ಬೆಂಗಳೂರು ಜನತೆಗೆ ಗುಡ್‌ನ್ಯೂಸ್‌; ಕಡಿಮೆ ದರದಲ್ಲಿ ನೀರು ಪೂರೈಕೆ : ಇಲ್ಲಿದೆ ಮಾಹಿತಿ

ಬೆಂಗಳೂರು, ಮೇ 09: ಬೆಂಗಳೂರಿನಲ್ಲಿ ಟ್ಯಾಂಕರ್ ನೀರು ಪೂರೈಕೆ ದೊಡ್ಡ ಮಾಫಿಯಾವಾಗಿದೆ. ಇದನ್ನು ತಪ್ಪಿಸಿ ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ನೀರು ಪೂರೈಸಲು ದೇಶದಲ್ಲೇ ಮೊದಲ ಬಾರಿಗೆ ಸಂಚಾರಿ ಕಾವೇರಿ ಯೋಜನೆ ಜಾರಿಗೊಳಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ವಿಧಾನಸೌಧದ ಆವರಣದಲ್ಲಿ ಶುಕ್ರವಾರ ನಡೆದ 'ಸರ್ವರಿಗೂ ಸಂಚಾರಿ ಕಾವೇರಿ', 'ಮನೆ ಬಾಗಿಲಿಗೆ ಸರಳ ಕಾವೇರಿ' ಯೋಜನೆಗೆ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಚಾಲನೆ ನೀಡಿ ಮಾತನಾಡಿದ ಅವರು, ಸುಮಾರು 3 ಸಾವಿರ ಕೊಳವೆ ಬಾವಿ ಕೊರೆಸಿ, ಟ್ಯಾಂಕರ್ ಗಳನ್ನು ಇಟ್ಟುಕೊಂಡು 3 ಸಾವಿರ ರೂಪಾಯಿವರೆಗೂ ಹಣ ವಸೂಲಿ ಮಾಡುವ ಪ್ರವೃತ್ತಿ ಹೊಂದಿದ್ದಾರೆ. ಇಂದು ಈ ಯೋಜನೆ ಮೂಲಕ 4 ಸಾವಿರ ಲೀಟರ್ ನೀರಿಗೆ 660 ರೂ. ಹಾಗೂ 6 ಸಾವಿರ ಲೀಟರ್ ನೀರಿಗೆ 740 ರೂ. ದರ ನಿಗದಿ ಮಾಡಲಾಗಿದೆ. ಇದು ಕೊಳವೆ ಬಾವಿ ನೀರಲ್ಲ. ಇದು ಬಿಡಬ್ಲ್ಯೂಎಸ್ಎಸ್ ಬಿ ವತಿಯಿಂದ ನೀಡುತ್ತಿರುವ ಶುದ್ಧ ಕುಡಿಯುವ ನೀರು ಎಂದು ತಿಳಿಸಿದರು.

Water Will Be Supplied To The People Of Bengaluru at a lower rate Says DK Shivakumar

