ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ವಿ.ನಿಲ್ದಾಣದ ನಾಮಕರಣಕ್ಕೆ ಸ್ವಾಗತ

By Prasad
|
Google Oneindia Kannada News

ಬೆಂಗಳೂರು, ಡಿ. 13 : ಕನ್ನಡಿಗರ ಕನಸಿನ ಕೂಸಾದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಡಪ್ರಭು 'ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ'ವೆಂದು ಡಿಸೆಂಬರ್ 14ರ ಶನಿವಾರ ನಾಮಕರಣ ಮಾಡಲಾಗುತ್ತಿದೆ. ಈ ಸಂಭ್ರಮದ ನಾಮಕರಣ ಸಮಾರಂಭಕ್ಕಾಗಿ ತಳಿರು ತೋರಣಗಳಿಂದ ವಿಮಾನ ನಿಲ್ದಾಣ ಕಂಗೊಳಿಸುತ್ತಿದೆ.

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕನ್ನಡಿಗರ ಹೆಮ್ಮೆಯ ಸಂಕೇತವಾಗಿದ್ದರೂ ಅಲ್ಲಿ ಕನ್ನಡಕ್ಕೆ ಕೊನೆಯ ಸ್ಥಾನ ನೀಡಲಾಗಿದೆ ಎಂಬ ಕೊರಗು ಕನ್ನಡಿಗರನ್ನು ಕಾಡುತ್ತಲೇ ಇದೆ. ಇದು ನಿಜವಾಗಿಯೂ ಕರ್ನಾಟಕದಲ್ಲಿದೆಯಾ ಎಂಬ ಸಂಶಯ ಬರುವಂತೆ ಅಲ್ಲಿ ಕನ್ನಡದ ಸ್ಥಿತಿ ಇದೆ. ಕೆಲವು ಸೂಚನಾ ಫಲಕಗಳು ಕನ್ನಡದಲ್ಲಿದ್ದರೂ ಕಾಟಾಚಾರಕ್ಕೆ ಮಾಡಲಾಗಿದೆ ಎಂಬುದು ಮೇಲ್ನೋಟಕ್ಕೆ ತಿಳಿದುಬರುತ್ತದೆ.

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡ ಹೆಸರು ಸೇರಿದಂತೆ, ಅಣ್ಣ ಬಸವಣ್ಣ, ಸರ್ ಎಂ. ವಿಶ್ವೇಶ್ವರಯ್ಯ, ಕುವೆಂಪು, ಅಂಬೇಡ್ಕರ್, ಟಿಪ್ಪು ಸುಲ್ತಾನ್ ಮುಂತಾದ ಹೆಸರುಗಳು ಕೇಳಿಬಂದಿದ್ದವು. ಆದರೆ, ಕೊನೆಗೆ ಕೆಂಪೇಗೌಡರ ಹೆಸರನ್ನೇ ಇಡಬೇಕೆಂದು ಇತ್ಯರ್ಥವಾಗಿ, ಕೇಂದ್ರ ಸರಕಾರ ಅನುಮತಿ ನೀಡಿತು. ಬೆಂಗಳೂರಿನ ಕೇಂದ್ರ ಬಸ್ ನಿಲ್ದಾಣಕ್ಕೂ ಕೆಂಪೇಗೌಡರ ಹೆಸರನ್ನೇ ಇಡಲಾಗಿದೆ. [ನಿಲ್ದಾಣದಲ್ಲಿ ಕನ್ನಡವೇಕಿಲ್ಲ?]

Welcome to BIAL naming ceremony

ನಾಮಕರಣ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಹಿಸುತ್ತಿದ್ದಾರೆ ಮತ್ತು ವಿಮಾನ ನಿಲ್ದಾಣದ ಮರುನಾಮಕರಣ ಮಾಡಲಿದ್ದಾರೆ. ಕೇಂದ್ರ ಸಿವಿಲ್ ಏವಿಯೇಶನ್ ಸಚಿವರಾದ ಅಜೀತ್ ಸಿಂಗ್ ಅವರು ವಿಸ್ತರಿತ ಟರ್ಮಿನಲ್‌ನ್ನು ಉದ್ಘಾಟಿಸುತ್ತಾರೆ.

ಕೇಂದ್ರ ಸಚಿವ ಮತ್ತು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಆಗಿರುವ ಡಾ. ವೀರಪ್ಪ ಮೊಯಿ ಮತ್ತು ರೆಹಮಾನ್ ಖಾನ್ ಅವರು ಉಪಸ್ಥಿತರಿರುತ್ತಾರೆ. ಸಿವಿಲ್ ಏವಿಯೇಷನ್ ಖಾತೆ ರಾಜ್ಯ ಸಚಿವರಾದ ವೇಣುಗೋಪಾಲ ಅವರು ಆಗಮಿಸುತ್ತಿದ್ದಾರೆ. ರಾಜ್ಯ ಸಚಿವ ಸಂಪುಟದ ಹಲವಾರು ಸದಸ್ಯರು, ಸಂಸದರು, ಮೇಲ್ಮನೆ ಹಾಗೂ ಕೆಳಮನೆ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ.

ಹಲವಾರು ಕನ್ನಡಿಗರ ಬಹುದಿನಗಳ ಕನಸು ನನಸಾಗುತ್ತಿರುವ ಸಂದರ್ಭದಲ್ಲಿ ವಿಮಾನ ನಿಲ್ದಾಣದ ವಿಶೇಷತೆಗಳತ್ತ ಕಣ್ಣು ಹಾಯಿಸೋಣ.

