Water Crisis: ಪರೀಕ್ಷಾ ಸಮಯದಲ್ಲಿ ನೀರಿನ ತೀವ್ರ ಬಿಕ್ಕಟ್ಟು ಎದುರಿಸುತ್ತಿವೆ ಶಾಲೆಗಳು
ಬೆಂಗಳೂರು, ಮಾರ್ಚ್ 12: ಬೆಂಗಳೂರಿನಲ್ಲಿ ನೀರಿನ ಹಾಹಾಕಾರ ಉಂಟಾಗಿದೆ. ನಗರದ ಹಲವಾರು ಶಾಲೆಗಳು ಪ್ರಸ್ತುತ ತೀವ್ರ ನೀರಿನ ಕೊರತೆಯನ್ನು ಎದುರಿಸುತ್ತಿವೆ. ವಿದ್ಯಾರ್ಥಿಗಳಿಗೆ ಇದು ಪರೀಕ್ಷೆಗಳ ಕಾಲವಾದ್ದರಿಂದ ಶಾಲೆಗಳಿಗೆ ನೀರಿನ ಪೂರೈಕೆಗೆ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಮನವಿ ಮಾಡಲಾಗುತ್ತಿದೆ.
ಶಾಲೆಗಳು ಎದುರಿಸುತ್ತಿರುವ ಬಿಕ್ಕಟ್ಟಿನ ಬಗ್ಗೆ 'ಬೆಂಗಳೂರು ಮಿರರ್' ಜೊತೆಗೆ ಮಾತನಾಡಿರುವ, ಕರ್ನಾಟಕ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ನಿರ್ವಹಣಾ ಸಂಘದ ಪ್ರಧಾನ ಕಾರ್ಯದರ್ಶಿ (KAMS) ಡಿ ಶಶಿ ಕುಮಾರ್, " ನಮಗೆ ಮೂಲಭೂತ ನೈರ್ಮಲ್ಯ ಉದ್ದೇಶಗಳಿಗಾಗಿ ಮಾತ್ರವಲ್ಲದೆ ನೈರ್ಮಲ್ಯದ ಮಾನದಂಡಗಳನ್ನು ಕಾಪಾಡಿಕೊಳ್ಳಲು ನೀರಿನ ಅಗತ್ಯವಿದೆ. ಸಾಕಷ್ಟು ನೀರು ಸಂಗ್ರಹಿಸುವುದು ಹೆಚ್ಚು ಸವಾಲಾಗಿ ಪರಿಣಮಿಸಿದೆ" ಎಂದಿದ್ದಾರೆ.

ಈಗೀನ ಪರಿಸ್ಥಿತಿಯ ಬಗ್ಗೆ ಹತಾಶೆ ವ್ಯಕ್ತಪಡಿಸಿದ ಅವರು, "ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು (BWSSB) ಸಮರ್ಪಕ ನೀರು ಸರಬರಾಜು ಮಾಡಲು ವಿಫಲವಾಗಿದೆ. ಅನೇಕ ಸಂದರ್ಭಗಳಲ್ಲಿ ರಾತ್ರಿ ಮಾತ್ರ ನೀರು ಬಿಡುತ್ತಿದ್ದಾರೆ" ಎಮದು ಆರೋಪಿಸಿದ್ದಾರೆ.
ಸಮಸ್ಯೆಯ ತೀವ್ರತೆಯನ್ನು ಒತ್ತಿ ಹೇಳಿರುವ ಅವರು, "ನಮ್ಮ ಅನೇಕ ಬೋರ್‌ವೆಲ್‌ಗಳು ಬತ್ತಿಹೋಗಿವೆ, ನೀರಿನ ಬಿಕ್ಕಟ್ಟು ಉಲ್ಬಣಗೊಂಡಿದೆ. ಆದರೆ, ಈ ಸಮಸ್ಯೆಗಳ ನಡುವೆಯೂ, ನಾವು ನಮ್ಮ ಕೆಲಸ ಮುಂದುವರೆಸಬೇಕಾಗಿರುವುದರಿಂದ ಶಾಲೆಗಳನ್ನು ಮುಚ್ಚಲು ನಮಗೆ ಸಾಧ್ಯವಾಗುತ್ತಿಲ್ಲ, ವಿಶೇಷವಾಗಿ ಇದು ಎಕ್ಸಾಂ ಸಮಯ" ಎಂದಿದ್ದಾರೆ.
ಮನೆಯಿಂದ ನೀರು ತರುತ್ತಿರುವ ವಿದ್ಯಾರ್ಥಿಗಳು!
ವಿದ್ಯಾರ್ಥಿಗಳು ಎದುರಿಸುತ್ತಿರುವ ತೊಂದರೆಗಳನ್ನು ಒಪ್ಪಿಕೊಂಡ ಅಧಿಕಾರಿ, "ಮಕ್ಕಳು ಮನೆಯಿಂದ ಕುಡಿಯುವ ನೀರನ್ನು ತರುತ್ತಿದ್ದಾರೆ,. ಶಾಲೆಗಳು ಕ್ಯಾಂಪಸ್‌ನಲ್ಲಿ ಇತರ ಅಗತ್ಯ ನೀರಿನ ಅಗತ್ಯಗಳನ್ನು ಪೂರೈಸಲು ಹೆಣಗಾಡುತ್ತಿವೆ. ಶಾಲೆಗಳಿಗೆ ನೀರು ಹಂಚಿಕೆಗೆ ಆದ್ಯತೆ ನೀಡಬೇಕು" ಎಂದು ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

