Voter Data Theft: ಚಿಲುಮೆ ಸಂಸ್ಥೆ ಆಡಳಿತಾಧಿಕಾರಿ ಲೋಕೇಶ್ ಬಂಧನ
ಬೆಂಗಳೂರು ನವೆಂಬರ್ 23: ಒಂದು ವಾರದಿಂದ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದ್ದ ಮತದಾರರ ದತ್ತಾಂಶ ಕಳ್ಳತನ ಪ್ರಕರಣದ ಎರಡನೇ ಪ್ರಮುಖ ಆರೋಪಿಯಾದ ಚಿಲುಮೆ ಸಂಸ್ಥೆಯ ಆಡಳಿತಾಧಿಕಾರಿ ಕೆ. ಎಂ. ಲೋಕೇಶ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಖಚಿತ ಮಾಹಿತಿ ಆಧರಿಸಿ ಹಲಸೂರು ಗೇಟ್ ಠಾಣೆ ಪೊಲೀಸರು ಲೋಕೇಶ್‌ನನ್ನು ಮಂಗಳವಾರ ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಬಂಧನ ಕುರಿತು ಪ್ರತಿಕ್ರಿಯಿಸಿದ ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸಗೌಡ, ವಿಚಾರಣೆಗಾಗಿ ಲೋಕೇಶ್‌ನನ್ನು ಕಸ್ಟಡಿಗೆ ಪಡೆಯಲು ತಯಾರಾಗಿದ್ದೇವೆ. ಕಾಡುಗೋಡಿ ಮತ್ತು ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎರಡು ಎಫ್ಐಆರ್‌ನಲ್ಲಿ ಲೋಕೇಶ್ ಹೆಸರು ಉಲ್ಲೇಖಿಸಲಾಗಿದೆ. ಹೀಗಾಗಿ ನಾಪತ್ತೆಯಾಗಿದ್ದ ಆತನನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಆರೋಪಿಯನ್ನು ಬಂಧಿಸಿ ಕರೆತಂದ ಬಳಿಕ ಒಂದು ಸುತ್ತಿನ ವಿಚಾರಣೆ ನಡೆಸಲಾಗಿದೆ. ಹೆಚ್ಚಿನ ವಿಚಾರಣೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅಕ್ರಮ ನಡೆದಿದೆ ಎಂಬುದು ಬಹಿರಂಗವಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಆರೋಪಿಗಳಲ್ಲಿ ಚಿಲುಮೆ ಸಂಸ್ಥೆಯ ಆಡಳಿತಾಧಿಕಾರಿಯೂ ಒಬ್ಬರಾಗಿದ್ದರು. ಬಂಧನಕ್ಕಾಗಿ ಪೊಲೀಸರ ವಿಶೇಷ ತಂಡ ರಚಿಸಲಾಗಿತ್ತು.
ರವಿಕುಮಾರ್ ಬಂಧನ ಬಳಿಕ 3 ಆರ್‌ಓ ಅಮಾನತು; ವಿಶೇಷ ಪೊಲೀಸರ ತಂಡಗಳು ಪ್ರಕರಣದ ಪ್ರಮುಖ ಆರೋಪಿಗಳಾದ ಚಿಲುಮೆ ಮುಖ್ಯಸ್ಥ ರವಿಕುಮಾರ್ ಹಾಗೂ ಅದರ ಆಡಳಿತಾಧಿಕಾರಿ ಲೋಕೇಶ್ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಈಗಾಗಲೇ ರವಿಕುಮಾರ್‌ನನ್ನು ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಅಲ್ಲದೇ ಅನುಮಾನ ಬಂಧ ಬಿಬಿಎಂಪಿ ಕಂದಾಯ ಇಲಾಖೆ ಅಧಿಕಾರಿಗಳನ್ನು ವಿಚಾರಣೆ ನಡೆಸಲಾಗಿದೆ. ವಿಚಾರಣೆ ಬಳಿಕ ಮೂರು ಅಧಿಕಾರಿಗಳು ಪ್ರಕರಣದಲ್ಲಿ ಶಾಮೀಲಾಗಿದ್ದರ ಬಗ್ಗೆ ಸಾಬೀತಾಗಿದೆ. ಹೀಗಾಗಿ ಅವರನ್ನು ಸೋಮವಾರ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.












Click it and Unblock the Notifications