ಕುಟುಂಬ ರಾಜಕಾರಣಿಗಳಿಗೆ ಬುದ್ಧಿ ಕಲಿಸಿದ ಮತದಾರರು: ಬಿಜೆಪಿ-ಜೆಡಿಎಸ್‌ಗೆ ಚಾಟಿ
ಬೆಂಗಳೂರು, ನವೆಂಬರ್ 25: ಕರ್ನಾಟಕ ಉಪ ಚುನಾವಣೆ ನಡೆದು ಫಲಿತಾಂಶ ಹೊರ ಬಿದ್ದ ಬಳಿಕ ಒಂದಷ್ಟು ಲೆಕ್ಕಾಚಾರ ಶುರುವಾಗಿದೆ. ಕುಟುಂಬ ರಾಜಕಾರಣವನ್ನು ಮತದಾರರು ಸಹಿಸಿಲ್ಲ ಎಂದು ಉಲ್ಲೇಖಿಸಲಾಗುತ್ತಿದೆ. ಉಪಚುನಾವಣೆಯಲ್ಲಿ ತಮ್ಮ ಮಕ್ಕಳನ್ನು ರಾಜಕೀಯವಾಗಿ ಪ್ರತಿಷ್ಠಾಪನೆ ಮಾಡಲು ಹೊರಟ ಇಬ್ಬರು ಮಾಜಿ ಮುಖ್ಯಮಂತ್ರಿಗಳಿಗೆ ಮತದಾರ ಪ್ರಭುಗಳು ಬುದ್ಧಿ ಕಲಿಸಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ, ಆಮ್ ಆದ್ಮಿ ಪಕ್ಷದ ಮುಖಂಡ ಜಗದೀಶ್ ವಿ.ಸದಂ ಅವರು ಬಿಜೆಪಿ ಹಾಗೂ ಜೆಡಿಎಸ್ ಮಾಜಿ ಮುಖ್ಯಮಂತ್ರಿಗಳ ವಿರುದ್ಧ ಲೇವಡಿ ಮಾಡಿದರು.

ಉಪ ಚುನಾವಣೆಯಲ್ಲಿ ತಮ್ಮ ಪುತ್ರರನ್ನು ನೆಲೆಗೊಳಿಸಲು ಮುಂದಾಗಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮತ್ತು ಮಾಜಿ ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಮತದಾರರು ಬುದ್ಧಿ ಕಲಿಸಿದ್ದಾರೆ. ವಂಶಪಾರಂಪರ್ಯ ರಾಜಕಾರಣ ನಡೆಯುವುದಿಲ್ಲ ಎನ್ನುವ ಸ್ಪಷ್ಟ ಸಂದೇಶ ಮತದಾರರು ನೀಡಿದ್ದಾರೆ.
ಉಪ ಚುನಾವಣೆಯಲ್ಲಿ ಅನೇಕ ಅಕ್ರಮ ನಡೆದಿವೆ
ರಾಮನಗರದ ಚನ್ನಪಟ್ಟಣ ಮತ್ತು ಹಾವೇರಿ ಜಿಲ್ಲೆಯ ಶಿಗ್ಗಾಂವಿ ಜನರ ತೀರ್ಮಾನವನ್ನು ಆಮ್ ಆದ್ಮಿ ಪಾರ್ಟಿ ಪ್ರಶಂಸಿಸುತ್ತದೆ. ಸದರಿ ಉಪಚುನಾವಣೆಯಲ್ಲಿ ಅನೇಕ ಅಕ್ರಮಗಳು ನಡೆದಿದೆ. ಚನ್ನಪಟ್ಟಣದಲ್ಲಿ ಚುನಾವಣೆಗೆ ಒಂದು ತಿಂಗಳು ಮುಂಚೆ ಸರ್ಕಾರಿ ಜಮೀನಿನಲ್ಲಿ ಸಾವಿರಾರು ಸೈಟುಗಳನ್ನು ಮಾಡಿ ಬೃಹತ್ ಕಾರ್ಯಕ್ರಮ ನಡೆಸಿ ವಿತರಣೆ ಮಾಡಲಾಗಿದೆ ಎಂದು ಅವರು ವಿವರಿಸಿದರು.
ಉಪಚುನಾವಣೆಗೆ 48 ಗಂಟೆಗಳ ಮೊದಲು ಗೃಹಲಕ್ಷ್ಮಿ ಯೋಜನೆಯ ಬಾಕಿ ಇದ್ದ ಹಣವನ್ನು ಖಾತೆಗೆ ಹಾಕಿದ್ದಾರೆ. ಅಂದಾಜಿನ ಪ್ರಕಾರ ಮೂರು ಕ್ಷೇತ್ರಗಳ ಉಪಚುನಾವಣೆಗೆ 600 ಕೋಟಿ ರೂ. ಖರ್ಚು ಮಾಡಲಾಗಿದೆ. ನಾವು ಚುನಾವಣಾ ಆಯೋಗಕ್ಕೆ ದೂರು ಕೊಟ್ಟು ಸತತವಾಗಿ ಒತ್ತಾಯಿಸಿದರೂ, ಚುನಾವಣಾ ಆಯೋಗ ಕ್ರಮ ತೆಗೆದುಕೊಳ್ಳದೆ ನಿಷ್ಕ್ರಿಯವಾಗಿತ್ತು ಎಂದು ಆಕ್ರೋಶ ಹೊರ ಹಾಕಿದರು.