ಈ ವರ್ಷ ಬೇಸಿಗೆ ಬಲು ಕಠಿಣ
ಈ ವರ್ಷದ ಬೇಸಿಗೆಯಲ್ಲಿ ಕರ್ನಾಟಕದಾದ್ಯಂತ ಅಂದಾಜು 7,082 ಹಳ್ಳಿಗಳು ಮತ್ತು ಬೆಂಗಳೂರು ನಗರ ಜಿಲ್ಲೆ ಸೇರಿದಂತೆ 1,193 ವಾರ್ಡ್‌ಗಳು ಮುಂಬರುವ ತಿಂಗಳುಗಳಲ್ಲಿ ಕುಡಿಯುವ ನೀರಿನ ಬಿಕ್ಕಟ್ಟಿನ ಅಪಾಯವನ್ನು ಎದುರಿಸುತ್ತಿವೆ. ಕಂದಾಯ ಇಲಾಖೆಯ ವರದಿಯ ಪ್ರಕಾರ ತುಮಕೂರು ಜಿಲ್ಲೆಯ 746 ಗ್ರಾಮಗಳು, ಬೆಂಗಳೂರು ನಗರ ಜಿಲ್ಲೆಯ 174 ಗ್ರಾಮಗಳು ಮತ್ತು ಬೆಂಗಳೂರು ನಗರದಲ್ಲಿ 120 ವಾರ್ಡ್‌ಗಳು ಮತ್ತು ಉತ್ತರ ಕನ್ನಡದ ಹಲವು ಗ್ರಾಮಗಳು ಮುಂದಿನ ದಿನಗಳಲ್ಲಿ ತೀವ್ರ ನೀರಿನ ಕೊರತೆಯನ್ನು ಎದುರಿಸಲಿವೆ.
ಬೆಂಗಳೂರಿನಲ್ಲಿ BWSSB ನಿಯಮಗಳು
ನೀರಿನ ಬಿಕ್ಕಟ್ಟಿನ ಮಧ್ಯೆ, ಬಿಡಬ್ಲುಎಸ್‌ಎಸ್‌ಬಿ ಅಗತ್ಯವಲ್ಲದ ಉದ್ದೇಶಗಳಿಗಾಗಿ ಕುಡಿಯುವ ನೀರನ್ನು ಬಳಸುವುದನ್ನು ನಿಷೇಧಿಸಿದೆ. ಈ ಆದೇಶವನ್ನು ಉಲ್ಲಂಘಿಸುವವರಿಗೆ ರೂ 5,000 ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದೆ. ಬೆಂಗಳೂರು ನೀರು ಸರಬರಾಕು ಮತ್ತು ಒಳಚರಂಡಿ ಕಾಯಿದೆ 1964 ಸೆಕ್ಷನ್ 33 ಮತ್ತು 34 ರ ಅಡಿಯಲ್ಲಿ ವಾಹನ ತೊಳೆಯುವುದು, ನಿರ್ಮಾಣ, ಮನರಂಜನೆ ಅಥವಾ ಬೆಂಗಳೂರಿನಲ್ಲಿ ಕಾರಂಜಿಗಳಂತಹ ಅಲಂಕಾರಿಕ ಉದ್ದೇಶಗಳಿಗಾಗಿ ಕುಡಿಯುವ ನೀರನ್ನು ಬಳಸುವುದನ್ನು ಬಿಡಬ್ಲುಎಸ್‌ಎಸ್‌ಬಿ ನಿಷೇಧಿಸಿದೆ. ಸಾರ್ವಜನಿಕರು ಕುಡಿಯುವ ನೀರನ್ನು ಮಿತವಾಗಿ ಬಳಸಬೇಕೆಂದು ನಿರ್ದೇಶನ ನೀಡಿದೆ.
ಮಾಲ್‌ಗಳು ಮತ್ತು ಚಿತ್ರಮಂದಿರಗಳು ಕುಡಿಯುವ ಉದ್ದೇಶಕ್ಕಾಗಿ ಮಾತ್ರ ನೀರನ್ನು ಬಳಸಬೇಕು. ಮೊದಲ ಬಾರಿಗೆ ತಪ್ಪಿತಸ್ಥರಿಗೆ 5,000 ರೂ ದಂಡ, ನಂತರದ ಉಲ್ಲಂಘನೆಗಳಿಗೆ ಅದೇ ದಂಡ ಮತ್ತು ದಿನಕ್ಕೆ 500 ರೂಪಾಯಿ ಹೆಚ್ಚುವರಿ ದಂಡ ವಿಧಿಸಲಾಗುತ್ತದೆ.











Click it and Unblock the Notifications