Bengaluru: ಟ್ರಾಫಿಕ್‌ನಲ್ಲಿ ಮಹಿಳಾ ಆಟೋ ಚಾಲಕಿಗೆ ಚಾಕಲೇಟ್ ನೀಡಿದ ಬೈಕರ್: ವಿಡಿಯೋ ವೈರಲ್
ಬೆಂಗಳೂರು ಟ್ರಾಫಿಕ್ ಎಂದರೆ ಸಾಕು, ವಾಹನ ಸವಾರರಿಗೆ ಎಲ್ಲಿಲ್ಲದ ಕಿರಿಕಿರಿ. ಗಂಟೆಗಟ್ಟಲೆ ಒಂದೇ ಕಡೆ ನಿಂತುಕೊಳ್ಳ ಬೇಕಲ್ಲ ಎಂದು ಬೇಸರಗೊಳ್ಳುವವರೇ ಹೆಚ್ಚು. ಆದರೆ, ಇದೇ ಟ್ರಾಫಿಕ್ ಜಾಮ್ ನಡುವೆ ನಡೆದ ಒಂದು ಸಣ್ಣ ಘಟನೆಯೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ನೆಟ್ಟಿಗರ ಮನಗೆದ್ದಿದೆ.
ಹೌದು, ಬೆಂಗಳೂರಿನ ರಸ್ತೆಯಲ್ಲಿ ಮಹಿಳಾ ಬೈಕರ್ ಒಬ್ಬರು, ಆಟೋ ಓಡಿಸುತ್ತಿದ್ದ ಮಹಿಳೆಗೆ ಚಾಕಲೇಟ್ ನೀಡಿ ಅವರ ಶ್ರಮವನ್ನ ಗೌರವಿಸಿದ ವಿಡಿಯೋ ಈಗ ಎಲ್ಲರ ಗಮನ ಸೆಳೆಯುತ್ತಿದೆ. ಈ ಬೆಂಗಳೂರು ವೈರಲ್ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ.

ಈ ವಿಡಿಯೋವನ್ನ ಅಲಿಶಾ ಅನ್ಸಾರಿ ಎಂಬುವವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಬೈಕ್ ಓಡಿಸಿಕೊಂಡು ಹೋಗುತ್ತಿದ್ದ ಅಲಿಶಾ, ಟ್ರಾಫಿಕ್ ಸಿಗ್ನಲ್‌ನಲ್ಲಿ ನಿಂತಿದ್ದಾಗ ತಮ್ಮ ಪಕ್ಕದಲ್ಲೇ ಇದ್ದ ಆಟೋವನ್ನ ಗಮನಿಸಿದ್ದಾರೆ. ಆ ಆಟೋವನ್ನ ಓಡಿಸುತ್ತಿದ್ದದ್ದು ಒಬ್ಬ ಮಹಿಳೆ ಎಂಬುದನ್ನ ನೋಡಿದ ಅವರು, ಆ ಕ್ಷಣವನ್ನ ವಿಶೇಷವಾಗಿ ಆಚರಿಸಲು ಹಾಗೂ ಆಕೆಯ ಶ್ರಮವನ್ನ ಪ್ರಶಂಸಿಸಲು ನಿರ್ಧರಿಸಿದರು.
ಮಹಿಳಾ ಆಟೋ ಚಾಲಕಿ ಕಂಡು ಗೌರವ ಸೂಚಿಸಿದ ಬೈಕರ್
ಸಾಮಾನ್ಯವಾಗಿ ಆಟೋ ಚಾಲನೆ ಎಂದರೆ ಅದು ಪುರುಷರ ಕೆಲಸ ಎಂಬ ಮನಸ್ಥಿತಿ ನಮ್ಮೆಲ್ಲರಲ್ಲಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಕೂಡ ಈ ವೃತ್ತಿಯಲ್ಲಿ ತಮ್ಮನ್ನ ತೊಡಗಿಸಿಕೊಂಡು ಸ್ವತಂತ್ರವಾಗಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಇದನ್ನ ಅರಿತ ಬೈಕರ್ ಅಲಿಶಾ ಅನ್ಸಾರಿ, ಆ ಮಹಿಳಾ ಆಟೋ ಚಾಲಕಿ ಬಗ್ಗೆ ಅಪಾರ ಗೌರವ ತೋರಿದ್ದಾರೆ. ಕೂಡಲೇ ತಮ್ಮ ಬೈಕ್‌ನ ಟ್ಯಾಂಕ್ ಬ್ಯಾಗ್‌ನಿಂದ ಒಂದು ಚಾಕಲೇಟ್ ತೆಗೆದಿದ್ದಾರೆ.
ಟ್ರಾಫಿಕ್‌ನಲ್ಲಿ ನೇರವಾಗಿ ತಾವೇ ಹೋಗಿ ಕೊಡಲು ಸಾಧ್ಯವಾಗದ ಕಾರಣ, ತಮ್ಮ ಪಕ್ಕದಲ್ಲೇ ಇದ್ದ ಸ್ಕೂಟರ್ ಸವಾರರೊಬ್ಬರಿಗೆ ಆ ಚಾಕಲೇಟ್ ನೀಡಿ, ಅದನ್ನು ಆಟೋ ಚಾಲಕಿಗೆ ತಲುಪಿಸುವಂತೆ ಕೇಳಿದ್ದಾರೆ.
