ವೈರಲ್ ವಿಡಿಯೋ: ಬೆಂಗಳೂರಿನಲ್ಲಿ ಭದ್ರತಾ ಸಿಬ್ಬಂದಿಗೆ ಪುಟ್ಟ ಬಾಲಕನ ಸೆಲ್ಯೂಟ್
ಬೆಂಗಳೂರು, ಅಕ್ಟೋಬರ್ 25: ಬೆಂಗಳೂರು ವಿಮಾನ ನಿಲ್ದಾಣದ ಹೊರ ಭಾಗದಲ್ಲಿ ಪುಟ್ಟ ಬಾಲಕನೊಬ್ಬ ಭದ್ರತಾ ಸಿಬ್ಬಂದಿಗೆ ಸೆಲ್ಯೂಟ್ ಮಾಡಿದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ನೋಡಿದ ನೆಟ್ಟಿಗರು ಈ ಬಾಲಕನನ್ನು ಶ್ಲಾಘಿಸಿದ್ದಾರೆ.
ಅಭಿಷೇಕ್ ಕುಮಾರ್ ಝಾ ಎಂಬವರು ಟ್ವಿಟ್ಟರ್‌ನಲ್ಲಿ ಈ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಬೆಂಗಳೂರು ವಿಮಾನ ನಿಲ್ದಾಣದ ಹೊರಗೆ ನಡೆದುಕೊಂಡು ಹೋಗುತ್ತಿದ್ದ ಬಾಲಕ ಸಿಐಎಸ್‌ಎಫ್ ವಾಹನವನ್ನು ನೋಡಿ ಅದರ ಮುಂದೆ ನಿಂತು ಒಬ್ಬ ಅಧಿಕಾರಿಗೆ ಸೆಲ್ಯೂಟ್ ಮಾಡಿದ್ದಾನೆ.
ಬಾಲಕನು ಸಿಐಎಸ್‌ಎಫ್ ವಾಹನವನ್ನು ನೋಡುತ್ತಿದ್ದಂತೆ ಅದರತ್ತ ಹೋಗಿದ್ದಾನೆ. ಬಳಿಕ ಸಿಐಎಸ್‌ಎಫ್ ಅಧಿಕಾರಿಯತ್ತ ನೋಡಿ ಸೆಲ್ಯೂಟ್ ಮಾಡಿದ್ದಾನೆ. ಈ ಸಂದರ್ಭದಲ್ಲಿ ವಾಹನದ ಮೇಲೆ ಕುಳಿತಿದ್ದ ಸಿಐಎಸ್‌ಎಫ್ ಅಧಿಕಾರಿ ಬಾಲಕನಿಗೆ ಸೆಲ್ಯೂಟ್ ಮಾಡಿದ್ದಾರೆ. ಈ ಸುಂದರವಾದ ದೃಶ್ಯ ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಹಲವಾರು ಮಂದಿ ಬಾಲಕನನ್ನು ಮೆಚ್ಚಿದ್ದಾರೆ, ಇನ್ನೂ ಕೆಲವರು ಈ ಬಾಲಕನ ಪೋಷಕರನ್ನು ಹೊಗಳಿದ್ದಾರೆ.

ಅಭಿಷೇಕ್ ಕುಮಾರ್ ಝಾ ಎಂಬವರು ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದ ಈ ವಿಡಿಯೋವನ್ನು 75 ಸಾವಿರಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. ಹಾಗೆಯೇ ಹಲವಾರು ಮಂದಿ ಸಕಾರಾತ್ಮಕವಾಗಿ ಟ್ವೀಟ್ ಮಾಡಿದ್ದಾರೆ. ಈ ಪುಟ್ಟ ಬಾಲಕನ ವಿಡಿಯೋ ಹಲವಾರು ಮಂದಿಯನ್ನು ಭಾವುಕರನ್ನಾಗಿಸಿದೆ. ಇನ್ನು ಕೆಲವರು ಭದ್ರತಾ ಸಿಬ್ಬಂದಿಗಳನ್ನು ಶ್ಲಾಘಿಸಿದ್ದಾರೆ.
ನೆಟ್ಟಿಗರ ಪ್ರತಿಕ್ರಿಯೆ ಹೇಗಿದೆ?
"ಈ ಸಣ್ಣ ಬಾಲಕನಿಗೆ, ಆತನ ಈ ಉಚ್ಛ ಸಂಸ್ಕಾರಕ್ಕೆ ನಮ್ಮ ಹೃದಯ ತುಂಬಿದ ಸೆಲ್ಯೂಟ್. ಈ ಭಾವನೆಯು ನಮ್ಮ ದೇಶದ ಎಲ್ಲಾ ಜನರಿಗೆ ಇರಬೇಕು," ಎಂದು ಟ್ವಿಟ್ಟಿಗರೊಬ್ಬರು ಪ್ರತಿಕ್ರಿಯಿಸಿದ್ದಾರೆ. ಇನ್ನು ಕೆಲವರು ನಾವು ಇದನ್ನು ಪದೇ ಪದೇ ನೋಡುತ್ತಿದ್ದೇವೆ. ಪ್ರತಿ ಬಾರಿ ನೋಡಿದಾಗಲೂ ಸಂತೋಷದ ಕಣ್ಣೀರು ಸುರಿಯುತ್ತಿದೆ. ಈ ಬಾಲಕ ನಮ್ಮ ದೇಶದ ಹೆಮ್ಮೆಯ ಪ್ರತೀಕ ಎಂದು ಹೊಗಳಿದ್ದಾರೆ. "ನಾವು ಹಲವಾರು ಬಾರಿ ನಮ್ಮ ಸುತ್ತಮುತ್ತಲೂ ಇರುವ, ನಮಗೆ ಭದ್ರತೆ ಒದಗಿಸುವ, ನಮ್ಮನ್ನು ಸುರಕ್ಷಿತವಾಗಿರಿಸುವ ಜನರನ್ನು ಮರೆತು ಬಿಡುತ್ತೇವೆ. ಈ ಪುಟ್ಟ ಹೃದಯವು ನಮಗೆ ಈಗ ಈ ನಡೆಯ ಮೂಲಕ ನಾವು ನಮ್ಮ ಯೋಧರಿಗೆ ಸಲ್ಲಿಸಬೇಕಾದ ಗೌರವವನ್ನು ತಿಳಿಸಿದೆ. ನಾವು ನಮ್ಮಿಂದ ಅಷ್ಟು ಮಾಡಲು ಮಾತ್ರ ಸಾಧ್ಯ," ಎಂದು ವಿನೋದ್ ಬಾಲಕೃಷ್ಣನ್ ಎಂಬುವರು ಹೇಳಿದ್ದಾರೆ.