ನೀರಿನ ಮಾಫಿಯಾ ತಡೆಯಲು ಈ ಯೋಜನೆ ಚಾಲನೆ ನೀಡಲಾಗಿದೆ. ಇದು ಸಣ್ಣ ಯೋಜನೆಯಲ್ಲ. ಕಳೆದ ವರ್ಷ ಬರಗಾಲದಲ್ಲಿ ನೀರಿನ ಅಭಾವ ಎದುರಾದಾಗ ಪರಿಸ್ಥಿತಿಯನ್ನು ಅತ್ಯುತ್ತಮವಾಗಿ ನಿಭಾಯಿಸಲಾಯಿತು. ಕೆರೆಗಳನ್ನು ತುಂಬಿಸಿ, ಅಂತರ್ಜಲ ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳಲು ತೀರ್ಮಾನಿಸಿದ್ದೇವೆ. ಇತ್ತೀಚೆಗೆ ಸಿಎಂ ನೇತೃತ್ವದಲ್ಲಿ ಕೆರೆಗಳ ಅಭಿವೃದ್ಧಿ ಸಭೆ ಮಾಡಲಾಗಿದೆ. ಸಣ್ಣ ಮನೆಗಳಿಗೆ ನೀರಿನ ಸಂಪರ್ಕ ನೀಡಲು ಕೇವಲ 1 ಸಾವಿರ ಶುಲ್ಕ ಪಡೆಯಲು ತೀರ್ಮಾನಿಸಿದ್ದೇವೆ. ಅಪಾರ್ಟ್ಮೆಂಟ್ ನವರಿಗೆ ಆರಂಭದಲ್ಲಿ 20% ಹಣ ಪಡೆದು ನಂತರ ಒಂದು ವರ್ಷ ಕಾಲಾವಕಾಶ ನೀಡಲು ಮುಂದಾಗಿದ್ದೇವೆ. ಹೀಗೆ ಹೊಸ ನೀತಿಗಳ ಮೂಲಕ ಎಲ್ಲವನ್ನು ಒಂದು ವ್ಯವಸ್ಥೆಯಲ್ಲಿ ತರುವ ಪ್ರಯತ್ನ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಬೆಂಗಳೂರಿಗೆ ಸಂಬಂಧಿಸಿದ ವಿವಿಧ ಅಭಿವೃದ್ಧಿ ಕೆಲಸಗಳ ವಿಚಾರವಾಗಿ ಕೇಂದ್ರ ಸಚಿವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದೇನೆ. ಇಂದು ಸರ್ವರಿಗೂ ಸರಳ ಕಾವೇರಿ, ಮನೆ ಬಾಗಿಲಿಗೆ ಸಂಚಾರಿ ಕಾವೇರಿ ಯೋಜನೆಗಳನ್ನು ಪ್ರಾರಂಭಿಸಿದ್ದು, ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಇಂತಹ ಯೋಜನೆ ಜಾರಿಗೆ ತರಲಾಗಿದೆ. ನಿನ್ನೆ ನೆಲಮಂಗಲದಲ್ಲಿ ರೂ.1,900 ಕೋಟಿ ವೆಚ್ಚದಲ್ಲಿ ವೃಷಭಾವತಿ ನೀರನ್ನು ಸಂಸ್ಕರಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೆರೆಗಳನ್ನು ತುಂಬಿಸುವ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದೆ. ಪ್ರತಿ ನೀರಿನ ಹನಿಯು ಮಹತ್ವದ್ದಾಗಿದೆ. ಅನೇಕರು ಇದನ್ನು ಟೀಕೆ ಮಾಡಬಹುದು. ಆದರೆ ಇಂತಹ ಯೋಜನೆ ಇದೇ ಮೊದಲಲ್ಲ. ದೆಹಲಿಯಲ್ಲೂ ಯಮುನಾ ನದಿ ನೀರನ್ನು ಗಿಡ ಬೆಳೆಸಲು, ವಾಹನ ತೊಳೆಯಲು ಹಾಗೂ ಕೈಗಾರಿಕೆಗೆ ಪೂರೈಸುತ್ತಾರೆ ಎಂದರು.