ಟ್ರಾಫಿಕ್‌ನಲ್ಲಿ ನಡೆದ ಈ ಘಟನೆ ಕ್ಯಾಮೆರಾದಲ್ಲಿ ಸೆರೆ
ಸ್ಕೂಟರ್ ಸವಾರ ಆ ಚಾಕಲೇಟ್ ಅನ್ನು ಆ ಮಹಿಳೆಗೆ ನೀಡಿದಾಗ, ಅವರು ಮುಗುಳ್ನಗುತ್ತಾ ಅದನ್ನು ಸ್ವೀಕರಿಸಿದ್ದಾರೆ. ಚಾಕಲೇಟ್ ಸರಿಯಾಗಿ ತಲುಪಿದ್ದನ್ನ ಖಚಿತಪಡಿಸಿಕೊಂಡ ಅಲಿಶಾ, ಅವರಿಗೆ ದೂರದಿಂದಲೇ ಥಂಬ್ಸ್ ಅಪ್ ತೋರಿಸಿ ಹುರಿದುಂಬಿಸಿದ್ದಾರೆ. ಟ್ರಾಫಿಕ್ ಕಿರಿಕಿರಿಯ ನಡುವೆ ನಡೆದ ಈ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ನೋಡಲು ಅತ್ಯಂತ ಸುಂದರವಾಗಿದೆ. ಒಂದು ಸಣ್ಣ ಚಾಕಲೇಟ್, ಆ ಮಹಿಳಾ ಚಾಲಕಿಯ ಮುಖದಲ್ಲಿ ಮೂಡಿಸಿದ ಮಂದಹಾಸ ನಿಜಕ್ಕೂ ಬೆಲೆಕಟ್ಟಲಾಗದಂತಹುದು.
ಮಹಿಳೆಯ ಶ್ರಮಕ್ಕೆ ಸಿಕ್ಕ ಮೆಚ್ಚುಗೆ
ಈ ವಿಡಿಯೋವನ್ನ ಹಂಚಿಕೊಂಡಿರುವ ಅಲಿಶಾ, "ಮಹಿಳೆಯಾಗಲಿ ಅಥವಾ ಪುರುಷನಾಗಲಿ, ಪ್ರತಿಯೊಬ್ಬರ ಶ್ರಮವೂ ವಿಶೇಷವೇ" (Women ho ya men, mehnat sabki khaas hai) ಎಂದು ಈ ವಿಡಿಯೋ ಕ್ಯಾಪ್ಷನ್ ನೀಡಿದ್ದಾರೆ. ಇದಲ್ಲದೆ, ವಿಡಿಯೋದಲ್ಲಿ ಕ್ಯಾಮೆರಾ ಕಡೆಗೆ ತಿರುಗಿ ಮಾತನಾಡಿರುವ ಅವರು, ತಮ್ಮ ಮಕ್ಕಳಿಗಾಗಿ, ಪೋಷಕರಿಗಾಗಿ ಹಾಗೂ ಕುಟುಂಬದ ನಿರ್ವಹಣೆಗಾಗಿ ಕಷ್ಟಪಟ್ಟು ದುಡಿಯುವ ಪ್ರತಿಯೊಬ್ಬ ಮಹಿಳೆಯ ಶ್ರಮವನ್ನ ಕೊಂಡಾಡಿದ್ದಾರೆ.
ಮಹಿಳಾ ಸಬಲೀಕರಣ ಕೇವಲ ಭಾಷಣಗಳಿಗೆ ಸೀಮಿತವಾಗದೆ, ಇಂತಹ ಸಣ್ಣ ಸಣ್ಣ ಪ್ರೋತ್ಸಾಹಗಳ ಮೂಲಕವೂ ವ್ಯಕ್ತವಾಗಬೇಕು ಎಂಬುದನ್ನ ಈ ಘಟನೆ ಸಾಬೀತುಪಡಿಸಿದೆ.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣ ಭಾರೀ ವೈರಲ್ ಆಗುತ್ತಿದ್ದು, ಲಕ್ಷಾಂತರ ವೀಕ್ಷಣೆ ಪಡೆದಿರುವ ಈ ಕ್ಲಿಪ್‌ಗೆ ಸಾವಿರಾರು ಕಾಮೆಂಟ್‌ಗಳು ಹರಿದುಬರುತ್ತಿವೆ. "ಟ್ರಾಫಿಕ್ ನಡುವೆ ಇದೊಂದು ಅದ್ಭುತ ಕ್ಷಣ", "ಒಬ್ಬ ಮಹಿಳೆ ಇನ್ನೊಬ್ಬ ಮಹಿಳೆಯನ್ನ ಬೆಂಬಲಿಸುವುದು ಯಾವಾಗಲೂ ಸುಂದರ", "ಇದು ಕೇವಲ ಒಂದು ಸಣ್ಣ ಪ್ರಯತ್ನವಾಗಿರಬಹುದು, ಆದರೆ ಇದು ನೀಡುವ ಸಂದೇಶ ಬಹಳ ದೊಡ್ಡದು" ಎಂದು ನೆಟ್ಟಿಗರು ಕಮೆಂಟ್ ಮಾಡುವ ಮೂಲಕ ತಮ್ಮ ಸಂತಸ ವ್ಯಕ್ತಪಡಿಸುತ್ತಿದ್ದಾರೆ.


Click it and Unblock the Notifications