"ನಾನು ಈ ವಿಡಿಯೋವನ್ನು ಹಲವಾರು ಬಾರಿ ನೋಡಿದೆ. ಪ್ರತಿ ಬಾರಿಯೂ ನನ್ನ ಕಣ್ಣಿನಲ್ಲಿ ನೀರು ಸುರಿದಿದೆ. ಈ ಕುಟುಂಬಕ್ಕೆ ತುಂಬು ಹೃದಯದ ಧನ್ಯವಾದಗಳು. ಜೈ ಹಿಂದ್," ಎಂದು ಅಜಯ್ ರಾಣಾ ಎಂಬವರು ಪ್ರತಿಕ್ರಿಯೆ ನೀಡಿದ್ದಾರೆ. "ನಾನು ನನ್ನ ಭಾರತೀಯ ಸೇನೆಗೆ ವಂದನೆ ಸಲ್ಲಿಸುತ್ತೇನೆ," ಎಂದು ಖಾಲಿದ್ ಪಠಾಣ್ ಟ್ವಿಟ್ಟಿಸಿದ್ದಾರೆ. "ಸೂಪರ್ ಸೆಲ್ಯೂಟ್! ಈ ವಿಡಿಯೋ ನೋಡಿ ಸಂತೋಷವಾಗಿದೆ. ಈ ವಿಡಿಯೋ ನೋಡಿದಾಗ ಈ ಬಾಲಕನಿಗೆ ಆತನ ಪೋಷಕರು ಏನನ್ನು ಕಲಿಸಿದ್ದಾರೆ ಎಂಬುವುದು ಸ್ಪಷ್ಟವಾಗಿ ಕಂಡು ಬಂದಿದೆ. ಗ್ರೇಟ್. ಈ ಸಣ್ಣ ವಯಸ್ಸಿನಲ್ಲಿಯೇ ಈ ಬಾಲಕನಿಗೆ ದೇಶದ ಬಗ್ಗೆ ಒಂದು ಭಾವನೆ ಇದೆ. ಆದರೆ ನಮ್ಮ ಕೆಲವು ಯುವಕರು ಎಲ್ಲಾ ವಿಚಾರವನ್ನು ಬಾಲಿಶವಾಗಿ ಕಾಣುತ್ತಾರೆ. ಇದನ್ನು ನೋಡಿ ನನಗೆ ಉತ್ತಮ ಭಾವನೆ ಮೂಡಿತು," ಎಂದಿದ್ದಾರೆ.
Yesterday at #BLR airport...
— Abhishek Kumar Jha (@jhbhis) October 24, 2021
This proud moment was captured by one of my friend... #TeriMitti @ParineetiChopra @manojmuntashir @BPraak @akshaykumar pic.twitter.com/fjUuso5qSB
"ಈ ವಿಡಿಯೋವನ್ನು ನೋಡಿದಾಗ ಮೈ ನವಿರಾಗುತ್ತದೆ. ಈ ಬಾಲಕನೇ ಮುಂದೇ ಈ ದೇಶವನ್ನು ಎತ್ತರಕ್ಕೆ ಕೊಂಡೊಯ್ಯುತ್ತಾನೆ," ಎಂದು ಸಮೀರ್ ಎಂಬವರು ಹೇಳಿದ್ದಾರೆ. "ಎಲ್ಲಾ ಪೋಷಕರು ತಮ್ಮ ಮಕ್ಕಳಿಗೆ ಈ ಸಂಸ್ಕೃತಿಯನ್ನು ಕಲಿಸಬೇಕು. ನಾವು ಯಾವುದೇ ವಿಚಾರದಲ್ಲಿ ದೇಶಕ್ಕೆ ಮೊದಲ ಆದ್ಯತೆ ನೀಡಬೇಕು," ಎಂದು ಉಲ್ಲೇಖ ಮಾಡಿದ್ದಾರೆ. ಇನ್ನು ಹಲವಾರು ಮಂದಿ ಈ ಬಾಲಕನ ಪೋಷಕರನ್ನು ಹಾಡಿ ಹೊಗಳಿದ್ದಾರೆ.
(ಒನ್‌ಇಂಡಿಯಾ ಸುದ್ದಿ)












Click it and Unblock the Notifications