಅವರಲ್ಲಿರುವ ಅದ್ಭುತ ಲೀಡರ್ಶಿಪ್ ಸಾಮರ್ಥ್ಯ ತಂಡಕ್ಕೆ ಪ್ಲಸ್ ಪಾಯಿಂಟ್ ಆಗಲಿದೆ,' ಎಂದು ಹೇಳಿದ್ದಾರೆ.
ಭರ್ಜರಿ ಕಮ್ಬ್ಯಾಕ್ ಮಾಡಿದ ಅಯ್ಯರ್
ಶ್ರೇಯಸ್ ಅಯ್ಯರ್ ಅವರು ಡಿಸೆಂಬರ್ 2023ರ ನಂತರ ಭಾರತ ಪರ ಯಾವುದೇ ಅಂತಾರಾಷ್ಟ್ರೀ ಟಿ20 ಪಂದ್ಯವನ್ನು ಆಡಿರಲಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಮತ್ತು ತಿಲಕ್ ವರ್ಮಾ ಅವರಿಗೆ ಆದ್ಯತೆ ನೀಡಿದ್ದರಿಂದ ಶ್ರೇಯಸ್ ಅವರಿಗೆ ಅವಕಾಶ ಸಿಕ್ಕಿರಲಿಲ್ಲ. ಆದರೆ ಐಪಿಎಲ್ನಲ್ಲಿ ಅವರ ಭರ್ಜರಿ ಬ್ಯಾಟಿಂಗ್ ಪ್ರದರ್ಶನ (ಐಪಿಎಲ್ 2025 ರಲ್ಲಿ 175.07 ರ ಸ್ಟ್ರೈಕ್ ರೇಟ್ನಲ್ಲಿ 604ರನ್ ಮತ್ತು ಐಪಿಎಲ್ 2026 ರಲ್ಲಿ 168.81 ರ ಸ್ಟ್ರೈಕ್ ರೇಟ್ನಲ್ಲಿ 498 ರನ್) ಅವರನ್ನು ನೇರವಾಗಿ ನಾಯಕತ್ವದ ಗದ್ದುಗೆ ಏರಲು ದಾರಿಯಾಗಿದೆ.
ಒಟ್ಟಿನಲ್ಲಿ ಬಿಸಿಸಿಐ ಆಯ್ಕೆ ಮಂಡಳಿಯು ಭಾರತ ತಂಡದ ಮುಂದಿನ ಟಿ20 ವಿಶ್ವಕಪ್ ದೃಷ್ಟಿಯಿಂದ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಸದ್ಯ ಫಾರ್ಮ್ ಕಳೆದುಕೊಂಡಿರುವ ಸೂರ್ಯಕುಮಾರ್ ಯಾದವ್ ಅವರಿಗೆ ವಿಶ್ರಾಂತಿ ಹಾಗೂ ದೇಶಿ ಕ್ರಿಕೆಟ್ನಲ್ಲಿ ಫಾರ್ಮ್ ಕಂಡುಕೊಳ್ಳುವ ಮುಕ್ತ ಅವಕಾಶ ನೀಡಲಾಗಿದೆ. ಇನ್ನೂ ಶ್ರೇಯಸ್ ಅಯ್ಯರ್ ಅವರು ಟೀಂ ಇಂಡಿಯಾ ಟಿ20 ಕ್ರಿಕೆಟ್ ತಂಡವನ್ನು ಹೇಗೆ ಮುನ್ನಡೆಸುತ್ತಾರೆ ಎಂದು ಕಾದುನೋಡಬೇಕಿದೆ.
ಟಿ20 ಸರಣಿಗೆ ಭಾರತ ತಂಡ: ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ (ಉಪನಾಯಕ), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ಶಿವಂ ದುಬೆ, ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್, ಮೊಹಮ್ಮದ್ ಸಿರಾಜ್, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ವೈಭವ್ ಸೂರ್ಯವಂಶಿ, ಪ್ರಿನ್ಸ್ ಯಾದವ್.












Click it and Unblock the Notifications