ನಾನು ಹಾಗೂ ಶಾಸಕರು ಈ ನೀರನ್ನು ಕುಡಿಯುವ ಮೂಲಕ ಈ ಯೋಜನೆಗೆ ಚಾಲನೆ ನೀಡಿದ್ದೇವೆ. ಇನ್ನು ಶುದ್ಧ ಕುಡಿಯುವ ನೀರಿನ ಘಟಕವನ್ನು ಮೊದಲು ಆರಂಭಿಸಿದ್ದು, ನಮ್ಮ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ. ಸುಮಾರು 300ಕ್ಕೂ ಹೆಚ್ಚು ಘಟಕ ಪ್ರಾರಂಭಿಸಿದ್ದೆ. ನಾನು ಬಹಳ ಇಚ್ಛಾಶಕ್ತಿಯಿಂದ ಬೆಂಗಳೂರು ನಗರದ ಜವಾಬ್ದಾರಿ ವಹಿಸಿದ್ದೇನೆ. ಇದು ಬಹಳ ಕಷ್ಟದ ಕೆಲಸ ಎಂದು ಗೊತ್ತಿದೆ. ಆದರೂ ಎಲ್ಲಿ ಶ್ರಮ ಇದೆಯೋ ಅಲ್ಲಿ ಫಲವಿದೆ, ಮನಸ್ಸಿದ್ದಲ್ಲಿ ಮಾರ್ಗ, ಭಕ್ತಿ ಇದ್ದಲ್ಲಿ ದೇವರು ಎಂದು ನಂಬಿ ಕೆಲಸ ಮಾಡುತ್ತಿದ್ದೇನೆ ಎಂದರು.

ಬಿಡಬ್ಲ್ಯೂಎಸ್ಎಸ್ ಬಿ ವತಿಯಿಂದ ಇತ್ತೀಚೆಗೆ ಸ್ಯಾಂಕಿ ಕೆರೆಯಲ್ಲಿ ಕಾವೇರಿ ಆರತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡಲಾಗಿದೆ. ಈಗ ಕರ್ನಾಟಕ ಸರ್ಕಾರ ಕೆಆರ್ ಎಸ್ ಬಳಿ ಕಾವೇರಿ ಆರತಿ ಕಾರ್ಯಕ್ರಮ ಮಾಡಲು ನೀರಾವರಿ ಇಲಾಖೆಯಿಂದ ಸುಮಾರು 100 ಕೋಟಿ ಮೀಸಲಿಡಲಾಗಿದೆ. ಪ್ರವಾಸೋದ್ಯಮ, ಧಾರ್ಮಿಕ ದತ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳನ್ನು ಒಳಪಡಿಕೊಳ್ಳಲಾಗಿದೆ. ಇದಕ್ಕಾಗಿ ಸಮಿತಿ ಮಾಡಿ ರಾಮ್ ಪ್ರಸಾತ್ ಮನೋಹರ್ ಅವರ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ದಸರಾ ವೇಳೆಗೆ ಈ ಕಾವೇರಿ ಆರತಿ ಮಾಡಲು ಸಿದ್ಧತೆ ಮಾಡಲಾಗುತ್ತಿದೆ ಎಂದರು.

ಕೊಡಗಿನಿಂದ ಹಿಡಿದು ರಾಜ್ಯದ ಎಲ್ಲಾ ಭಾಗಗಳ ಸಂಸ್ಕೃತಿ ಸೇರಿಸಿ ವಾರದಲ್ಲಿ ಮೂರು ದಿನ ಪೂಜೆ ಸಲ್ಲಿಸಬೇಕು, ಬರುವ ಪ್ರವಾಸಿಗರು ಪೂಜೆ ಸಲ್ಲಿಸಿಕೊಂಡು ಹೋಗಲು ಅವಕಾಶ ಕಲ್ಪಿಸಿಕೊಡಲಾಗುವುದು. ಕಾವೇರಿ ಹಾಗೂ ನೀರಿನ ಮಹತ್ವ ಎಲ್ಲರಿಗೂ ಅರಿವಾಗಲಿ ಎಂದು ಈ ಕಾರ್ಯಕ್ರಮ ರೂಪಿಸಲಾಗಿದೆ. ಇದಕ್ಕಾಗಿ ಟೆಂಡರ್ ಕರೆಯಲಾಗಿದ್ದು, ಇಲಾಖೆಗಳಿಗೆ ಸೂಕ್ತ ಜವಾಬ್ದಾರಿ ನೀಡಲಾಗುವುದು ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+