* ಟರ್ಮಿನಲ್ ವಿಸ್ತರಣೆಯಿಂದ ಪ್ರಯಾಣಕರನ್ನು ನಿರ್ವಹಿಸುವ ವಿಮಾನ ನಿಲ್ದಾಣದ ಸಾಮರ್ಥ್ಯ (ವಾರ್ಷಿಕವಾಗಿ) 20 ದಶಲಕ್ಷ ಅಂದರೆ 2 ಕೋಟಿಗೆ ಏರಿಕೆಯಾಗಲಿದೆ. ಇದುವರೆಗೆ ವಿಮಾನ ನಿಲ್ದಾಣದ ಸಾಮರ್ಥ್ಯ 12 ದಶಲಕ್ಷಕ್ಕಿಂತ ಸ್ವಲ್ಪ ಹೆಚ್ಚಿತ್ತು.

* ಎನ್.ಸಿ.ಏ.ಇ.ಆರ್. ಸರ್ವೆ ಪ್ರಕಾರ ಒಬ್ಬ ವಿಮಾನ ಪ್ರಯಾಣಿಕನಿಂದ ಸರಾಸರಿ 11,500 ರೂಪಾಯಿ ಆದಾಯ ಬರುತ್ತದೆ. ಇದನ್ನ ಮಾನದಂಡವಾಗಿ ಇಟ್ಟುಕೊಂಡರೆ 2 ಕೋಟಿ ಪ್ರಯಾಣಿಕರಿಂದ ರಾಜ್ಯಕ್ಕೆ 23,000 ಕೋಟಿ ರೂಪಾಯಿ ವಾರ್ಷಿಕ ಆದಾಯ ದೊರೆಯುತ್ತದೆ.

* ವಿಮಾನ ನಿಲ್ದಾಣವು ಸದ್ಯ 7,500 ಸಾವಿರ ಜನರಿಗೆ ನೇರ ಉದ್ಯೋಗವನ್ನು ನೀಡಿದೆ. ಇನ್ನು ಅಪರೋಕ್ಷವಾಗಿ ದೊರೆಯುವ ಉದ್ಯೋಗ - ಕನಿಷ್ಟ ಪಕ್ಷ ಇದರ ಎರಡುಪಟ್ಟು. ಬಹುಮುಖ್ಯವಾಗಿ ಒಂದು ರಾಜ್ಯ ಅಥವಾ ನಗರ ಅಂತಾರಾಷ್ಟ್ರೀಯ ಮನ್ನಣೆ ಪಡೆಯುವಲ್ಲಿ ವಿಮಾನ ನಿಲ್ದಾಣ ಮಹತ್ವದ ಪಾತ್ರವನ್ನುವಹಿಸುತ್ತದೆ.

* ನಾವು ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನನದಲ್ಲಿ ಜಾಗತಿಕ ಮನ್ನಣೆಯನ್ನ ಗಳಿಸಿದ್ದೇವೆ. ಅದನ್ನು ಉಳಿಸಿ, ಬೆಳೆಸಿಕೊಂಡು ಹೋಗಲು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅತ್ಯವಶ್ಯ. ಜಾಗತಿಕ ಮಟ್ಟದಲ್ಲಿ ಬೆಂಗಳೂರು ನಗರವನ್ನು ಬ್ರ್ಯಾಂಡ್ ಮಾಡಲು ಕೂಡಾ ಇದು ಸಹಕಾರಿ.

* ಇದು ಪಿಪಿಪಿ (ಸರ್ಕಾರಿ-ಖಾಸಗಿ ಸಹಭಾಗಿತ್ವ) ಮಾದರಿಯಲ್ಲಿ ಸ್ಥಾಪಿಸಿದ ದೇಶದ ಮೊದಲ ವಿಮಾನ ನಿಲ್ದಾಣವಾಗಿದೆ. ಜಿ.ವಿ.ಕೆ. ಕಂಪನಿ ಪ್ರತಿಶತ 43, ಸೀಮೆನ್ಸ್ ಕಂಪನಿ ಪ್ರತಿಶತ 26, ಕರ್ನಾಟಕ ಸರ್ಕಾರ ಶೇಕಡಾ 13, ಭಾರತ ಸರ್ಕಾರ ಶೇಕಡಾ 13 ಹಾಗೂ ಜ್ಯುರಿಚ್ ಏರ್‌ಪೋರ್ಟ್ ಶೇಕಡಾ 5ರಷ್ಟು ಬಂಡವಾಳ ಹೊಂದಿವೆ.

* 2008 ಮೇ 24ರಂದು ವಿಮಾನ ನಿಲ್ದಾಣ ಆರಂಭವಾಗಿದೆ. ಅಲ್ಲಿಂದ ಇಲ್ಲಿವರೆಗೆ 6 ಕೋಟಿಗಿಂತ (ಸುಮಾರು 6 .4 ಕೋಟಿ) ಹೆಚ್ಚು ಪ್ರಯಾಣಿಕರು ಈ ವಿಮಾನ ನಿಲ್ದಾಣದ ಮೂಲಕ ಪ್ರಯಾಣಿಸಿದ್ದಾರೆ. ಪ್ರತಿನಿತ್ಯ ದೇಶ-ವಿದೇಶದ 52 ಸ್ಥಳಗಳಿಗೆ 312 ವಿಮಾನಗಳ ಹಾರಾಟ ನಡೆಯುತ್ತಿದೆ. 2030ರ ವೇಳೆಗೆ ವಿಮಾನ ನಿಲ್ದಾಣದ ಸಾಮರ್ಥ್ಯವನ್ನು 55 ದಶಲಕ್ಷಕ್ಕೆ ಏರಿಸುವ ಯೋಜನೆಯಿದೆ.

English summary
Bangalore International Airport will be christened as Kempegowda International airport on 14th December 2013. Siddaramaiah will be rechristening the airport. But, in the dream child of Kannadigas Kannada has been neglected.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X