ಎರಡು ರಾಜ್ಯಗಳಲ್ಲಿ ಪ್ರಾದೇಶಿಕ ಅಸ್ಮಿತೆ ಉಳಿದಿದೆ
ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಪ್ರಾದೇಶಿಕ ಪಕ್ಷಗಳಿಗೆ ಮತ ಹಾಕುವ ಮೂಲಕ ರಾಷ್ಟ್ರೀಯ ಪಕ್ಷಗಳನ್ನು ತಿರಸ್ಕರಿಸಿದ್ದಾರೆ. ಎರಡೂ ರಾಜ್ಯಗಳ ಮತದಾರರು ಪ್ರಾದೇಶಿಕ ಅಸ್ಮಿತೆಯನ್ನು ಉಳಿಸಿಕೊಂಡಿದೆ. ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕ ಪಕ್ಷಗಳ ಜೊತೆ ಉತ್ತಮ ಬಾಂಧವ್ಯ ಇಟ್ಟುಕೊಂಡರೆ ಮಾತ್ರ ಉಳಿಗಾಲ ಎನ್ನುವ ಸಂದೇಶ ನಿಡಿದ್ದಾರೆ. ಹಾಗಾಗಿ ಮಹಾರಾಷ್ಟ್ರ ಚುನಾವಣೆಯಲ್ಲಿ ಗೆದ್ದಿದ್ದೇವೆ ಎಂದು ಬೀಗುವ ಅಗತ್ಯವಿಲ್ಲ ಎಂದರು.
ದೆಹಲಿ ಚುನಾವಣೆಗೂ ಮಹಾರಾಷ್ಟ್ರ ಚುನಾವಣೆಗೂ ಯಾವುದೇ ಸಂಬಂಧವಿಲ್ಲ. ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ 10 ವರ್ಷಗಳಿಂದ ಜನಪರ ಆಡಳಿತ ನೀಡುತ್ತಿದ್ದಾರೆ. ದೆಹಲಿಯ ಜನ ಅರವಿಂದ ಕೇಜ್ರಿವಾಲ್ ಅವರನ್ನು ಮನೆ ಮಗನಂತೆ ಬೆಂಬಲಿಸುತ್ತಾರೆ. ಪುನಃ ದೆಹಲಿಯಲ್ಲಿ ಸದೃಢ ಸರ್ಕಾರ ರಚನೆಯಾಗಲಿದೆ. ಮಾಜಿ ಸಿಎಂ ಅರವಿಂದ ಕೇಜ್ರಿವಾಲ್ ಅವರು ಮುಖ್ಯಮಂತ್ರಿಯಾಗಿ ಪರಿಪೂರ್ಣ ಆಡಳಿತ ನೀಡಲಿದ್ದಾರೆ ಎಂಬ ವಿಶ್ವಾಸ ನಮ್ಮಲ್ಲಿದೆ.
ಬಿಜೆಪಿ ಅವಧಿಯಲ್ಲಿಯೇ ಪಹಣಿಯಲ್ಲಿ ವಕ್ಫ್ ಹೆಸರು
ಬಿಜೆಪಿ ನಾಯಕರು ರಾಜ್ಯದಲ್ಲಿ ವಕ್ಫ್ ವಿಚಾರ ಮುಂದಿಟ್ಟುಕೊಂಡು ಕೋಮು ಸೌಹಾರ್ದತೆ ಹಾಳು ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ. 2018-2023 ರ ಬಿಜೆಪಿ ಸರ್ಕಾರದ ಅವಧಿಯಲ್ಲಿ ಶಾಸಕ ಕುಮಾರ್ ಬಂಗಾರಪ್ಪನವರ ಸದನ ಸಮಿತಿ ನಿರಂತರವಾಗಿ ವಕ್ಫ್ ಸಭೆ ಮಾಡಿ, ಇಂದು ಪಹಣಿಯಲ್ಲಿ ವಕ್ಫ್ ಹೆಸರು ಬರುವಂತೆ ಮಾಡಲಾಗಿದೆ ಎಂದು ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರ ಅವಧಿಯಲ್ಲಿ ಒಂದಷ್ಟು ಘಟನೆ ನಡೆದಿವೆ. ಬಸನಗೌಡ ಪಾಟೀಲ್ ಯತ್ನಾಳ್, ಬಿವೈ ವಿಜಯೇಂದ್ರ ಅವರು ಹೋರಾಟ ಮಾಡುವುದಾದರೆ ಅವರದೇ ಪಕ್ಷದ ನಾಯಕರ ವಿರುದ್ಧವೇ ಹೋರಾಟ ಮಾಡಬೇಕಾಗುತ್ತದೆ ಎಂದು ಎಎಪಿ ನಾಯಕರು ತಿಳಿಸಿದರು.












Click it and Unblock the Notifications